ಕಲ್ಯಾಣ ಕರ್ನಾಟಕದ ಏಳ್ಗೆಗೆ ಮತ್ತೆ ₹5000 ಕೋಟಿ : ಸಿದ್ದರಾಮಯ್ಯ

Published : Jun 15, 2025, 04:07 AM IST
Karnataka CM Siddaramaiah

ಸಾರಾಂಶ

ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ, ಈ ಭಾಗಕ್ಕೆ ವಿಶೇಷ ಅನುದಾನ ನೀಡುವುದನ್ನು ಮುಂದುರೆಸುತ್ತೇವೆ. ಹಿಂದೆ ಕಲಬುರಗಿಗೆ ಬಂದಾಗ ಪ್ರತಿ ವರ್ಷ 5 ಸಾವಿರ ಕೋಟಿ ರು. ಕೊಡುವೆ ಅಂತ ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ.

 ಯಾದಗಿರಿ :  ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ, ಈ ಭಾಗಕ್ಕೆ ವಿಶೇಷ ಅನುದಾನ ನೀಡುವುದನ್ನು ಮುಂದುರೆಸುತ್ತೇವೆ. ಹಿಂದೆ ಕಲಬುರಗಿಗೆ ಬಂದಾಗ ಪ್ರತಿ ವರ್ಷ 5 ಸಾವಿರ ಕೋಟಿ ರು. ಕೊಡುವೆ ಅಂತ ಹೇಳಿದ್ದೆ. ಕೊಟ್ಟ ಮಾತಿನಂತೆ ನಡೆದಿದ್ದೇವೆ. ಮುಂದಿನ ವರ್ಷವೂ 5 ಸಾವಿರ ಕೋಟಿ ರು. ಖರ್ಚು ಮಾಡಬೇಕು ಅಂತ ಸೂಚನೆ ಕೊಟ್ಟಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶನಿವಾರ ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಆಯೋಜಿಸಿದ್ದ ‘ಆರೋಗ್ಯ ಅವಿಷ್ಕಾರ’ ಕಾರ್ಯಕ್ರಮದಡಿ, ಈ ಪ್ರದೇಶದ 7 ಜಿಲ್ಲೆಗಳ ₹440.63 ಕೋಟಿಗಳ ವೆಚ್ಚದ ಆರೋಗ್ಯ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಜಿಲ್ಲಾ ಬಂಜಾರಾ ಭವನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿ ಜೊತೆಗೆ, ಸಮಗ್ರ ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಡಾ। ಡಿ.ಎಂ.ನಂಜುಂಡಪ್ಪ ಅವರ ವರದಿ ನೀಡಿ ಎರಡು ದಶಕಗಳು ಕಳೆದಿದೆ. ಹಾಗಾಗಿ ಹಿಂದುಳಿದ ಪ್ರದೇಶಗಳ ಹೊಸ ಸೂಚ್ಯಂಕ ನಿಗದಿಪಡಿಸಲು ಆರ್ಥಿಕ ತಜ್ಞ ಗೋವಿಂದರಾವ್‌ ಅಧ್ಯಕ್ಷತೆಯಲ್ಲಿ ಉನ್ನತ ಸಮಿತಿ ರಚಿಸಿದ್ದೇವೆ. ಈ ಸಮಿತಿಯ ವರದಿಯಂತೆ ಮುಂದಿನ ದಿನದಲ್ಲಿ ಈ ಭಾಗಕ್ಕೆ ವಿಶೇಷ ಅನುದಾನ ನೀಡುವುದನ್ನು ಮುಂದುವರೆಸಲಾಗುವುದು ಎಂದು ಅವರು ಭರವಸೆ ನೀಡಿದರು.

