ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನಗದು ರೂಪದಲ್ಲಿ ನೀಡಲಾಗುತ್ತಿದ್ದ 170 ರೂಪಾಯಿ ಬದಲು ದಿನಸಿ ಕಿಟ್ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸುತ್ತಿದೆ. ಅಕ್ಟೋಬರ್ ವೇಳೆಗೆ ಈ ಯೋಜನೆ ಜಾರಿಗೆ ಬರುವ ಸಾಧ್ಯತೆಯಿದೆ.
ಬೆಂಗಳೂರು (ಸೆ.3): ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯದಲ್ಲಿ ಈವರೆಗೂ ರಾಜ್ಯ ಸರ್ಕಾರ ತಮ್ಮ ಪಾಲಿನ ಅಕ್ಕಿಯನ್ನು ಜನರಿಗೆ ನೀಡುತ್ತಿಲ್ಲ. ಅದರ ಬದಲಿಗೆ ಕೆಜಿಗೆ 34 ರೂಪಾಯಿಯಂತೆ ಫಲಾನುಭವಿಗೆ 170 ರೂಪಾಯಿಯನ್ನು ಸರ್ಕಾರ ನೀಡುತ್ತಿದೆ. ಆದರೆ, ಈಗ ಅನ್ನಭಾಗ್ಯ ಯೋಜನೆಯಡಿ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿಯ ಜೊತೆಗೆ ದಿನಸಿ ಕಿಟ್ ನೀಡುವ ಯೋಜನೆ ರೂಪಿಸಿದೆ. ಹಣದ ಬದಲು ದಿನಸಿ ಕಿಟ್ ನೀಡಲು ಆಹಾರ ಇಲಾಖೆ ಯೋಜನೆ ರೂಪಿಸಿದೆ. ಮುಂದಿನ ಅಕ್ಟೋಬರ್ ವೇಳೆಗೆ ದಿನಸಿ ಕಿಟ್ ನೀಡುವ ಯೋಜನೆಗೆ ಚಾಲನೆ ಸಿಗುವ ಸಾಧ್ಯತೆ ಇದೆ. ಫಲಾನುಭವಿಗಳಿಗೆ ಹಣ ನೀಡುವ ಪ್ರಕ್ರಿಯೆ ಮುಂದುವರಿಸುವುದು ಸೂಕ್ತವಲ್ಲ ಎಂದು ಆಹಾರ ಇಲಾಖೆಯ ಅಧಿಕಾರಿಗಳಿಂದ ಸರಕಾರಕ್ಕೆ ಸಲಹೆ ಬಂದಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. 170 ರೂಪಾಯಿ ಬದಲು ದಿನಸಿ ಕಿಟ್ ನೀಡುವುದು ಸೂಕ್ತ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ ಈಗಾಗಲೇ ನೀಡುತ್ತಿರುವ ನಗದು ಬದಲು ದಿನಸಿ ಕಿಟ್ ನೀಡಲು ಪ್ಲಾನ್ ಆಫ್ ಅ್ಯಕ್ಷನ್ ರೂಪಿಸಲಾಗಿದೆ.
ಅಕ್ಕಿಯ ಕೊರತೆಯಿಂದ ಪ್ರತಿ ಕೆಜಿಗೆ 34 ರೂ ನಂತೆ ಫಲಾನುಭವಿಗೆ ರಾಜ್ಯ ಸರ್ಕಾರ 170 ರೂಪಾಯಿ ನೀಡುತ್ತಿದೆ. ಈಗ ಕೇಂದ್ರ ಸರ್ಕಾರ ತಮ್ಮ ಬಳಿ ಅಕ್ಕಿ ದಾಸ್ತಾನು ಇದ್ದು, ಬೇಕಾದಲ್ಲಿ ಖರೀದಿ ಮಾಡಬಹುದು ಎಂದು ಹೇಳಿದೆ. ಪ್ರತಿ ಕೆಜಿಗೆ 28 ರೂಪಾಯಿಯಂತೆ ಅಕ್ಕಿ ಕೊಡಲು ಕೇಂದ್ರ ಸರ್ಕಾರ ಮುಂದಾಗಿದೆ. ಆದರೆ, ರಾಜ್ಯ ಸರ್ಕಾರ ಅಕ್ಕಿ ಖರೀದಿ ಮಾಡಲು ಹಿಂದೇಟು ಹಾಕಿದೆ. ಅಕ್ಕಿಯ ಬದಲು ದಿನಸಿ ಕಿಟ್ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಕ್ಕರೆ, ಎಣ್ಣೆ, ಬೆಳೆ ಸೇರಿದಂತೆ ದಿನಸಿ ಕಿಟ್ ಕೊಡಲು ಸರ್ಕಾರ ಯೋಜನೆ ರೂಪಿಸಿದೆ.
