ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿದ ST, 2A ಮೀಸಲಾತಿ ಹೋರಾಟ: ಬಿಎಸ್‌ವೈ ಗಪ್‌-ಚುಪ್

By Ramesh B  |  First Published Feb 2, 2021, 2:49 PM IST

ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದು, ಈ ಬಗ್ಗೆ ಈ ವಿಷಯ ವಿಧಾನಸಭೆ ಕಲಾಪದಲ್ಲಿ ಪ್ರತಿಧ್ವನಿಸಿತು.
 


ಬೆಂಗಳೂರು, (ಫೆ.02): ರಾಜ್ಯದಲ್ಲಿ ವಿವಿಧ ಸಮುದಾಯವರು ಮೀಸಲಾತಿಗಾಗಿ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ಹಾಗೂ ಅವರ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸುವಂತೆ ಒತ್ತಾಯಿಸಿ  ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರು ವಿಧಾನಸಭೆ ಕಲಾಪದಲ್ಲಿ ಧರಣಿ ನಡೆಸಿದ ಪ್ರಸಂಗ ನಡೆದಿದೆ.

ಇಂದು ಶೂನ್ಯವೇಳೆಯಲ್ಲಿ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಂಚಮಸಾಲಿ, ಕುರುಬ ಸಮುದಾಯಗಳು ಮೀಸಲಾತಿಗಾಗಿ ಮಾಡುತ್ತಿರುವ ಪಾದಯಾತ್ರೆಯ ವಿಷಯವನ್ನು ಪ್ರಸ್ತಾಪಿಸಿದರು.

Tap to resize

Latest Videos

ಎಸ್‌ಟಿ ಮೀಸಲಾತಿಗಾಗಿ ಮೊಳಗಿದ ರಣಕಹಳೆ, ಬೆಂಗಳೂರಿನತ್ತ ಕುರುಬರ ದಂಡು

ಧ್ವನಿ ಎತ್ತಿದ ಯತ್ನಾಳ್
ಪಂಚಮಸಾಲಿಗರನ್ನು 2ಎಗೆ ಸೇರಿಸಬೇಕು ಎಂದು ಒತ್ತಾಯಿಸಿ ಸಮುದಾಯದ ಮುಖಂಡರು ಜನವರಿ 14ರಿಂದ ಕೂಡಲಸಂಗಮದಿಂದ ಪಾದಯಾತ್ರೆ ಆರಂಭಿಸಿದ್ದಾರೆ. ಈ ಬೇಡಿಕೆ ಈಡೇರಿಸುವುದಾಗಿ ಮುಖ್ಯಮಂತ್ರಿಯವರು ಈ ಹಿಂದೆ ಎರಡು ಬಾರಿ ಭರವಸೆ ಕೊಟ್ಟಿದ್ದರು. ಆದರೆ ಆದಾದ ಬಳಿಕ ಯಾವುದೇ ಪ್ರತಿಕ್ರಿಯೆ ಇಲ್ಲ. ಆರ್ಥಿಕ ಮತ್ತು ಶಿಕ್ಷಣದ ಮೀಸಲಾತಿಗಾಗಿ ಸುಮಾರು 400 ಕಿ.ಮೀ. ಪಾದಯಾತ್ರೆ ಆರಂಭಗೊಂಡಿದೆ. ಅದೇ ರೀತಿ ಹಾಲುಮತದ ಕುರುಬ ಸಮುದಾಯದವರು ಕೂಡ ಪಾದಯಾತ್ರೆ ಕೈಗೊಂಡಿದ್ದಾರೆ. ಲಕ್ಷಾಂತರ ಜನರ ಪಾದಯಾತ್ರೆ ನಡೆಯುತ್ತಿದೆ. ಎಸ್ ಟಿ ಸಮುದಾಯದ ಮೀಸಲು ಹೆಚ್ಚಳಕ್ಕಾಗಿಯೂ ಪಾದಯಾತ್ರೆ ನಡೆಯುತ್ತಿದೆ. ಆದ್ದರಿಂದ ಈ ಸಮುದಾಯದವರಿಗೆ ನ್ಯಾಯಯುತ ಮೀಸಲಾತಿ ನೀಡಬೇಕು ಮತ್ತು ಈ ಬೇಡಿಕೆಯನ್ನು ಕಾಲಮಿತಿಯಲ್ಲಿ ಈಡೇರಿಸುವ ಭರವಸೆ ಬೇಕು ಎಂದು ಒತ್ತಾಯಿಸಿದರು.

ಸರ್ಕಾರವೇ ಹೊಣೆ ಎಂದ ಯತ್ನಾಳ್
ಈ ಪಾದಯಾತ್ರೆಯಲ್ಲಿ ಅನಾಹುತವಾದರೆ ಸರ್ಕಾರವೇ ಹೊಣೆಯಾಗುತ್ತದೆ. ಇದು ಸರ್ಕಾರದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಭರವಸೆ ಈಡೇರಿಸಿ ಎಂದು ಯತ್ನಾಳ್ ಆಗ್ರಹಿಸಿದರು. ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಇದು ಶೂನ್ಯವೇಳೆ. ಇಲ್ಲಿ ವಿಷಯ ಪ್ರಸ್ತಾಪಿಸಬಹುದು. ಆದರೆ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಿದರು.

ಸಿಎಂ ಬಿಎಸ್‌ವೈ ರಾಜೀನಾಮೆ ಕೊಡುವಂತೆ ಒತ್ತಡ ಹಾಕಿ: ಶಾಸಕರಿಗೆ ಶ್ರೀಗಳು ಸೂಚನೆ

ಶ್ರೀರಾಮುಲು ಭರವಸೆ
 ಮಧ್ಯಪ್ರವೇಶಿಸಿ ಮಾತನಾಡಿದ ಸಚಿವ ಕೆ.ಎಸ್.ಈಶ್ವರಪ್ಪ, ಇಡೀ ರಾಜ್ಯದಲ್ಲಿ ಪಾದಯಾತ್ರೆ ನಡೆಯುತ್ತಿರುವುದರಿಂದ ಈ ಬಗ್ಗೆ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಬಳಿಕ  ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಮಾತನಾಡಿ, ಜನವರಿ 14ರಿಂದ ಸ್ವಾಮೀಜಿಗಳು ಪಾದಯಾತ್ರೆ ಆರಂಭಿಸಿದ್ದಾರೆ. ಪಂಚಮಸಾಲಿ ಸಮುದಾಯವನ್ನು 2ಎಗೆ, ಕುರುಬರನ್ನು ಎಸ್.ಟಿ.ಗೆ ಸೇರಿಸಲು ಹೋರಾಟ ನಡೆಯುತ್ತಿದೆ. ಇದು ಸರ್ಕಾರದ ಗಮನಕ್ಕೆ ಬಂದಿದೆ. ಆದರೆ ಮೀಸಲಾತಿ ನೀಡುವ ವಿಷಯದಲ್ಲಿ ಕೆಲವೊಂದು ಕಾನೂನು ಸಮಸ್ಯೆ ಇದ್ದು, ಮೀಸಲಾತಿ ಬಗ್ಗೆ ಸುಪ್ರೀಂಕೋರ್ಟ್ ನಿಯಮಗಳನ್ನು ರೂಪಿಸಿದೆ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಆದಷ್ಟು ಶೀರ್ಘವಾಗಿ ತೀರ್ಮಾನಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮೂರೂ ಪಕ್ಷಗಳ ಸದಸ್ಯರಿಂದ ಧರಣಿ
 ಶ್ರೀರಾಮುಲು ಅವರ  ಉತ್ತರದಿಂದ ಅಸಮಾಧಾನಗೊಂಡ ಯತ್ನಾಳ್, ಜೆಡಿಎಸ್ ನ ಬಂಡೆಪ್ಪ ಕಾಶೆಂಪೂರ್, ಕಾಂಗ್ರೆಸ್ ನ ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಮೂರೂ ಪಕ್ಷಗಳ ಕೆಲವು ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ಆಗ ಸ್ಪೀಕರ್, ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶವಿಲ್ಲ. ವಿಷಯದ ಗಂಭೀರತೆ ಮತ್ತು ಸೂಕ್ಷ್ಮತೆಯ ಆಧಾರದಲ್ಲಿ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಲಾಗುವುದು. ಧರಣಿ ಕೈಬಿಡಿ ಎಂದು ಮನವಿ ಮಾಡಿದರು. 

ಈ ಬಗ್ಗೆ ಲಿಖಿತವಾಗಿ ಬರೆದುಕಳಿಸಿ, ಅರ್ಧ ಗಂಟೆಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸ್ಪೀಕರ್ ಭರವಸೆ ನೀಡಿದ್ದರಿಂದ ಸದಸ್ಯರು ಧರಣಿ ಕೈಬಿಟ್ಟು ಆಸನಗಳಿಗೆ ಮರಳಿದರು. ಈ ವೇಳೆ ಮುಖ್ಯಮಂತ್ರಿ , ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಸದನದಲ್ಲಿ ಹಾಜರಿದ್ದು, ಎಲ್ಲವನ್ನೂ ಗಮನಿಸುತ್ತಿದ್ದರು. ಆಡಳಿತ ಪಕ್ಷದ ಸದಸ್ಯರೇ ಧರಣಿ ನಡೆಸಿದ್ದರಿಂದ ಮುಖ್ಯಮಂತ್ರಿ ಮೌನಕ್ಕೆ ಶರಣಾಗಿದ್ದರು.

click me!