ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ.70ರಷ್ಟಿದ್ದು ಮೀಸಲಾತಿ ಅರ್ಧದಷ್ಟೂ (ಶೇ.32) ಇಲ್ಲ. ಹೀಗಾಗಿ ಓಬಿಸಿ ಮೀಸಲಾತಿ ಪ್ರಮಾಣವನ್ನು ಶೇ.51ಕ್ಕೆ ಹೆಚಿಸಬೇಕು ಎಂದು ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಶಿಫಾರಸು ಮಾಡಿದೆ.
ಬೆಂಗಳೂರು (ಏ.13): ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿಯಲ್ಲಿ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ.70ರಷ್ಟಿದ್ದು ಮೀಸಲಾತಿ ಅರ್ಧದಷ್ಟೂ (ಶೇ.32) ಇಲ್ಲ. ಹೀಗಾಗಿ ಓಬಿಸಿ ಮೀಸಲಾತಿ ಪ್ರಮಾಣವನ್ನು ಶೇ.51ಕ್ಕೆ ಹೆಚಿಸಬೇಕು ಎಂದು ಜಯಪ್ರಕಾಶ ಹೆಗ್ಡೆ ನೇತೃತ್ವದ ಆಯೋಗ ಶಿಫಾರಸು ಮಾಡಿದೆ. ಹಿಂದುಳಿದ ವರ್ಗಗಳ ಪ್ರವರ್ಗವಾರು ವರ್ಗೀಕರಣವನ್ನು 5 ರಿಂದ 6ಕ್ಕೆ ಹೆಚ್ಚಿಸಿರುವ ಆಯೋಗವು 2-ಎ ಅಡಿಯಲ್ಲಿರುವ ಕೆಲ ಜಾತಿಗಳನ್ನು ಪ್ರವರ್ಗ-1ಕ್ಕೆ ವರ್ಗಾವಣೆ ಮಾಡಿದ್ದು, ಪ್ರವರ್ಗ -1 ನ್ನು ಪ್ರವರ್ಗ 1-ಎ ಹಾಗೂ ಪ್ರವರ್ಗ 1-ಬಿ ಎಂದು ಎರಡು ಪ್ರವರ್ಗಗಳಾಗಿ ವರ್ಗೀಕರಣ ಮಾಡಿದೆ. ಇದರಿಂದ ಹಿಂದುಳಿದ ವರ್ಗದ 2-ಎ ಅಡಿ ಹಾಲಿ ಇದ್ದ ಜಾತಿಗಳು ಪಡೆಯುತ್ತಿದ್ದ ಮೀಸಲಾತಿ ಶೇ.15 ರಿಂದ ಶೇ.22ಕ್ಕೆ ಹೆಚ್ಚಳ ಆಗಲಿದೆ. ವರದಿ ಪ್ರಕಾರ ಮುಸ್ಲಿಮರು 75.27ಲಕ್ಷದಷ್ಟಿದ್ದು, ಈ ಸಮುದಾಯದ (2-ಬಿ) ಮೀಸಲಾತಿ ಪ್ರಮಾಣವನ್ನು ಶೇ.4 ರಿಂದ ಶೇ.8ಕ್ಕೆ ಏರಿಸುವಂತೆ ಜಯಪ್ರಕಾಶ ಹೆಗ್ಡೆ ಆಯೋಗ ಶಿಫಾರಸು ಮಾಡಿದೆ.
