ಬಡ, ಮಧ್ಯಮ ವರ್ಗದವರಿಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗುವಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೊಬೋಟಿಕ್ ತಂತ್ರಜ್ಞಾನ ಚಿಕಿತ್ಸೆ ಒದಗಿಸಲು ಹಾಗೂ ವೈದ್ಯರಿಗೆ ಅದರ ತರಬೇತಿ ನೀಡಲು ಸರ್ಕಾರ ಕ್ರಮವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು (ಆ.28): ಬಡ, ಮಧ್ಯಮ ವರ್ಗದವರಿಗೆ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗುವಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೊಬೋಟಿಕ್ ತಂತ್ರಜ್ಞಾನ ಚಿಕಿತ್ಸೆ ಒದಗಿಸಲು ಹಾಗೂ ವೈದ್ಯರಿಗೆ ಅದರ ತರಬೇತಿ ನೀಡಲು ಸರ್ಕಾರ ಕ್ರಮವಹಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಲ್ಲಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿ ₹150 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳ ಮಟ್ಟಕ್ಕೆ ಸರ್ಕಾರಿ ಆಸ್ಪತ್ರೆಯಲ್ಲೂ ಅತ್ಯಾಧುನಿಕ ತಂತ್ರಜ್ಞಾನದ ಚಿಕಿತ್ಸೆ ಸಿಗಬೇಕು. ಕಿದ್ವಾಯಿ ಆಸ್ಪತ್ರೆಯಲ್ಲಿ ರೊಬೋಟಿಕ್ ಚಿಕಿತ್ಸೆ ಇದೆ. ಆದರೆ, ಕೇವಲ ಇಲ್ಲೊಂದೆ ಇದ್ದರೆ ಸಾಧ್ಯವಿಲ್ಲ. ರಾಜ್ಯದ ಇನ್ನಿತರ ಆಸ್ಪತ್ರೆಗಳಲ್ಲೂ ಈ ಸೌಲಭ್ಯ ಸಿಗಬೇಕು. ಜೊತೆಗೆ ವೈದ್ಯರಿಗೆ ಇವುಗಳ ಬಳಕೆಯ ತರಬೇತಿ ನೀಡಿ ಕೌಶಲ್ಯ ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದರು. ಖಾಸಗಿ ಆಸ್ಪತ್ರೆಗಲ್ಲಿ ಸಣ್ಣಪುಟ್ಟ ಶಸ್ತ್ರಚಿಕಿತ್ಸೆಗೂ ₹30 ಲಕ್ಷದವರೆಗೂ ಶುಲ್ಕ ವಿಧಿಸುತ್ತಿವೆ. ದುಬಾರಿ ವೆಚ್ಚ ಪಾವತಿಸಲಾಗದೆ ಬಡವರು ನೆರವು ಕೇಳಿ ಬರುತ್ತಾರೆ. ಆದರೆ, ಮುಖ್ಯಮಂತ್ರಿ ಪರಿಹಾರ ನಿಧಿಯಡಿ ಗರಿಷ್ಠ ₹5 ಲಕ್ಷದವರೆಗೆ ಮಾತ್ರ ನೆರವು ನೀಡಲು ಸಾಧ್ಯ.
undefined
ಜೈಲಲ್ಲಿ ದರ್ಶನ್ ಫೋಟೋ ಕ್ಲಿಕಿಸಿದ್ದು ರೌಡಿ ಶೀಟರ್ ವೇಲು: ಆತನ ಮೇಲೆ ಹಲ್ಲೆ
ಅದೇ ಅತ್ಯಾಧುನಿಕ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಲಭಿಸಿದರೆ ಬಡವರಿಗೆ ಅನುಕೂಲವಾಗಿ ಖಾಸಗಿ ಆಸ್ಪತ್ರೆಗೆ ಹೋಗುವವರು ಕಡಿಮೆಯಾಗುತ್ತಾರೆ ಎಂದು ಹೇಳಿದರು. ‘ನಾನು ಸೇರಿ ಸಚಿವರು ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಲ್ಲ. ಹೀಗಾಗಿ ಅಲ್ಲಿನ ವ್ಯವಸ್ಥೆ ಬಗ್ಗೆ ಗೊತ್ತಾಗಲ್ಲ. ಖಾಸಗಿ ಆಸ್ಪತ್ರೆ ವೈದ್ಯರಿಗಿಂತ ಸರ್ಕಾರಿ ವೈದ್ಯರಿಗೆ ಹೆಚ್ಚು ಅನುಭವ ಇರುತ್ತದೆ. ಸರ್ಕಾರಿ ವೈದ್ಯರು ರೋಗಿಗಳ ಜೊತೆ ಸೌಹಾರ್ದಯುತವಾಗಿ ವರ್ತಿಸಿ, ಕಷ್ಟ ಆಲಿಸಬೇಕು. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪೌಷ್ಟಿಕ ಆಹಾರ ಸಿಗುವಂತಾಗಬೇಕು’ ಎಂದು ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸಮಗ್ರ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಹಿಂದೆ ಶೇ.35ರಷ್ಟು ವಿವಿಧ ಬಗೆಯ ಔಷಧ ಪೂರೈಕೆಯನ್ನು ಶೇ.70ಕ್ಕೆ ಹೆಚ್ಚಿಸಿದ್ದೇವೆ. ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳು ಹೊರಗಿನಿಂದ ಔಷಧಗಳನ್ನು ತರುವಂತೆ ವೈದ್ಯರು ಸೂಚಿಸುವ ಪದ್ಧತಿ ನಿಲ್ಲಬೇಕು. ಇದಕ್ಕಾಗಿ ಎಲ್ಲ ಬಗೆಯ ಔಷಧಗಳು ಶೇ.100ರಷ್ಟು ಸರ್ಕಾರಿ ಆಸ್ಪತ್ರೆಯಲ್ಲೇ ಸಿಗುವಂತೆ ಮಾಡಲಾಗುವುದು ಎಂದರು. ಇನ್ನು, ಡೆಂಘೀ, ಚಿಕೂನ್‌ಗುನ್ಯಾ ಸೇರಿ ಸಾಂಕ್ರಾಮಿಕ ರೋಗಗಳು ಬರುವುದಕ್ಕಿಂತ ಮೊದಲೇ ಗುರುತಿಸಿ ನಿವಾರಿಸಲು ಮುಂಜಾಗೃತಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆ: ಕೆ.ಸಿ.ಜನರಲ್ ಆಸ್ಪತ್ರೆಯ ಆವರಣದಲ್ಲಿ ₹66.78 ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಈ ಕಟ್ಟಡ 2131 ಚದರ ಮೀಟರ್ ವಿಸ್ತೀರ್ಣದಲ್ಲಿ ತಲೆ ಎತ್ತಲಿದೆ. ಕಟ್ಟಡದ ಅಡಿಪಾಯದ ವಿಸ್ತೀರ್ಣ 2,131 ಚದರ ಮೀಟರ್ ಇರಲಿದೆ. ನಾಲ್ಕು ಮಹಡಿಯ ಈ ಆಸ್ಪತ್ರೆಯು, 200 ಹಾಸಿಗೆ ಸಾಮರ್ಥ್ಯ ಹೊಂದಿರಲಿದೆ.
ಜಯದೇವ ಘಟಕ24 ಗಂಟೆ ಕಾರ್ಯ: ಕಾರ್ಯಕ್ರಮದ ವೇದಿಕೆಯಿಂದ ಜಯದೇವ ಆಸ್ಪತ್ರೆ ನಿರ್ದೇಶಕರಿಗೆ ಕರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿರುವ ಜಯದೇವ ಹೃದ್ರೋಗ ಸಂಸ್ಥೆಯ ಘಟಕ 24 ಗಂಟೆಯೂ ತೆರೆಯುವಂತೆ ಸೂಚಿಸಿದರು. ಈ ಘಟಕ ಸಂಜೆ 5 ಗಂಟೆವರೆಗೆ ತೆರೆದಿರುತ್ತಿದೆ. ಆದರೆ, ಹೃದಯ ಸಮಸ್ಯೆಗೆ ಒಳಗಾದವರಿಗೆ ಸಕಾಲದಲ್ಲಿ ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಸಕಾಲದಲ್ಲಿ ಮಾಡಬೇಕು. ಹೀಗಾಗಿ ಜಯದೇವ ಘಟಕ ಇಡೀ ದಿನ ಕಾಸರ್ಯನಿರ್ವಹಿಸುವಂತೆ ಸಂಸ್ಥೆಯ ನಿರ್ದೇಶಕರಿಗೆ ಸೂಚಿಸಿದ್ದೇವೆ. ಇದಕ್ಕೆ ಬೇಕಾಗುವ ಹೆಚ್ಚುವರಿ ಸಿಬ್ಬಂದಿ ಮತ್ತು ಹಣ ಒದಗಿಸಲಾಗುವುದು ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ಮುಖವಾಡ ಕಳಚಿದೆ, ರಾಜೀನಾಮೆ ಗ್ಯಾರಂಟಿ: ವಿಜಯೇಂದ್ರ ಭವಿಷ್ಯ
ಬಿಬಿಎಂಪಿ ನಿರ್ವಹಿಸುತ್ತಿರುವ ಪ್ರಮುಖ ಆಸ್ಪತ್ರೆಗಳ ಜವಾಬ್ದಾರಿಯನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಸಮಾಲೋಚನೆ ನಡೆಯುತ್ತಿದೆ. ಈ ಸಂಬಂಧ ಶೀಘ್ರವೇ ಸಭೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು.
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