
-ಅಜಿತ್ ಶೆಟ್ಟಿ ಹೆರಂಜೆ
ಜಗತ್ತು ಬಿಕ್ಕಟ್ಟಿಗೆ ಪ್ರತಿಕ್ರಿಯಿಸುತ್ತಿರುವ ಸಮಯದಲ್ಲಿ, ಭಾರತ ಅದಕ್ಕೆ ಸಿದ್ಧವಾಗಿತ್ತು. 2026ರ ಪಶ್ಚಿಮ ಏಷ್ಯಾ ಉದ್ವಿಗ್ನತೆ ಅದನ್ನು ಸ್ಪಷ್ಟವಾಗಿ ತೋರಿಸಿತು. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (ಐಇಎ) ಇದನ್ನು ‘ಜಾಗತಿಕ ತೈಲ ಮಾರುಕಟ್ಟೆ ಇತಿಹಾಸದ ಅತಿ ದೊಡ್ಡ ಪೂರೈಕೆ ಅಡಚಣೆ’ ಎಂದು ಘೋಷಿಸಿತು. ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 130 ಡಾಲರ್ ದಾಟಿತು. ಭಾರತದ ತೈಲ ಕಂಪನಿಗಳ ಮೇಲೆ ಇದು ಬಲವಾದ ಹೊರೆಯಾಯಿತು. ಸರ್ಕಾರ ಗ್ರಾಹಕರ ಮೇಲೆ ಈ ಒತ್ತಡ ಬೀಳಬಾರದು ಎನ್ನುವ ದೃಷ್ಟಿಯಿಂದ ಪೆಟ್ರೋಲ್ ಮೇಲಿದ್ದ ಸುಂಕವನ್ನು ಲೀಟರಿಗೆ ₹10 ಇಳಿಸಿದರೆ, ಡೀಸೆಲ್ ಮೇಲಿನ ಸುಂಕವನ್ನು ಸಂಪೂರ್ಣವಾಗಿ ಕಡಿತಗೊಳಿಸಿತು. ವಾರ್ಷಿಕ ಸುಮಾರು 1.55 ಲಕ್ಷ ಕೋಟಿಯಷ್ಟು ನಷ್ಟವನ್ನು ತನ್ನ ಮೇಲೆ ಎಳೆದುಕೊಂಡಿತು. ಇದರ ಜೊತೆ ಎಲ್‌ಪಿಜಿಯ ಕೊರತೆ ದೇಶದ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಿತು. ಈ ಬೆಳವಣಿಗೆಗಳನ್ನು ನೋಡಿ ಭಾರತ ಸರ್ಕಾರದ ತೈಲ ನಿರ್ವಹಣಾ ನೀತಿ ಸಂಪೂರ್ಣವಾಗಿ ಸೋತಿದೆ ಅಂದುಕೊಂಡರೆ ಅದು ಅವರ ಕಲ್ಪನೆಯಷ್ಟೆ. ಆದರೆ ವಾಸ್ತವದಲ್ಲಿ ಭಾರತ ಇಂತಹ ಪರಿಸ್ಥಿತಿಯನ್ನು ಎದುರಿಸಲು 2014ರಿಂದಲೇ ತಯಾರಿ ನಡೆಸಿತ್ತು.
