'ಯಾರೋ ಒಬ್ಬರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ' ಡಿಕೆಶಿಗೆ ಸತೀಶ್ ಜಾರಕಿಹೊಳಿ ಟಾಂಗ್

Kannadaprabha News, Ravi Janekal |   | Kannada Prabha
Published : Nov 24, 2025, 06:03 AM IST
satish jarkiholi on dk shivakumar

ಸಾರಾಂಶ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು, ಸಿಎಂ ಹುದ್ದೆಯ ಆಕಾಂಕ್ಷಿಯಾಗಿರುವ ಪರಮೇಶ್ವರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಪಕ್ಷದ ಗೆಲುವು ಕೆಲವರಿಂದಲ್ಲ, ಎಲ್ಲರ ಸಾಮೂಹಿಕ ಪ್ರಯತ್ನದಿಂದ ಆಗಿದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಬೆಳಗಾವಿ (ನ.24): ‘ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ’ ಎಂದು ಪರಮೇಶ್ವರ್‌ ಅವರು ಮುಂಚೆಯೂ ಹೇಳಿದ್ದರು. ಈಗಲೂ ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ?’ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿಯವರು ಗೃಹ ಸಚಿವ ಪರಮೇಶ್ವರ್ ಪರ ಬ್ಯಾಟಿಂಗ್‌ ಮಾಡಿದ್ದಾರೆ. ಅಲ್ಲದೆ, ‘ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ತಪ್ಪು’ ಎನ್ನುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಟಾಂಗ್‌ ನೀಡಿದ್ದಾರೆ.

ಸಿಎಂ ರೇಸ್‌ನಲ್ಲಿ ತಾವು ಇದ್ದೀರಾ? ಜಾರಕಿಹೊಳಿ ಪ್ರತಿಕ್ರಿಯೆ ಹೀಗಿದೆ:

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ನಾನೂ ಕೂಡ ಸಿಎಂ ಹುದ್ದೆಯ ಆಕಾಂಕ್ಷಿ’ ಎಂಬ ಪರಮೇಶ್ವರ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಪರಮೇಶ್ವರ್‌ ಅವರು 7 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಅವರು ಬಹಳಷ್ಟು ಕಾರ್ಯಕ್ರಮ‌ ಮಾಡಿದ್ದರಿಂದ ನಮ್ಮ‌ ಸರ್ಕಾರ ಅಧಿಕಾರಕ್ಕೆ ಬಂತು. ಹೀಗಾಗಿ, ಅವರು ಸಿಎಂ ಹುದ್ದೆ ಅಪೇಕ್ಷಿಸುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು. ಸಿಎಂ ರೇಸ್‌ನಲ್ಲಿ ತಾವು ಇದ್ದಿರಾ ಎಂಬ ಪ್ರಶ್ನೆಗೆ, ಅದನ್ನು ಕೇಳಲು ಹೋಗಬೇಡಿ. ಹೇಳುವ ಅವಶ್ಯಕತೆಯೂ‌ ಈಗಿಲ್ಲ ಎಂದರು.

ಕೆಲವೇ ಜನರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ:

ಇದೇ ವೇಳೆ, ಡಿಕೆಶಿಗೆ ಟಾಂಗ್‌ ನೀಡಿದ ಜಾರಕಿಹೊಳಿ, ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿದಿದ್ದಾರೆ. ರಾಜ್ಯದ ಜನ ಮತ ಹಾಕಿದ್ದರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ನಮಗೆ ಇತಿ ಮಿತಿ ಇರಬೇಕು. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ತಪ್ಪು. ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಅದರ ಶ್ರೇಯಸ್ಸನ್ನು ಕೆಲವೇ ಜನರು ತೆಗೆದುಕೊಳ್ಳುವುದನ್ನು ನಾನು ಒಪ್ಪುವುದಿಲ್ಲ. ಸ್ವಾಭಾವಿಕವಾಗಿ ಎಲ್ಲರೂ ಹಕ್ಕು ಮಂಡಿಸುತ್ತಾರೆ. ಎಲ್ಲರಿಗೂ ಅಧಿಕಾರ ಸಿಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

1960ರಲ್ಲಿ ತೇನ್ ಸಿಂಗ್ ಹಿಮಾಲಯ ಪರ್ವತ ಏರಿದಾಗ ಜಗತ್ತಿನ ಎಲ್ಲಾ ಪತ್ರಿಕೆಗಳು ತೇನ್‌ಸಿಂಗ್ ಹಿಮಾಲಯ ಏರಿದರು ಎಂದು ಬರೆದರು. ಅವರ ಜೊತೆಗೆ ಇನ್ನೂ 14 ಜನರಿದ್ದರು. ಆದರೆ, ಅವರ ಹೆಸರು ಬರಲಿಲ್ಲ. ಇದು ಹಾಗೆಯೇ ಆಗಿದೆ ಎಂದು ಹೇಳಿದರು.

ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರ ‘ನವೆಂಬರ್ ಕ್ರಾಂತಿ’ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾವುದೇ ಕ್ರಾಂತಿ ಉದ್ಭವ ಆಗುವುದಿಲ್ಲ.‌ ಯಥಾಸ್ಥಿತಿ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿದರು.

ಡಿ.ಕೆ.ಶಿವಕುಮಾರ್‌ ಅವರು ಜೈಲಿಗೆ ಹೋಗಿ ಶಾಸಕರನ್ನು ಭೇಟಿಯಾದ ಕುರಿತು ಮಾತನಾಡಿ, ಅವರು ನಮ್ಮ ಪಕ್ಷದ ಶಾಸಕರು. ಹಾಗಾಗಿ, ಭೇಟಿಯಾಗಿ ಬಂದಿದ್ದಾರೆ. ಹಿಂದೆಯೂ ಒಂದು ಬಾರಿ ಭೇಟಿಯಾಗಿದ್ದರು. ಇದರಲ್ಲಿ ಅಂಡರ್ ಕರೆಂಟ್ ಶಾಕ್ ಏನಿಲ್ಲ. ಎಲ್ಲವೂ ಸರಿ ಇದೆ. ಎಲ್ಲವನ್ನು ರಾಷ್ಟ್ರೀಯ ಅಧ್ಯಕ್ಷರೇ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಎರಡೂವರೆ ವರ್ಷ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಏನೇ ಮಾತುಕತೆ ಆಗಿದ್ದರೂ ಅದು ದೆಹಲಿಯಲ್ಲಿ ಆಗಿರುತ್ತದೆ. ದೆಹಲಿಗೆ ಹೋಗುವ ಅವಶ್ಯಕತೆ ನನಗೆ ಇಲ್ಲ. ಹೈಕಮಾಂಡ್‌ ನಾಯಕರು ಯಾರಾದರೂ ಕರೆದರೆ ಹೋಗುತ್ತೇನೆ. ಇಲ್ಲದಿದ್ದರೆ ಇಲ್ಲ.

- ಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!