ಬೀದಿನಾಯಿಗಳು ಆಧಾರ್‌ ಕಾರ್ಡ್‌ ಇಟ್ಟುಕೊಂಡಿರುತ್ತಾವಾ?

Kannadaprabha News   | Kannada Prabha
Published : Feb 09, 2026, 06:10 AM IST
Street dog

ಸಾರಾಂಶ

ಅದಕ್ಕೆ ಧ್ವನಿಗೂಡಿಸಿದ ನಜೀರ್‌ ಹೊನ್ಯಾಳ ಅವರು, ಬೀದಿನಾಯಿಗಳನ್ನು ಅದ್ಹೇಗೆ ಸಂಸ್ಥೆಯೊಳಗಿನ ನಾಯಿ ಎಂದು ಗುರುತಿಸುತ್ತೀರಿ. ಬೀದಿನಾಯಿಗಳೇನು ಆಧಾರ್‌ ಕಾರ್ಡ್‌ ಇಟ್ಟುಕೊಂಡು ಅಡ್ಡಾಡುತ್ತಿರುತ್ತವೆ ಅಂಥ ತಿಳಿಕೊಂಡಿದ್ದಾರಾ? ಎಂದು ಪ್ರಶ್ನಿಸಿದರು. ಹೀಗೆ ಹೇಳುತ್ತಿದ್ದಂತೆ ಇಡೀ ಸಭೆ ನಗೆಗಡಲಲಿ ತೇಲಾಡಿತು.

ಇದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ನಜೀರ್‌ ಅಹ್ಮದ್ ಹೊನ್ಯಾಳ ಅವರು ಆಯುಕ್ತ ರುದ್ರೇಶ ಘಾಳಿ ಅವರನ್ನು ಪ್ರಶ್ನಿಸಿದ ಬಗೆ...

ಆಗಿದ್ದು ಏನಪ್ಪಾ ಅಂದ್ರೆ, ಪಾಲಿಕೆ ವ್ಯಾಪ್ತಿಯಲ್ಲಿ ಎಬಿಸಿ (ಎನಿಮಲ್‌ ಬರ್ತ್‌ ಕಂಟ್ರೋಲ್‌)ಗಾಗಿ ಏಜೆನ್ಸಿ ಗೊತ್ತು ಮಾಡಲಾಗಿದೆ. ಅಂದರೆ ಬೀದಿನಾಯಿ ಹಿಡಿದು ವ್ಯಾಕ್ಸಿನೇಷನ್‌, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ ಮೂರು ದಿನದ ಬಳಿಕ ಮತ್ತೆ ಅವು ಇದ್ದ ಜಾಗೆಗೆ ತಂದು ಬಿಡುವುದು. ಅದಕ್ಕೆ ಒಪ್ಪಿಗೆ ಕೊಡುವ ಕುರಿತು ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು.

ಆಗ ವೀರಣ್ಣ ಸವಡಿ ಅವರು, ಬೀದಿನಾಯಿಗಳಿಗಾಗಿ ಶೆಲ್ಟರ್‌ ಮಾಡುತ್ತಿರುವಾಗ ಮತ್ತೇಕೆ ಇದು ಎಂದು ಪ್ರಶ್ನಿಸಿದರು. ಅದಕ್ಕೆ ಆಯುಕ್ತರು, ಶೆಲ್ಟರ್‌ ಮಾಡ್ತಾ ಇರೋದು ಸಂಸ್ಥೆಗಳಲ್ಲಿರುವ ನಾಯಿಗಳಿಗಾಗಿ ಮಾತ್ರ. ಅಂದರೆ ಪಾಲಿಕೆ, ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ಸರ್ಕಾರಿ ಕಚೇರಿಗಳ ಪ್ರಾಂಗಣದಲ್ಲಿರುವ ನಾಯಿಗಳಿಗಾಗಿ ಎಂದರು. ಅದಕ್ಕೆ ಸವಡಿ ಅವರು, ರಿ ಆಯುಕ್ತರೇ ಅವು ಬೀದಿನಾಯಿರೀ.. ಅವಕ್ಕೆ ಇಲ್ಲೇ ಇರಬೇಕು ಎಂದು ಜಾಗ ಗುರುತು ಇರುತ್ತದೆಯಾ? ಇವತ್ತು ಬಸ್‌ ಸ್ಟ್ಯಾಂಡ್‌ನಲ್ಲಿದ್ದ ಬೀದಿ ನಾಯಿ, ನಾಳೆ ಮತ್ತೆ ಎಲ್ಲೋ ಇರುತ್ತವೆ. ಅವುಗಳನ್ನು ಅದ್ಹೇಗೆ ಹಿಡಿದು ಶೆಲ್ಟರ್‌ಗೆ ಹಾಕುತ್ತೀರಿ. ಶೆಲ್ಟರ್‌ ಮಾಡಿದರೆ ಎಲ್ಲ ನಾಯಿಗೂ ಮಾಡಿ ಎಂದು ಆಗ್ರಹಿಸಿದರು..

