ಸಿದ್ದರಾಮಯ್ಯ ಮೊದಲು ಇದ್ದಂಗೇ ಇದ್ದಾರೆ. ಯಾಕೋ ನಿಮಗೆ ಕಷ್ಟ ಶುರುವಾದಂಗಿದೆ. ನೀವು ಪ್ರತಿಪಕ್ಷ ನಾಯಕರಾಗಿದ್ದು ನಿಮ್ಮಲ್ಲಿ ಯಾರಿಗೂ ಇಷ್ಟಇದ್ದಂಗಿಲ್ಲ. ಮೊದಲು ಅದಕ್ಕೆ ಯಾವುದಾದರೂ ಶಾಂತಿ ಮಾಡಿಸಿ ಎಂದರು ಬಸವರಾಜ ರಾಯರೆಡ್ಡಿ
ಮಾಟ-ಮಂತ್ರ ಬೇರೆ ಯಾರಿಗಾದರೂ ಬೇಕಾದ್ದು ಮಾಡಬಹುದು. ಆದರೆ, ಸಿದ್ದರಾಮಯ್ಯ ಅವರಿಗೆ ಅದು ಏನೂ ಮಾಡುವುದಿಲ್ಲ. ಅಕಸ್ಮಾತ್ ಅವರಿಗೆ ಮಾಟ ಮಾಡಿಸಿದಿರೋ ಅದು ವಾಪಸ್ ಬಂದು ನಿಮಗೆ ಹೊಡೆಯುತ್ತದೆ.
ಹೀಗಂತ ವಿಧಾನಸಭೆಯಲ್ಲಿ ಅಧಿಕೃತವಾಗಿ ಹೇಳಿದ್ದಾರೆ ಸದನದ ಮಾಟ- ಮಂತ್ರ ತಜ್ಞ ಶಾಸಕ ಎಚ್.ಡಿ. ರೇವಣ್ಣ.
ಇಷ್ಟಕ್ಕೂ ಇಂತಹ ಘೋಷಣೆಯೊಂದನ್ನು ಅವರು ಮಾಡಲು ಕಾರಣವಾಗಿದ್ದು, ಪ್ರತಿಪಕ್ಷ ನಾಯಕ ಆರ್. ಅಶೋಕ್. ಬರದ ಬಗ್ಗೆ ಚರ್ಚೆ ನಡೆದಿತ್ತು. ಸರ್ಕಾರದ ಬರ ಸಿದ್ಧತೆಯನ್ನು ಟೀಕಿಸುತ್ತಿದ್ದ ಅಶೋಕ್ ಅವರು ಒಂದು ಹಂತದಲ್ಲಿ ಸಿದ್ದರಾಮಯ್ಯನವರ ಮೊದಲ ಸರ್ಕಾರಕ್ಕೂ, ಈಗಿನ ಸರ್ಕಾರಕ್ಕೂ ಬಹಳ ವ್ಯತ್ಯಾಸ ಇದೆ. ಆಗಿನ ಸಿದ್ದರಾಮಯ್ಯನವರ ಖದರ್ರೇ ಬೇರೆ ಇತ್ತು. ಈಗಿನ ಸಿದ್ದರಾಮಯ್ಯ ಅವರಿಗೆ ಗರ ಬಡಿದಿದೆ ಎಂದರು.
ಭಾಷಣ ಮಾಡಲು ಜೋಶ್‌ನಿಂದ ಬಂದಿದ್ದ ನಾಯಕರು; ವಿಶ್ವಕಪ್ ಫೈನಲ್‌ನಿಂದ ಕಂಗಾಲು!
ಅಷ್ಟೇ ಅಲ್ಲ ಸಿದ್ದರಾಮಯ್ಯನವರನ್ನು ಕೊಳ್ಳೇಗಾಲಕ್ಕೆ ಕರೆದುಕೊಂಡು ಹೋಗಿ ಗರ ಬಿಡಿಸಿಕೊಂಡು ಬನ್ನಿ ಅಂತ ಸುಮ್ಮನೆ ಕುಳಿತಿದ್ದ ರೇವಣ್ಣ ಅವರನ್ನು ಕೆಣಕಿದರು.
ಆಗ ನಿಧಾನವಾಗಿ ಎದ್ದ ರೇವಣ್ಣ ‘ಅಶೋಕಣ್ಣ.. ಸಿದ್ದರಾಮಯ್ಯನವರಿಗೆ ಮಾಟ-ಮಂತ್ರ ಮಾಡಿದ್ರೂ ತಟ್ಟಲ್ಲ ರೀ. ಯಾರು ಮಾಡಿಸ್ತಾರಲ್ಲ ಅವರಿಗೇ ತಟ್ಟುತ್ತೆ. ಅವರು ಅಷ್ಟು ಸ್ಟ್ರಾಂಗು’ ಅಂತ ಫರ್ಮಾನು ಹೊರಡಿಸಿದರು.