ಆರೋಗ್ಯ ಆವಿಷ್ಕಾರಕ್ಕೆ ₹857 ಕೋಟಿ:

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ತಾಯಿ-ಮಕ್ಕಳ ಮರಣ ಪ್ರಮಾಣ, ಮಕ್ಕಳಲ್ಲಿ ರಕ್ತಹೀನತೆ ಹೆಚ್ಚಿದೆ. ಇದನ್ನು ಹೋಗಲಾಡಿಸಲು ಮತ್ತು ಅರೋಗ್ಯ ಸುಧಾರಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ ಸಿದ್ದರಾಮಯ್ಯ, ಕಳೆದ ಕಲಬುರಗಿ ಸಚಿವ ಸಂಪುಟ ಸಭೆಯಲ್ಲಿ ₹857 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಯೋಜನೆಗಳಿಗೆ ಅನುಮೋದನೆ ನೀಡಿದ್ದರಿಂದ ಇಂದಿಲ್ಲಿ ಚಾಲನೆ ನೀಡಲಾಗುತ್ತಿದೆ. ಇಲ್ಲಿ ಸಿ.ಟಿ. ಸ್ಕ್ಯಾನ್, ಎಂ.ಆರ್.ಐ ಸೇವೆ ಕಡಿಮೆ ಇದೆ. ದುಬಾರಿ ವೆಚ್ಚ ಮಾಡುವ ಶಕ್ತಿ ನಮ್ಮ ಬಡ ಜನರಿಗಿಲ್ಲ. ಹೀಗಾಗಿ ಈ ಎಲ್ಲಾ ಸೇವೆಗಳನ್ನು ಮುಂದಿನ ದಿನದಲ್ಲಿ ಪೂರೈಕೆಗೆ ಆರೋಗ್ಯ ಇಲಾಖೆ ಮುಂದಾಗಬೇಕು ಎಂದು ಅವರು ವಿವರಿಸಿದರು.

ಆರೋಗ್ಯ, ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಕಲ್ಯಾಣ ಪ್ರದೇಶವು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದೆ. ಇದನ್ನು ಸರಿದೂಗಿಸಬೇಕೆಂಬುದು ನಮ್ಮ ಮಹಾದಾಸೆಯಾಗಿದೆ. ಈ ನಿಟ್ಟಿನಲ್ಲಿ ಪ್ರಸಕ್ತ 2025-26ನೇ ಸಾಲಿಗೆ ₹5,000 ಕೋಟಿ ಅನುದಾನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ನೀಡಿದ್ದು, ಅಷ್ಟು ಹಣ ಖರ್ಚು ಮಾಡಿ ಪ್ರದೇಶದ ಜನರ ಒಳಿತಿಗೆ ಶ್ರಮಿಸುವಂತೆ ಕೆ.ಕೆ.ಆರ್.ಡಿ.ಬಿ ಮಂಡಳಿ ಅಧ್ಯಕ್ಷ ಡಾ। ಅಜಯ್ ಸಿಂಗ್ ಅವರಿಗೆ ಸೂಚನೆ ನೀಡಿದ್ದೇನೆ. ಕಳೆದ 3 ವರ್ಷದಲ್ಲಿ ನಮ್ಮ ಸರ್ಕಾರ ಮಂಡಳಿಗೆ ₹13,000 ಕೋಟಿಗಳ ನೀಡಿದೆ. ಕಳೆದ 2013-18ರ ಅವಧಿಯಲ್ಲಿ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ 165ರಲ್ಲಿ 158 ಹಾಗೂ 2023ರಲ್ಲಿ ನೀಡಿದ 593ರಲ್ಲಿ 242 ಭರವಸೆಗಳನ್ನು ಈಡೇರಿಸಿದ್ದೇವೆ. ನುಡಿದಂತೆ ನಡೆಯುವ ಸರ್ಕಾರ ನಮ್ಮದು ಎಂದರು.

ಗ್ಯಾರಂಟಿಗಳ ವಿರುದ್ಧ ಅಪಪ್ರಚಾರ:

