ಜನಾಕ್ರೋಶ ಬಳಿಕ ಕನ್ನಡದಲ್ಲಿ ಉತ್ತರಿಸಿದ ಲೆಕ್ಚರರ್‌ ರಾಜೀನಾಮೆ ರದ್ದು

Published : Jun 15, 2025, 04:33 AM IST
Kannada Speak Lecturer Arun Lost Job

ಸಾರಾಂಶ

  ಕನ್ನಡಿಗರ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಕನ್ನಡದಲ್ಲಿ ಉತ್ತರ ಕೊಟ್ಟರೆಂಬ ಕಾರಣಕ್ಕೆ ಉಪನ್ಯಾಸಕನಿಂದ ರಾಜೀನಾಮೆ ಪಡೆದ ಘಟನೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕನ್ನಡಪರ ಸಂಘಟನೆಗಳ ಮಧ್ಯಪ್ರವೇಶದಿಂದ ಘಟನೆ ಸುಖಾಂತ್ಯಗೊಂಡಿದೆ

ಬೆಂಗಳೂರು : ಸಿಲಿಕಾನ್‌ ಸಿಟಿಯಲ್ಲಿ ಹಿಂದಿವಾಲಾಗಳ ಹಾವಳಿಯಿಂದ ಕನ್ನಡಿಗರು ಕಂಗೆಟ್ಟಿರುವ ನಡುವೆಯೇ ಕನ್ನಡಿಗರ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಯೊಬ್ಬನಿಗೆ ಕನ್ನಡದಲ್ಲಿ ಉತ್ತರ ಕೊಟ್ಟರೆಂಬ ಕಾರಣಕ್ಕೆ ಉಪನ್ಯಾಸಕನಿಂದ ರಾಜೀನಾಮೆ ಪಡೆದ ಘಟನೆ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದೆ. ಕನ್ನಡಪರ ಸಂಘಟನೆಗಳ ಮಧ್ಯಪ್ರವೇಶದಿಂದ ಘಟನೆ ಸುಖಾಂತ್ಯಗೊಂಡಿದ್ದು, ಉಪನ್ಯಾಸಕನಿಂದ ಪಡೆದ ರಾಜೀನಾಮೆ ರದ್ದುಪಡಿಸಲಾಗಿದೆ.

ಯಲಚೇನಹಳ್ಳಿ ಆರ್‌ವಿ ಪಿಯು ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕ ರೂಪೇಶ್‌ ಪುತ್ತೂರು ಎಂಬವರು ಗುರುವಾರ ತಮ್ಮ ತರಗತಿಯಲ್ಲಿ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಯೊಬ್ಬನಿಗೆ ಕನ್ನಡದಲ್ಲೇ ಉತ್ತರಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮತ್ತೊಬ್ಬ ವಿದ್ಯಾರ್ಥಿ ಇಂಗ್ಲಿಷ್‌ನಲ್ಲಿ ಉತ್ತರಿಸುವಂತೆ ತಾಕೀತು ಮಾಡಿದ್ದು, ತನಗೆ ಕನ್ನಡ ಬರುವುದಿಲ್ಲ. ಕ್ಲಾಸಲ್ಲಿ ಇಂಗ್ಲಿಷಲ್ಲೇ ಮಾತನಾಡಿ ಎಂದು ವಾದ ಮಾಡಿದ್ದಾನೆ. ಈ ವೇಳೆ ಕನ್ನಡ ಈ ನೆಲದ ಭಾಷೆ, ಕ್ರಿಮಿನಲ್ ಭಾಷೆ ಅಲ್ಲ ಎಂದು ಉಪನ್ಯಾಸಕರು ವಿದ್ಯಾರ್ಥಿಗೆ ಬುದ್ಧಿವಾದ ಹೇಳಿದರೂ ಪ್ರಯೋಜನವಾಗಿಲ್ಲ.

ಘಟನೆ ನಡೆದ ಮರುದಿನ ಉಪನ್ಯಾಸಕರು ಕಾಲೇಜಿಗೆ ತೆರಳಿದಾಗ, ಪ್ರಾಂಶುಪಾಲರು ಕರೆದು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಘಟನೆ ಬಗ್ಗೆ ವಿವರಿಸಲು ಯತ್ನಿಸಿದರೂ ಒಪ್ಪದ ಪ್ರಾಂಶುಪಾಲ ರಾಜೀನಾಮೆಗೆ ಸಹಿ ಹಾಕದಿದ್ದರೆ ಕಾಲೇಜಿನ ಮತ್ತೊಂದು ಶಾಖೆಯಲ್ಲಿರುವ ನಿಮ್ಮ ಮಗಳ ಸರ್ಟಿಫಿಕೆಟ್‌ ಕೊಡಲ್ಲ ಎಂದು ಬೆದರಿಕೆ ಹಾಕಿ ರಾಜೀನಾಮೆ ಪಡೆದಿದ್ದಾರೆ. ಈ ಕುರಿತು ಉಪನ್ಯಾಸಕ ವಿಡಿಯೋ ಮಾಡಿ ತಮ್ಮ ಅಳಲನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವುದು ವೈರಲ್‌ ಆಗಿತ್ತು.

