ರಾಜ್ಯದಲ್ಲಿ ಕಳೆದೊಂದು ತಿಂಗಳಲ್ಲಿ ದಾಖಲೆಯ ಸುರಿಮಳೆ: 8 ದಶಕಗಳಲ್ಲೇ ಅತಿಹೆಚ್ಚು ವರ್ಷಧಾರೆ

Kannadaprabha News   | Kannada Prabha
Published : Jun 02, 2025, 05:49 AM IST
Heavy Rain In May

ಸಾರಾಂಶ

ರಾಜ್ಯದಲ್ಲಿ ಕಳೆದೊಂದು ತಿಂಗಳಲ್ಲಿ ಸುರಿದ ಮಳೆ ಸಾಮಾನ್ಯ ಮಳೆಯಲ್ಲ. ಹಿಂದಿನ ಸಾಲು ಸಾಲು ದಾಖಲೆಗಳನ್ನು ಪುಡಿಗೈದು ಹೊಸ ದಾಖಲೆಗಳ ಸರಮಾಲೆ ಸೃಷ್ಟಿಸಿದ ಮಹಾಮಳೆ.

ಬೆಂಗಳೂರು (ಜೂ.02): ರಾಜ್ಯದಲ್ಲಿ ಕಳೆದೊಂದು ತಿಂಗಳಲ್ಲಿ ಸುರಿದ ಮಳೆ ಸಾಮಾನ್ಯ ಮಳೆಯಲ್ಲ. ಹಿಂದಿನ ಸಾಲು ಸಾಲು ದಾಖಲೆಗಳನ್ನು ಪುಡಿಗೈದು ಹೊಸ ದಾಖಲೆಗಳ ಸರಮಾಲೆ ಸೃಷ್ಟಿಸಿದ ಮಹಾಮಳೆ. ರಾಜ್ಯದಲ್ಲಿ ಒಟ್ಟಾರೆ ಮೇ ತಿಂಗಳಲ್ಲಿ ಸುರಿದ ಮಳೆ ಕಳೆದ ಎಂಟು ದಶಕದಲ್ಲಿ ಸುರಿದ ದಾಖಲೆಯ ಮಳೆಯಾದರೆ, ಕರಾವಳಿಯ ಜಿಲ್ಲೆಗಳಲ್ಲಿ ಸುರಿದ ಮಳೆ ಶತಮಾನದ ದಾಖಲೆ ಮುರಿದ ಮಳೆ ಎಂದು ಹವಾಮಾನ ಇಲಾಖೆಯ ಅಂಕಿ-ಅಂಶಗಳು ದೃಢಪಡಿಸಿವೆ.

ಪ್ರತಿ ವರ್ಷ ರಣಬಿಸಿಲು ಕಾಣುವ ಮೇ ತಿಂಗಳು ಈ ಬಾರಿ ಮಳೆಗಾಲದಂತೆ ಕಂಡು ಬಂದಿತ್ತು. ರಾಜ್ಯದಲ್ಲಿ ಸಾಮಾನ್ಯವಾಗಿ ಮೇ ತಿಂಗಳಿನಲ್ಲಿ ಕೇವಲ 74 ಮಿ.ಮೀ. ಮಳೆಯಾಗಲಿದೆ. ಆದರೆ, ಈ ಬಾರಿ 245.2 ಮಿ.ಮೀ. ಮಳೆಯಾಗುವ ಮೂಲಕ ಶೇ.181ರಷ್ಟು ಹೆಚ್ಚು ಮಳೆ ಸುರಿದಿದೆ. ಈ ಮೂಲಕ ರಾಜ್ಯದಲ್ಲಿ ಮೇ ತಿಂಗಳ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. 1943ರ ಮೇ ತಿಂಗಳಲ್ಲಿ ಸುರಿದ 189.9 ಮಿ.ಮೀ. ಮಳೆ ಈವರೆಗಿನ ಹೆಚ್ಚು ಮಳೆಯ ದಾಖಲೆಯಾಗಿತ್ತು.

ಇದರೊಂದಿಗೆ ಇಡೀ ಪೂರ್ವ ಮುಂಗಾರಿನ ಒಟ್ಟಾರೆ ಅವಧಿಯ ದಾಖಲೆಗಳು ಬದಲಾಗಿವೆ. ರಾಜ್ಯದಲ್ಲಿ ಮಾರ್ಚ್‌-ಮೇ ಅವಧಿಯಲ್ಲಿ 117.7 ವಾಡಿಕೆ ಮಳೆಯಾಗಿದ್ದು, ಈ ಬಾರಿ 322.2 ಮಿ.ಮೀ. ಮಳೆ ಸುರಿದಿದೆ. ಈ ಮೂಲಕ 2022ರಲ್ಲಿ ಸುರಿದ 255.5 ಮಿ.ಮೀ. ಸಾರ್ವಕಾಲಿಕ ಮಳೆಯ ದಾಖಲೆಯನ್ನು ಮುರಿದು ಹಾಕಿದೆ.

ಕರಾವಳಿಯಲ್ಲಿ 107 ವರ್ಷದ ದಾಖಲೆ ಮಳೆ: ಕರಾವಳಿ ಜಿಲ್ಲೆಗಳಲ್ಲಿ ಮೇ ತಿಂಗಳಿನಲ್ಲಿ 118.3 ಮಿ.ಮೀ. ವಾಡಿಕೆ ಮಳೆಯಾಗಿದ್ದು, ಈ ಬಾರಿ 764.9 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.901ರಷ್ಟು ಹೆಚ್ಚಿನ ಮಳೆಯಾಗಿದೆ. 1918ರ ಮೇ ತಿಂಗಳಿನಲ್ಲಿ ಸುರಿದ 690.6 ಮಿ.ಮೀ. ಸಾರ್ವಕಾಲಿಕ ದಾಖಲೆಯ ಮಳೆ ಎಂದು ಪರಿಗಣಿಸಲಾಗಿತ್ತು. 107 ವರ್ಷದ ಬಳಿಕ ಆ ದಾಖಲೆಯನ್ನು ಮೀರಿಸುವ ಮಳೆ ಮೇನಲ್ಲಿ ಆಗಿದೆ. ಪ್ರಸಕ್ತ ಪೂರ್ವ ಮುಂಗಾರು ಅವಧಿಯಲ್ಲಿ 835.2 ಮಿ.ಮೀ. ಮಳೆಯಾಗಿದ್ದು, 1918ರಲ್ಲಿ ಸುರಿದ 706.5 ಮಿ.ಮೀ. ಮಳೆ ದಾಖಲೆ ಮುರಿದು 107 ವರ್ಷದ ಬಳಿಕ ಹೊಸ ದಾಖಲೆ ಬರೆದಿದೆ.

ಉತ್ತರ ಒಳನಾಡಲ್ಲಿ 82 ವರ್ಷದ ದಾಖಲೆ ಮಳೆ: ಇನ್ನು ಉತ್ತರ ಒಳನಾಡಿನಲ್ಲಿ ಮೇ ತಿಂಗಳಲ್ಲಿ 48.8 ಮಿ.ಮೀ. ಮಳೆಯಾಗುವುದು ವಾಡಿಕೆ. ಆದರೆ ಈ ಬಾರಿ ಸಾರ್ವಕಾಲಿಕ ದಾಖಲೆಯ 172.5 ಮಿ.ಮೀ. ಮಳೆಯಾಗಿದೆ. 1943ರಲ್ಲಿ 151.6 ಮಿ.ಮೀ. ಮಳ‍ೆ ಈವರೆಗಿನ ಸಾರ್ವಕಾಲಿಕ ದಾಖಲೆಯಾಗಿತ್ತು. ಒಟ್ಟಾರೆ ಪೂರ್ವ ಮುಂಗಾರು ಅವಧಿಯಲ್ಲಿ ಸುರಿದ ಮಳೆಯೂ 82 ವರ್ಷದ ಹಿಂದಿನ ಸಾರ್ವಕಾಲಿಕ ಮಳೆ ದಾಖಲೆಯನ್ನು ಮುರಿದಿದೆ. ಉತ್ತರ ಒಳನಾಡಿನಲ್ಲಿ ಈ ಬಾರಿ 231.8 ಮಿ.ಮೀ ಮುಂಗಾರು ಪೂರ್ವ ಮಳೆ ಸುರಿದೆ. 1943ರಲ್ಲಿ 189.1 ಮಿ.ಮೀ. ಮಳೆ ಈವರೆಗಿನ ದಾಖಲೆ ಮಳೆಯಾಗಿತ್ತು.

ಜಿಲ್ಲೆಗಳಲ್ಲಿಯೂ ದಾಖಲೆ: ಬಾಗಲಕೋಟೆ, ಬೀದರ್‌, ವಿಜಯಪುರ, ಕಲಬುರಗಿ, ರಾಯಚೂರು, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿಯೂ ಮೇ ತಿಂಗಳ ಮಳೆ ಹಾಗೂ ಒಟ್ಟಾರೆ ಪೂರ್ವ ಮುಂಗಾರು ಅವಧಿಯ ಮಳೆ ನೂತನ ಸಾರ್ವಕಾಲಿಕ ದಾಖಲೆ ರೂಪಿಸಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮೇ ತಿಂಗಳ ದಾಖಲೆಗಳ ವಿವರ (ಮಿ.ಮೀ)
ರಾಜ್ಯ/ವಿಭಾಗ ವಾಡಿಕೆ ಹೊಸ ದಾಖಲೆ(2025) ಹಿಂದಿನ ದಾಖಲೆ (ವರ್ಷ)
ರಾಜ್ಯ 74 245.2 185.9(1943)
ಕರಾವಳಿ 118.3 764.9 690.6(1918)
ಉತ್ತರ ಒಳನಾಡು 48.8 172.5 151.6(1943)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್