2014ರಲ್ಲಿ ಕೇವಲ ಶೇಕಡ 20 ವಿದ್ಯುದ್ದೀಕರಣಗೊಂಡಿದಿದ್ದ ಭಾರತೀಯ ರೈಲ್ವೆ 2026ರ ಮಾರ್ಚ್‌ನಲ್ಲಿ ಶೇ.99.6 ತಲುಪಿದೆ. ಇದು 21,801 ಮಾರ್ಗ ಕಿಲೋಮೀಟರ್‌ಗಳಿಂದ 69,873 ಮಾರ್ಗ ಕಿಲೋಮೀಟರ್‌ಗಳಿಗೆ ಏರಿಕೆಯಾಯಿತು. ಈ ಪ್ರಮಾಣದಲ್ಲಿ ವಿದ್ಯುದ್ದೀಕರಣ ಮಾಡಿದ ಜಗತ್ತಿನ ಏಕೈಕ ದೇಶ ನಮ್ಮದು. 2024-25ರಲ್ಲಿ ರೈಲ್ವೆ ವಿದ್ಯುದ್ದೀಕರಣದಿಂದ ವಾರ್ಷಿಕ 180 ಕೋಟಿ ಲೀಟರ್ ಡೀಸೆಲ್ ಉಳಿತಾಯವಾಗಿದ್ದು, ಇದು ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು ₹16,000 ಕೋಟಿಗೂ ಹೆಚ್ಚು. ಈ ರೈಲುಗಳ ಓಡಾಟಕ್ಕೆ ಈಗ ಬರುವ ವಿದ್ಯುತ್, ಜಲ, ಪರಮಾಣು, ಸೌರ ಮತ್ತು ಪವನ ಶಕ್ತಿಯಿಂದ ಬರುತ್ತದೆಯೇ ಹೊರತು ತೈಲದಿಂದ ಅಲ್ಲ. ರೈಲ್ವೆ ವಲಯದಲ್ಲಿ ಡೀಸೆಲ್ ಅವಲಂಬನೆ ವ್ಯಾವಹಾರಿಕವಾಗಿ ನಗಣ್ಯವಾಗಿದೆ. ಪ್ರತಿದಿನ ಸುಮಾರು 2 ಕೋಟಿ ಪ್ರಯಾಣಿಕರನ್ನು ಹಾಗೂ 1,670 ಮಿಲಿಯನ್ ಟನ್‌ನಷ್ಟು ಸರಕು ಸಾಗಣೆ ಮಾಡುವ ಭಾರತೀಯ ರೈಲ್ವೆಯಲ್ಲಿ ಆದ ಈ ಪ್ರಮಾಣದ ಮಾರ್ಪಾಡು ದೇಶದ ಇಂಧನ ಭದ್ರತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ರೈಲ್ವೆ ಈಗಲೂ ಡೀಸೆಲ್ ಮೇಲೆ ಅವಲಂಬಿತವಾಗಿದ್ದರೆ ಸರ್ಕಾರಕ್ಕೆ ಆಗುತ್ತಿದ್ದ ಹೆಚ್ಚುವರಿ ನಷ್ಟದ ಪ್ರಮಾಣವನ್ನು ಯೋಚಿಸಿ. ಇದು ಕೇವಲ ರೈಲ್ವೆಯ ಬದಲಾವಣೆಯಲ್ಲ- ದೇಶದ ಇಂಧನ ಅವಲಂಬನೆಯ ಸ್ವರೂಪವೇ ಬದಲಾಗುತ್ತಿರುವುದರ ಸೂಚನೆ.