ಅದಕ್ಕೆ ಧ್ವನಿಗೂಡಿಸಿದ ನಜೀರ್‌ ಹೊನ್ಯಾಳ ಅವರು, ಬೀದಿನಾಯಿಗಳನ್ನು ಅದ್ಹೇಗೆ ಸಂಸ್ಥೆಯೊಳಗಿನ ನಾಯಿ ಎಂದು ಗುರುತಿಸುತ್ತೀರಿ. ಬೀದಿನಾಯಿಗಳೇನು ಆಧಾರ್‌ ಕಾರ್ಡ್‌ ಇಟ್ಟುಕೊಂಡು ಅಡ್ಡಾಡುತ್ತಿರುತ್ತವೆ ಅಂಥ ತಿಳಿಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.

ಹೀಗೆ ಹೇಳುತ್ತಿದ್ದಂತೆ ಇಡೀ ಸಭೆ ನಗೆಗಡಲಲಿ ತೇಲಾಡಿತು. ಕೊನೆಗೆ ಆಯುಕ್ತ ಘಾಳಿ ಅವರು, ನಗರದಲ್ಲಿ 40 ಸಾವಿರಕ್ಕೂ ಅಧಿಕ ಬೀದಿ ನಾಯಿಗಳಿವೆ. ಅವುಗಳನ್ನು ಹಿಡಿದು ಶೆಲ್ಟರ್‌ ಕಲ್ಪಿಸುವುದು ಅಸಾಧ್ಯದ ಮಾತು ಎಂದರು. ಅದಕ್ಕೆ ಆಯ್ತು ಆಯ್ತು.. ಬಿಡಿ. ಬೀದಿನಾಯಿಗಳಿಗೆ ಶೆಲ್ಟರ್‌ ಮಾಡುತ್ತೀರೋ ಎಬಿಸಿ ಮಾಡುತ್ತೀರೋ ಏನೋ ಒಂದು ಮಾಡಿ ಬೀದಿ ನಾಯಿ ಹಾವಳಿ ತಪ್ಪಿಸಿ ಎಂದು ಎಲ್ಲರೂ ಹೇಳುವ ಮೂಲಕ ಚರ್ಚೆಗೆ ಇತಿಶ್ರೀ ಹಾಡಿದರು.

ರಾಜ್ಯದಲ್ಲಿ ಬ್ರಾಹ್ಮಣರ ಜನಸಂಖ್ಯೆ ಈಗ ಬರೋಬ್ಬರಿ ಎಷ್ಟದರಿ?

ಸುದ್ದಿಗಾರರೊಬ್ಬರು ಬಿಟ್ಟಂಥ ಈ ಪ್ರಶ್ನೆಯ ಬಾಣಕ್ಕೆ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಅವರಿಗೆ ತಕ್ಷಣಕ್ಕೆ ಏನು ಹೇಳಬೇಕೋ ತೋಚದೆ ತಬ್ಬಿಬ್ಬಾದ ಪ್ರಸಂಗ ಈಚೆಗೆ ಅವರ ಕಲಬುರಗಿ ಪ್ರವಾಸದ ಸಂದರ್ಭದಲ್ಲಿ ನಡೀತು.

