
ಬೆಂಗಳೂರು (ಡಿ.21): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ನರೇಗಾ) ಯೋಜನೆ ಹೆಸರು ಬದಲು ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ‘ಸತ್ಯಮೇವ ಜಯತೆ’ ಘೋಷವಾಕ್ಯದಡಿ ಶನಿವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಯುಪಿಎ ಅವಧಿಯಲ್ಲಿ ಜಾರಿಗೆ ತಂದ ನರೇಗಾ ಯೋಜನೆ ಹೆಸರು ಬದಲಾವಣೆ ಮಾಡುವ ಮೂಲಕ ಕೇಂದ್ರ ಸರ್ಕಾರ ಮಹಾತ್ಮ ಗಾಂಧೀಜಿ ಅವರಿಗೆ ಅಪಮಾನ ಮಾಡುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರವು ಜಾರಿ ನಿರ್ದೇಶನಾಲಯ(ಇ.ಡಿ.) ಬಳಸಿಕೊಂಡು ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿದೆ ಎಂದು ಮುಖಂಡರು ಆರೋಪಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ನಾಥೂರಾಮ್ ಗೋಡ್ಸೆ ಪಕ್ಷದವರು ತೆಗೆಯಲು ಮುಂದಾಗಿದ್ದಾರೆ. ಗಾಂಧಿ ಭಾರತವನ್ನು ಗೋಡ್ಸೆ ಭಾರತವನ್ನಾಗಿ ಮಾಡಲು ಕಾಂಗ್ರೆಸಿಗರು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಐತಿಹಾಸಿಕ ನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದರು. ಈಗ ಬಿಜೆಪಿಯವರು ಗಾಂಧೀಜಿಯವರ ಹೆಸರನ್ನು ತೆಗೆಯುತ್ತಿದ್ದಾರೆ. ಬಿಜೆಪಿಯವರಿಗೆ ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ ಎಂದು ಐನೂರರ ನೋಟು ಪ್ರದರ್ಶಿಸಿ ಸವಾಲು ಹಾಕಿದರು.
ನರೇಗಾ ಯೋಜನೆಯಿಂದ ಗಾಂಧೀಜಿ ಹೆಸರನ್ನು ತೆಗೆಯುವ ಮೂಲಕ ಮತ್ತೊಮ್ಮೆ ಅವರನ್ನು ಕೊಲ್ಲುತ್ತಿದ್ದೀರಿ. ಬಡವರಿಗೆ ಉದ್ಯೋಗ ನೀಡುವ ಯೋಜನೆಯಿಂದ ಅವರ ಹೆಸರನ್ನು ತೆಗೆಯುವ ನೀವು ದೇಶದ್ರೋಹಿಗಳು. ಗಾಂಧೀಜಿಗೆ ಅಪಮಾನ ಮಾಡಿದ ಬಿಜೆಪಿಯವರು ಗಾಂಧಿ ಪ್ರತಿಮೆ ಮುಂದೆ ನಿಂತು ಹೋರಾಟ ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಇನ್ನು ಮುಂದೆ ಬಿಜೆಪಿ ನಾಯಕರು ಹಾಗೂ ಶಾಸಕರು ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಬಾರದು ಎಂದು ಸವಾಲು ಹಾಕಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕಾಂಗ್ರೆಸ್ ಪಕ್ಷದ ಆಸ್ತಿಯಾಗಿದೆ. ಆದರೆ ದ್ವೇಷವೇ ಬಿಜೆಪಿ ಆಸ್ತಿಯಾಗಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದು ಪಕ್ಷದ ಆಸ್ತಿಯಲ್ಲಿ ನಾನೂ ಸಹ ಟ್ರಸ್ಟಿಯಾಗಿದ್ದೇನೆ. ಹೈಕಮಾಂಡ್ ನೀನು ಇಲ್ಲ ಎಂದರೆ ಮುಂದೆ ಯಾರು ಬರುತ್ತಾರೋ ಅವರು ಆಸ್ತಿಯ ಟ್ರಸ್ಟಿ ಆಗಿರುತ್ತಾರೆ. ಅದೇ ರೀತಿ ರಾಷ್ಟ್ರ ಮಟ್ಟದಲ್ಲಿ ಸೋನಿಯಾ ಗಾಂಧಿ ಟ್ರಸ್ಟಿ ಆಗಿದ್ದರು. ಆದರೆ ಇಡಿ ಬಳಸಿಕೊಂಡು ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸತ್ಯಕ್ಕೆ ಜಯ:
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನನಗೂ ನೋಟಿಸ್ ನೀಡಲಾಗಿದೆ. 28ನೇ ತಾರೀಖಿನಂದು ದೆಹಲಿಗೆ ತೆರಳುತ್ತಿದ್ದು, ಈ ಪ್ರಕರಣವನ್ನು ಎದುರಿಸುತ್ತೇನೆ. ನಾನು, ನನ್ನ ಸಹೋದರ ಡಿ.ಕೆ.ಸುರೇಶ್, ಶಾಮನೂರು ಶಿವಶಂಕರಪ್ಪ ಅವರ ಸಂಬಂಧಿ ಸಹ ಹಣ ನೀಡಿದ್ದೇವೆ. ಸತ್ಯಕ್ಕೆ ಯಾವಾಗಲೂ ಜಯವಾಗಲಿದೆ ಎಂದು ತಿಳಿಸಿದರು.
ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ, ಮಾಜಿ ಸಚಿವರಾದ ಬಿ.ಎಲ್.ಶಂಕರ್, ರಾಣಿ ಸತೀಶ್, ಮೋಟಮ್ಮ, ಎಚ್.ಎಂ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಜೆ.ಸಿ.ಚಂದ್ರಶೇಖರ್, ಶಾಸಕರಾದ ಬಿ.ಕೆ.ಹರಿಪ್ರಸಾದ್, ಅಶೋಕ್ ಮನಗೂಳಿ, ಪ್ರದೀಪ್ ಈಶ್ವರ್ ಉಪಸ್ಥಿತರಿದ್ದರು.
ನಮ್ಮದೇ ಜಯ
ಸತ್ಯಕ್ಕೆ ಯಾವಾಗಲೂ ಜಯವಾಗಲಿದೆ. ಇದು ಗಾಂಧಿ ದೇಶ, ಗೋಡ್ಸೆ ದೇಶವಲ್ಲ. ಬಿಜೆಪಿಯವರ ಆಟ ಬಹಳ ದಿನ ನಡೆಯುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಯ ನಮ್ಮದಾಗಲಿದೆ.
-ಬಿ.ವಿ.ಶ್ರೀನಿವಾಸ್, ಎಐಸಿಸಿ ಕಾರ್ಯದರ್ಶಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