ಇಂಗಾಲ ಮುಕ್ತ ಇಂಧನದತ್ತ ಸಾಗುತ್ತಿರುವ ಭಾರತ, ಕಳೆದ 12 ವರ್ಷಗಳಲ್ಲಿ ಇಂಧನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಈ ನಿಟ್ಟಿನಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು 76 ಗಿಗಾ ವ್ಯಾಟ್‌ನಿಂದ 283.46 ಗಿಗಾ ವ್ಯಾಟ್‌ಗೆ ಏರಿಸುವ ಮೂಲಕ 3.7 ಪಟ್ಟು ಪ್ರಗತಿ ಸಾಧಿಸಿದೆ. ವಿಶೇಷವಾಗಿ ಸೌರಶಕ್ತಿಯಲ್ಲಿ 50 ಪಟ್ಟು ಜಿಗಿತ ಕಂಡಿರುವ ಭಾರತ, 2030ರ ಗುರಿಯಾದ 500 ಗಿಗಾ ವ್ಯಾಟ್‌ನ ಅರ್ಧದಷ್ಟು ಭಾಗವನ್ನು (51.5%) ಐದು ವರ್ಷ ಮುಂಚಿತವಾಗಿಯೇ ತಲುಪಿ ಜಾಗತಿಕವಾಗಿ 3ನೇ ಸ್ಥಾನಕ್ಕೇರಿದೆ. ಇದರೊಂದಿಗೆ, ಕಲ್ಪಾಕ್ಕಂನಲ್ಲಿ ಸ್ವದೇಶಿ ‘ಫಾಸ್ಟ್ ಬ್ರೀಡರ್ ರಿಯಾಕ್ಟರ್’ ಆರಂಭಿಸಿ ರಷ್ಯಾದ ನಂತರ ಈ ಸಾಧನೆ ಮಾಡಿದ ವಿಶ್ವದ 2ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಇದು ಮುಂದೆ ಥೋರಿಯಂ ಬಳಸಿ ಶತಮಾನಗಳ ಕಾಲ ವಿದ್ಯುತ್ ಪಡೆಯುವ 3ನೇ ಹಂತಕ್ಕೆ ದಾರಿ ಮಾಡಿಕೊಡುವುದಲ್ಲದೆ, 2047ರ ವೇಳೆಗೆ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 1000 ಗಿಗಾ ವ್ಯಾಟ್‌ಗೆ ಕೊಂಡೊಯ್ಯುವ ಗುರಿ ಹೊಂದಿದೆ.
ರಿಲಯನ್ಸ್ ಒಡೆತನದ ಜಾಮ್‌ನಗರ ಘಟಕವು ದಿನಕ್ಕೆ 14 ಲಕ್ಷ ಬ್ಯಾರೆಲ್ ತೈಲ ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ‘ಸಿಂಗಲ್ ಸೈಟ್’ ರಿಫೈನರಿ ಮಾತ್ರವಲ್ಲದೆ, 21.1ರಷ್ಟು ನೆಲ್ಸನ್ ಕಾಂಪ್ಲೆಕ್ಸಿಟಿ ಇಂಡೆಕ್ಸ್ (ಎನ್‌ಸಿಐ) ಹೊಂದಿರುವ ಜಗತ್ತಿನ ಏಕೈಕ ಅತ್ಯಾಧುನಿಕ ಸಂಸ್ಕರಣಾ ಕೇಂದ್ರವಾಗಿದೆ. ಇದು ಅತ್ಯಂತ ಹಗುರವಾದ ‘ಸ್ವೀಟ್ ಕ್ರೂಡ್’ನಿಂದ ಹಿಡಿದು ಅತಿ ಭಾರವಾದ ‘ಹೆವಿ ಸೋರ್ ಕ್ರೂಡ್’ವರೆಗೆ ಒಟ್ಟು 216 ವಿವಿಧ ಮಾದರಿಯ ಕಚ್ಚಾ ತೈಲಗಳನ್ನು ಸಂಸ್ಕರಿಸಬಲ್ಲ ಜಾಗತಿಕ ಶ್ರೇಷ್ಠತೆಯನ್ನು ಹೊಂದಿದೆ. ಭಾರತವನ್ನು ಕೇವಲ ತೈಲ ಆಮದುದಾರನಾಗಿ ಮಾತ್ರವಲ್ಲದೆ ಶುದ್ಧೀಕರಿಸಿದ ತೈಲ ಉತ್ಪನ್ನಗಳ ಪ್ರಮುಖ ರಫ್ತುದಾರನನ್ನಾಗಿ ಈ ಘಟಕ ಬದಲಾಯಿಸಿದೆ.