ಉಪನ್ಯಾಸಕರ ರಾಜೀನಾಮೆ ವಾಪಸ್‌:

ಸಾಮಾಜಿಕ ಜಾಲತಾಣದಿಂದ ಘಟನೆ ಬಗ್ಗೆ ತಿಳಿದ ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್‌ ರಾಜಣ್ಣ ನೇತೃತ್ವದಲ್ಲಿ ಸಂಘದ ಕಾರ್ಯಕರ್ತರು, ಶನಿವಾರ ಆರ್.ವಿ. ಕಾಲೇಜಿಗೆ ತೆರಳಿದ್ದರು. ಈ ವೇಳೆ ರೂಪೇಶ್‌ ರಾಜಣ್ಣ ರಾಜೀನಾಮೆ ಪಡೆದ ಪ್ರಾಂಶುಪಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಆರ್.ವಿ.ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ನಾಗರಾಜ್‌ ಅವರೊಂದಿಗೆ ಘಟನೆ ಬಗ್ಗೆ ಚರ್ಚಿಸಿದ್ದು, ಕನ್ನಡ ಮತ್ತು ಕನ್ನಡಿಗರನ್ನು ಅವಮಾನಿಸಿದವರು ಕ್ಷಮೆ ಯಾಚಿಸಬೇಕು. ಉಪನ್ಯಾಸಕರ ರಾಜೀನಾಮೆ ರದ್ದುಪಡಿಸಿ ಪುನಃ ಕರ್ತವ್ಯಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಆರ್‌.ವಿ.ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ನಾಗರಾಜ್‌, ‘ಘಟನೆ ಕುರಿತು ನಮಗೆ ಮಾಹಿತಿ ಇರಲಿಲ್ಲ. ರಾಜೀನಾಮೆ ಕೊಡುವ ಅಗತ್ಯವೂ ಇಲ್ಲ. ಸೋಮವಾರದಿಂದ ಎಂದಿನಂತೆ ರೂಪೇಶ್‌ ಪುತ್ತೂರು ಅವರು ತಮ್ಮ ಕರ್ತವ್ಯ ಮುಂದುವರೆಸಲಿದ್ದಾರೆ ಎಂದು ಭರವಸೆ ನೀಡಿದ್ದು, ಇಂಥ ಘಟನೆ ಮರುಕಳಿಸದಂತೆ ಪ್ರಿನ್ಸಿಪಾಲ್‌ ಅವರಿಗೆ ಎಚ್ಚರಿಕೆ ನೀಡಿ ಘಟನೆಯನ್ನು ಸುಖಾಂತ್ಯಗೊಳಿಸಿದ್ದಾರೆ ಎಂದು ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್‌ ರಾಜಣ್ಣ ಕನ್ನಡಪ್ರಭಕ್ಕೆ ತಿಳಿಸಿದರು.

ಆಗಿದ್ದೇನು?

- ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿಗೆ ಲೆಕ್ಚರರ್‌ ರೂಪೇಶ್‌ ಪುತ್ತೂರುರಿಂದ ಕನ್ನಡದಲ್ಲೇ ಉತ್ತರ

- ಇದಕ್ಕೆ ಆಕ್ಷೇಪಿಸಿದ ಮತ್ತೊಬ್ಬ ವಿದ್ಯಾರ್ಥಿ, ನನಗೆ ಕನ್ನಡ ಬರಲ್ಲ, ಇಂಗ್ಲಿಷಲ್ಲಿ ಉತ್ತರಿಸಿ ಎಂದಿದ್ದ

- ಕನ್ನಡ ಈ ನೆಲದ ಭಾಷೆ, ಕ್ರಿಮಿನಲ್ ಭಾಷೆ ಅಲ್ಲ ಎಂದು ವಿದ್ಯಾರ್ಥಿಗೆ ಬುದ್ಧಿ ಹೇಳಿದ ರೂಪೇಶ್‌

- ಮರುದಿನ ಉಪನ್ಯಾಸಕ ಕಾಲೇಜಿಗೆ ಬರುತ್ತಿದ್ದಂತೆ ಬೆದರಿರಿಸಿ ರಾಜೀನಾಮೆ ಕೇಳಿದ ಪ್ರಾಚಾರ್ಯ

- ಈ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ನೋವು ತೋಡಿಕೊಂಡ ಉಪನ್ಯಾಸಕ

- ಸುದ್ದಿ ತಿಳಿದು ಕಾಲೇಜಿಗೆ ತೆರಳಿ ಯುವ ಕರ್ನಾಟಕ ವೇದಿಕೆಯ ರೂಪೇಶ್‌ ರಾಜಣ್ಣ ಆಕ್ಷೇಪ

- ಕನ್ನಡ ಸಂಘಟನೆ ಆಕ್ಷೇಪಕ್ಕೆ ಸ್ಪಂದಿಸಿದ ಕಾಲೇಜು ಕಾರ್ಯದರ್ಶಿ । ಲೆಕ್ಚರರ್‌ ರಾಜೀನಾಮೆ ರದ್ದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್