ಅಧಿಕಾರಕ್ಕೆ ಬಂದ 6 ತಿಂಗಳ ಅವಧಿಯಲ್ಲಿಯೇ ಐದು ಗ್ಯಾರಂಟಿ ಸಮರ್ಪಕ ಅನುಷ್ಠಾನಕ್ಕೆ ತಂದು, ಇದುವರೆಗೆ ₹90 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಕೇಂದ್ರ ಸರ್ಕಾರ ಡೀಸೆಲ್, ಪೆಟ್ರೋಲ್, ಜಿ.ಎಸ್.ಟಿ. ಸೇರಿದಂತೆ ಬೆಲೆ ಏರಿಕೆ ನೀತಿಯಿಂದ ತತ್ತರಿಸಿದ ಜನಕ್ಕೆ ಆರ್ಥಿಕ ನೆರವು ನೀಡಿದ್ದೇವೆ. ಗ್ಯಾರಂಟಿ ಅನುಷ್ಠಾನದಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ವಿರೋಧ ಪಕ್ಷಗಳು ಅಪಪ್ರಚಾರ ಮಾಡಿದ್ದರು. ಅದನ್ನು ಸುಳ್ಳಾಗಿಸಿ, ಗ್ಯಾರಂಟಿ ಜೊತೆಗೆ ಶಿಕ್ಷಣ, ನೀರಾವರಿ, ಆರೋಗ್ಯ, ಮೂಲಸೌಕರ್ಯ, ರಸ್ತೆ, ಉದ್ಯೋಗ ಕಲ್ಪಿಸುವಂತಹ ಕೆಲಸಗಳು ನಮ್ಮ ಸರ್ಕಾರ ಪ್ರಮಾಣಿಕವಾಗಿ ಮಾಡುತ್ತಿದೆ ಎಂದು ತಮ್ಮ ಸರ್ಕಾರದ ಸಾಧನೆಯನ್ನು ಸಿದ್ದರಾಮಯ್ಯ ಅವರು ಜನರ ಮುಂದಿಟ್ಟರು.

2013ರಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್ ಅವರ ವಿಶೇಷ ಪ್ರಯತ್ನದಿಂದ ಈ ಭಾಗಕ್ಕೆ 371ಜೆ ಕಾಯ್ದೆ ಜಾರಿಗೆ ಬಂತು. ಅಂದು ರಾಜ್ಯದಲ್ಲಿ ಆಗತಾನೇ ಅಧಿಕಾರಕ್ಕೆ ಬಂದ ನಮ್ಮ ಸರ್ಕಾರ ಎಚ್.ಕೆ.ಪಾಟೀಲ ನೇತೃತ್ವದಲ್ಲಿ ಉಪ ಸಚಿವ ಸಂಪುಟ ಸಮಿತಿ ರಚಿಸಿ ವರದಿ ಪಡೆದು ಯಥಾವತ್ತಾಗಿ ಜಾರಿಗೆ ತಂದಿದ್ದೇವೆ ಎಂದು ತಮ್ಮ ಹಿಂದಿನ ಅವಧಿಯ ಕೆಲಸ ಕಾರ್ಯಗಳನ್ನು ಸ್ಮರಿಸಿದರು.

41 ಕಾಮಗಾರಿಗಳಿಗೆ ₹411.88 ಕೋಟಿ ವೆಚ್ಚ

ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಒಟ್ಟಾರೆ ₹411.88 ಕೋಟಿ ವೆಚ್ಚದಲ್ಲಿ ಹೊಸದಾಗಿ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 1 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 2 ತಾಲೂಕು ಆಸ್ಪತ್ರೆಗಳ ನಿರ್ಮಾಣಕ್ಕೆ, 6 ಪ್ರಾಥಮಿಕ ಅರೋಗ್ಯ ಕೇಂದ್ರದಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ, 30 ಹಾಸಿಗೆಗಳಿಂದ 50 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವ 16 ಸಮುದಾಯ ಆರೋಗ್ಯ ಕೇಂದ್ರಗಳು, 1 ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 100 ಹಾಸಿಗೆಯ ತಾಲೂಕಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸುವುದು, 100 ಹಾಸಿಗೆ ಸಾಮರ್ಥ್ಯದ 3 ತಾಲೂಕು ಆಸ್ಪತ್ರೆ 150 ಹಾಸಿಗೆಗೆ ಮೇಲ್ದರ್ಜೆಗೇರಿಸುವ ಯೋಜನೆಗೆ ಇಂದಿಲ್ಲಿ ಚಾಲನೆ ದೊರೆತಿದೆ. ಒಟ್ಟಾರೆಯಾಗಿ 41 ಕಾಮಗಾರಿಗಳಿಗೆ ₹411.88 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಇದರಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿ ₹208.94 ಕೋಟಿ ಅನುದಾನ ನೀಡುವ ಮೂಲಕ ಪ್ರದೇಶದ ಅಭಿವೃದ್ಧಿಗೆ ಮುಂದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