
ಮಂಗಳೂರು: ಮೃತಪಟ್ಟ ಮಹಿಳೆಯರ ಖಾತೆಗೂ ಜಮೆ ಆಗಿದ್ದ ಗೃಹಲಕ್ಷ್ಮಿ ಹಣವನ್ನು ಸರ್ಕಾರ ವಸೂಲು ಮಾಡುತ್ತಿದೆ. ಇಂತಹ ಖಾತೆಗಳಿಗೆ ವರ್ಗವಾಗಿದ್ದ 117 ಕೋಟಿ ರು. ಪೈಕಿ 30 ಕೋಟಿ ರು. ಅನ್ನು ಯಶಸ್ವಿಯಾಗಿ ವಾಪಸ್ ಪಡೆದಿದೆ.
ಈ ವಿಷಯವನ್ನು ತಿಳಿಸಿರುವ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ₹117 ಕೋಟಿ ಹಣ ಮೃತಪಟ್ಟವರ ಖಾತೆಗೆ ಜಮೆ ಆಗಿರುವುದು ಪತ್ತೆ ಆಗಿದ್ದು, ಅದನ್ನು ವಾಪಸು ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ₹30 ಕೋಟಿ ವಾಪಸು ಬಂದಿದೆ ಎಂದಿದ್ದಾರೆ.
ಅವರು ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಮೃತರ ಖಾತೆಗೆ ಜಮೆಯಾದ ಗೃಹಲಕ್ಷ್ಮಿ ಹಣವನ್ನು ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಜತೆ ಸಮನ್ವಯದೊಂದಿಗೆ ವಾಪಸು ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ₹3.34 ಕೋಟಿ ಹಣ ಮೃತರ ಖಾತೆಗಳಿಗೆ ಜಮೆಯಾಗಿದ್ದು, ಇದರಲ್ಲಿ ₹1.43 ಕೋಟಿ ಹಿಂಪಡೆಯಲಾಗಿದೆ ಹಾಗೂ ಉಳಿಕೆ ಹಣವನ್ನು ಹಿಂಪಡೆಯುವ ಪ್ರಕ್ರಿಯೆ ಮುಂದುವರಿದಿದೆ. ಜೊತೆಗೆ ಮೃತರಾದ ಕುಟುಂಬದಲ್ಲಿ ಮತ್ತೋರ್ವ ಮನೆ ಯಜಮಾನಿ ಹೆಸರನ್ನು ಗೃಹಲಕ್ಷ್ಮಿಗೆ ನೋಂದಾಯಿಸುವ ಪ್ರಕ್ರಿಯೆಯೂ ನಿರಂತರವಾಗಿ ನಡೆಯುತ್ತಿದೆ ಎಂದರು.
ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗಳ ಪರಿಷ್ಕರಣೆ ಪ್ರಕ್ರಿಯೆ ನಡೆಯುತ್ತಿದೆ. ಗೃಹ ಜ್ಯೋತಿಗೆ ಸಂಬಂಧಿಸಿ ಈಗಾಗಲೇ ಶೇ.66ರಷ್ಟು ಸರ್ವೆ ಮುಗಿದಿದ್ದು, ಒಂದು ತಿಂಗಳು ವಿಸ್ತರಿಸಿ ಪೂರ್ಣಗೊಳಿಸಲಾಗುವುದು. ಗೃಹಲಕ್ಷ್ಮಿಗೆ ಸಂಬಂಧಿಸಿ ಈಗಾಗಲೇ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ. ಪಂಚಾಯಿತಿ ಮಟ್ಟದಲ್ಲಿ 6 ಮಂದಿಯ ಸಮಿತಿ ರಚಿಸಿ, ಮನೆ ಮನೆಗೆ ಭೇಟಿ ನೀಡಿ ಪರಿಷ್ಕರಿಸುವ ಪ್ರಕ್ರಿಯೆ ಆರಂಭವಾಗಲಿದೆ. ಆದಾಯ ತೆರಿಗೆ/ಜಿಎಸ್‌ಟಿ ಕಟ್ಟುವ ಮಹಿಳೆಯರನ್ನು ಕೈಬಿಟ್ಟು ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ದೊರೆಯುವಂತೆ ಮಾಡಲಾಗುವುದು ಎಂದರು.
2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಹೋಗಿಲ್ಲ. ಆ ಹಣ ಖಜಾನೆಯಿಂದಲೇ ಬಿಡುಗಡೆಯಾಗಿಲ್ಲ. ಅದನ್ನು ಬಿಡುಗಡೆ ಮಾಡಿ, ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಲ್ಲಿ ಯಾವುದೇ ದುರುಪಯೋಗ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅನ್ನಭಾಗ್ಯದಲ್ಲಿ ಐದು ಕೆ.ಜಿ. ಅಕ್ಕಿ ಬದಲಿಗೆ ನೀಡುವ ಇಂದಿರಾ ಕಿಟ್‌ಗೆ ಸಂಬಂಧಿಸಿ ಈಗಾಗಲೇ ಇಲಾಖಾ ಸಚಿವರ ಸಭೆ ನಡೆದಿದೆ. ರಾಜ್ಯ ಮಟ್ಟದ ಬದಲು ಜಿಲ್ಲಾ ಮಟ್ಟದಲ್ಲಿ ಟೆಂಡರ್ ಕರೆಯಲು ಉದ್ದೇಶಿಸಲಾಗಿದೆ. ಕಿಟ್‌ನಲ್ಲಿರುವ ಸಕ್ಕರೆ, ಬೇಳೆ, ಎಣ್ಣೆ, ಉಪ್ಪು ಮೊದಲಾದವುಗಳ ಬೆಲೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಸ್ವಲ್ಪ ಕಾಲಾವಕಾಶ ಬೇಕಿದೆ. ಆದರೂ ಶೀಘ್ರ ಇಂದಿರಾ ಕಿಟ್ ವಿತರಣೆಗೆ ಪ್ರಯತ್ನಿಸಲಾಗುತ್ತಿದೆ ಎಂದು ಎಚ್.ಎಂ.ರೇವಣ್ಣ ತಿಳಿಸಿದರು.
2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ ಹೋಗಿಲ್ಲ. ಆ ಹಣ ಖಜಾನೆಯಿಂದಲೇ ಬಿಡುಗಡೆಯಾಗಿಲ್ಲ. ಅದನ್ನು ಬಿಡುಗಡೆ ಮಾಡಿ, ಫಲಾನುಭವಿಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇಲ್ಲಿ ಯಾವುದೇ ದುರುಪಯೋಗ ನಡೆದಿಲ್ಲ.
- ಎಚ್.ಎಂ. ರೇವಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ
ಇದನ್ನೂ ಓದಿ: KPSC ಪಶುವೈದ್ಯಾಧಿಕಾರಿ 400 ಹುದ್ದೆ ಸೇಲ್ ಮಾಡಿದ್ದೇಗೆ? ಇಲ್ಲಿದೆ ಸುವರ್ಣ ನ್ಯೂಸ್ ಎಕ್ಸ್‌ಕ್ಲೂಸಿವ್ ರಿಪೋರ್ಟ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