ಭಾರತವೂ ರಷ್ಯಾಕ್ಕೆ ಅನಿವಾರ್ಯ
ಮಾರ್ಚ್ 2026ರಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 26 ಲಕ್ಷ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದೆ. ಉಭಯ ರಾಷ್ಟ್ರಗಳ ನಡುವಿನ ಶೇ.96 ವ್ಯಾಪಾರ ವ್ಯವಹಾರವು ಡಾಲರ್ ಬಳಸದೆ ರಾಷ್ಟ್ರೀಯ ಕರೆನ್ಸಿಗಳಲ್ಲೇ ನಡೆಯುತ್ತಿದ್ದು, ಇದು ಭಾರತದ ವಿದೇಶಿ ವಿನಿಮಯದ ಮೇಲಿನ ಒತ್ತಡವನ್ನು ಗಣನೀಯವಾಗಿ ತಗ್ಗಿಸಿದೆ. ರಷ್ಯಾದ ‘ಉರಲ್ಸ್ ಕ್ರೂಡ್’ ಬೆಲೆಯಲ್ಲಿ ಅಗ್ಗವಾಗಿರುವುದಲ್ಲದೆ ಭಾರತೀಯ ರಿಫೈನರಿಗಳ ತಾಂತ್ರಿಕ ಅಗತ್ಯಗಳಿಗೆ ಹೆಚ್ಚು ಹೊಂದಿಕೆಯಾಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಅಮೆರಿಕದ ತೈಲ ಸಾಗಾಟ ವೆಚ್ಚವು ಸೌದಿ ಅರೇಬಿಯಾಕ್ಕಿಂತ 4 ಪಟ್ಟು ಅಧಿಕ ಮಾತ್ರವಲ್ಲ, ರಾಜಕೀಯ ನಿರ್ಬಂಧಗಳ ಅಪಾಯವೂ ಇದ್ದೇ ಇರುತ್ತದೆ. ಅಂತಾರಾಷ್ಟ್ರೀಯ ಒತ್ತಡಗಳ ನಡುವೆಯೂ ರಷ್ಯಾದೊಂದಿಗಿನ ವ್ಯಾಪಾರ ಸಂಬಂಧವನ್ನು ಮುಂದುವರಿಸಿರುವ ಭಾರತದ ನಿರ್ಧಾರ, ಇಂಧನ ಕ್ಷೇತ್ರದಲ್ಲಿ ದೇಶದ ಕಾರ್ಯತಂತ್ರದ ಸ್ವಾಯತ್ತತೆಯನ್ನು ಸ್ಪಷ್ಟವಾಗಿ ಸಾಬೀತುಪಡಿಸಿದೆ.
ಹೋರ್ಮುಜ್ ತೆರೆದರೂ ಬಿಕ್ಕಟ್ಟು ಮುಗಿಯದು:
ಹೋರ್ಮುಜ್ ಜಲಸಂಧಿ ತಕ್ಷಣಕ್ಕೆ ತೆರೆದರೂ ಜಾಗತಿಕ ಇಂಧನ ಬಿಕ್ಕಟ್ಟು ಸುಲಭವಾಗಿ ನೀಗದು, ಏಕೆಂದರೆ ಮಧ್ಯಪ್ರಾಚ್ಯದ ಇಂಧನ ಮೂಲಸೌಕರ್ಯಗಳಿಗೆ ಉಂಟಾಗಿರುವ ಹಾನಿ ಅತ್ಯಂತ ಭೀಕರವಾಗಿದೆ. ಜಗತ್ತಿನ ಅತಿದೊಡ್ಡ ಎಲ್‌ಎನ್‌ಜಿ ಕೇಂದ್ರವಾದ ಕತಾರ್‌ನ ರಾಸ್ ಲಫಾನ್ ಮಾರ್ಚ್ 2ರ ದಾಳಿಯಿಂದ ಧ್ವಂಸವಾಗಿದ್ದು, ಅದನ್ನು ಮರುಸ್ಥಾಪಿಸಲು ಕನಿಷ್ಠ 3 ರಿಂದ 5 ವರ್ಷಗಳು ಬೇಕಾಗುತ್ತವೆ. ಸುಮಾರು 40ಕ್ಕೂ ಹೆಚ್ಚು ತೈಲ ಮತ್ತು ಅನಿಲ ಸ್ಥಾವರಗಳು ಹಾನಿಗೆ ಒಳಗಾಗಿ ಜಗತ್ತಿನ ಶೇ.20 ತೈಲ ಪೂರೈಕೆ ಸ್ಥಗಿತಗೊಂಡಿದೆ. ಕೇವಲ ಜಲಸಂಧಿ ತೆರೆಯುವುದರಿಂದ ತೈಲ ಪೂರೈಕೆ ಆರಂಭವಾಗದು ಸಮುದ್ರದಲ್ಲಿನ ಜಲಬಾಂಬ್‌ಗಳ ತೆರವು, ಹಡಗು ವಿಮೆ ಸುಧಾರಣೆ ಮತ್ತು ಸರಕು ಸಾಗಣೆ ಕಂಪನಿಗಳ ಪುನರಾರಂಭಕ್ಕೆ ತಿಂಗಳುಗಳ ಬದಲಿಗೆ ವರ್ಷಗಳೇ ಹಿಡಿಯುವುದರಿಂದ ಮಧ್ಯಪ್ರಾಚ್ಯವು ತನ್ನ ಹಳೆಯ ಇಂಧನ ಪ್ರಾಬಲ್ಯವನ್ನು ಮರಳಿ ಪಡೆಯುವುದು ಸದ್ಯಕ್ಕೆ ಕಠಿಣ.
ಭಾರತದ ಭರವಸೆಯ ಬಂಗಾಳ ಕೊಲ್ಲಿ:
ಭಾರತದ ಪಾಲಿಗೆ ಬಂಗಾಳ ಕೊಲ್ಲಿಯು ಹೊಸ ಇಂಧನ ನಿಧಿಯಾಗಿ ಮಾರ್ಪಡುತ್ತಿದ್ದು, ಅಂಡಮಾನ್ ಮತ್ತು ಕೃಷ್ಣಾ-ಗೋದಾವರಿ (ಕೆ.ಜಿ.) ಜಲಾನಯನ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲ ಮತ್ತು ತೈಲ ಉತ್ಪಾದನೆ ಆರಂಭವಾಗಿದೆ. ಎಸ್ ಆ್ಯಂಡ್ ಪಿ ಗ್ಲೋಬಲ್ ವರದಿಯಂತೆ ಮಹಾನದಿ, ಅಂಡಮಾನ್, ಬೆಂಗಾಲ್ ಮತ್ತು ಕೇರಳ-ಕೊಂಕಣದಂತಹ ಕೇವಲ 4 ಬೇಸಿನ್‌ಗಳಲ್ಲೇ ಅಂದಾಜು 22 ಬಿಲಿಯನ್ ಬ್ಯಾರೆಲ್ ಭೂವೈಜ್ಞಾನಿಕ ಸಾಮರ್ಥ್ಯವಿದೆ. ಭಾರತದ ಒಟ್ಟು 26 ಸೆಡಿಮೆಂಟರಿ ಬೇಸಿನ್‌ಗಳಲ್ಲಿ ಸುಮಾರು 305 ಬಿಲಿಯನ್ ಬ್ಯಾರೆಲ್ ತೈಲಕ್ಕೆ ಸಮಾನವಾದ (41.87 ಬಿಲಿಯನ್ ಟನ್) ಹೈಡ್ರೋಕಾರ್ಬನ್ ಸಾಮರ್ಥ್ಯವಿದ್ದು, ಇದು ಅಂಕಿಅಂಶಗಳಲ್ಲಿ ಜಗತ್ತಿನ ಅತಿ ದೊಡ್ಡ ನಿಕ್ಷೇಪ ಹೊಂದಿರುವ ವೆನೆಜುವೆಲಾಗೆ ಸರಿಸಮನಾಗಿದೆ.
