
ಉಡುಪಿ (ಮೇ 1): ಕನ್ನಡ ಸಾಹಿತ್ಯ ಪರಿಷತ್ತಿನ ನಿಭಂಧನೆ (ಬೈಲಾ) ತಿದ್ದುಪಡಿ ವಿಚಾರದಲ್ಲಿ ನಡೆದಿರುವ ಚರ್ಚೆಗಳ ಕುರಿತಂತೆ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್ ಜೋಶಿ ಸ್ಪಷ್ಟನೆ ನೀಡಿದ್ದಾರೆ. 'ನಾನು ಹೇಡಿಯಲ್ಲ, ಓಡಿಹೋಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ನಿಬಂಧನೆಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರುವುದಾಗಿ ಘೋಷಿಸಿದ್ದೆ. ಅದೇ ರೂಪದಲ್ಲಿ ನಾನು ನಡೆದುಕೊಂಡಿದ್ದೇನೆ' ಎಂದು ಅವರು ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಬೈಲಾದಲ್ಲಿ ಸ್ಪಷ್ಟತೆ ತರುವುದು ಅಧ್ಯಕ್ಷನ ಕರ್ತವ್ಯ' ಹೀಗಾಗಿ ನಾನು ಕಸಾಪ ಚುನಾವಣೆಗೂ ಮುನ್ನವೇ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕೆಲವು ಅಗತ್ಯ ಲೋಪದೋಷಗಳನ್ನು ಸರಿಪಡಿಸುವುದಕ್ಕೆ ನಾನು ಆದ್ಯತೆ ಕೊಡುತ್ತೇನೆ. ಹೀಗಾಗಿ, 'ನಾನು ಹೇಡಿಯಾಗಿ, ಓಡಿಹೋಗದೇ ಕಸಾಪ ಬೈಲಾದಲ್ಲಿ ತಿದ್ದುಪಡಿ ತರುವುದಕ್ಕೆ ಕೈ ಹಾಕಿದ್ದೇನೆ. ಇದನ್ನು ವಿರೋಧ ಮಾಡುವವರೂ ಕೂಡ ಇದ್ದಾರೆ. ಅವರಿಗೆ ನಾನು ಲೋಪದೋಷ ಹಾಗೂ ಅಸ್ಪಷ್ಟತೆಗಳನ್ನು ಗುರುತಿಸಿ ಹೇಳಿ ಅಗತ್ಯ ತಿದ್ದುಪಡಿ ಮಾಡುವುದಾಗಿ ತಿಳಿಸಿದರು.
ಕಸಾಪ ಬೈಲಾದಲ್ಲಿರುವ ಅಸ್ಪಷ್ಟತೆಗಳು:
ತಿದ್ದುಪಡಿ ಹೊಸದಲ್ಲ: ಡಾ. ಜೋಶಿ ಅವರು ತಿದ್ದುಪಡಿ ಕಾನೂನು ಬಾಹಿರವಲ್ಲವೆಂಬ ಅರ್ಥದಲ್ಲಿ ಸ್ಪಷ್ಟನೆ ನೀಡಿದವರು, 'ಭಾರತದ ಸಂವಿಧಾನವನ್ನೇ 106 ಬಾರಿ ತಿದ್ದುಪಡಿ ಮಾಡಲಾಗಿದೆ. ಹಾಗಿರುವಾಗ ಕಸಾಪ ಬೈಲಾ ತಿದ್ದುಪಡಿಯೂ ಕಾನೂನಿನ ಅಂಗವಾಗಿದೆ. ಹಿಂದೆಯೂ ಪರಿಷತ್ತಿನ ಬೈಲಾ ತಿದ್ದುಪಡಿ ಅನುಭವಿಸಿದೆ' ಎಂದು ತಿಳಿಸಿದರು.
ವಿರೋಧಿಗಳಿಗೆ ಸವಾಲು: ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿರುವವರು ತಮ್ಮ ಪ್ರಶ್ನೆ, ಸವಾಲು ಮತ್ತು ನೋವನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸಬೇಕು ಎಂದು ಡಾ. ಜೋಶಿ ಸವಾಲು ಹಾಕಿದ್ದಾರೆ. 'ಚುನಾವಣೆಯಲ್ಲಿ ಸೋತವರು ಈಗ ರಾಜಕೀಯ ಬೇಧದಿಂದ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನನ್ನನ್ನು ಸರ್ವಾಧಿಕಾರಿ ಎನ್ನುತ್ತಿದ್ದಾರೆ. ಆದರೆ ಅವರ ವಿರುದ್ಧ ಈಗಾಗಲೇ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಅವರು ಅದನ್ನು ಉಲ್ಲಂಘಿಸುತ್ತಿದ್ದಾರೆ' ಎಂದು ಆರೋಪಿಸಿದರು.
