ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಿದೆ ರೊಬೋಟ್‌..!

By Kannadaprabha NewsFirst Published Jul 9, 2020, 9:01 AM IST
Highlights

ಬಿಐಇಸಿ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಿದೆ ರೊಬೋಟ್‌| ಪ್ರತಿ ಸೋಂಕಿತನ ಆರೋಗ್ಯ ತಪಾಸಣೆಗೆ ಬಳಕೆ: ಡಾ.ಮಂಜುನಾಥ್‌| ಇದರಿಂದ ತಜ್ಞ ವೈದ್ಯರು ಸೋಂಕಿಗೆ ಒಳಗಾಗುವ ಸಾಧ್ಯತೆ ಕಡಿಮೆ| ಶೇ.85 ರಿಂದ 90 ರಷ್ಟು ಮಂದಿಗೆ ತಾನಾಗಿಯೇ ಸೋಂಕು ವಾಸಿ|

ಬೆಂಗಳೂರು(ಜು.09): ನಗರದ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಮಾಡಿರುವ 10 ಸಾವಿರ ಹಾಸಿಗೆಯ ಕೊರೋನಾ ಸೋಂಕಿತರ ಆರೈಕೆ ಕೇಂದ್ರದಲ್ಲಿ ರೊಬೋಟ್‌ ಮೂಲಕ ನಿತ್ಯ ಸೋಂಕಿತರ ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಹಾಗೂ ಕೊರೋನಾ ನಿಯಂತ್ರಣ ಪಡೆ ಸದಸ್ಯರ ಡಾ.ಸಿ.ಎನ್‌. ಮಂಜುನಾಥ್‌ ಹೇಳಿದ್ದಾರೆ.

ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಬಿಐಇಸಿಯಲ್ಲಿ ರೊಬೋಟ್‌ ಪರಿಚಯಿಸಲು ಚಿಂತಿಸಿದ್ದೇವೆ. ವೈದ್ಯರ ರೀತಿಯಲ್ಲೇ ರೊಬೋಟ್‌ ಪ್ರತಿ ಸೋಂಕಿತರ ಬಳಿಯೂ ಹೋಗಿ ಮಾತನಾಡಿ ಆರೋಗ್ಯದ ಬಗ್ಗೆ ತಿಳಿಯುತ್ತದೆ. ಇದನ್ನು ತಜ್ಞ ವೈದ್ಯರು ದೂರದಿಂದಲೇ ಮಾನಿಟರ್‌ ಮಾಡುತ್ತಿರುತ್ತಾರೆ. ಇದರಿಂದ ತಜ್ಞ ವೈದ್ಯರು ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಸೋಂಕಿತರು ಹೆಚ್ಚಾದರೂ ಸುಲಭವಾಗಿ ಆರೈಕೆ ಮಾಡಬಹುದು. ಪ್ರತಿ ಹಾಸಿಗೆ ಬಳಿಗೂ ಕಿರಿಯ ವೈದ್ಯರು, ಶುಶ್ರೂಷಕರು ನೇರವಾಗಿ ಹೋಗುತ್ತಾರೆ ಎಂದು ತಿಳಿಸಿದರು.

ಕೊರೋನಾ ಕಾಟ: ಸೀರಿಯಸ್‌ ಪೇಶೆಂಟ್‌ಗಳೂ ಟಿಟಿಯಲ್ಲೇ ಆಸ್ಪತ್ರೆಗೆ ಶಿಫ್ಟ್‌!

ನಿಯಮ ಪಾಲನೆಯೇ ಕೊರೋನಾ ಔಷಧಿ:

ಕೊರೋನಾಗೆ ಸದ್ಯ ಔಷಧ ಲಭ್ಯವಿಲ್ಲ. ಯಾವಾಗ ಔಷಧಿ ಲಭ್ಯವಾಗಲಿದೆ. ಯಾವಾಗ ಸೋಂಕು ಕಡಿಮೆಯಾಗಲಿದೆ ಎಂಬುದು ನಮ್ಮ ಊಹೆಗಳು ಮಾತ್ರ. ಅಲ್ಲಿಯವರೆಗೂ ಸಾಮಾಜಿಕ ಅಂತರ, ಮಾಸ್ಕ್‌, ಮಾನಸಿಕ ದೃಢತೆಯೇ ಕೊರೋನಾಗೆ ಔಷಧಗಳು. ಅಗತ್ಯವಿದ್ದರೆ ಮಾತ್ರ ಹೊರಗೆ ಬರಬೇಕು. ಜಿಲ್ಲೆಯಿಂದ ಜಿಲ್ಲೆಗೆ ಪದೇ ಪದೆ ವಲಸೆ ಹೋಗುತ್ತಿರುವುದು ಸಹ ಸೋಂಕು ಹೆಚ್ಚಾಗಲು ಕಾರಣ ಎಂದು ಹೇಳಿದರು.

