ಕೊರೋನಾ ಕಾಟ: ಸೀರಿಯಸ್‌ ಪೇಶೆಂಟ್‌ಗಳೂ ಟಿಟಿಯಲ್ಲೇ ಆಸ್ಪತ್ರೆಗೆ ಶಿಫ್ಟ್‌!

By Kannadaprabha NewsFirst Published Jul 9, 2020, 8:44 AM IST
Highlights

ತುರ್ತು ಚಿಕಿತ್ಸೆಗೂ ವ್ಯವಸ್ಥೆಯಿಲ್ಲದ ಟಿಟಿ ಬಳಕೆ|ಕೊರೋನಾ ಸೋಂಕಿತರ ಗಂಭೀರ ಆರೋಪ| ಸೋಂಕು ದೃಢಪಟ್ಟ ಒಂದು ದಿನದ ನಂತರ ಕಳೆದ ಮಂಗಳವಾರ ಸಂಜೆ ತೀವ್ರ ಉಸಿರಾಟ ತೊಂದರೆ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಸೋಂಕಿತ ವ್ಯಕ್ತಿಯನ್ನು ಟೆಂಪೋ ಟ್ರಾವೆಲರ್‌ ನಲ್ಲಿ ಕರೆದೊಯ್ದಿದ್ದಾರೆ|

ಬೆಂಗಳೂರು(ಜು.09): ಗಂಭೀರ ಸಮಸ್ಯೆಯಿಂದ ಬಳಲುತ್ತಿರುವ ಕೊರೋನಾ ಸೋಂಕಿತರನ್ನೂ, ತುರ್ತು ಚಿಕಿತ್ಸೆಗೆ ಬೇಕಾದ ಯಾವುದೇ ವ್ಯವಸ್ಥೆ ಇಲ್ಲದ ಟೆಂಪೋ ಟ್ರಾವೆಲರ್‌ (ಟಿಟಿ)ಗಳಲ್ಲಿಯೇ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

"

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರನ್ನು (ಎಸಿಂಪ್ಟಮ್ಯಾಟಿಕ್‌) ಆಸ್ಪತ್ರೆಗೆ ಕರೆದೊಯ್ಯಲು 71 ಆ್ಯಂಬುಲೆನ್ಸ್‌ ಹಾಗೂ 179 ಟಿಟಿಗಳನ್ನು ನಿಯೋಜನೆ ಮಾಡಲಾಗಿದೆ. ಟಿಟಿಗಳಲ್ಲಿ ತುರ್ತು ಆರೋಗ್ಯ ಚಿಕಿತ್ಸೆಗೆ ಬೇಕಾದ ಯಾವುದೇ ವ್ಯವಸ್ಥೆ ಇಲ್ಲದ ಕಾರಣ ಕೊರೋನಾ ಸೋಂಕಿನ ಲಕ್ಷಣ ಇಲ್ಲದವರನ್ನು ಮಾತ್ರ ಟಿಟಿಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚನೆ ನೀಡಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಸೋಂಕಿನಿಂದ ಗಂಭೀರ ಸಮಸ್ಯೆ ಹೊಂದಿರುವವರನ್ನು ಟಿಟಿಗಳಲ್ಲಿಯೇ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಆಂಬುಲೆನ್ಸ್ ಇಲ್ಲ, ಸೋಂಕಿತರನ್ನು ಟಿಟಿಯಲ್ಲಿ ರವಾನೆ; ಉಸಿರಾಟದ ಸಮಸ್ಯೆಯಿಂದ ಮಹಿಳೆ ಸಾವು

ಆರೋಗ್ಯ ಸಿಬ್ಬಂದಿಯೂ ಇಲ್ಲ:

ಸೋಂಕು ದೃಢಪಟ್ಟ ಒಂದು ದಿನದ ನಂತರ ಕಳೆದ ಮಂಗಳವಾರ ಸಂಜೆ ತೀವ್ರ ಉಸಿರಾಟ ತೊಂದರೆ ಮತ್ತು ತೀವ್ರ ಜ್ವರದಿಂದ ಬಳಲುತ್ತಿದ್ದ ಸೋಂಕಿತ ವ್ಯಕ್ತಿಯನ್ನು ಟೆಂಪೋ ಟ್ರಾವೆಲರ್‌ ನಲ್ಲಿ ಕರೆದೊಯ್ದಿದ್ದಾರೆ. ಇದರಲ್ಲಿ ಆಕ್ಸಿಜನ್‌ ವ್ಯವಸ್ಥೆ, ಮಲಗಲು ಹಾಸಿಗೆ ಹಾಗೂ ಯಾವುದೇ ಪ್ರಥಮ ಚಿಕಿತ್ಸೆ ಸಾಧನವೂ ಅಳವಡಿಸಿಲ್ಲ. ಗಂಭೀರ ಸಮಸ್ಯೆಯಾದರೆ ಯಾವುದೇ ಸಲಹೆ ಸೂಚನೆ ಕೊಡಲು ಯಾವುದೇ ಅರೋಗ್ಯ ಸಿಬ್ಬಂದಿಯು ವಾಹನದಲ್ಲಿ ಇರುವುದಿಲ್ಲ. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರೂ ಕೂರಿಸಿಕೊಂಡು ಆಸ್ಪತ್ರೆಗೆ ರವಾನೆ ಮಾಡಿರುವ ಬಗ್ಗೆ ಸೋಂಕಿತ ವ್ಯಕ್ತಿಯೊಬ್ಬರು ದೂರಿದ್ದಾರೆ.
 

click me!