ಇದನ್ನು ಬೆಂಬಲಿಸಿದ ಬಸವರಾಜ ರಾಯರೆಡ್ಡಿ ಅವರು, ಸಿದ್ದರಾಮಯ್ಯ ಮೊದಲು ಇದ್ದಂಗೇ ಇದ್ದಾರೆ. ಯಾಕೋ ನಿಮಗೆ ಕಷ್ಟ ಶುರುವಾದಂಗಿದೆ. ನೀವು ಪ್ರತಿಪಕ್ಷ ನಾಯಕರಾಗಿದ್ದು ನಿಮ್ಮಲ್ಲಿ ಯಾರಿಗೂ ಇಷ್ಟಇದ್ದಂಗಿಲ್ಲ. ಮೊದಲು ಅದಕ್ಕೆ ಯಾವುದಾದರೂ ಶಾಂತಿ ಮಾಡಿಸಿ ಎಂದರು.
ಎಡಗಡೆ ಎತ್ತಿಗೆ ಹೊಡೆದರೆ ಬಲಗಡೆ ಎತ್ತು ಚುರುಕು
ಎಡಗಡೆ ಎತ್ತಿಗೆ ಹೊಡೆದರೆ ಬಲಗಡೆ ಎತ್ತು ಚುರುಕಾಗುತ್ತಂತೆ... ಇದು ನಮ್ಮ ಹಿರಿಯರ ಮನೆ ಹೆಡ್ ಮಾಸ್ಟರ್ ಅಂದ್ರೆ ಸಭಾಪತಿ ಬಸವರಾಜ ಹೊರಟ್ಟಿ ಸಾಹೇಬ್ರು ಸದನದಲ್ಲಿ ಉಪಯೋಗಿಸುತ್ತಿರುವ ಚಾವಟಿ ಅಸ್ತ್ರ.
ಸದನದ ಹೆಡ್ ಮಾಸ್ಟರ್ ಆದ ಮೇಲೆ ನಿಯಮ ಪಾಲನೆ ಮಾಡುವಂತೆ ಸಾಕಷ್ಟು ಹೇಳಿದರೂ ಗದರಿದರೂ ಸದಸ್ಯರು ಮಾತ್ರ ಪಾಲನೆ ಮಾಡಲಿಲ್ಲ. ಇಷ್ಟು ದಿನ ಮಾತಿನಿಂದ ಹೇಳುತ್ತಿದ್ದ ಹೊರಟ್ಟಿ ಸಾಹೇಬ್ರು ಕಳೆದ ವಾರ ಬೆಳಗಾವಿ ಅಧಿವೇಶನದಲ್ಲಿ ಚಾವಟಿ ಬೀಸೇ ಬಿಟ್ರು..
ಅವತ್ತು ಆಗಿದ್ದು ಇಷ್ಟೆ.. ಪ್ರಶ್ನೋತ್ತರ ಅವಧಿಯ ಮೊದಲ ಪ್ರಶ್ನೆಯನ್ನು ಬಿಜೆಪಿಯ ಛಲವಾದಿ ನಾರಾಯಣಸ್ವಾಮಿ ಕೇಳಿದರು. ಅದಕ್ಕೆ ಎಂದಿನಂತೆ ಸರ್ಕಾರ ತಳ್ಳಿಹಾಕುವ ಉತ್ತರ ನೀಡಿತ್ತು. ಇದಕ್ಕೆ ಒಪ್ಪದ ಛಲವಾದಿ ಹಠ ಹಿಡಿದರು. ಬಿಜೆಪಿ ಸದಸ್ಯರು ಬೆಂಬಲ ಕೊಟ್ಟರು. ಬಾವಿಗೆ ಇಳಿದು ಧರಣಿ ಆರಂಭಿಸಿದರು.
ಆದರೆ, ಇದಕ್ಕೆ ಸರ್ಕಾರ ಕ್ಯಾರೆ ಎನ್ನಲಿಲ್ಲ. ವಾದ- ಪ್ರತಿವಾದ, ಗದ್ದಲ ಸಾಕಷ್ಟು ನಡೆದಾಗ ಹೊರಟ್ಟಿ ಸಾಹೇಬ್ರು ಸದನವನ್ನು ಎರಡು ಬಾರಿ ಮುಂದೂಡಬೇಕಾಯಿತು. ಕೊನೆಗೆ ಸಂಧಾನ ನಡೆಸಿ ಬಿಜೆಪಿ ಧರಣಿ ಹಿಂಪಡೆಯುವಂತೆ ಮಾಡಿದರು.
ಇದಾಗುತ್ತಿದ್ದಂತೆಯೇ ಸಭಾಪತಿ ಪ್ರಶ್ನೋತ್ತರ ಅವಧಿಯನ್ನು ಬರ್ಕಾಸ್ತ್ ಮಾಡಿ ಮುಂದಿನ ಕಲಾಪ ಕೈಗೆ ತೆಗೆದುಕೊಂಡರು. ಎಲ್ಲರಿಗೂ ಶಾಕ್. ಸರ್ ನಮ್ಮ ಪ್ರಶ್ನೆ ಇದೆ ತಗೊಳ್ಳಿ ಎಂದು ಪಕ್ಷಭೇದ ಮರೆತು ಸದಸ್ಯರು ಆಗ್ರಹಿಸಿದರು.
