
ಬೆಂಗಳೂರು : ಕೃಷಿ ಇಲಾಖೆ ನೇತೃತ್ವದಲ್ಲಿ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಫೆ.6 ರಿಂದ 8ರವರೆಗೂ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಭಾನುವಾರ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಮೂರು ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದು ವಿಶೇಷವಾಗಿತ್ತು.
ರೈತರ ಸಬಲೀಕರಣಕ್ಕಾಗಿ ಸಂಸ್ಕರಣೆ, ಮೌಲ್ಯವರ್ಧನೆ, ಕೃಷಿ ಪರಿಸರ ವಿಜ್ಞಾನ ಹಾಗೂ ಬ್ರ‍್ಯಾಂಡಿಂಗ್ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದ್ದು, ಮೂರು ದಿನವೂ ಜನಸಾಗರ ಹರಿದುಬಂದಿದ್ದು ಅಚ್ಚುಕಟ್ಟಾದ ಆಯೋಜನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
300ಕ್ಕೂ ಅಧಿಕ ಮಳಿಗೆಗಳನ್ನು ತೆರೆಯಲಾಗಿದ್ದು, ಸಿಎಫ್‌ಟಿಆರ್‌ಐ, ಎನ್‌ಐಎಫ್‌ಟಿಇಎಂ, ಯುಎಎಸ್, ಐಐಎಚ್‌ಆರ್, ಕೆಪೆಕ್, ಕೆಎಂಎಫ್ ಸೇರಿ ಪ್ರತಿಷ್ಠಿತ ಸಂಸ್ಥೆಗಳು ಪಾಲ್ಗೊಂಡಿದ್ದವು. ನೂತನ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದರಿಂದ ಅನ್ನದಾತರು ಮಾಹಿತಿ ಪಡೆಯಲು, ಖರೀದಿಸಲು ಮೇಳ ಅವಕಾಶ ಕಲ್ಪಿಸಿತು.
ಜರ್ಮನಿ, ಅಮೆರಿಕ, ವಿಯೆಟ್ನಾಂ, ಕೊಲಂಬಿಯಾ, ಕಾಂಬೋಡಿಯಾ ಹಾಗೂ ದೇಶದ 35ಕ್ಕೂ ಅಧಿಕ ರಾಷ್ಟ್ರೀಯ ತಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು, ಬೀಜ-ಗೊಬ್ಬರ ಪ್ರಮಾಣೀಕರಣ ಸಂಸ್ಥೆಗಳು, ಹಣಕಾಸು ಸಂಸ್ಥೆಗಳು, ನೀತಿ ನಿರೂಪಕರು, ವಿಜ್ಞಾನಿಗಳು, ಉದ್ಯಮಿಗಳು, ರೈತರು, ವಿದ್ಯಾರ್ಥಿಗಳು, ಜನ ಸಾಮಾನ್ಯರು ಮೇಳಕ್ಕೆ ಸಾಕ್ಷಿಯಾದರು.
ನುಗ್ಗೇಕಾಯಿಯಲ್ಲಿ ಮೌಲ್ಯವರ್ಧನೆ, ಸಿರಿಧಾನ್ಯ ಆಧಾರಿತ ಐಸ್ ಕ್ರೀಂ, ಹಲಸಿನ ಬೀಜದಿಂದ ಮಾಡಬಹುದಾದ ತಿಂಡಿ ತಿನಿಸುಗಳು, ಅವರೆಕಾಳು ಸುಲಿಯುವ ಯಂತ್ರ, ಎತ್ತಿನ ಗಾಣದಿಂದ ಎಣ್ಣೆ ತೆಗೆಯುವುದು ವಿಶೇಷ ಆಕರ್ಷಣೆಯಾಗಿತ್ತು. ಕೃಷಿ ಉತ್ಪನ್ನಗಳನ್ನು ಪ್ಯಾಕೇಜಿಂಗ್ ಮಾಡುವುದು, ಮೌಲ್ಯವರ್ಧನೆಗೊಳಿಸುವುದು, ಮಾರುಕಟ್ಟೆ ಅವಕಾಶ ಮತ್ತಿತರ ಮಾಹಿತಿಗಳನ್ನು ಪಡೆಯಲು ಅವಕಾಶವಿದ್ದು, ರೈತರಿಗೆ ಬಹಳಷ್ಟು ಅನುಕೂಲವಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮೇಳಕ್ಕೆ ಚಾಲನೆ ನೀಡಿ ಕೃಷಿ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದರು. ಭಾನುವಾರ ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಪಾಲ್ಗೊಂಡು ಕರ್ನಾಟಕದ ಕೃಷಿ ಕ್ಷೇತ್ರಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು. ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಕರ್ನಾಟಕವು ದೇಶದ ಕೃಷಿ ವಲಯಕ್ಕೆ ನೀಡುತ್ತಿರುವ ಗಣನೀಯ ಕೊಡುಗೆಗಳನ್ನು ವಿವರಿಸಿ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಅಗತ್ಯ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.==
ದೇಸಿ ಬೀಜ ಸಂರಕ್ಷಣೆ, ಸಿರಿಧಾನ್ಯಗಳ ಸಂಸ್ಕರಣೆ, ಮೌಲ್ಯವರ್ಧನೆ ಸೇರಿ ಕರ್ನಾಟಕದಲ್ಲಿ ಕೃಷಿ ಬಲಪಡಿಸಲು ಕೇಂದ್ರ ಸರ್ಕಾರ ಯಾವುದೇ ಭೇದ ಭಾವವಿಲ್ಲದೆ ರಾಜ್ಯ ಸರ್ಕಾರದೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಕೆಲಸ ಮಾಡಲಿದೆ. ಯಾವ ಪಕ್ಷ ಅಧಿಕಾರದಲ್ಲಿದ್ದರೂ, ರೈತರಿಗೆ ಸೇವೆ ಸಲ್ಲಿಸುವುದು ಕೇಂದ್ರ ಮತ್ತು ರಾಜ್ಯಗಳ ಜವಾಬ್ದಾರಿಯಾಗಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