3-ಬಿ ಪಟ್ಟಿಯಲ್ಲಿರುವ ಲಿಂಗಾಯತ ಹಾಗೂ ಅದರ ಉಪಜಾತಿಗಳ ಒಟ್ಟು ಜನಸಂಖ್ಯೆ 81 ಲಕ್ಷದಷ್ಟಿದ್ದು ಅದರಲ್ಲಿ ಲಿಂಗಾಯತರ ಸಂಖ್ಯೆ 66 ಲಕ್ಷದಷ್ಟಿದೆ. ಮೀಸಲಾತಿ ಪ್ರಮಾಣ ಶೇ.5 ರಷ್ಟಿದೆ. ಜನಸಂಖ್ಯೆಗೆ ಅನುಗುಣವಾಗಿ ಅದನ್ನು ಶೇ.8ಕ್ಕೆ ಏರಿಸಲು ಶಿಫಾರಸು ಮಾಡಲಾಗಿದೆ. 3-ಎ ಪಟ್ಟಿಯಲ್ಲಿರುವ ಒಕ್ಕಲಿಗ ಮತ್ತು ಅದರ ಉಪ ಜಾತಿಗಳ ಜನಸಂಖ್ಯೆ 72 ಲಕ್ಷದಷ್ಟಿದೆ. ಇದರಲ್ಲಿ ಒಕ್ಕಲಿಗರು 61.50 ಲಕ್ಷದಷ್ಟಿದ್ದಾರೆ. ಒಟ್ಟು ಮೀಸಲಾತಿ ಶೇ.4 ರಷ್ಟಿದೆ. ಅದನ್ನು ಶೇ.7ಕ್ಕೆ ಹೆಚ್ಚಳ ಮಾಡಲು ಶಿಫಾರಸು ಮಾಡಲಾಗಿದೆ. ಕುರುಬರು ಮತ್ತಿತರ ಸಮುದಾಯಗಳ 2-ಎ ಅಡಿ 77.78 ಲಕ್ಷ ಜನಸಂಖ್ಯೆ ಇದ್ದು, ಇವರಿಗೆ ಶೇ.10 ಮೀಸಲಾತಿ, ಅತಿ ಹಿಂದುಳಿದ ಜಾತಿಗಳನ್ನು ಹೊಂದಿರುವ ಪ್ರವರ್ಗ 1-ಎ ಗೆ (34.96 ಲಕ್ಷ) ಶೇ.6 ಹಾಗೂ ಪ್ರವರ್ಗ 1-ಬಿಗೆ (73.92 ಲಕ್ಷ ಜನಸಂಖ್ಯೆಗೆ) ಶೇ.12 ಮೀಸಲಾತಿ ನೀಡಲು ಶಿಫಾರಸು ಮಾಡಲಾಗಿದೆ.
ಗದಗ ಗ್ರಾಮೀಣ ವಿವಿಗೆ ಸಾರಥಿಯೂ ಇಲ್ಲ, ದುಡ್ಡೂ ಇಲ್ಲ: ಸರ್ಕಾರದಿಂದ ಅಲ್ಪಸ್ವಲ್ಪ ಅನುದಾನ
ಓಬಿಸಿ ಮೀಸಲಾತಿ 32 ರಿಂದ 51ಕ್ಕೆ ಹೆಚ್ಚಳಕ್ಕೆ ಸಮರ್ಥನೆ: ಆಯೋಗವು ಓಬಿಸಿ ಮೀಸಲಾತಿಯನ್ನು ಶೇ.32 ರಿಂದ 51ಕ್ಕೆ ಹೆಚ್ಚಳ ಮಾಡಲು ಸಮರ್ಥನೆಗಳನ್ನೂ ನೀಡಿದೆ. ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಪ್ರಮಾಣ ಶೇ.50ಕ್ಕೆ ಮಿತಗೊಳಿಸಬೇಕು ಎಂದು ಅಭಿಪ್ರಾಯಪಟ್ಟಿತ್ತು. ಹೀಗಾಗಿ ಹಿಂದುಳಿದ ವರ್ಗದ ಮೀಸಲಾತಿಯನ್ನು ಶೇ.32ಕ್ಕೆ ಸೀಮಿತಗೊಳಿಸಲಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.18 ರಿಂದ ಶೇ.24ಕ್ಕೆ ಹೆಚ್ಚಿಸಿದ್ದರಿಂದ ಪ್ರಸ್ತುತ ಕರ್ನಾಟಕದಲ್ಲಿ ಶೇ.56 ಮೀಸಲಾತಿ ಪ್ರಮಾಣ ಜಾರಿಯಲ್ಲಿರುತ್ತದೆ.
