
ಬೆಂಗಳೂರು: ವಿದೇಶಿದಿಂದ ಅಕ್ರಮವಾಗಿ ವನ್ಯ ಜೀವಿಗಳ ಸಾಗಾಣೆಕೆ ಯತ್ನಿಸಿದ್ದಾತನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಅಪರೂಪ ಹಾಗೂ ಅಳಿವಿನಂಚಿನಲ್ಲಿರುವ ಪ್ರೈಮೇಟ್ ಜಾತಿಯ ರೆಡ್–ಶ್ಯಾಂಕ್ಡ್ ಡೌಕ್ ಕಳ್ಳಸಾಗಣೆಯನ್ನು ಈ ಮೂಲಕ ತಡೆಗಟ್ಟಿದ್ದಾರೆ. ಲಾವೋಸ್, ವಿಯೆಟ್ನಾಂ ಹಾಗೂ ಕಾಂಬೋಡಿಯಾ ಕಾಡುಗಳಲ್ಲಿ ಕಂಡುಬರುವ ಅಪರೂಪದ ಈ ಪ್ರಾಣಿಗಳನ್ನು, ಥಾಯ್ ಏರ್‌ವೇಸ್‌ನ ಟಿಜಿ–325 ವಿಮಾನದ ಮೂಲಕ ಬೆಂಗಳೂರಿಗೆ ತಂದಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಲೀಮ್ ನರ್ಲಡ್ಕ ಎಂಬ ಪ್ರಯಾಣಿಕನು ಈ ಎರಡು ಪ್ರೈಮೇಟ್‌ಗಳನ್ನು ಯಾವುದೇ ಕಡ್ಡಾಯ ದಾಖಲಾತಿಗಳಿಲ್ಲದೆ ಭಾರತಕ್ಕೆ ಆಮದು ಮಾಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಾಣಿಗಳನ್ನು ತರಲು ಅಗತ್ಯವಾಗಿ ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT) ಪರವಾನಗಿ, ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರ (NOC),ಆರೋಗ್ಯ ಪ್ರಮಾಣಪತ್ರಗಳು ಇರುವುದು ಕಡ್ಡಾಯವಾಗಿದೆ. ಆದರೆ ಪ್ರಯಾಣಿಕನ ಬಳಿ ಈ ಯಾವುದೇ ದಾಖಲೆಗಳು ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನಿಮಲ್ ಕ್ವಾರಂಟೈನ್ ಮತ್ತು ಪ್ರಮಾಣೀಕರಣ ಸೇವೆ (AQCS) ನೀಡಿದ ಶಿಫಾರಸಿನಂತೆ, ಕಸ್ಟಮ್ಸ್ ಅಧಿಕಾರಿಗಳು ಈ ಸಸ್ತನಿಗಳನ್ನು ಆಮದುದಾರನ ವೆಚ್ಚದಲ್ಲಿ ತಕ್ಷಣವೇ ಬ್ಯಾಂಕಾಕ್‌ಗೆ ಹಿಂತಿರುಗಿಸುವ ಆದೇಶ ಹೊರಡಿಸಿದರು. ಪ್ರಾಣಿಗಳ ಆರೋಗ್ಯ ಮತ್ತು ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಹೆಚ್ಚಿನ ವಿಳಂಬವನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಯಿತು.
ಈ ಅಪರೂಪದ ಅಳಿವಿನಂಚಿನಲ್ಲಿರುವ ರೆಡ್–ಶ್ಯಾಂಕ್ಡ್ ಡೌಕ್ ಕೋತಿ ಜಾತಿಗೆ ಸೇರಿದ ಪ್ರಭೇದವಾಗಿದೆ. ಇದು ಮರದಲ್ಲಿ ವಾಸಿಸುವ ಪ್ರಾಣಿಯಾಗಿದ್ದು, ಸಾಮಾನ್ಯವಾಗಿ 54 ರಿಂದ 65 ಸೆಂ.ಮೀ. ದೇಹದ ಉದ್ದ ಇರುತ್ತದೆ, ಬಾಲವು 65 ರಿಂದ 85 ಸೆಂ.ಮೀ.ಗಳವರೆಗೆ ಇರುತ್ತದೆ. ಈ ವರ್ಷ ಭಾರತಕ್ಕೆ ರೆಡ್-ಶ್ಯಾಂಕ್ಡ್ ಡೌಕ್‌ಗಳನ್ನು ಕಳ್ಳಸಾಗಣೆ ಮಾಡುವ ಮೂರನೇ ವಿಫಲ ಪ್ರಯತ್ನ ಇದಾಗಿದೆ. ಫೆಬ್ರವರಿಯಲ್ಲಿ, ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಎರಡು ಡೌಕ್‌ಗಳನ್ನು ವಶಪಡಿಸಿಕೊಂಡರು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಯುವಕನ ವಿರುದ್ಧ ಪ್ರಕರಣ ದಾಖಲಿಸಿದರು. ನವೆಂಬರ್‌ನಲ್ಲಿ, ಅದೇ ವಿಮಾನ ನಿಲ್ದಾಣದಲ್ಲಿ ಇನ್ನೂ ಎರಡು ಪ್ರೈಮೇಟ್‌ಗಳನ್ನು ಕಾಪಾಡಲಾಯ್ತು.
ಡಿಸೆಂಬರ್ 10ರಂದು ಇವುಗಳನ್ನು ಅಕ್ರಮವಾಗಿ ಭಾರತಕ್ಕೆ ತಂದಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ಪ್ರಯಾಣಿಕನ ಚೆಕ್-ಇನ್ ಬ್ಯಾಗೇಜ್‌ನಲ್ಲಿ 2 ಅಳಿವಿನಂಚಿನಲ್ಲಿರುವ ರೆಡ್-ಶ್ಯಾಂಕ್ಡ್ ಡೌಕ್ ಅನ್ನು ಮರೆಮಾಡಿ ಇಡಲಾಗಿತ್ತು. ಪ್ರಾಣಿಗಳನ್ನು ರಕ್ಷಿಸಲಾಯಿತು ಮತ್ತು ಪ್ರಯಾಣಿಕನನ್ನು ಬಂಧಿಸಲಾಯಿತು ಎಂದು ಬೆಂಗಳೂರು ಕಸ್ಟಮ್ಸ್ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