ನಿಯಮ ಪ್ರಕಾರ, ಪ್ರಶ್ನೋತ್ತರ ಅವಧಿಯಲ್ಲಿ ಒಂದು ಪ್ರಶ್ನೆ ಹಾಗೂ ಉತ್ತರಕ್ಕೆ ಸಿಗಬೇಕಿರುವುದು ನಾಲ್ಕು ನಿಮಿಷ ಮಾತ್ರ. ಆದರೆ, ಛಲವಾದಿ ಪ್ರಶ್ನೆ ಸೃಷ್ಟಿಸಿದ ಡ್ರಾಮಾ 90 ನಿಮಿಷ ತೆಗೆದುಕೊಂಡಿತ್ತು. ಸೋ, ಪ್ರಶ್ನೋತ್ತರ ಖಲ್ಲಾಸ್.
ಬುಸ್ ಎಂದ ಪಿಸುಮಾತು!
ಬಿಜೆಪಿ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರ ನೇಮಕದ ಬಳಿಕ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಹಾವು-ಮುಂಗುಸಿ ಆಟ ಗೊತ್ತೇ ಇದೆ. ಇಂತಿಪ್ಪ ಇಬ್ಬರೂ ನಾಯಕರೂ ವಿಧಾನಸಭೆಯಲ್ಲಿ ನಗುಮುಖ ಹೊತ್ತು ಪರಸ್ಪರ ಪಿಸುಗುಡುತ್ತಿದ್ದರು.
ಇದೇನಪ್ಪ ಯತ್ನಾಳ್ ಸಾಹೇಬ ಅಶೋಕ್ ಜತೆ ಮುನಿಸು ಮರೆತು ಬೆರತು ಬಿಟ್ರಾ? ಸ್ಪೀಕರ್ ಅವಕಾಶ ನೀಡಿದರೂ ಅಶೋಕ್ ಅವರಿಗೆ ಅಭಿನಂದನೆ ಸಲ್ಲಿಸಲು ನಿರಾಕರಿಸಿದ ಯತ್ನಾಳ್ ರಾಜಿ ಆಗ್ಬಿಟ್ರಾ? ಎಂಬ ಕುತೂಹಲ.
ರಿಪೋರ್ಟರ್ಸ್ ಡೈರಿ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮಿಕ್ಸೆಡ್ ಡಬಲ್ಸ್!
ಈ ಕುತೂಹಲ ಪತ್ರಕರ್ತರ ಜತೆಗೆ ಬಿಜೆಪಿ ಸದಸ್ಯರಲ್ಲೂ ಕಾಣ್ತಿತ್ತು. ಆದರೆ, ಅದು ಪಿಸುಗುಡುವುದರಲ್ಲೇ ಇದ್ದ ಬುಸ್ ಬುಸ್ ಮಾತು.
ಕಲಾಪ ಮುಂದೂಡಿದ್ದ ಹೊತ್ತಲ್ಲಿ ಆರ್. ಅಶೋಕ್ ಮತ್ತೊಬ್ಬ ಅಸಮಾಧಾನಿತ ಶಾಸಕ ಅರವಿಂದ್ ಬೆಲ್ಲದ್ ಜತೆ ಮಾತಿಗೆ ನಿಂತಿದ್ದರು. ಆಗ ಅಲ್ಲಿಗೆ ಮೆತ್ತಗೆ ಬಂದ ಯತ್ನಾಳ್ ‘''ಅವ ಒಬ್ಬ ನಿಮ್ಮ ವಿರುದ್ಧ ಇದ್ದ. ಅವರಿಗೂ ಉಪನಾಯಕನ ಆಸೆ ತೋರಿಸಿ ಒಳಗಾಕ್ಕೋಳಕ್ಕತ್ತೀರಿ. ಒಡೆದು ಆಳೋ ನೀತಿ ಮಾಡ್ತಿದ್ದೀರಿ’ ಎಂದು ಕಿವಿಯಲ್ಲೇ ಹೇಳಿದರು. ಅದಕ್ಕೆ ಏನೋ ಸಮಜಾಯಿಷಿ ನೀಡಲು ಹೋದ ಅಶೋಕ್ ಅದು ಸಫಲವಾಗುತ್ತಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ನಗುತ್ತಾ ‘ಹೇಗೆ ಹೇಳ್ತೀರಿ ನೋಡಿ’ ಎಂದು ಭುಜ ತಟ್ಟುತ್ತಾ ಅಲ್ಲಿಂದ ದಾಟಿಕೊಂಡರು.
ಲಿಂಗರಾಜು ಕೋರಾ
ಎಂ.ಆರ್.ಚಂದ್ರಮೌಳಿ
ಶ್ರೀಕಾಂತ್ ಗೌಡಸಂದ್ರ