ಸೋಂಕು ಹೆಚ್ಚಾದ್ರೂ ಸಾವಾಗಬಾರದು:

ಶೇ.85 ರಿಂದ 90 ರಷ್ಟು ಮಂದಿಗೆ ತಾನಾಗಿಯೇ ಸೋಂಕು ವಾಸಿಯಾಗುತ್ತದೆ. ಹೆಚ್ಚೆಚ್ಚು ಮಂದಿ ಗುಣಮುಖರಾಗುತ್ತಿದ್ದಾರೆ. ಆದರೂ ಸೋಂಕಿನ ಪರೀಕ್ಷೆ ತೀವ್ರಗೊಳಿಸಬೇಕಿದೆ. ಪ್ರಸ್ತುತ ನಿತ್ಯ 18 ಸಾವಿರ ಪರೀಕ್ಷೆ ನಡೆಸಲಾಗುತ್ತಿದೆ. ಮುಂದಿನ 10 ದಿನದಲ್ಲಿ ನಿತ್ಯ 30 ಸಾವಿರ ಪರೀಕ್ಷೆ ನಡೆಸಲಾಗುವುದು. ಈ ಮೂಲಕ ಸೋಂಕಿನ ಸಂಖ್ಯೆ ಹೆಚ್ಚಾದರೂ ಸರಿ ಸಾವು ಹೆಚ್ಚಾಗಬಾರದು ಎಂದರು.

ಪ್ರತಿ ಆಸ್ಪತ್ರೆಯೂ ಆಂಟಿಜೆನ್‌ ಕಿಟ್‌ ಹೊಂದಿರಲಿ

ರೋಗಿಗಳಿಗೆ ಕೊರೋನಾ ಆತಂಕದಿಂದ ಚಿಕಿತ್ಸೆ ನಿರಾಕರಿಸುವ ಬದಲು ಎಲ್ಲಾ ಖಾಸಗಿ ಆಸ್ಪತ್ರೆಗಳು ಕನಿಷ್ಠ 50 ಆಂಟಿಜೆನ್‌ ಕಿಟ್‌ ಇಟ್ಟುಕೊಳ್ಳಬೇಕು. ರೋಗಿ ಬಂದರೆ 5-10 ನಿಮಿಷದಲ್ಲಿ ಸೋಂಕು ಪರೀಕ್ಷೆ ನಡೆಸಿ ಚಿಕಿತ್ಸೆ ಮುಂದುವರೆಸಬಹುದು ಎಂದು ಡಾ.ಸಿ.ಎನ್‌. ಮಂಜುನಾಥ್‌ ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲು ಹಾಗೂ ಸಮುದಾಯದ ಹಂತದಲ್ಲಿ ಪರೀಕ್ಷೆ ನಡೆಸಲು 1 ಲಕ್ಷ ಆಂಟಿಜೆನ್‌ ಪರೀಕ್ಷೆ ಕಿಟ್‌ ಖರೀದಿಸುತ್ತಿದ್ದು, ಈ ಕಿಟ್‌ಗಳು ಶುಕ್ರವಾರದ ವೇಳೆಗೆ ಬರಲಿವೆ. ಪ್ರತಿ ಕಿಟ್‌ಗೆ 450 ರು. ಮಾತ್ರ ವೆಚ್ಚವಾಗುತ್ತದೆ. ಇದರಿಂದ 5-10 ನಿಮಿಷದಲ್ಲೇ ಫಲಿತಾಂಶ ತಿಳಿಯಲಿದೆ. ಸೋಂಕು ಪಾಸಿಟಿವ್‌ ಬಂದರೆ ಹೆಚ್ಚು ಪರೀಕ್ಷೆ ಅಗತ್ಯವಿಲ್ಲ. ನೆಗೆಟಿವ್‌ ಬಂದು ಅವರಿಗೆ ರೋಗ ಲಕ್ಷಣಗಳಿಲ್ಲದಿದ್ದರೂ ಹೆಚ್ಚುವರಿ ಪರೀಕ್ಷೆ ಬೇಕಾಗಿಲ್ಲ. ನೆಗೆಟಿವ್‌ ಬಂದು ಸೋಂಕು ಲಕ್ಷಣಗಳಿದ್ದರೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಸಬಹುದು ಎಂದರು.
 

click me!