
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿ 7 ಜನ ಆರೋಪಿಗಳ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ ಇದರ ಬೆನ್ನಲ್ಲೇ ದರ್ಶನ್ ತಮಿಳುನಾಡಿನಲ್ಲಿರುವ ವಿಚಾರ ಬೆಳಕಿಗೆ ಬಂದಿದೆ. ಆಗಸ್ಟ್ 13ರಂದು ರಾತ್ರಿ ತಮ್ಮ ಮೈಸೂರಿನ ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿಯಲ್ಲಿರುವ ಫಾರಂ ಹೌಸ್ ಗೆ ಬಂದಿದ್ದ ನಟ ದರ್ಶನ್ ಬಳಿಕ ರಾತ್ರೋ ರಾತ್ರಿ ತಮಿಳುನಾಡು ಕಡೆ ಪಯಣ ಬೆಳೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ದೇವಾಲಯವೊಂದರ ದರ್ಶನಕ್ಕೆ ನಟ ತೆರಳಿರುವುದಾಗಿ ತಿಳಿದುಬಂದಿದೆ.
ಸುಪ್ರೀಂ ಕೋರ್ಟ್ ತಕ್ಷಣವೇ ದರ್ಶನ್ ಮತ್ತು ಪವಿತ್ರಾ ಗೌಡ ನನ್ನು ಬಂಧಿಸಲು ಆದೇಶಿಸಿದ್ದು, ಈ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿರುವ ದರ್ಶನ್ ಜಾಗವನ್ನು ಪೊಲೀಸರು ಪತ್ತೆ ಮಾಡಿದ್ದಾರಂತೆ. ಹೀಗಾಗಿ ಸ್ಥಳೀಯ ಪೊಲೀಸರ ನೆರವು ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಜಾಮೀನು ಸಿಗುವ ಸಮಯದಲ್ಲಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದ ಕಾರಣ ಮತ್ತೆ ಬಳ್ಳಾರಿ ಜೈಲಿಗೆ ಹೋಗಬೇಕಾಗಿದೆ.
ನಿನ್ನೆ ವಿನೀಶ್ ದರ್ಶನ್ ಫಾರಂ ಹೌಸ್ ನಲ್ಲಿ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಅಲ್ಲಿಂದ ತಮಿಳುನಾಡಿಗೆ ಹೋಗಿದ್ದು, ಮಲೇಮಹದೇಶ್ವರ ಬೆಟ್ಟದ ಸಮೀಪ ಮೈಸೂರು ಕಡೆಗೆ ವಾಪಸ್ ಆಗುತ್ತಿದ್ದಾರೆ ಎನ್ನಲಾಗಿತ್ತು. ಇನ್ನೊಂದೆಡೆ ಹಾಸನ ಅಥವಾ ಕೊಡಗು ಭಾಗದ ರೆಸಾರ್ಟ್ ನಲ್ಲಿ ದರ್ಶನ್ ಇರುವ ಬಗ್ಗೆ ಅನುಮಾನ ಇತ್ತು. ಪೊಲೀಸರು ಎಲ್ಲಾ ಭಾಗದ ರೆಸಾರ್ಟ್ ಅನ್ನು ವಿಚಾರಿಸಿದ್ದು, ದರ್ಶನ್ ಎಲ್ಲೂ ಇರುವ ಬಗ್ಗೆ ಮಾಹಿತಿ ಇಲ್ಲ.
ನಟ ದರ್ಶನ್ ಜಾಮೀನು ರದ್ದಾದ ಹಿನ್ನಲೆಯಲ್ಲಿ, ಅವರ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ತೀವ್ರ ಆತಂಕದಲ್ಲಿ ಸಮಯ ಕಳೆಯುತ್ತಿದ್ದಾರೆ. ಹೊಸಕೆರೆಹಳ್ಳಿಯಲ್ಲಿರುವ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿರುವ ವಿಜಯಲಕ್ಷ್ಮಿ, ಬೆಳಗ್ಗೆಯಿಂದಲೇ ಮನೆಯಿಂದ ಹೊರಬರಲಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಹೊರಬಂದ ತಕ್ಷಣವೇ ಮನೆಯಲ್ಲೇ ಉಳಿದ ವಿಜಯಲಕ್ಷ್ಮಿ, ಜಾಮೀನು ರದ್ದಾದ ವಿಚಾರ ತಿಳಿದು ಬೇಸರಗೊಂಡಿದ್ದಾರೆ. ತೀರ್ಪಿನ ಪರಿಣಾಮದಿಂದಾಗಿ ಟೆನ್ಷನ್‌ನಲ್ಲಿರುವುದು ಸ್ಪಷ್ಟವಾಗಿದೆ.
ಇನ್ನು ಪವಿತ್ರಾ ಗೌಡ ಕೂಡ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ದೇಗುಲದಲ್ಲಿರುವಾಗಲೇ ಪವಿತ್ರಾಗೆ ಬೇಲ್ ರದ್ದಾದ ಸುದ್ದಿ ಬಂದಿದ್ದು, ಪೋನ್ ಮೂಲಕ ವಕೀಲರಿಂದ ಮಾಹಿತಿ ಪಡೆದುಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