ತಕ್ಷಣಕ್ಕೆ ಏನೂ ಹೇಳ್ದೆ ವರದಿಗಾರನತ್ತಲೇ ದಿಟ್ಟಿಸಿ ನೋಡ್ತಾನೇ ಸಾವರಿಸಿಕೊಂಡ ಜಯಸಿಂಹ, ಬ್ರಾಹ್ಮಣರ ಸಂಖ್ಯಾಬಲ ಸುಮಾರು 40 ರಿಂದ 42 ಲಕ್ಷ ಇದೆರಿ ಅಂದ್ರು. ಮರುಕ್ಷಣವೇ ಜಯಸಿಂಹ ಅವರು ಅಯ್ಯೋ ನಮ್ಮದೇನು (ಬ್ರಾಹ್ಮಣರ) ಜನಸಂಖ್ಯೆ ಕೇಳ್ತೀರಿ ಬಿಡಿ, ರಾಜ್ಯದ ಒಟ್ಟು ಜನಸಂಖ್ಯೆಯ ಶೇ.6 ರಿಂದ 7 ರಷ್ಟಿದ್ದೇವೆ ನಾವು. ಆದ್ರೂ ಅನೇಕರು ಈ ವಾದ ಒಪ್ಪೋದಿಲ್ಲ, ತಮಗೆ ತೋಚಿದಂತೆ ವ್ಯಾಖ್ಯಾನಿಸ್ತಾರೆಂದು ಬೇಸರಿಸಿದ್ರು. ನಾವು ಅದೆಷ್ಟೇ ಇರ್ಲಿ ಬಿಡ್ರಿ, ತಗೊಂಡೇನು ಮಾಡೋದು, ಬ್ರಾಹ್ಮಣರ ಬದುಕು ಸಾಗ್ತಿದೆ, ಮಂಡಳಿಗೆ ವಾರ್ಷಿಕ 10 ಕೋಟಿ ರು ಅನುದಾನ ಬರ್ತಿತ್ತು, ಈ ವರ್ಷ ಅಷ್ಟು ಬಂದಲ್ಲಿ ಸಮುದಾಯದವರಿಗೆ ಸಹಾಯ ಮಾಡಲು ಅನುಕೂಲವಾಗ್ತದೆ ಅಂದ್ರು.

ನಾವು ಅಲ್ಪಸಂಖ್ಯೆಯಲ್ಲಿದ್ರೂ ಕೂಡಾ ಎಲ್ಲರೊಳಗೊಂದಾಗು ಎಂಬಂತೆ ಎಲ್ಲರನ್ನರಿತು, ಎಲ್ಲರ ಜೊತೆ ಬೆರೆತು ಸರ್ವ ಜನ ಸಮುದಾಯ ಕಲ್ಯಾಣ ಬಯಸ್ತೀವಿ, ಅಧಿಕೃತ ಜಾತಿ ಗಣತಿ ವರದಿಗಳು ನಮ್ಮಸಂಖ್ಯಾಬಲ ಕಮ್ಮಿ ತೋರಿಸಿದ್ರೂ ಸಮುದಾಯದ ಮುಖಂಡರಾದ ನಾವು ನಿರಾಕರಿಸಿದ್ದೇವ್ರಿ ಅಂದ್ರು...

ಕೊನೆಗೆ ಸುದ್ದಿಗೋಷ್ಠಿಯಲ್ಲಿದ್ದವರೊಬ್ರು, ಅಯ್ಯೋ ಬಿಡಿ ಸಾರ್, ಹೆಣ್ಮಕ್ಕಳ ವಯಸ್ಸು ಕೇಳಬಾರ್ದು, ಗಂಡ್ಮಕ್ಕಳ ಪಗಾರ (ವೇತನ) ಕೇಳಬಾರ್ದು ಅಂತಾರಲ್ಲ, ಹಂಗೇ ಬ್ರಾಹ್ಮಣರ ಜನಸಂಖ್ಯೆ ಅದೆಷ್ಟಂತ ಕೇಳಬಾರ್ದು ಅಂದಾಗ ಸುದ್ದಿಗೋಷ್ಠಿಯಲ್ಲಿ ನಗೆಯ ಅಲೆ ಹರಡಿತ್ತು. ಅಸಗೋಡು ಮೊಗದಲ್ಲಿಯೂ ಜಯದ ನಗು ಮೂಡಿತ್ತೆನ್ನಿ.

-ಶಿವಾನಂದ ಗೊಂಬಿ

-ಶೇಷಮೂರ್ತಿ ಅವಧಾನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭರ್ಜರಿ ಯಶಸ್ಸು ಕಂಡ ಕೆಪೆಕ್‌ ವಾಣಿಜ್ಯ ಮೇಳ
ರಾಜ್ಯದ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರದ್ದೇ ಅಡ್ಡಿ : ಸಿಎಂ