ಅನ್ನಭಾಗ್ಯದ ಅಕ್ಕಿ ಫಾರಿನ್‌ಗೆ

Kannadaprabha News   | Kannada Prabha
Published : Sep 08, 2025, 05:25 AM IST
Anna Bhagya Rice Seize

ಸಾರಾಂಶ

ಬಿಪಿಎಲ್‌ ಮತ್ತು ಎಪಿಎಲ್‌ ಸಮುದಾಯದ ಜನರಿಗೆ ಪಡಿತರ ವ್ಯವಸ್ಥೆ ಮೂಲಕ ವಿತರಿಸಲೆಂದು ಅನ್ನಭಾಗ್ಯ ಯೋಜನೆಯಡಿ ಸರ್ಕಾರ ವಿತರಿಸುವ ಅಕ್ಕಿಯನ್ನು ಪಾಲಿಶ್‌ ಮಾಡಿ ಸಿಂಗಾಪುರ, ಫ್ರಾನ್ಸ್‌, ದುಬೈ ಮೊದಲಾದ ದೇಶಗಳಿಗೆ ರಫ್ತು ಮಾಡಲು ಸಜ್ಜಾಗಿದ್ದ ಜಾಲವೊಂದನ್ನು ಪತ್ತೆ

ಆನಂದ್‌ ಎಂ. ಸೌದಿ

ಯಾದಗಿರಿ : ಬಿಪಿಎಲ್‌ ಮತ್ತು ಎಪಿಎಲ್‌ ಸಮುದಾಯದ ಜನರಿಗೆ ಪಡಿತರ ವ್ಯವಸ್ಥೆ ಮೂಲಕ ವಿತರಿಸಲೆಂದು ಅನ್ನಭಾಗ್ಯ ಯೋಜನೆಯಡಿ ಸರ್ಕಾರ ವಿತರಿಸುವ ಅಕ್ಕಿಯನ್ನು ಪಾಲಿಶ್‌ ಮಾಡಿ ಸಿಂಗಾಪುರ, ಫ್ರಾನ್ಸ್‌, ದುಬೈ ಮೊದಲಾದ ದೇಶಗಳಿಗೆ ರಫ್ತು ಮಾಡಲು ಸಜ್ಜಾಗಿದ್ದ ಜಾಲವೊಂದನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಅಧಿಕಾರಿಗಳ ದಾಳಿ ವೇಳೆ ವಿವಿಧ ಬ್ರ್ಯಾಂಡ್‌ನೇಮ್‌ ಹಾಕಿದ್ದ 5000 - 6000 ಟನ್‌ನಷ್ಟು ಅಕ್ಕಿ ಪತ್ತೆಯಾಗಿದೆ.

ಉತ್ತರ ಕನ್ನಡ ಜಿಲ್ಲೆ ಶಿರಸಿ, ಕೊಪ್ಪಳ ಜಿಲ್ಲೆ ಗಂಗಾವತಿ, ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ಇತ್ತೀಚೆಗೆ ಅನ್ನಭಾಗ್ಯದ ಅಕ್ಕಿಯ ಕಳ್ಳಸಾಗಣೆ ಬೆಳಕಿಗೆ ಬಂದ ಬೆನ್ನಲ್ಲೇ ಈ ಬೃಹತ್‌ ಹಗರಣ ಬೆಳಕಿಗೆ ಬಂದಿದೆ.

ಭರ್ಜರಿ ಬೇಟೆ:

ಆಹಾರ ಇಲಾಖೆಯ ಅಧಿಕಾರಿಗಳು ಶುಕ್ರವಾರ ರಾತ್ರಿ ಯಾದಗಿರಿ ಜಿಲ್ಲೆ ಗುರುಮಠಕಲ್‌ ಹೊರವಲಯದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ಇಂಡಸ್ಟ್ರೀಸ್‌ ಮೇಲೆ ದಾಳಿ ನಡೆಸಿ, ಪ್ರಮಾಣದಲ್ಲಿ ಸರ್ಕಾರದ ‘ಅನ್ನಭಾಗ್ಯ’ ಪಡಿತರ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ. ದಾಳಿ ವೇಳೆ 6 ರಿಂದ 7 ಸಾವಿರ ಕ್ವಿಂಟಾಲ್‌ನಷ್ಟು ಅಕ್ರಮ ಅಕ್ಕಿ ದಾಸ್ತಾನು ಪತ್ತೆಯಾಗಿದ್ದು, ಇದರ ಮೌಲ್ಯ ಅಂದಾಜು 6 ಕೋಟಿ ರು.ಗೂ ಹೆಚ್ಚಿನದ್ದಾಗಿದೆ ಎನ್ನಲಾಗಿದೆ. ಭದ್ರತೆ ಹಾಗೂ ಎಣಿಕೆ ಕಾರ್ಯಕ್ಕೆಂದು ಪೋಲಿಸ್‌, ಕಂದಾಯ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳನ್ನು ಇಲ್ಲಿ ನಿಯೋಜಿಸಲಾಗಿದೆ. ಸದ್ಯ, ಎಣಿಕೆ ಕಾರ್ಯ ಇನ್ನೂ ಮುಗಿದಿಲ್ಲ. ಹೀಗಾಗಿ, ಸೋಮವಾರ ಸಂಬಂಧಿತ ಇಲಾಖೆಯ ಅಧಿಕಾರಿಗಳ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿದೇಶಿ ಬ್ರ್ಯಾಂಡ್‌ಗಳ ಹೆಸರಲ್ಲಿ ನಕಲು:

ಜಿಲ್ಲೆಯ ವಿವಿಧೆಡೆಯಿಂದ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಇಲ್ಲಿಗೆ ತಂದು, ಅತ್ಯಾಧುನಿಕ ಯಂತ್ರಗಳಲ್ಲಿ ಹಾಕಿ, ಪಾಲಿಶ್‌ ಮಾಡಲಾಗುತ್ತಿತ್ತು. ಹಿಗೆ ಪಾಲಿಶ್‌ ಮಾಡಿದ ಈ ಅಕ್ಕಿಯನ್ನು 25, 10 ಕೆಜಿಯ ಬ್ಯಾಗ್‌ಗಳಲ್ಲಿ, ಡೈನಾಸ್ಟಿ, ವೋಲ್ಗಾ ಎಎಎ, ದಾರಾ ಡಬ್ಬಲ್‌ ಸ್ಟಾರ್‌ ಮುಂತಾದ ಬ್ರ್ಯಾಂಡ್‌ಗಳಲ್ಲಿ ಸಿಂಗಾಪುರ, ಫ್ರಾನ್ಸ್‌, ಗಲ್ಫ್‌ ರಾಷ್ಟ್ರಗಳಿಗೆ ಸಾಗಿಸಲು ಸಂಚು ನಡೆದಿತ್ತು ಎಂದು ತಿಳಿದು ಬಂದಿದೆ.

ಭಾರೀ ದುಬಾರಿ:

ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್‌ಗಳ ಹೆಸರಲ್ಲಿ ನಕಲು ಮಾಡಿ, ಅತ್ಯುತ್ತಮ ಗುಣಮಟ್ಟದ ಅಕ್ಕಿ ಎಂದು ಮೂರ್ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಸಿಂಗಾಪುರ ಹಾಗೂ ಗಲ್ಫ್‌ ರಾಷ್ಟ್ರಗಳಿಗೆ ಕಳುಹಿಸಲಾಗುತ್ತಿತ್ತು. ಆಯಾ ರಾಷ್ಟ್ರಗಳ ಭಾಷೆಗಳಲ್ಲಿ ಪ್ರಿಂಟ್‌ ಮಾಡಿ, ಸಿಂಗಾಪುರದಲ್ಲಿ 25 ಕೆಜಿ ತೂಕದ ಚೀಲವೊಂದಕ್ಕೆ 8-10 ಸಾವಿರ ರು., ದುಬೈ ಸೇರಿ ಗಲ್ಫ್‌ ರಾಷ್ಟ್ರಗಳಲ್ಲಿ 10 ಕೆಜಿ ತೂಕದ ಚೀಲವೊಂದಕ್ಕೆ 1,500-2,000 ರು.ಗಳಿಗೆ ಮಾರಾಟಕ್ಕೆ ಸಿದ್ಧಪಡಿಸಲಾಗಿತ್ತು ಎಂದು "ಕನ್ನಡಪ್ರಭ "ಕ್ಕೆ ಮೂಲಗಳು ತಿಳಿಸಿವೆ.