ದಿನಸಿ ಕಿಟ್ ಕೊಡಬೇಕೋ ಅಥವಾ ನಗದು ಮುಂದುವರಿಸಬೇಕಾ ಅನ್ನೋ ಬಗ್ಗೆ ಸರ್ವೆ ಕೂಡ ಮಾಡಲಾಗಿದೆ. ಹಲವು ಜಿಲ್ಲೆಗಳಲ್ಲಿ ಫಲಾನುಭವಿಗಳನ್ನು ಆಹಾರ ಇಲಾಖೆ ಅಧಿಕಾರಿಗಳು ಸಂದರ್ಶನ ಮಾಡಿದ್ದಾರೆ. ಸರ್ವೆ ಸಂದರ್ಭದಲ್ಲಿ ಫಲಾನುಭವಿಗಳು ಭಿನ್ನ ಅಭಿಪ್ರಾಯಗಳನ್ನು ನೀಡಿದ್ದಾರೆ. ದಿನಸಿ ಕಿಟ್ ಕೊಡುವ ಬದಲು ಹಣವನ್ನೇ ಕೊಡಿ ಎಂದು ಹೆಚ್ಚಿನ ಫಲಾನುಭವಿಗಳು ಹೇಳಿದ್ದಾರೆ. ಆದರೆ ಹಣ ಕೊಡುವ ಪ್ರಕ್ರಿಯೆ ಸೂಕ್ತವಲ್ಲ ಎಂದು ಹಣಕಾಸು ಇಲಾಖೆ ಎಚ್ಚರಿಸಿದೆ. ಹೀಗಾಗಿ ದಿನಸಿ ಕಿಟ್ ನೀಡುವ ಕುರಿತು ಶೀಘ್ರವೇ ಅಧಿಕೃತ ಘೋಷಣೆ ಆಗಬಹುದು ಎನ್ನಲಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆ: ಅನ್ನಭಾಗ್ಯದಡಿ ಹಣಭಾಗ್ಯ ಬಂದ್?
ರಾಜ್ಯದಲ್ಲಿ ಸದ್ಯ 1.16 ಕೋಟಿ ಪಡಿತರ ಚೀಟಿದಾರರು ಇದ್ದಾರೆ. 4.8 ಕೋಟಿ ಫಲಾನುಭವಿಗಳು ಅನ್ನಭಾಗ್ಯ ಯೋಜನೆಯ ಲಾಭ ಪಡೆದುಕೊಳ್ಳುತ್ತಿದ್ದಾರೆ. 5 ಕೆಜಿ ಅಕ್ಕಿಯ ಜೊತೆಗೆ 170 ರೂ ನಗದು ಹಣವನ್ನು ಫಲಾನುಭವಿಗಳು ಪಡೆಯುತ್ತಿದ್ದಾರೆ. 2023 ರ ಜುಲೈ 10 ರಿಂದ ಜಾರಿಯಾಗಿರುವ ಅನ್ನಭಾಗ್ಯ ಯೋಜನೆ ಜಾರಿಯಾಗಿದೆ.
ಸಿದ್ದರಾಮಯ್ಯ ಸರ್ಕಾರದ ಹೊಸ ವರಸೆ.. ಗ್ಯಾರಂಟಿ ಸ್ಕೀಮ್ ಭವಿಷ್ಯ ಏನು..?