ಆದರೆ 303 ಬಿಲಿಯನ್ ಬ್ಯಾರೆಲ್ ಪ್ರಮಾಣೀಕರಿಸಿದ ನಿಕ್ಷೇಪಗಳನ್ನು ಹೊಂದಿರುವ ವೆನೆಜುವೆಲಾ, ರಾಜಕೀಯ ಅಸ್ಥಿರತೆ ಮತ್ತು ನಿರ್ಬಂಧಗಳಿಂದಾಗಿ ತನ್ನ ಸಾಮರ್ಥ್ಯದ ಕಾಲು ಭಾಗದಷ್ಟು (ದಿನಕ್ಕೆ 9.60 ಲಕ್ಷ ಬ್ಯಾರೆಲ್) ಮಾತ್ರ ಉತ್ಪಾದಿಸುತ್ತಿದೆ. ಸಿದ್ಧ ನಿಕ್ಷೇಪವಿದ್ದೂ ಅದನ್ನು ಬಳಸಿಕೊಳ್ಳಲಾಗದ ವೆನೆಜುವೆಲಾ ಒಂದೆಡೆಯಾದರೆ, ಇನ್ನೂ ಅನ್ವೇಷಣೆಯಾಗದ 305 ಬಿಲಿಯನ್ ಬ್ಯಾರೆಲ್ ಭೂವೈಜ್ಞಾನಿಕ ಸಾಮರ್ಥ್ಯ ಹೊಂದಿರುವ ಭಾರತ ಮತ್ತೊಂದೆಡೆ - ವ್ಯತ್ಯಾಸ ಕೇವಲ ಸಂಪತ್ತಿನದಲ್ಲ, ಆಡಳಿತ ಮತ್ತು ತಾಂತ್ರಿಕ ಸಾಮರ್ಥ್ಯದ್ದು. ದಕ್ಷ ನಿರ್ವಹಣೆ ಮತ್ತು ಜಾಮ್‌ನಗರದಂತಹ ವಿಶ್ವದರ್ಜೆಯ ರಿಫೈನಿಂಗ್ ಸೌಲಭ್ಯದ ಬಲದಿಂದ ಈ ಸಂಪತ್ತನ್ನು ಹೊರತೆಗೆದರೆ, ಭಾರತವು ತೈಲ ಆಮದುದಾರ ದೇಶದಿಂದ ರಫ್ತುದಾರ ದೇಶವಾಗಿ ಬದಲಾಗುವ ಆಶಾವಾದ ಇಂದು ಹೆಚ್ಚು ವಾಸ್ತವಕ್ಕೆ ಹತ್ತಿರವಾಗುತ್ತದೆ.
ತೈಲ ಸ್ವಾವಲಂಬನೆಗೆ ಒಂದೇ ಹೆಜ್ಜೆ:
ಭಾರತವು ಇಂಧನ ಭದ್ರತೆಗಾಗಿ ಏಕಕಾಲದಲ್ಲಿ ಎರಡು ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ- ಎಥೆನಾಲ್, ಇವಿ, ಸಿಎನ್‌ಜಿ ಮೂಲಕ ಪೆಟ್ರೋಲಿಯಂ ಬೇಡಿಕೆಯನ್ನು ಕಡಿಮೆ ಮಾಡುವುದು ಹಾಗೂ ಪರಮಾಣು, ಸೌರ ಮತ್ತು ದೇಶೀಯ ನಿಕ್ಷೇಪಗಳ ಹುಡುಕಾಟದ ಮೂಲಕ ವಿದೇಶಿ ಅವಲಂಬನೆಯನ್ನು ತಗ್ಗಿಸುವುದು, ಅದರ ಜೊತೆಗೆ, ಕಳೆದ ಒಂದು ದಶಕದಲ್ಲಿ 27 ದೇಶಗಳಿಂದ 40 ದೇಶಗಳಿಗೆ ತೈಲ ಮೂಲವನ್ನು ವಿಸ್ತರಿಸಿದ್ದು, ರಷ್ಯಾ, ಆಸ್ಟ್ರೇಲಿಯಾ, ಕೆನಡಾ, ಪಶ್ಚಿಮ ಆಫ್ರಿಕಾ ಮತ್ತು ವೆನೆಜುವೆಲಾದಿಂದ ತೈಲ ಖರೀದಿ ಆರಂಭಿಸುವ ಮೂಲಕ ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಭಾರತದ ಸಂಕಷ್ಟವನ್ನು ಬಂಡವಾಳ ಮಾಡಿಕೊಳ್ಳದ ದೇಶಗಳೊಂದಿಗೆ ಭಾರತ ದೀರ್ಘಕಾಲೀನ ಸಂಬಂಧವನ್ನು ಬೆಳೆಸಿಕೊಂಡಿರುವುದು ಭಾರತದ ಇಂಧನ ರಾಜತಾಂತ್ರಿಕತೆಯ ಪ್ರಬುದ್ಧತೆಯ ಸಂಕೇತ. ದೇಶೀಯ ನಿರ್ವಹಣೆ ಮತ್ತು ಸ್ವಾಯತ್ತ ಖರೀದಿ ನೀತಿಯಿಂದಾಗಿ ಇಂಧನ ಭದ್ರತೆ ಗಟ್ಟಿಯಾಗಿ ನಿಂತಿದ್ದರೂ, ಕಾರ್ಯತಂತ್ರದ ಪೆಟ್ರೋಲಿಯಂ ಮೀಸಲು (ಎಸ್‌ಪಿಆರ್) ಕೇವಲ 60–90 ದಿನಗಳಿಗೆ ಸೀಮಿತವಾಗಿರುವುದು ಒಂದು ಸವಾಲು. ಇದನ್ನು ವಿಸ್ತರಿಸುವುದು ತುರ್ತು ಅಗತ್ಯವಾಗಿದ್ದು, ಐಎಸ್‌ಪಿಆರ್‌ಎಲ್ ಸಾಮರ್ಥ್ಯದ ಸಂಪೂರ್ಣ ಬಳಕೆಯನ್ನು ಇನ್ನೂ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ತ್ರಿಂಕೋಮಲಿ ತೈಲ ಟ್ಯಾಂಕ್‌ಗಳಂತಹ ವಿದೇಶಿ ಸಂಗ್ರಹ ವ್ಯವಸ್ಥೆಗಳು ಮತ್ತು ಬಂಗಾಳ ಕೊಲ್ಲಿ–ಅಂಡಮಾನ್ ಬೇಸಿನ್‌ಗಳ ಹೈಡ್ರೋಕಾರ್ಬನ್ ಸಾಮರ್ಥ್ಯ ಭಾರತಕ್ಕೆ ಹೆಚ್ಚುವರಿ ರಕ್ಷಾಕವಚ ನೀಡಬಹುದು. ಅನ್ವೇಷಣೆ ಮತ್ತು ಸಂಗ್ರಹವನ್ನು ಬಲಪಡಿಸಿದರೆ, ಭಾರತ ತೈಲ ಆಮದುದಾರ ದೇಶದಿಂದ ರಫ್ತುದಾರ ದೇಶವಾಗಿ ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಜಗತ್ತು ಇನ್ನೂ ಇಂಧನ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವಾಗ, ಭಾರತದ ಪೂರ್ವಸಿದ್ಧತೆಯು ದೇಶವನ್ನು ಭವಿಷ್ಯದ ಇಂಧನ ಭದ್ರತೆಯ ದಿಕ್ಕಿನಲ್ಲಿ ಸ್ಪಷ್ಟವಾಗಿ ಮುನ್ನಡೆಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