ಯಾದಗಿರಿಯಲ್ಲಿ ₹6 ಕೋಟಿ ಮೌಲ್ಯದ 6000 ಟನ್‌ ಅನ್ನಭಾಗ್ಯ ಅಕ್ಕಿ ವಶಕ್ಕೆ

ಅಕ್ಕಿಗೆ ಪಾಲಿಶ್‌ ಮಾಡಿ ಸಿಂಗಾಪುರ, ದುಬೈ, ಫ್ರಾನ್ಸ್‌ ದೇಶಗಳಿಗೆ ಮಾರಾಟ

ಸಿಂಗಾಪುರದಲ್ಲಿ 25 ಕೆಜಿಗೆ ₹8000, ದುಬೈನಲ್ಲಿ 10 ಕೆಜಿಗೆ ₹1500ಕ್ಕೆ ಸೇಲ್‌

ಇತ್ತೀಚಿನ ಪ್ರಕರಣಗಳು

- 2025, ಜು 20: ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಬಂಧನ. ಆರೋಪಿಗಳಿಂದ 1.36 ಲಕ್ಷ ರೂ. ಮೌಲ್ಯದ 40 ಕ್ವಿಂಟಾಲ್ ಅಕ್ಕಿ ಮತ್ತು ಸಾಗಾಟಕ್ಕೆ ಬಳಸಿದ ವಾಹನ ವಶಕ್ಕೆ.- 2025, ಆ 25: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕನಕಗಿರಿ ರಸ್ತೆಯಲ್ಲಿರುವ ಸರ್ಕಾರಿ ಗೋದಾಮಿನಿಂದ 270 ಕ್ವಿಂಟಾಲ್‌ ಅಕ್ರಮ ಅನ್ನಭಾಗ್ಯ ಅಕ್ಕಿ ಜಪ್ತಿ. ಈ ಅಕ್ಕಿಯನ್ನು ''''ಲಾಲ್'''' ಹೆಸರಿನ ವಿದೇಶಿ ಪ್ಯಾಕೇಟ್‌ಗಳಲ್ಲಿ ತುಂಬಿಸಿ, ಅರಬ್‌ ರಾಷ್ಟ್ರಗಳಿಗೆ ಕಳುಹಿಸಲು ಸಂಚು ಪತ್ತೆ.- 2025, ಆ.31: ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕಂಚೇನಹಳ್ಳಿ ಬಳಿ 1.28 ಲಕ್ಷ ರೂ.ಮೌಲ್ಯದ 36 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ ವಶ.

ಅಕ್ಕಿ ಹಣ ರಾಜಕೀಯ

ಪಕ್ಷಗಳ ಜೇಬಿಗೆ

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಸೇರಿದಂತೆ ಗೋಗಿ, ಶಹಾಪುರ, ಸುರಪುರ ಸೇರಿ ಹಲವು ತಾಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಅಕ್ಕಿ ಮಾರಾಟ ದಂಧೆ ನಡೆಯುತ್ತಿದೆ. ಕೋಟ್ಯಂತರ ರು.ಗಳ ಈ ಅವ್ಯವಹಾರದ ಹಣ ಚುನಾವಣೆಗಳಲ್ಲೂ ಕೆಲವು ರಾಜಕೀಯ ಪಕ್ಷಗಳಿಗೆ ‘ಫಂಡಿಂಗ್‌’ ಆಗುತ್ತದೆ ಎಂಬ ದಟ್ಟವಾದ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆದರೆ ರಾಜಕಾರಣಿಗಳ ಬಂಡವಾಳ ಬಯಲಾಗಲಿದೆ.

 - ಮಾನಪ್ಪ ಹಡಪದ, ಸಾಮಾಜಿಕ ಕಾರ್ಯಕರ್ತ, ಶಹಾಪುರ.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ''''ಲಾಲ್'''' ಹೆಸರಿನ ವಿದೇಶಿ ಪ್ಯಾಕೇಟ್‌ಗಳಲ್ಲಿ ತುಂಬಿಸಿ, ಅರಬ್‌ ರಾಷ್ಟ್ರಗಳಿಗೆ ಕಳುಹಿಸಲು ಸಂಚು ರೂಪಿಸಿದ್ದ ಬಗ್ಗೆ ಆ.27ರಂದು ಕನ್ನಡಪ್ರಭ ವರದಿ ಮಾಡಿತ್ತು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!