ಒಳಮೀಸಲಾತಿ ಸರ್ವೆ ಶೇ.90ರಷ್ಟು ಪೂರ್ಣ: ಮನೆ ಮನೆ ಸಮೀಕ್ಷೆ ಅಂತ್ಯ

Kannadaprabha News   | Kannada Prabha
Published : Jun 02, 2025, 05:15 AM IST
Internal Reservation Survey

ಸಾರಾಂಶ

ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಸಂಬಂಧ ಮೇ 5ರಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಭಾನುವಾರ ಮುಕ್ತಾಯವಾಗಿದ್ದು, ಅಂದಾಜು 1.04 ಕೋಟಿಗಿಂತ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ಶೇ.90ಕ್ಕಿಂತ ಹೆಚ್ಚು ಗಣತಿಯಾಗಿದೆ.

ಬೆಂಗಳೂರು (ಜೂ.02): ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ನೀಡುವ ಸಂಬಂಧ ಮೇ 5ರಿಂದ ನಡೆಯುತ್ತಿರುವ ಮನೆ ಮನೆ ಸಮೀಕ್ಷೆ ಭಾನುವಾರ ಮುಕ್ತಾಯವಾಗಿದ್ದು, ಅಂದಾಜು 1.04 ಕೋಟಿಗಿಂತ ಹೆಚ್ಚು ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗುವ ಮೂಲಕ ಶೇ.90ಕ್ಕಿಂತ ಹೆಚ್ಚು ಗಣತಿಯಾಗಿದೆ.

2011ರ ಜನಗಣತಿ ಆಧರಿಸಿ ಪ್ರಸ್ತುತ ರಾಜ್ಯದಲ್ಲಿ 1.16 ಕೋಟಿ ಪರಿಶಿಷ್ಟ ಜಾತಿ ಸಮುದಾಯದವರು ಇರಬಹುದೆಂದು ಆಯೋಗ ಅಂದಾಜಿಸಿ ಸಮೀಕ್ಷೆ ಆರಂಭಿಸಿದೆ. ಈವರೆಗೆ ಬಹುತೇಕ ಜಿಲ್ಲೆಗಳಲ್ಲಿ ಸಮೀಕ್ಷೆ ಉತ್ತಮವಾಗಿ ನಡೆದಿದೆ. ಆದರೆ ಬಿಬಿಎಂಪಿಯಲ್ಲಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಜನ ಭಾಗಿಯಾಗಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 13-14 ಲಕ್ಷ ಮಂದಿ ಇರಬಹುದೆಂದು ಅಂದಾಜಿಸಿದ್ದರೂ ಈವರೆಗೆ ಎಂಟು ಲಕ್ಷ ದಾಟಿಲ್ಲ ಎಂದು ಮೂಲಗಳು ತಿಳಿಸಿವೆ.

ಆನ್‌ಲೈನ್‌ ಘೋಷಣೆ: ಮನೆ ಮನೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಆಗದವರಿಗಾಗಿ ಆನ್‌ಲೈನ್‌ ಮೂಲಕ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶವಿದ್ದು, ಈವರೆಗೆ ಸುಮಾರು 3 ಸಾವಿರಕ್ಕೂ ಹೆಚ್ಚು ಕುಟುಂಬಗಳು ಸ್ವಯಂ ಘೋಷಣೆ ಮಾಡಿಕೊಂಡಿವೆ. ಈ ನಡುವೆ ವಿಶೇಷ ಶಿಬಿರಗಳ ಮೂಲಕ ಗಣತಿ ನಡೆಯುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಮತಗಟ್ಟೆ ಇರುವ ಕಡೆ ಇಬ್ಬರು ಹಾಗೂ ಒಂದು ಮತಗಟ್ಟೆ ಇರುವ ಕಡೆ ಒಬ್ಬರನ್ನು ನಿಯೋಜಿಸಿ ಗಣತಿ ಕಾರ್ಯ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಬಿಎಂಪಿಯಲ್ಲಿ ಚುರುಕು: ಸಮೀಕ್ಷೆ ಬಗ್ಗೆ ವಿವಿಧ ರೀತಿ ಜಾಗೃತಿ ಮೂಡಿಸುವ ಜೊತೆಗೆ ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ವಿವಿಧ ಕಡೆ ಭೇಟಿ ನೀಡಿ ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಮನವೊಲಿಸಿದ ಪರಿಣಾಮ ಈಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷೆ ಚುರುಕಾಗಿ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ಮಳೆ ಕಾರಣ ಸಮೀಕ್ಷೆ ಸರಿಯಾಗಿ ನಡೆದಿರಲಿಲ್ಲ. ಸಣ್ಣಪುಟ್ಟ ಗೊಂದಲಗಳನ್ನು ಗಣತಿದಾರರು ಎದುರಿಸುತ್ತಿದ್ದರು. ಈಗ ಅವರಿಗೆ ಸರಿಯಾದ ಮಾಹಿತಿ, ತಿಳಿವಳಿಕೆ ನೀಡಿದ ನಂತರ ಸುಸೂತ್ರವಾಗಿ ನಡೆಯುತ್ತಿದೆ. ಇನ್ನೊಂದು ವಾರದೊಳಗೆ ವಿಶೇಷ ಶಿಬಿರ ಹಾಗೂ ಆನ್‌ಲೈನ್‌ ಮೂಲಕ ಇನ್ನೂ ಹೆಚ್ಚಿನ ಜನ ಕುಟುಂಬದ ವಿವರ ಸಲ್ಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಜೂ.8ರವರೆಗೆ ಸಮೀಕ್ಷೆ ವಿಸ್ತರಣೆ: ಮನೆ ಮನೆ ಸಮೀಕ್ಷೆ, ಆನ್‌ಲೈನ್‌ ಮತ್ತು ವಿಶೇಷ ಶಿಬಿರಗಳ ಮೂಲಕ ಸಮೀಕ್ಷೆಯನ್ನು ಜೂ.1ಕ್ಕೆ ಮುಕ್ತಾಯಗೊಳಿಸಲು ಆಯೋಗ ನಿರ್ಧರಿಸಿತ್ತು. ಅದರಂತೆ ಮನೆ ಮನೆ ಸಮೀಕ್ಷೆ ಮುಕ್ತಾಯವಾಗಿದೆ. ಆದರೆ ಇನ್ನೂ ಸಾಕಷ್ಟು ಜನ ಸಮೀಕ್ಷೆಯಲ್ಲಿ ಭಾಗಿಯಾಗದ ಹಿನ್ನೆಲೆಯಲ್ಲಿ ಆನ್‌ಲೈನ್‌ ಮತ್ತು ವಿಶೇಷ ಶಿಬಿರಗಳ ಸಮೀಕ್ಷೆ ಕಾರ್ಯವನ್ನು ಜೂ.8ರವರೆಗೆ ವಿಸ್ತರಣೆ ಮಾಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!