ಪವಿತ್ರಾ ಗೌಡಗೆ ಮತ್ತೊಂದು ಶಾಕ್; ಟ್ರಯಲ್‌ ಕೋರ್ಟ್‌ ಆದೇಶ ರದ್ದು ಮಾಡಿದ ಹೈಕೋರ್ಟ್‌

Published : Mar 05, 2026, 07:25 AM IST
Pavithra Gowda

ಸಾರಾಂಶ

ಅಧೀನ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ. ವೈದ್ಯಕೀಯ ವರದಿ ಇಲ್ಲದೆ ಮನೆ ಊಟಕ್ಕೆ ಅನುಮತಿಸಲಾಗದು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಜೈಲಿನ ಆಹಾರದ ಗುಣಮಟ್ಟ ಪರಿಶೀಲನೆ ಮತ್ತು ಪಾರದರ್ಶಕತೆಗೆ ಸರ್ಕಾರಕ್ಕೆ ಹಲವು ನಿರ್ದೇಶನ ನೀಡಿದೆ.

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜೈಲಿನಲ್ಲಿರುವ ಆರೋಪಿಗಳಾದ ಪವಿತ್ರಾ ಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್‌ಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿಸಿ ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಬುಧವಾರ ರದ್ದುಪಡಿಸಿದೆ.

ಬೆಂಗಳೂರಿನ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ 2026ರ ಜ.12ರ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ (ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು) ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಕಾನೂನು ಅನ್ವಯ ಕೈದಿಗಳಿಗೆ ಸ್ವಾತಂತ್ರ್ಯವಿಲ್ಲದಿದ್ದರೂ ಮೂಲಸೌಕರ್ಯಗಳಿಗೆ ಅರ್ಹರಾಗಿರುತ್ತಾರೆ. ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ನೀಡಲು ನಿಷೇಧವಿಲ್ಲ. ಆದರೆ, ಜೈಲು ನಿಯಮಗಳು ಮತ್ತು ಪ್ರಕ್ರಿಯೆ ಅನುಸಾರ ಮನೆ ಊಟ ಪೂರೈಸಬಹುದಾಗಿದೆ. ಅದಕ್ಕೆ ವೈದ್ಯಕೀಯ ವರದಿ ಅತ್ಯಗತ್ಯ. ಕೇವಲ ಕೋರಿಕೆ ಮೂಲಕ ಮನೆ ಊಟ ತರಿಸಿಕೊಳ್ಳಲು ಅನುಮತಿಸಲಾಗದು ಎಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಆದೇಶದಲ್ಲಿ ಏನಿದೆ?

ಅಲ್ಲದೇ, ವೈದ್ಯಕೀಯ ಪರಿಶೀಲನೆ ಅಥವಾ ಶಿಫಾರಸು ಆಧರಿಸದೆ ಮನೆ ಊಟ ಪಡೆಯಲು ವಿಚಾರಣಾಧೀನ ನ್ಯಾಯಾಲಯ ಅನುಮತಿಸಿರುವ ಆದೇಶ ಮಾನ್ಯವಾಗುವುದಿಲ್ಲ. ತಾರತಮ್ಯದಿಂದ ಕೂಡಿದ ಇಂತಹ ವಿನಾಯಿತಿಯನ್ನು ನೀಡುವುದರಿಂದ ಜೈಲು ನಿರ್ವಹಣೆಯಲ್ಲಿ ಗೊಂದಲಕ್ಕೆ ನಾಂದಿಯಾಗಲಿದ್ದು, ಇತರೆ ಕೈದಿಗಳೂ ಇದೇ ವಿನಾಯಿತಿಗೆ ಅರ್ಹರಾಗುತ್ತಾರೆ. ಅಧೀನ ನ್ಯಾಯಾಲಯ ಆದೇಶವನ್ನು ರದ್ದುಪಡಿಸಿದರೂ ಅರ್ಜಿದಾರರು ಪೂರಕ ವೈದ್ಯಕೀಯ ದಾಖಲೆಗಳನ್ನು ಇಟ್ಟುಕೊಂಡು ಜೈಲು ನಿಯಮಗಳ ಅನ್ವಯ ಮನೆ ಊಟ ಪೂರೈಕೆಗೆ ಮನವಿ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ ಎಂದು ಪೀಠ ಆದೇಶದಲ್ಲಿ ನುಡಿದಿದೆ.

