ರಾಜ್ಯದಲ್ಲಿ ಇನ್ನು ಮುಂದೆ ಖಾಸಗಿ ಶಾಲೆಗಳ ಮೊದಲ ಮಾನ್ಯತೆಯನ್ನು 10 ವರ್ಷಗಳ ಅವಧಿಗೆ ಅನ್ವಯಿಸಿ ನವೀಕರಿಸಲು ಹಾಗೂ ನಂತರ ನಿಬಂಧನೆಗಳನ್ನು ಅನುಸರಿಸಿ ಶಾಶ್ವತ ಮಾನ್ಯತೆ ನೀಡಲು ಅವಕಾಶ ಕಲ್ಪಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಬೆಂಗಳೂರು (ಆ.28): ರಾಜ್ಯದಲ್ಲಿ ಇನ್ನು ಮುಂದೆ ಖಾಸಗಿ ಶಾಲೆಗಳ ಮೊದಲ ಮಾನ್ಯತೆಯನ್ನು 10 ವರ್ಷಗಳ ಅವಧಿಗೆ ಅನ್ವಯಿಸಿ ನವೀಕರಿಸಲು ಹಾಗೂ ನಂತರ ನಿಬಂಧನೆಗಳನ್ನು ಅನುಸರಿಸಿ ಶಾಶ್ವತ ಮಾನ್ಯತೆ ನೀಡಲು ಅವಕಾಶ ಕಲ್ಪಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗ ರಾಜ್ಯದಲ್ಲಿ ಆರ್‌ಟಿಇ ಕಾಯ್ದೆ ಜಾರಿಗೂ ಮುನ್ನ ಇದ್ದಂತೆ ಮಾನ್ಯತೆ ನವೀಕರಣ ಮತ್ತು ಶಾಶ್ವತ ನವೀಕರಣಕ್ಕೆ ಅವಕಾಶ ನೀಡಬೇಕೆಂಬ ಖಾಸಗಿ ಶಾಲೆಗಳ ಒತ್ತಾಯಕ್ಕೆ ಸರ್ಕಾರ ಕೊನೆಗೂ ಮಣಿದಂತಾಗಿದೆ.
ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಾವಳಿಗಳಿಗೆ ಸರ್ಕಾರ ತಿದ್ದುಪಡಿ ಮಾಡಿದ್ದು, ರಾಜ್ಯದಲ್ಲಿ ಯಾವುದೇ ಖಾಸಗಿ ಶಾಲೆ ಆರಂಭಿಸಲು ನಿಯಮಾನುಸಾರ ಮೊದಲ ವರ್ಷ ಅನುಮತಿ ನೀಡಲಾಗುವುದು. ನಂತರ ನಿಬಂಧನೆಗಳನ್ನು ಅನುಸರಿಸಿ 10 ವರ್ಷಗಳಿಗೆ ಮಾನ್ಯತೆ ನವೀಕರಿಸುವುದು, ಬಳಿಕ ಶಾಶ್ವತ ಮಾನ್ಯತೆ ನೀಡಲು ಅವಕಾಶ ಮಾಡಿಕೊಟ್ಟಿದೆ.
ಈ ಹಿಂದೆ ಖಾಸಗಿ ಶಾಲೆ ಆರಂಭವಾದ ಒಂದು ವರ್ಷದ ನಂತರ 15 ವರ್ಷಗಳಿಗೆ ಅನ್ವಯಿಸಿ ಮಾನ್ಯತೆ ನವೀಕರಣ, ಬಳಿಕ ಶಾಶ್ವತ ನವೀಕರಣ ನೀಡಲು ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಅವಕಾಶವಿತ್ತು. ಕೇಂದ್ರ ಸರ್ಕಾರದ ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ರಾಜ್ಯದಲ್ಲಿ ಜಾರಿಗೊಳಿಸಿದ ಬಳಿಕ 2018ರಲ್ಲಿ ಮಾನ್ಯತೆ ನವೀಕರಣ ಅವಧಿಯನ್ನು 5 ವರ್ಷಗಳಿಗೆ ಇಳಿಸಿ, ಶಾಶ್ವತ ನವೀಕರಣದ ಅವಕಾಶವನ್ನು ರದ್ದುಪಡಿಸಲಾಗಿತ್ತು. ಪರಿಣಾಮ ಸಾಕಷ್ಟು ಖಾಸಗಿ ಶಾಲೆಗಳ ಶಾಶ್ವತ ಮಾನ್ಯತೆ ರದ್ದಾಗಿ ಪ್ರತೀ ವರ್ಷ ಮಾನ್ಯತೆ ನವೀಕರಿಸಿಕೊಳ್ಳಬೇಕಾಗಿ ಬಂತು.
ಪರಪ್ಪನ ಅಗ್ರಹಾರ ಜೈಲಲ್ಲಿ ಆತಿಥ್ಯ: ದರ್ಶನ್ ವಿಚಾರಣೆಗೆ ಕೋರ್ಟ್ ಅನುಮತಿ
ಅಂದಿನಿಂದಲೂ ಖಾಸಗಿ ಶಾಲೆಗಳು ಇದನ್ನು ವಿರೋಧಿಸುತ್ತಲೇ ಬಂದಿದ್ದವು. ಕೆಲ ಖಾಸಗಿ ಶಾಲಾ ಸಂಘಟನೆಗಳು ಸರ್ಕಾರದ ಈ ಕ್ರಮದ ವಿರುದ್ಧ ನ್ಯಾಯಾಲಯಗಳ ಮೆಟ್ಟಿಲೇರಿದ್ದು ಅರ್ಜಿಗಳು ವಿಚಾರಣೆ ಹಂತದಲ್ಲಿವೆ. ಈಗ ಇದೆಲ್ಲದಕ್ಕೂ ಪರಿಹಾರ ಸಿಕ್ಕಂತಾಗಿದೆ.