
ಬೆಂಗಳೂರು (ಮೇ 01): ಈಗಾಗಲೇ ಹಿಂದಿನ ಸಚಿವ ಸಂಪುಟದಲ್ಲಿ ಮಂಡಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಅಂಗೀಕಾರದ ಬಗ್ಗೆ ಮೇ 9 ರಂದು ನಡೆಯುವ ಸಚಿವ ಸಂಪುಟದಲ್ಲಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಗಣತಿಯೊಂದಿಗೆ ಜಾತಿಗಣತಿ ಮಾಡುವ ಕೇಂದ್ರ ಬಿಜೆಪಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಅದರೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯೂ ನಡೆಯಬೇಕು ಎಂದು ಆಗ್ರಹಿಸುತ್ತೇನೆ. ದೇಶದ ಜನತೆಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯೂ ನಡೆಸಬೇಕು. ಮೀಸಲಾತಿಯಲ್ಲಿ ಶೇ.50% ಗರಿಷ್ಠ ಪರಿಮಿತಿಯನ್ನು ಸಡಿಲಗೊಳಿಸಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಬೇಕು. ಜಾತಿ ಗಣತಿಗೆ ಕೂಡಲೇ ದಿನಾಂಕ ನಿಗದಿಗೊಳಿಸಬೇಕು ಎನ್ನುವುದು ನನ್ನ ಒತ್ತಾಯ ಎಂದು ಹೇಳಿದರು.
ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಕೂಡಾ ಜಾತಿಗಣತಿ ವೇಳೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುವಂತೆ ಹಿಂದಿನಿಂದಲೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ಹೇಳುತ್ತದೆ. ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಮಾಡಿದರೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ನೀಡಲು ಅನುಕೂಲವಾಗುತ್ತದೆ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಸಾಧ್ಯವಾಗುತ್ತದೆ.
ಈ ರೀತಿ 2015 ರಲ್ಲಿಯೇ ನಮ್ಮ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮೂಲಕ 192 ಕೋಟಿ ವೆಚ್ಚ ಮಾಡಿ 1.33 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಿ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸಿದೆ. ಇದರಿಂದ ಪ್ರೇರಿತವಾಗಿ ಮತ್ತು ಬಿಹಾರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಈಗ ಸಮೀಕ್ಷೆಗೆ ಮುಂದಾಗಿದೆ.
ಪ್ರಸಕ್ತ ಸಚಿವ ಸಂಪುಟದಲ್ಲಿ ಮಂಡಿಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿಯನ್ನು ಮೇ 9 ರಂದು ನಡೆಯುವ ಸಚಿವ ಸಂಪುಟದಲ್ಲಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಏರಿಕೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಮೀಸಲಾತಿ ಏರಿಕೆಯಾಗಬೇಕಾದರೆ ಸಂವಿಧಾನಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕೆಂದು ತಿಳಿಸಬಹುದು. ಆಗ ಸಂವಿಧಾನ ತಿದ್ದುಪಡಿ ಮಾಡಿ ಏರಿಕೆ ಮಾಡಬಹುದು.
ಮುಂದಿನ ಸಚಿವ ಸಂಪುಟದಲ್ಲಿ ಅಭಿಪ್ರಾಯ ಪಡೆದು ಚರ್ಚೆ ಮಾಡಿ, ನಮ್ಮ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು. ಬಜೆಟ್ ರೂಪಿಸುವಾಗ ಇದನ್ನು ಆಧಾರವಾಗಿಟ್ಟುಕೊಂಡು ಅನುದಾನ ಹಂಚಿಕೆ ಮಾಡಲಾಗುವುದು. ಶೇ.50 ಮೀಸಲಾತಿಯನ್ನು ಬದಲಾಯಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಂವಿಧಾನದ 15 ವಿಧಿ, ಕಲಂ (5) ರಂತೆ ಮೀಸಲಾತಿಯನ್ನು ಕೊಡಬೇಕೆಂದು ಲೋಕಸಭೆಯ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಇದನ್ನು ಪರಿಗಣಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.