ವಿಧಾನಾತ್ಮಕ ಪ್ರಕ್ರಿಯೆಯಲ್ಲೇ ತಿದ್ದುಪಡಿ: ಇನ್ನು ತಿದ್ದುಪಡಿಯು ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳ ಪ್ರಕಾರವೇ ನಡೆಯುತ್ತಿದೆ. ನಿವೃತ್ತ ನ್ಯಾಯಮೂರ್ತಿಯ ನೇತೃತ್ವದ ತಿದ್ದುಪಡಿ ಸಮಿತಿ ಈ ಶಿಫಾರಸ್ಸುಗಳನ್ನು ನೀಡಿದ್ದು, ಅವು ಕಾರ್ಯಕಾರಿ ಸಮಿತಿಯಲ್ಲಿ ಬಹುಮತದಿಂದ ಅಂಗೀಕಾರಗೊಂಡಿವೆ. ಇದೀಗ ಸರ್ವಸದಸ್ಯರ ಸಭೆಯಲ್ಲಿ ಇವುಗಳನ್ನು ಅಂಗೀಕರಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ವಿವರಿಸಿದರು.
ನಾನು ಕರ್ತವ್ಯಭ್ರಷ್ಟನಾಗಿ ಓಡಿಹೋಗುವ ವ್ಯಕ್ತಿಯಲ್ಲ. ಪರಿಷತ್ತಿನಲ್ಲಿ ಸುಧಾರಣೆ ತರಲು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ. ವಿರೋಧಿಗಳಿಗೆ ನನ್ನಿಂದ ಸವಾಲು – ನಿಮ್ಮ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತುಮಾಡಿ ಎಂಬುದಾಗಿ ಡಾ. ಮಹೇಶ್ ಜೋಶಿ ಘೋಷಿಸಿದ್ದಾರೆ. ಇದರ ಮಧ್ಯೆ, ಕನ್ನಡ ಸಾಹಿತ್ಯ ಪರಿಷತ್ತಿನ ಭವಿಷ್ಯ ಹಾಗೂ ನೈತಿಕ ಸ್ಥಿರತೆಗಾಗಿ ಈ ತಿದ್ದುಪಡಿಗಳು ಅವಶ್ಯಕವಾಗಿವೆ ಎಂಬ ಅಭಿಪ್ರಾಯ ವಾದಿಗಳಲ್ಲಿ ಮೂಡಿದೆ.
ಕಸಾಪ ಉಳಿಸಿ ಮೇ 17ರಂದು ಆಂದೋಲನ:
ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾ ತಿದ್ದುಪಡಿಯನ್ನು ವಿರೋಧ ಮಾಡುತ್ತಿರುವ ರಾಜ್ಯದ ಎಲ್ಲ ಸಮಾನ ಮನಸ್ಕರು ಮಂಡ್ಯದಲ್ಲಿ ಸೇರಿ 'ಕಸಾಪ ಅಧ್ಯಕ್ಷ ಮಹೇಶ್ ಜೋಶಿಯನ್ನು ಅಮಾನತು ಮಾಡಿ, ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ' ಎಂದು ಆಂದೋಲನ ಮಾಡುತ್ತಿದ್ದಾರೆ. ಮೇ 17ರಂದು ಮಂಡ್ಯದಲ್ಲಿ ದೊಡ್ಡ ಸಮಾವೇಶವನ್ನು ಮಾಡಲಾಗುತ್ತಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಹೇಳಿದ್ದಾರೆ. ಈ ಸಮಾವೇಶಕ್ಕೆ ಮುಖ್ಯಮಂತ್ರಿ ಚಂದ್ರು, ಮುದ್ದುಕೃಷ್ಣ, ಹಂಪಾ ನಾಗರಾಜಯ್ಯ, ಪ್ರೊ.ಜಿ.ಎಸ್. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಕನ್ನಡ ಸಾಹಿತ್ಯಾಸಕ್ತರು ಆಗಮಿಸಲಿದ್ದಾರೆ.
ಮಹೇಶ್ ಜೋಶಿ ಅಧ್ಯಕ್ಷರಾದ ನಂತರ ಕನ್ನಡ ಸಾಹಿತ್ಯ ಪರಿಷತ್ತನ್ನು ಸರ್ವಾಧಿಕಾರದತ್ತ ಕೊಂಡೊಯ್ಯುತ್ತಿದ್ದಾರೆ. ಪರಿಷತ್ತಿತ ಆರ್ಥಿಕ ದಿವಾಳಿ ಮಾಡುತ್ತಿದ್ದಾರೆ. ಅಧಿಕಾರ ಕೇಂದ್ರೀಕರಣ ಮಾಡಿಕೊಳ್ಳುವುದಕ್ಕಾಗಿ ಮನಸೋ ಇಚ್ಛೆಯಾಗಿ ಕಸಾಪ ಬೈಲಾ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದವರಿಗೆ ನೊಟೀಸ್ ಜಾರಿ ಮಾಡುತ್ತಾ, ಅವರ ವಿರುದ್ಧ ಮೊಕದ್ದಮೆ ಹೂಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ರಾಜ್ಯದ ಸಾಹಿತ್ಯಿಕ ಚಟುವಟಿಕೆಗಳಿಗೆ ಭಾರೀ ಹಿನ್ನಡೆ ಉಂಟಾಗುತ್ತಿದೆ ಎಂದ ಸಾಹಿತಿ ಪ್ರೊ.ಬಿ. ಜಯಪ್ರಕಾಶಗೌಡ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