ಆಹಾರದ ಗುಣಮಟ್ಟ ಪರಿಶೀಲಿಸಬೇಕು

ಜೈಲಿನಲ್ಲಿ ವಿತರಿಸಲಾಗುವ ಊಟದ ಲಭ್ಯತೆ ಮತ್ತು ಗುಣಮಟ್ಟ ಬಹಳ ಕಾಳಜಿಯ ವಿಚಾರವಾಗಿದೆ. ಜೈಲಿನ ಕೈದಿಗಳ ಪ್ರತಿನಿತ್ಯ ನಾಲ್ಕು ಸಮಯದಲ್ಲಿ ಊಟಕ್ಕೆ 125 ರು. ನಿಗದಿಪಡಿಸಲಾಗಿದೆ. ಇದು ಪೌಷ್ಠಿಕಾಂಶಯುಕ್ತ ಆಹಾರದ ಬಗೆಗಿನ ಮಹತ್ವದ ಪ್ರಶ್ನೆ ಮೂಡಲು ಕಾರಣವಾಗಿದೆ. ಕೈದಿಗಳ ಹಕ್ಕುಗಳನ್ನು ರಕ್ಷಿಸುವ ದೃಷ್ಟಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕಾಣುವಂತೆ ಕೈದಿಗಳ ಆಹಾರದ ಪಟ್ಟಿಯನ್ನು ಡಿಜಿಟಲ್‌ ರೂಪದಲ್ಲಿ ಪ್ರಕಟಿಸಬೇಕು. 

ಇದನ್ನೂ ಓದಿ: Bengaluru: ಬಾಡಿಗೆ ಮನೆ ಹಣಕ್ಕಾಗಿ ಕಾಲಲ್ಲಿ ತುಳಿದು ಸೋದರಮಾವನ ಕೊಲೆಗೈದ ಯುವಕನ ಬಂಧನ

ಆಹಾರದ ಬಗ್ಗೆ ಅಹವಾಲು/ದೂರು ದಾಖಲಿಸಲು ವ್ಯವಸ್ಥೆ ಇಲ್ಲದಿದ್ದರೆ, ಅದನ್ನು ಜಾರಿಗೊಳಿಸಬೇಕು. ಕೈದಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟದ ಕುರಿತು ಮೇಲಿಂದ ಮೇಲೆ ನಿಗದಿತ ವೈದ್ಯಾಧಿಕಾರಿಯು ಪರಿಶೀಲನೆ ನಡೆಸಿ ದಾಖಲೆ ಸಲ್ಲಿಸಬೇಕು. ಈ ನಿರ್ದೇಶನಗಳನ್ನು ಅನುಪಾಲನೆ ಸಂಬಂಧ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: ಕಟಾಂಜನದ ಒಳಗಿರೋ ದರ್ಶನ್ ಸ್ಥಿತಿಗೆ ದೇವರೇ ಗತಿ; ಟಿವಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಎಂದ ನಟನಿಗೆ ನ್ಯಾಯಾಧೀಶರ ಕೌಂಟರ್ ಏನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದಾಪುರ ಠಾಣೆಯಲ್ಲಿ 7 ಕೋಟಿ: ಪೊಲೀಸರಿಗೆ ನಿದ್ದೆಯಿಲ್ಲದ ರಾತ್ರಿ!
Karnataka News Live: ಪವಿತ್ರಾ ಗೌಡಗೆ ಮತ್ತೊಂದು ಶಾಕ್; ಟ್ರಯಲ್‌ ಕೋರ್ಟ್‌ ಆದೇಶ ರದ್ದು ಮಾಡಿದ ಹೈಕೋರ್ಟ್‌