ಮಹದಾಯಿ ಅನುಮತಿ ರದ್ದತಿಗಾಗಿ ಮೋದಿಗೆ ಮನವಿ: ಗೋವಾ ಸಿಎಂ ಸಾವಂತ್‌

Published : Dec 31, 2022, 02:40 AM IST
ಮಹದಾಯಿ ಅನುಮತಿ ರದ್ದತಿಗಾಗಿ ಮೋದಿಗೆ ಮನವಿ: ಗೋವಾ ಸಿಎಂ ಸಾವಂತ್‌

ಸಾರಾಂಶ

ಮಹದಾಯಿ ನದಿ ತಿರುವು (ಕಳಸಾ-ಬಂಡೂರಿ) ಯೋಜನೆಗೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನುಮೋದನೆ ನೀಡಿದ್ದಕ್ಕೆ ಗೋವಾದಲ್ಲಿ ಸತತ 2ನೇ ದಿನವೂ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ಅನುಮೋದನೆ ವಾಪಸ್‌ ಪಡೆಯುವಂತೆ ಆಗ್ರಹಿಸುತ್ತೇವೆ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. 

ಪಣಜಿ (ಡಿ.31): ಮಹದಾಯಿ ನದಿ ತಿರುವು (ಕಳಸಾ-ಬಂಡೂರಿ) ಯೋಜನೆಗೆ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅನುಮೋದನೆ ನೀಡಿದ್ದಕ್ಕೆ ಗೋವಾದಲ್ಲಿ ಸತತ 2ನೇ ದಿನವೂ ಆಕ್ಷೇಪ ವ್ಯಕ್ತವಾಗಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಮಾತನಾಡಿ ಅನುಮೋದನೆ ವಾಪಸ್‌ ಪಡೆಯುವಂತೆ ಆಗ್ರಹಿಸುತ್ತೇವೆ ಎಂದು ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. ಇನ್ನೊಂದು ಕಡೆ, ‘ಗೋವಾದ ಎಲ್ಲ 40 ಶಾಸಕರು ರಾಜೀನಾಮೆ ನೀಡಿ ಕೇಂದ್ರದ ಮೇಲೆ ಒತ್ತಡ ಹಾಕಬೇಕು’ ಎಂದು ಗೋವಾ ಕಾಂಗ್ರೆಸ್‌ ಒತ್ತಾಯಿಸಿದೆ.

ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಸಾವಂತ್‌, ‘ಕಳಸಾ-ಬಂಡೂರಿ ಕುಡಿವ ನೀರಿನ ಯೋಜನೆಯ ಮಾರ್ಪಡಿಸಿದ ವಿಸ್ತೃತ ಯೋಜನಾ ವರದಿಗೆ ಕರ್ನಾಟಕ ಸರ್ಕಾರಕ್ಕೆ ದೊರೆತ ಅನುಮೋದನೆ ಹಿಂಪಡೆಯಲು ರಾಜ್ಯ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಿದೆ. ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಜಲ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ರನ್ನು ಭೇಟಿ ಮಾಡಿ ಕರ್ನಾಟಕದ ಯೋಜನೆ ಬಗ್ಗೆ ವಿವರಿಸಲಿದ್ದೇವೆ ಹಾಗೂ ಮಹದಾಯಿ ಪ್ರಾಧಿಕಾರ ರಚನೆಗೆ ಒತ್ತಾಯಿಸಲಿದ್ದೇವೆ’ ಎಂದರು.

ಹೊಸ ವರ್ಷಕ್ಕೆ ಕೊಡಗಿನ‌ ಪ್ರಮುಖ ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಏರಿಕೆ!

ಈ ನಡುವೆ, ಸಾವಂತ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಪಕ್ಷ ಗೋವಾ ಫಾರ್ವರ್ಡ್‌ ಪಕ್ಷದ ಅಧ್ಯಕ್ಷ ವಿಜಯ ಸರದೇಸಾಯಿ, ‘ಸಾವಂತ್‌ ಕೋರಿಕೆಯನ್ನು ಮೋದಿ ತಿರಸ್ಕರಿಸಿದರೆ ಸಾವಂತ್‌ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ. ಇನ್ನು ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿದ ಗೋವಾ ವಿಧಾನಸಭೆ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ಯೂರಿ ಅಲೆಮಾವೋ, ‘ಕೇಂದ್ರದ ಹಸಿರು ನಿಶಾನೆಯಿಂದ ಕರ್ನಾಟಕಕ್ಕೆ ಗೆಲುವಾಗಿದೆ. ರಾಜ್ಯದ ಹಿತ ಕಾಯಲು ಪ್ರಮೋದ್‌ ಸಾವಂತ್‌ ಸರ್ಕಾರ ವಿಫಲವಾಗಿದೆ. ಹೀಗಾಗಿ ಕೇಂದ್ರಕ್ಕೆ ನಾವು ಶಕ್ತಿಯುತ ಸಂದೇಶ ರವಾನಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲ 40 ಶಾಸಕರು ರಾಜೀನಾಮೆ ನೀಡಬೇಕು. ಒಗ್ಗಟ್ಟು ಪ್ರದರ್ಶಿಶಿ ತಾಯಿ ಮಹದಾಯಿಯನ್ನು ರಕ್ಷಿಸಬೇಕು’ ಎಂದು ಆಗ್ರಹಿಸಿದರು.

ಸಮುದಾಯವನ್ನು ಮಂಗ ಮಾಡಲು ಬಿಜೆಪಿ ಸರ್ಕಾರ ಹೊರಟಿದೆ: ಎಚ್‌.ಡಿ.ಕುಮಾರಸ್ವಾಮಿ

ಗೋವಾ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಅಮಿತ್‌ ಪಾಟ್ಕರ್‌ ಮಾತನಾಡಿ, ‘ಅಂದು ಮಹದಾಯಿ ವಿಚಾರದಲ್ಲಿ ಅಂದಿನ ಮುಖ್ಯಮಂತ್ರಿ ಮನೋಹರ ಪರ್ರಿಕರ್‌ ರಾಜಿ ಆಗಿದ್ದರು. ಇಂದು ಹಾಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು ಅಧಿಕಾರಕ್ಕಾಗಿ ಬಿಜೆಪಿ ವರಿಷ್ಠರ ಕೈಗೊಂಬೆಯಂತಾಗಿದ್ದಾರೆ ಹಾಗೂ ಮಹದಾಯಿ ಮಾರಿದ್ದಾರೆ’ಎಂದು ಕಿಡಿಕಾರಿದ್ದಾರೆ. ‘ಆದರೆ ಮನಮೋಹನ ಸಿಂಗ್‌ ಪ್ರಧಾನಿ ಆಗಿದ್ದಾಗ ಮಹದಾಯಿ ನ್ಯಾಯಾಧಿಕರಣ ರಚಿಸಿದ್ದರು. ಈ ಮೂಲಕ ರಾಜ್ಯದ ಹಿತ ಕಾಪಾಡಲು ಕಾಂಗ್ರೆಸ್‌ ಬದ್ಧತೆ ತೋರಿತ್ತು’ ಎಂದಿದ್ದಾರೆ. ಇನ್ನೊಂದೆಡೆ ಗೋವಾ ಆಪ್‌ ಅಧ್ಯಕ್ಷ ಅಮಿತ್‌ ಪಾಲೇಕರ್‌ ಕೂಡ, ‘ಮಹದಾಯಿಯನ್ನು ಸಿಎಂ ಮಾರಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