ಕೇವಲ ಜಾತಿಗಣತಿಯ ಘೋಷಣೆ ಮಾಡಿದರೆ ಸಾಲದು, ಅದನ್ನು ಜಾರಿಗೆ ತರಬೇಕು. 73-74 ರ ತಿದ್ದುಪಡಿಗಳನ್ನು ಬಿಜೆಪಿ ವಿರೋಧಿಸಿತ್ತು. ಇತಿಹಾಸ ನೋಡಿದರೆ ಬಿಜೆಪಿ ಸಾಮಾಜಿಕ ನ್ಯಾಯದ ಪರ ಎಂದಿಗೂ ಇಲ್ಲ ಎಂಬುದರ ಅರಿವಾಗುತ್ತದೆ. ಕೂಡಲೇ ಯಾವ ದಿನಾಂಕದಿಂದ ಜನಗಣತಿ, ಜಾತಿ ಗಣತಿ ಮಾಡುತ್ತಾರೆ ಎಂದು ತಿಳಿಸಬೇಕು. ಜಾತಿ ಗಣತಿ ಮಾಡುವಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಕೂಡ ಆಗಬೇಕು. ಇಲ್ಲಿಯವರೆಗೂ ಇದನ್ನು ವಿರೋಧಿಸುತ್ತಿದ್ದವರು ಈಗ ಸಮೀಕ್ಷೆ ನಡೆಸುವ ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಾಗ ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ಕೇಂದ್ರ ಸರ್ಕಾರ, ಬಿಜೆಪಿ ಪಕ್ಷ ಅದನ್ನು ವಿರೋಧಿಸಿ, ಟೀಕಿಸಿತ್ತು. ಈಗ ಬೇರೆ ರಾಜ್ಯಗಳಲ್ಲಿ ಅದನ್ನೇ ಅವರೂ ಅಳವಡಿಸಿಕೊಳ್ಳುತ್ತಿದ್ದಾರೆ. ಜಾತಿ ಗಣತಿ ವಿಚಾರದಲ್ಲಿ ಕೂಡ ಹಾಗೆಯೇ ಮಾಡಿದ್ದಾರೆ. ಆದರೆ, ಜ್ಯ ಸರ್ಕಾರ ನಡೆಸಿದ ಸಮೀಕ್ಷೆಯಲ್ಲಿ 5.90 ಕೋಟಿ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. 93% ಜನಸಂಖ್ಯೆ ಸಮೀಕ್ಷೆಗೆ ಒಳಪಟ್ಟಿದ್ದು, 100% ಸಮೀಕ್ಷೆ ನಡೆಸಲು ಯಾವ ಸರ್ಕಾರಗಳಿಂದಲೂ ಸಾಧ್ಯವಿಲ್ಲ ಎಂದರು.
ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿ ಅವರು ಹಿಂದುಳಿದ ವರ್ಗಗಳ ಸಚಿವರಾಗಿದ್ದಾಗ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಪಡೆಯಲು ದಿನಾಂಕ ನಿಗದಿ ಮಾಡಿದಾಗ ಅವರನ್ನು ಸಚಿವ ಸ್ಥಾನದಿಂದ ಅಮಾನತು ಮಾಡುವುದಾಗಿ ಹೆದರಿಸಿದ್ದ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೊನೆಗೂ ವರದಿಯನ್ನು ಪಡೆಯಲಿಲ್ಲ. ಈಗ ನೋಡಿದರೆ ಕೇಂದ್ರದ ನಿರ್ಧಾರವನ್ನು ಹೊಗಳುತ್ತಿದ್ದಾರೆ. ಇದೆಂಥಾ ಇಬ್ಬದಿತನ? ರಾಜ್ಯದಲ್ಲಿ ಬಿಜೆಪಿ 4 ವರ್ಷ ಅಧಿಕಾರದಲ್ಲಿದ್ದರೂ ಸಮೀಕ್ಷೆಯ ವರದಿಯನ್ನು ಪಡೆಯಲಿಲ್ಲ. ಸಾಮಾಜಿಕ ನ್ಯಾಯವನ್ನು ಎಲ್ಲರಿಗೂ ದೊರಕಿಸಲು, ಸಮಾನತೆ ತರಲು ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ, ಸಾಮಾಜಿಕವಾಗಿ ಪಾಲಿರಬೇಕು ಎಂಬ ಉದ್ದೇಶದಿಂದ ಸಮೀಕ್ಷೆ ನಡೆಸಲಾಗಿತ್ತು. ಈ ಉದ್ದೇಶವನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