
ಪಕ್ಷ ಸಂಘಟನೆ ವಿಷಯದಲ್ಲಿ, ಪಕ್ಷಕ್ಕೆ ಹಣಕಾಸಿನ ಶಕ್ತಿ ತುಂಬುವುದರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರದ್ದು ಎತ್ತಿದ ಕೈ. ಪಕ್ಷದ ಅಧ್ಯಕ್ಷರಾದ ಮೇಲಂತೂ ಹಲವಾರು ಬಾರಿ ಇದನ್ನು ತೋರಿಸಿದ್ದಾರೆ. ಚುನಾವಣೆ ಟಿಕೆಟ್ ಕೊಡುವಾಗ ಆಕಾಂಕ್ಷಿಗಳಿಂದ ಪಕ್ಷಕ್ಕೆ ದೇಣಿಗೆ ಪಡೆದದ್ದು, ರಾಜ್ಯಾದ್ಯಂತ ಪಕ್ಷದ ಕಚೇರಿ ಕಟ್ಟಡಕ್ಕೆ ಜಾಗ ಪಡೆಯಲು ಅನುಸರಿಸಿದ ಮಾರ್ಗ ವಿಶೇಷವೆಂದೇ ಹೇಳಬಹುದು.
ಇಂತಹ ವಿಶೇಷಕ್ಕೆ ಮತ್ತೊಂದು ಸೇರ್ಪಡೆಯಾದದ್ದು, ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕೃತಿಯ ಕನ್ನಡ ಅನುವಾದ ‘ನುಡಿಮುತ್ತುಗಳು’ಪುಸ್ತಕದ ಬಿಡುಗಡೆ ಸಮಾರಂಭ.
ಡಿ.ಕೆ. ಶಿವಕುಮಾರ್ ಅವರೇ ಈ ಪುಸ್ತಕವನ್ನು ಅನುವಾದ ಮಾಡಿದ್ದು, ಇದಕ್ಕಾಗಿ ಪಕ್ಷದ ಕಚೇರಿಯಲ್ಲಿ ಬಿಡುಗಡೆ ಸಮಾರಂಭ ಆಯೋಜಿಸಿದ್ದರು. ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಯಕರ್ತರು, ಮುಖಂಡರಿಗೆ ಉಚಿತವಾಗಿ ಪುಸ್ತಕ ವಿತರಿಸತೊಡಗಿದರು. ಇದನ್ನು ನೋಡಿದ ಡಿ.ಕೆ. ಶಿವಕುಮಾರ್ ಅವರು, ಯಾವುದನ್ನೂ ಉಚಿತವಾಗಿ ಕೊಡಬಾರದು. ಉಚಿತವಾಗಿ ನೀಡಿದರೆ ಅದಕ್ಕೆ ಮೌಲ್ಯ ಕೊಡದಂತಾಗುತ್ತದೆ. ಹಾಗಾಗಿ ಪುಸ್ತಕಕ್ಕೆ ದರ ಫಿಕ್ಸ್ ಮಾಡಬೇಕಾಗುತ್ತದೆ ಎಂದು ಹೇಳಿ ವೇದಿಕೆ ಮೇಲಿದ್ದ ಉಗ್ರಪ್ಪ ಅವರಿಗೆ ಎಷ್ಟು ರೇಟ್ ಫಿಕ್ಸ್ ಮಾಡೋಣ ಎಂದು ಕೇಳಿದರು. ಅದಕ್ಕೆ ಕೆಲವರು 150, 100 ರು. ಫಿಕ್ಸ್ ಮಾಡಿ ಎಂದು ಹೇಳತೊಡಗಿದರು. ಕೊನೆಗೆ ಶಿವಕುಮಾರ್ ಅವರು, 100 ರು. ದರ ಫಿಕ್ಸ್ ಮಾಡುತ್ತೇನೆ. ಎಲ್ಲರೂ ದುಡ್ಡು ಕೊಟ್ಟು ಖರೀದಿಸಿ ಎಂದರು.
ಈ ಮಧ್ಯೆ ಮುಖಂಡರೊಬ್ಬರು ಪುಸ್ತಕದ ಮೇಲೆ ‘ನಾಟ್ ಫಾರ್ ಸೇಲ್’ ಎಂದು ಮುದ್ರಿತವಾಗಿದೆ ಎಂದು ತೋರಿಸಿದರು. ಅದಕ್ಕೆ ಬುಕ್ ಮೇಲೆ ‘ನಾಟ್ ಫಾರ್ ಸೇಲ್’ ಎಂದಿರಬಹುದು, ಆದರೆ ಪುಸ್ತಕ ಖರೀದಿಗೆ ನನಗೆ ದುಡ್ಡು ಕೊಡುವುದು ಬೇಡ. ಮಾರಾಟದಿಂದ ಬಂದ ಹಣ ಪಕ್ಷಕ್ಕೆ ಕೊಡಲಾಗುವುದು. ಪಕ್ಷ ಕಟ್ಟಬೇಕಲ್ಲ ಎಂದು ಹೇಳಿದರು. ಅಷ್ಟಕ್ಕೆ ಸುಮ್ಮನಾಗದೆ, ಹಿರಿಯ ಮುಖಂಡ ಮುಳುಗುಂದ ಅವರಿಗೆ ಫ್ರೀ ಆಗಿ ಪುಸ್ತಕ ಪಡೆದವರಿಂದ 100 ರು. ಪಡೆಯಬೇಕು. ಇಲ್ಲದಿದ್ದರೆ ನೀವು ಕೊಡಬೇಕಾಗುತ್ತದೆ ಎಂದಾಗ ಸಭೆಯಲ್ಲಿ ನಗು ತುಂಬಿಕೊಂಡಿತು.
‘ನೀರಿನ ಹೆಜ್ಜೆ’ ಡಿಕೆಶಿ ಮಿಡ್‌ನೈಡ್
ಆಪರೇಷನ್- ಸಿಎಂ ಹೇಳಿದ ಸತ್ಯ!
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಚಿಸಿರುವ ‘ನೀರಿನ ಹೆಜ್ಜೆ’ ಪುಸ್ತಕ ಅವರ ಮಿಡ್‌ನೈಟ್ ಆಪರೇಷನ್‌ನ ಫಲವಂತೆ. ಇದು ಪುಸ್ತಕ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ ಮಾತು. ಏನಪ್ಪಾ ಅದು ಮಿಡ್‌ನೈಟ್ ಆಪರೇಷನ್ ಅಂತೀರಾ? ಇಲ್ಲಿದೆ ನೋಡಿ.
ಡಿ.ಕೆ.ಶಿವಕುಮಾರ್ ಅವರ ‘ನೀರಿನ ಹೆಜ್ಜೆ’ ಪುಸ್ತಕ ಇತ್ತೀಚೆಗೆ ಬಿಡುಗಡೆ ಆಯಿತು. ಸರ್ಕಾರ, ಪಕ್ಷ ಎರಡೂ ಕಡೆ ಅಧಿಕಾರ, ಬಿಡುವಿಲ್ಲದ ರಾಜಕೀಯದ ಮಧ್ಯೆ ಡಿ.ಕೆ.ಶಿವಕುಮಾರ್ ಅವರು ಯಾವಾಗ ಪುಸ್ತಕ ಬರೆದಿರಬಹುದು ಎಂಬ ಪ್ರಶ್ನೆ ಬಹುತೇಕರಿಗೆ ಕಾಡಿರದೆ ಇರದು. ಈ ಪ್ರಶ್ನೆ ಪುಸ್ತಕ ಬಿಡುಗಡೆ ಮಾಡಿದ ಸಿದ್ದರಾಮಯ್ಯ ಅವರನ್ನೂ ಬಿಟ್ಟಿಲ್ಲ. ಅವರು ಕಾರ್ಯಕ್ರಮದಲ್ಲೇ ಈ ಪ್ರಶ್ನೆಗೆ ಉತ್ತರ ಹುಡುಕಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ ಅವರು, ನಾನು 12-13 ಬಾರಿ ಹಣಕಾಸು ಸಚಿವನಾಗಿ 16 ಬಜೆಟ್ ಮಂಡಿಸಿದ್ದೇನೆ. ಆದರೂ ಹಣಕಾಸಿನ ಬಗ್ಗೆ ಪುಸ್ತಕ ಬರೆಯಲಾಗಿಲ್ಲ. ಡಿ.ಕೆ.ಶಿವಕುಮಾರ್ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ, ಈಗ ನಮ್ಮ ಸರ್ಕಾರದಲ್ಲಿ ಎರಡೂವರೆ ವರ್ಷ ಜಲಸಂಪನ್ಮೂಲ ಸಚಿವರಾಗಿದ್ದಾರೆ. ಇಂತಹ ಪುಸ್ತಕ ಬರೆಯಲು ಸಾಕಷ್ಟು ಅಂಕಿ- ಅಂಶ, ಮಾಹಿತಿ ಸಂಗ್ರಹಿಸಬೇಕಾಗುತ್ತದೆ, ರಿಸರ್ಚ್ ಮಾಡಬೇಕಾಗುತ್ತೆ. ‘ಐ ಡೋಂಟ್ ನೋ, ನಿನಗೆ ಸಮಯ ಯಾವಾಗ ಸಿಕ್ತಪ್ಪ’ ಅಂತ ಡಿ.ಕೆ.ಶಿವಕುಮಾರ್ ಅವರ ಕಡೆ ತಿರುಗಿ ಪ್ರಶ್ನಿಸಿದರು.
ಆಗ ಸಮಾರಂಭದಲ್ಲಿದ್ದ ಕೆಲ ಸಭಿಕರು ಡಿ.ಕೆ.ಶಿವಕುಮಾರ್ ಅವರು ರಾತ್ರಿ ಎರಡು ಗಂಟೆ, ಮೂರು ಗಂಟೆವರೆಗೂ ಪುಸ್ತಕ ಓದುತ್ತಾರೆ ಅಂದರು. ಆಗ ಸಿದ್ದರಾಮಯ್ಯ ಅವರು ಇರಬಹುದು. ಡಿ.ಕೆ.ಶಿವಕುಮಾರ್ ರಾತ್ರಿ 12 ಗಂಟೆ ಮೇಲೆಯೇ ಕೆಲಸ ಮಾಡೋದು. ಜಲಸಂಪನ್ಮೂಲ ಸಚಿವರಾಗಿ ತಮ್ಮ ಅನುಭವದ ಜೊತೆಗೆ ಅಧ್ಯಯನ, ಅಂಕಿ- ಅಂಶ, ಮಾಹಿತಿ ಸಂಗ್ರಹಿಸಿ ಇಂತಹ ಪುಸ್ತಕ ಬರೆಯುವ ಕೆಲಸ ಮಾಡಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ಅಂತಾರಾಜ್ಯ, ಅಂತಾರಾಷ್ಟ್ರೀಯ ಜಲ ವಿವಾದಗಳು, ಒಪ್ಪಂದ, ನ್ಯಾಯಾಲಯಗಳ ತೀರ್ಪುಗಳನ್ನು ಇದರಲ್ಲಿ ದಾಖಲಿಸಿದ್ದಾರೆ. ಇಂತಹ ವಿಚಾರಗಳು ಜನರಿಗೆ ತಿಳಿಯಬೇಕು. ನಾನು ಪೂರ್ಣ ಪುಸ್ತಕ ಓದಿಲ್ಲ, ಮುಂದೆ ಓದುತ್ತೇನೆ. ನೀವೂ ಎಲ್ಲರು ಓದಿ. ಏನಾದರೂ ಅಭಿಪ್ರಾಯಗಳಿದ್ದರೆ ನನಗೆ ತಿಳಿಸಬೇಡಿ. ಡಿ.ಕೆ.ಶಿವಕುಮಾರ್ ಅವರಿಗೇ ತಿಳಿಸಿ, ಅಗತ್ಯ ಬಿದ್ದರೆ ಮುಂದೆ ನಿಮ್ಮ ಅಭಿಪ್ರಾಯಗಳನ್ನು ಸೇರಿಸುತ್ತಾರೆ. ಅವರು ಓಪನ್ ಮೈಂಡ್ ಪರ್ಸನ್ ಎಂದರು.
ಸೈಬರ್ ಅಪರಾಧ ಕುರಿತು
ಸಿನಿಮಾ ಮಾಡೋಣ ಸರ್
ನಟ ಉಪೇಂದ್ರ ಅವರಿಗೆ ರಿಯಲ್ ಪೊಲೀಸರು ಅಂದ್ರೆ, ರೀಲ್‌ನಲ್ಲಿ ತೋರಿಸುವಂತೆ ಲಾಠಿ ಹಿಡಿದು ವಿಲನ್‌ಗಳಿಗೆ ಹಿಗ್ಗಾಮುಗ್ಗಾ ಚಚ್ಚುವ ಆಕ್ಷನ್ ಹೀರೋಗಳು ಅಂದುಕೊಂಡಿದ್ದರಂತೆ. ಉಪೇಂದ್ರ ಪತ್ನಿ ಹಾಗೂ ನಟಿ ಪ್ರಿಯಾಂಕಾ ಅವರು ಸೈಬರ್ ವಂಚನೆಗೊಳಗಾಗಿದ್ದ ವಿಷಯ ಗೊತ್ತಲ್ಲ. ಈ ಪ್ರಕರಣದ ಆರೋಪಿ ಬಂಧನದ ದಿನ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಕಮೀಷನರ್ ಕಚೇರಿಗೆ ಉಪೇಂದ್ರ ಬಂದಿದ್ದರು. ಆಗ ಸಾಂಗ್ಲಿಯಾನ ಸಿನಿಮಾ ನೋಡಿ ಪೊಲೀಸರ ಕೆಲಸಗಳು ಗೊತ್ತಾಗಿದ್ದು. ನೀವು ಲಾಠಿ ಹಿಡಿದು ಬಾರಸಿಲ್ವಾ ಅಂದ್ರು. ಈ ಮಾತು ಕೇಳಿ ಕಮೀಷನರ್ ಆದಿಯಾಗಿ ಎಲ್ಲ ಅಧಿಕಾರಿಗಳು ಅರೆಕ್ಷಣ ಗಾಬರಿಯಾದರು. ಇಲ್ಲ ಇಲ್ಲ ಹಾಗೆಲ್ಲ ಮಾಡೋದಕ್ಕಾಗಲ್ಲ ಎಂದ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ಅವರು, ತಮ್ಮ ಮೊಬೈಲ್‌ನಲ್ಲಿ ಪೊಲೀಸರ ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು. ಪೊಲೀಸರ ಪೆರೇಡ್ ವಿಡಿಯೋ ನೋಡಿ ಬೆರಗಾದರು ಉಪೇಂದ್ರ. ನೀವು ಹೇಳಿ ಸರ್.. ಸೈಬರ್ ಕ್ರೈಂ ಬಗ್ಗೆ ಸಿನಿಮಾ ಮಾಡೋಣ. ಅಲ್ಲಿ ಇಲ್ಲಿ ಹೀಗೆ ಹಾಗೆ ಕ್ಯಾಮೆರಾ ಇಟ್ಟು ಶೂಟಿಂಗ್ ಮಾಡೋಣ ಅಂತಾ ತಮ್ಮ ಶೈಲಿಯಲ್ಲಿ ಉಪೇಂದ್ರ ಡೈಲಾಗ್ ಬಿಟ್ಟರು. ‘ಎ’ ನಟನ ಝಲಕ್‌ಗೆ ಕಮೀಷನರ್ ಚೇಂಬರ್‌ನಲ್ಲಿದ್ದವರು ನಗಾಡಿದರು.
ಮೊಟಕಾದ ಚುಟುಕು ಸಮ್ಮೇಳನ
ಬಹಳ ವರ್ಷಗಳ ನಂತರ ಚುಟುಕು ಸಾಹಿತ್ಯ ಸಮ್ಮೇಳನ ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ಇತ್ತೀಚೆಗೆ ನಡೆಯಿತು. ವಿಶೇಷ ಎಂದರೆ, ವೇದಿಕೆಯ ಮೇಲಿದ್ದವರ ಸಂಖ್ಯೆಯಷ್ಟು ವೇದಿಕೆಯ ಮುಂಭಾಗದಲ್ಲಿ ಇರಲಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಬರೋಬ್ಬರಿ 300 ಕ್ಕೂ ಹೆಚ್ಚು ಅತಿಥಿಗಳ, ಸನ್ಮಾನಿತರ ಹೆಸರನ್ನು ಅಚ್ಚು ಹಾಕಿಸಲಾಗಿತ್ತು. ಆದರೆ, ಬಹುತೇಕ ಗೋಷ್ಠಿಗಳ ಅತಿಥಿಗಳು ಸಹ ಬಂದಿರಲಿಲ್ಲ. ಹೋಗಲಿ ಸನ್ಮಾನಕ್ಕಾಗಿ ಬರಬೇಕಾದವರು ಬಂದಿರಲೇ ಇಲ್ಲ. ಆಹ್ವಾನ ಪತ್ರಿಕೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೂ ಕಾರ್ಯಕ್ರಮ ಎಂದು ಬೇರೆ ಹಾಕಿಸಲಾಗಿತ್ತು. ಆದರೆ, ಉದ್ಘಾಟನಾ ಸಮಾರಂಭ ಮುಗಿಯುತ್ತಿದ್ದಂತೆ ಕಾರ್ಯಕ್ರಮ ಆಲಿಸಲು ಕುಳಿತಿದ್ದ ಬೆರೆಳೆಣಿಕೆಯಷ್ಟು ಜನರೂ ಖಾಲಿಯಾದರು. ನಂತರ ಗೋಷ್ಠಿ ಪ್ರಾರಂಭಿಸುವುದಕ್ಕೆ ಯಾರೂ ಇರಲೇ ಇಲ್ಲ. ಹೀಗಾಗಿ ರಾತ್ರಿ ಹತ್ತು ಗಂಟೆಯವರೆಗೆ ನಡೆಯಬೇಕಾದ ಚುಟುಕು ಸಾಹಿತ್ಯ ಸಮ್ಮೇಳನ ಮೊಟಕು ಗೊಳಿಸಲಾಯಿತು. ಇದು ಚುಟುಕು ಸಾಹಿತ್ಯ ಸಮ್ಮೇಳನವಲ್ಲ, ಮೊಟಕು ಸಮ್ಮೇಳನ ಎಂದು ಅಲ್ಲಿದ್ದ ಕೆಲವೇ ಕೆಲವರು ನಗಾಡಿದ್ದೇ ನಗಾಡಿದ್ದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