ರಾಜ್ಯದ ಹಲವೆಡೆ ಇಂದಿನಿಂದ ಭಾರೀ ಮಳೆ: ರೆಡ್‌ ಅಲರ್ಟ್‌ ಘೋಷಣೆ

By Kannadaprabha NewsFirst Published Jul 11, 2021, 7:18 AM IST
Highlights

* 11 ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ
* ಬಂಗಾಳ ಕೊಲ್ಲಿಯಲ್ಲಿ ಭಾನುವಾರ ವಾಯುಭಾರ ಕುಸಿತ 
* ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗುವ ಸಾಧ್ಯತೆ 
 

ಬೆಂಗಳೂರು(ಜು.11):  ಬಂಗಾಳ ಕೊಲ್ಲಿಯಲ್ಲಿ ಭಾನುವಾರ ಉಂಟಾಗಿ ರಾಜ್ಯದ ಕೆಲವೆಡೆ 20 ಸೆಂ.ಮೀ.ಗೂ ಅಧಿಕ ಮಳೆ ಆಗಲಿರುವ ಹಿನ್ನೆಲೆಯಲ್ಲಿ 11 ಜಿಲ್ಲೆಗಳಿಗೆ ಎರಡು ದಿನ ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯಾದ್ಯಂತ ಜು.15ರವರೆಗೆ ವ್ಯಾಪಕ ಮಳೆ ಸುರಿಯಲಿದೆ. ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಕೆಲವೆಡೆ ಗಾಳಿ, ಗುಡುಗುಸಹಿತ ಅತ್ಯಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ. ಹೀಗಾಗಿ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜು.11ರಂದು ಹಾಗೂ ಮಲೆನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಜು.12 ಮತ್ತು 13ರಂದು ‘ರೆಡ್‌ ಅಲರ್ಟ್‌’ ನೀಡಲಾಗಿದೆ ಎಂದು ತಿಳಿಸಿದೆ.

ಕೋಲಾರ, ಕಲಬುರಗಿಯಲ್ಲಿ ವರುಣನ ಅಬ್ಬರ: ದ.ಕ, ಶಿವಮೊಗ್ಗದಲ್ಲಿ ಸಾಧಾರಣ ಮಳೆ

ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ತೀವ್ರತೆ ಲಕ್ಷಣ ಕಂಡು ಬಂದಿದೆ. ಜು.11ರ ನಂತರ ಕರಾವಳಿ ಜಿಲ್ಲೆಗಳಲ್ಲಿ ಮಳೆ ಅರ್ಭಟ ತುಸು ಕಡಿಮೆ ಆಗಲಿದೆ. ಈ ಭಾಗದ ಮೂರು ಜಿಲ್ಲೆಗಳ ಕೆಲವೆಡೆ 12 ಸೆಂ.ಮೀ.ಗಿಂತ ಹೆಚ್ಚು ಮಳೆ ಬೀಳಲಿದ್ದು, ಜು.12ರಿಂದ 14ರವರೆಗೆ ‘ಆರೆಂಜ್‌ ಅಲರ್ಟ್‌’ ಕೊಡಲಾಗಿದೆ. ಕರಾವಳಿಯಲ್ಲಿ ಗಂಟೆಗೆ 45-55 ಕಿ.ಮೀ.ವೇಗದಲ್ಲಿ ಗಾಳಿ ಬೀಸುವುದರಿಂದ ಮೀನುಗಾರಿಕೆಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ ಎಂದು ವಿವರಿಸಿದೆ.

ಎಲ್ಲೆಲ್ಲಿ ಎಷ್ಟು ಮಳೆ?:

ಶನಿವಾರ ಬೆಳಗ್ಗೆ 9-30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ 16 ಸೆಂ.ಮೀ., ಕಲಬುರಗಿ 11, ದಕ್ಷಿಣ ಕನ್ನಡದ ಮಾಣಿ 9, ಉಡುಪಿಯ ಕೋಟ 8, ಉಡುಪಿಯ ಕುಂದಾಪುರ, ದಕ್ಷಿಣ ಕನ್ನಡದ ಮಂಗಳೂರು ನಗರ, ಸುಬ್ರಹ್ಮಣ್ಯ, ಬೆಳಗಾವಿಯ ರಾಯಭಾಗದಲ್ಲಿ ತಲಾ 7 ಸೆಂ.ಮೀ.ಮಳೆ ಬಿದ್ದಿದೆ.
 

click me!