
ಬೆಳಗಾವಿ (ಡಿ.21): 45 ವರ್ಷ ಸತತ ಕರ್ನಾಟಕ ವಿಧಾನಪರಿಷತ್ತಿನ ಸದಸ್ಯರಾಗಿ ವಿಶ್ವದಾಖಲೆ ಬರೆದ ಸಭಾಪತಿ ಬಸವರಾಜ ಹೊರಟ್ಟಿ ಅವರು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ, ನಿರಂತರ 11.10 ಗಂಟೆ ಸದನ ನಡೆಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಬೆಳಗ್ಗೆ 10.15ಕ್ಕೆ ಸದನ ಆರಂಭಿಸಿದ ಸಭಾಪತಿ ಹೊರಟ್ಟಿ, ರಾತ್ರಿ 11 ಗಂಟೆಗೆ ಸದನವನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಿದರು. ಈ ಮಧ್ಯೆ, ಮಧ್ಯಾಹ್ನ ಊಟಕ್ಕೆ 1 ಗಂಟೆ ಬಿಡುವು, ಒಮ್ಮೆ 10 ನಿಮಿಷ ವಿಶ್ರಾಂತಿ ಮಾಡಿದ್ದು ಬಿಟ್ಟರೆ, ಉಳಿದ ಸುದೀರ್ಘ ಅವಧಿ ಸಭಾಪತಿ ಸ್ಥಾನದಲ್ಲಿ ಕುಳಿತು ಸದನ ನಡೆಸಿದ್ದು ಹೊಸ ದಾಖಲೆಯಾಗಿದೆ.
ಈ ಹಿಂದೆ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಚರ್ಚೆ ಮೇಲ್ಮನೆಯಲ್ಲಿ ನಡೆದಾಗ ಸತತ 7 ಗಂಟೆ ಹೊರಟ್ಟಿ ಸದನ ಸಡೆಸಿದ್ದರು.
ಇದೇ ಅಧಿವೇಶನದ ಎರಡನೇ ವಾರದ ಬುಧವಾರ ಕೆಲವು ವಿಧೇಯಕಗಳು ಮಂಡನೆಯಾದಾಗಲೂ ಸತತ 6.30 ಗಂಟೆಗಳ ಕಾಲ ಸದನ ನಡೆಸಿದ್ದಾರೆ.
ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಸುಮಾರು 7 ಗಂಟೆಗಳ ಕಾಲ ಮೇಲ್ಮನೆಯಲ್ಲಿ ಇದ್ದು, ಸರ್ಕಾರದ ಪರವಾಗಿ ಸದನಕ್ಕೆ ಉತ್ತರಿಸಿದರು. ಹಲವು ವಿಷಯಗಳ ಚರ್ಚೆಯಲ್ಲಿ ಭಾಗವಹಿಸಿದ್ದರು. ಏಕಕಾಲಕ್ಕೆ ಸಭಾಪತಿ ಮತ್ತು ಮುಖ್ಯಮಂತ್ರಿಯವರು ಸುದೀರ್ಘ ಅವಧಿಗೆ ಮೇಲ್ಮನೆಯ ಕಲಾಪದಲ್ಲಿ ಭಾಗಿಯಾಗಿದ್ದು ಕೂಡ ಹೊಸ ದಾಖಲೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