ಇದರೊಂದಿಗೆ ಕೇಂದ್ರ ಸರ್ಕಾರವು ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ಶೇ.10 ರಷ್ಟು ಮೀಸಲಾತಿ ಜಾರಿಗೆ ತಂದಿದೆ. ಹೀಗಾಗಿ ರಾಜ್ಯದಲ್ಲಿ ಪ್ರಸ್ತುತ ಪ್ರವರ್ಗ-1 ಶೇ.4, 2-ಎ ಶೇ.15, 2-ಬಿ ಶೇ.4, 3-ಎ ಶೇ.4, 3-ಬಿ ಶೇ.5ರಷ್ಟು ಸೇರಿ ಒಟ್ಟು ಶೇ.32ರಷ್ಟು ಇದೆ. ಪರಿಶಿಷ್ಟ ಜಾತಿ-ಶೇ.17.15, ಪರಿಶಿಷ್ಟ ಪಂಗಡ- ಶೇ.6.95 ಹಾಗೂ ಶೇ.10 ರಷ್ಟು ಆರ್ಥಿಕ ದುರ್ಬಲ ವರ್ಗದವರಿಗೆ ಸೇರಿ ಒಟ್ಟು ಶೇ.66 ಒಟ್ಟು ಮೀಸಲಾತಿ ಇದೆ. ಹೀಗಾಗಿ ಸುಪ್ರೀಂ ಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಶೇ.50ಕ್ಕೆ ಮಿತಗೊಳಿಸಬೇಕು ಎಂಬುದಾಗಿ ನೀಡಿರುವ ಆದೇಶ ರಾಜ್ಯದಲ್ಲಿ ಪಾಲನೆಯಾಗಿಲ್ಲ. ಇನ್ನು ಎಸ್.ವಿ.ಜೋಶಿ ಪ್ರಕರಣದಲ್ಲಿ ಮೀಸಲಾತಿ ಹೆಚ್ಚಳ ಮಾಡಬೇಕಾದರೆ ಸೂಕ್ತ ದತ್ತಾಂಶ ಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರಡಿ ಸೂಕ್ತ ದತ್ತಾಂಶದ ಬೆಂಬಲದೊಂದಿಗೆ ತಮಿಳುನಾಡು ಶೇ.69, ಜಾರ್ಖಂಡ್ ಶೇ.77ರಷ್ಟು ಹೀಗೆ ಜನಸಂಖ್ಯೆಯನ್ನು ಆಧರಿಸಿ ಮೀಸಲಾತಿ ಹೆಚ್ಚಿಸಿ ಅಳವಡಿಸಿಕೊಂಡಿವೆ.
ರಾಜ್ಯದಲ್ಲಿ ಓಬಿಸಿಯ ಅರ್ಧದಷ್ಟೂ ಮೀಸಲಾತಿ ಇಲ್ಲ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ದತ್ತಾಂಶದ ಪ್ರಕಾರ ರಾಜ್ಯದಲ್ಲಿ ಹಿಂದುಳಿದ ವರ್ಗಗಗಳ ಒಟ್ಟು ಮೀಸಲಾತಿ ಶೇ.69.60 ಇದ್ದು, ರೌಂಡ್ ಅಪ್ ಮಾಡಿದರೆ ಶೇ.70 ರಷ್ಟು ಆಗುತ್ತದೆ. ಆದರೆ ರಾಜ್ಯದಲ್ಲಿ ಓಬಿಸಿಗೆ ಇರುವ ಮೀಸಲಾತಿ ಶೇ.32 ರಷ್ಟು ಮಾತ್ರ. ಅಂದರೆ ಶೇಕಡಾ ಅರ್ಧದಷ್ಟು ಸಹ ಮೀಸಲಾತಿ ಇಲ್ಲ. ಹಿಂದುಳಿದ ವರ್ಗಗಳಿಗೆ ಸಮಾನವಾಗಿ ಸೌಲಭ್ಯಗಳು ಹಂಚಿಕೆಯಾಗಿಲ್ಲ. ಆದ್ದರಿಂದ ಮೀಸಲಾತಿಯನ್ನು ಜನಸಂಖ್ಯೆ ಅನುಸಾರ ನೀಡಿದರೆ ಶೇ.32 ರಿಂದ ಶೇ.69.60ಕ್ಕೆ ಹೆಚ್ಚಳ ಮಾಡಬೇಕು ಎಂದು ಆಯೋಗದ ಚರ್ಚೆಗಳಲ್ಲಿ ಸರ್ವಾನುಮತದಿಂದ ಒಪ್ಪಿಗೆ ಆಗಿದೆ. ಆದಾಗ್ಯೂ ಹಿಂದುಳಿದ ವರ್ಗಗಳಲ್ಲಿ ಕೆನೆಪದರ ನೀತಿ ಜಾರಿಯಲ್ಲಿರುವುದರಿಂದ ಆ ವರ್ಗದವರು ಆದಾಯ ಮಿತಿ ದಾಟಿದ ಸಂದರ್ಭಗಳಲ್ಲಿ ಸಾಮಾನ್ಯ ವರ್ಗಕ್ಕೆ ವರ್ಗಾವಣೆ ಆಗುತ್ತಾರೆ. ಅಲ್ಲೂ ಅವಕಾಶ ಕಲ್ಪಿಸಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಶೇ.32 ರಿಂದ ಶೇ.51ಕ್ಕೆ ಹೆಚ್ಚಿಸಿ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಶೇ.51 ಮೀಸಲಾತಿಗೆ ಫಾರ್ಮುಲ: ಪ್ರಸ್ತುತ ಹಿಂದುಳಿದ ವರ್ಗಗಳ ಜನಸಂಖ್ಯೆ ಶೇ.70 ಇದೆ. ಆದರೆ ರಾಜ್ಯದಲ್ಲಿ ಶೇ.32 ರಷ್ಟು ಮಾತ್ರ ಮೀಸಲಾತಿ ಇದೆ. ಶೇ. 70 ರಲ್ಲಿ ಶೇ.32 ಕಳೆದರೆ ಶೇ.38 ಆಗಲಿದೆ. ಮೀಸಲಾತಿಯಿಂದ ಹೊರಗಳಿದಿರುವ ವ್ಯತ್ಯಾಸದ ಶೇ.38 ರಷ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರನ್ನು ಮೀಸಲಾತಿ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಅಂದರೆ ಶೇ.19 ರಷ್ಟನ್ನು ಮೀಸಲಾತಿ ಅಡಿಗೆ ತಂದು ಹಾಲಿ ಇರುವ ಶೇ.32 ರಷ್ಟು ಮೀಸಲಾತಿಗೆ ಸೇರಿಸಿದರೆ ಶೇ.51 ಆಗಲಿದೆ. ಉಳಿದ ಶೇ.19 ರಷ್ಟು ಜನಸಂಖ್ಯೆಯನ್ನು ಸಾಮಾನ್ಯ ವರ್ಗದಲ್ಲೇ ಉಳಿಸಬಹುದು ಎಂದು ಆಯೋಗ ಶಿಫಾರಸು ಮಾಡಿದೆ. ಹಿಂದುಳಿದವರ ಮೀಸಲು ಪ್ರಮಾಣವನ್ನು ಹೀಗೆ ಹೆಚ್ಚಿಸುವ ಶಿಫಾರಸು ಜಾರಿಯಾಗಬೇಕಾದರೆ ಕೇಂದ್ರ ಸರ್ಕಾರ ಸಂವಿಧಾನದ ಒಂಬತ್ತನೇ ಪರಿಚ್ಛೇದಕ್ಕೆ ತಿದ್ದುಪಡಿ ತಂದು ಮೀಸಲಾತಿ ಹೆಚ್ಚಳದ ತೀರ್ಮಾನಕ್ಕೆ ರಕ್ಷಣೆ ಒದಗಿಸಬೇಕಾಗುತ್ತದೆ ಎಂದು ಆಯೋಗ ಪ್ರತಿಪಾದಿಸಿದೆ.
ಐದು ಪ್ರವರ್ಗಗಳನ್ನು ಆರಕ್ಕೆ ಹೆಚ್ಚಳ: ಪ್ರವರ್ಗ 2-ಎ ಅಡಿ ಇದ್ದ ಜಾತಿಗಳನ್ನು ಮರು ವರ್ಗೀಕರಣ ಮಾಡುವುದಕ್ಕಾಗಿ ಪ್ರವರ್ಗ-1ರ ಬದಲು ಪ್ರವರ್ಗ 1ಎ ಎಂದು ಹಾಗೂ ಪ್ರವರ್ಗ 1ಬಿ ಎಂಬ ಹೊಸ ವರ್ಗ ಸೃಷ್ಟಿಸುವಂತೆ ಶಿಫಾರಸು ಮಾಡಲಾಗಿದೆ. ಪ್ರವರ್ಗ 1ರಲ್ಲಿದ್ದ ಹಲವು ಜಾತಿಗಳನ್ನು ಆ ಜಾತಿಯವರ ಕಾಯಕ, ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ 1-ಎ ನಲ್ಲಿ ಇಡಲಾಗಿದೆ. ಪ್ರವರ್ಗ 1 ಹಾಗೂ 2-ಎ ನಲ್ಲಿದ್ದ ಜಾತಿಗಳನ್ನು ಮರು ವರ್ಗೀಕರಿಸಿ ಕೆಲ ಜಾತಿಗಳನ್ನು ಒಳಗೊಂಡ 1-ಬಿ ಪ್ರವರ್ಗ ಸೃಜಿಸಲಾಗಿದೆ.
ಗಾರ್ಮೆಂಟ್ಸ್, ಕೋಕೋ ಕೋಲಾ ಅಂತ್ಹೇಳಿ ಕೆಮಿಕಲ್ ವಿಷ ಕೊಟ್ರು..!
2-ಎನಲ್ಲಿದ್ದ ಕೆಲ ಜಾತಿಗಳನ್ನು 1-ಬಿ ಅಡಿ ತರಲಾಗಿದೆ. ಹಿಂದುಳಿದ ಜಾತಿಯವರನ್ನು 1-ಬಿಯಲ್ಲಿ ಸೇರಿಸಲಾಗಿದ್ದು, ಇವರಲ್ಲಿ ಅಲೆಮಾರಿ, ಅರೆ ಅಲೆಮಾರಿ ಹಾಗೂ ಆ ಗುಣ ಲಕ್ಷಣವುಳ್ಳ ಜಾತಿಗಳು ಇವೆ. ಕುಶಲಕರ್ಮಿ ಹಾಗೂ ಕುಲಕಸುಬು ಆಧಾರಿತ ವೃತ್ತಿಪರ ಕುಲಕಸುಬು ಆಧಾರಿತ ವೃತ್ತಿಪರ ಸಮುದಾಯಗಳನ್ನು 2-ಎನಲ್ಲೇ ಇರಿಸಲಾಗಿದೆ. ಪ್ರವರ್ಗ 1ಕ್ಕೆ ಇದ್ದ ಮೀಸಲಾತಿಯನ್ನು ಶೇ.4 ರಿಂದ 6ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. 2-ಎಗೆ ಶೇ.15 ರಷ್ಟಿದ್ದ ಮೀಸಲಾತಿಯನ್ನು 1-ಬಿ ಹಾಗೂ 2-ಎಗೆ ಮರು ಹಂಚಿಕೆ ಮಾಡಲಾಗಿದೆ. ಹೀಗೆ ಮಾಡುವಾಗ 1 ಬಿಗೆ ಶೇ.12 ಹಾಗೂ 2-ಎಗೆ ಶೇ.10 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ. ಇದರಿಂದ ಹಿಂದುಳಿದ ಜಾತಿ 2-ಎಗೆ ಇದ್ದ ಮೀಸಲಾತಿ ಶೇ.15 ರಿಂದ ಶೇ.22ಕ್ಕೆ ಹೆಚ್ಚಳ ಆಗಿದೆ ಎಂದು ಮೂಲಗಳು ತಿಳಿಸಿವೆ.