
ಚಿತ್ರದುರ್ಗ/ದಾವಣಗೆರೆ (ಆ.19): ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವಷ್ಟುದಿನ ಮೀಸಲಾತಿ ರದ್ದತಿ ವಿಚಾರವನ್ನು ಎತ್ತುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರು 21 ಮಂದಿ ದಲಿತರಿಗೆ ಸಚಿವ ಸ್ಥಾನ ನೀಡಿರುವುದರಿಂದ ಬಿಜೆಪಿ ಯಾರ ಪರ ಇದೆ ಎಂಬುದು ಸಾಬೀತಾಗಿದೆ ಎಂದು ಹೇಳಿದ್ದಾರೆ.
ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಬುಧವಾರ ಜನಾಶೀರ್ವಾದ ಯಾತ್ರೆ ನಡೆಸಿದ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. 52 ವರ್ಷ ದಲಿತರಿಗೆ ಹೆಂಡ ಕುಡಿಸಿ, ಖಂಡ ತಿನ್ನಿಸಿ ಅಧಿಕಾರ ನಡೆಸಿದ ಕಾಂಗ್ರೆಸ್ಸಿಗರು ಈಗ ಮೀಸಲಾತಿ ಬಗ್ಗೆ ಮಾತನಾಡ್ತಾರೆ. ಕೇಂದ್ರದಲ್ಲಿ ಬಿಜೆಪಿ ಕೇವಲ ಹದಿಮೂರು ವರ್ಷ ಮಾತ್ರ ಅಧಿಕಾರ ನಡೆಸಿದೆ ಎಂದರು.
ಸೆ.15ರೊಳಗೆ ಮೀಸಲಾತಿ ಕಲ್ಪಿಸದಿದ್ದಲ್ಲಿ ಅ.1ರಿಂದ ಮತ್ತೆ ಪಂಚಮಸಾಲಿ ಹೋರಾಟ
ಕಾಂಗ್ರೆಸ್ಸಿಗರು ಬಿಜೆಪಿಯನ್ನು ಬ್ರಾಹ್ಮಣರ ಪಕ್ಷವೆಂದು, ಗರ್ಭಗುಡಿ ರಾಜಕೀಯವೆಂದು ಮೂದಲಿಸಿದರು. ಆದರೆ ಹಿಂದುಳಿದ ವರ್ಗಗಳ ನಾಯಕನನ್ನು ಪ್ರಧಾನಿ ಮಾಡಿದ್ದೇ ಬಿಜೆಪಿ. 21 ಜನ ಪರಿಶಿಷ್ಟರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದೂ ಇದೇ ಬಿಜೆಪಿ ಎಂಬುದನ್ನು ಟೀಕಿಸುವ ವಿಪಕ್ಷಗಳು ಅರಿಯಲಿ. ಜೊತೆಗೆ ನೀವು ಅಧಿಕಾರದಲ್ಲಿದ್ದಾಗ ಯಾರನ್ನು ಪ್ರಧಾನಿ ಮಾಡಿದ್ದಿರಿ, ಎಷ್ಟುಜನ ಪರಿಶಿಷ್ಟರಿಗೆ ಕೇಂದ್ರ ಸಚಿವ ಸ್ಥಾನ ನೀಡಿದ್ದಿರಿ ಎಂಬುದನ್ನು ಉತ್ತರಿಸಿ ಎಂದು ಅವರು ಸವಾಲು ಹಾಕಿದರು. ಈಗ ಹಾಲಿ ಇರುವ ಪರಿಸ್ಥಿತಿ ಗಮನಿಸಿದರೆ ದಲಿತರ ಪರ ಯಾವ ಸರ್ಕಾರ ಇದೆ ಎನ್ನುವುದು ತೀರ್ಮಾನ ಆಗುತ್ತದೆ ಎಂದರು.
ಸಂಸತ್‌ನಲ್ಲಿ ಸದನದ ಸಂಪ್ರದಾಯವನ್ನು ಪಾಲಿಸುವ ನಡವಳಿಕೆ ಕಾಂಗ್ರೆಸ್ಸಿಗರಲ್ಲಿ ಇಲ್ಲ. ಸ್ಪೀಕರ್ ಎದ್ದು ನಿಂತರೆ ಅವರ ಮುಖಕ್ಕೆ ಪುಸ್ತಕ ಎಸೆಯುತ್ತಾರೆ. ಟೇಬಲ್ ಮೇಲೆ ನಿಂತು ಡ್ಯಾನ್ಸ್ ಮಾಡುತ್ತಾರೆ. ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಈ ರೀತಿ ಮಾಡಲು ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ದುರ್ಗದ ಜನತೆಗೆ ಮಂಡಿಯೂರಿ ನಮಸ್ಕರಿಸಿದ ನಾರಾಯಣಸ್ವಾಮಿ
ಚಿತ್ರದುರ್ಗ: ಮತ ನೀಡಿ ಗೆಲ್ಲಿಸಿ ಕೇಂದ್ರದಲ್ಲಿ ಸಚಿವರಾಗಲು ಅವಕಾಶ ಮಾಡಿಕೊಟ್ಟಚಿತ್ರದುರ್ಗ ಲೋಕಸಭೆ ಕ್ಷೇತ್ರದ ಜನತೆಗೆ ಎ.ನಾರಾಯಣಸ್ವಾಮಿ ಮಂಡಿಯೂರಿ ನಮಸ್ಕರಿಸಿದ ಘಟನೆ ನಡೆಯಿತು. ಜನಾಶೀರ್ವಾದ ಯಾತ್ರೆ ಅಂಗವಾಗಿ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಭಾಷಣ ಮುಗಿಸುವ ಮುನ್ನ ತುಸು ಭಾವುಕರಾದರು. ತಕ್ಷಣವೇ ವೇದಿಕೆಯಲ್ಲಿ ಮಂಡಿಯೂರಿ ಕುಳಿತು ನಮಿಸಿದರು. ಸಂತೋಷ್‌ಜಿ ದೂರವಾಣಿ ಕರೆ ಮಾಡಿ ಬೇಗ ದೆಹಲಿಗೆ ಬನ್ನಿ ಎಂದು ಕರೆಯುವವರೆಗೂ ನಾನು ಸಚಿವಾಗುತ್ತೇನೆ ಎಂದು ಗೊತ್ತಿರಲಿಲ್ಲ. ಬಿಜೆಪಿ ನನ್ನನ್ನು ಕರೆದು ಸಚಿವನನ್ನಾಗಿಸಿ ಜವಾಬ್ದಾರಿ ನೀಡಿದೆ. ಇದಕ್ಕೆ ತಾವೇ ಕಾರಣರು ಎಂದು ನೆರೆದಿದ್ದ ಜನ ಸಮೂಹದತ್ತ ಕೈ ತೋರಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