ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳೊಳಗೆ ನೀಲನಕಾಶೆ ತಯಾರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಮಂಗಳೂರು (ಜು.18): ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಮುಂದಿನ ಎರಡು ತಿಂಗಳೊಳಗೆ ನೀಲನಕಾಶೆ ತಯಾರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಮಂಗಳೂರು ಭಾಗದಲ್ಲಿ ರೈಲ್ವೇ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ಪ್ರಗತಿ ಪರಿಶೀಲನೆಗಾಗಿ ನಗರಕ್ಕೆ ಆಗಮಿಸಿದ ಸಚಿವ ವಿ.ಸೋಮಣ್ಣ ಅವರು ಬುಧವಾರ ಬೆಳಗ್ಗೆ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದರು.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣವನ್ನು ಆಧುನೀಕರಣ ಮಾಡುವ ಬಗ್ಗೆ ಕಳೆದ ಹಲವು ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಈಗ ಒಂದು ಹಂತಕ್ಕೆ ಬಂದಿದ್ದು ಹಣ ಮೀಸಲಿರಿಸಲಾಗಿದೆ. ಶೀಘ್ರ ಅದರ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಪಾಲ್ಘಾಟ್, ಕೊಂಕಣ ಹಾಗೂ ನೈಋತ್ಯ ರೈಲು ವಿಭಾಗವೆಂಬ ಮೂರರ ಮಧ್ಯೆ ಮಂಗಳೂರು ಭಾಗದಲ್ಲಿ ಕೆಲಸಗಳು ಅಷ್ಟಾಗಿ ನಡೆದಿಲ್ಲ. ಅದಕ್ಕಾಗಿ ಮೂರೂ ವಿಭಾಗದ ಅಧಿಕಾರಿ ಪ್ರಮುಖರ ಜತೆಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು. 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಾವಿರಾರು ಕಿ.ಮೀ. ಹಳಿಗಳು ದ್ವಿಗುಣಗೊಂಡಿದೆ.
ಪುಟ್ಟರಾಜು ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದನ್ನು ಕಲಿಯಲಿ: ಸಚಿವ ಚಲುವರಾಯಸ್ವಾಮಿ
ಹೊಸ ಲೈನ್‌ಗಳನ್ನು ಹಾಕಲಾಗುತ್ತಿದೆ. ಮೇಲ್ಸೇತುವೆ, ಕೆಳ ಸೇತುವೆ ಕಾಮಗಾರಿ ನಡೆಯುತ್ತಿದೆ. ಲೆವೆಲ್ ಕ್ರಾಸಿಂಗ್ ಆಗುತ್ತಿದೆ. ಅಮೃತ್ ಭಾರತ್, ಗತಿಶಕ್ತಿ ಯೋಜನೆಯಲ್ಲಿ ವಿವಿಧ ರೈಲು ನಿಲ್ದಾಣಗಳು ಅಭಿವೃದ್ದಿ ಆಗಿದೆ. ಆದರೆ ಮಂಗಳೂರು ಭಾಗ ಮಾತ್ರ ಹಲವು ಗೊಂದಲಗಳಿಂದ ಒದ್ದಾಡುತ್ತಿದೆ. ತಮಿಳುನಾಡು, ಕೇರಳ ಮತ್ತು ಗೋವಾ, ಮಹಾರಾಷ್ಟ್ರ ನಡುವೆ ಮಂಗಳೂರು-ಕಾರವಾರ ಭಾಗದಲ್ಲಿ ರೈಲ್ವೆ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ರೀತಿ ಆಗಿಲ್ಲ. ಮುಂದೆಯೂ ಇದನ್ನು ಹಾಗೆಯೇ ಇರಿಸಲು ಬಿಡುವುದಿಲ್ಲ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಜತೆಯಲ್ಲಿ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದರು.
ಬಳಿಕ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವ ಸೋಮಣ್ಣ, ಫ್ಲ್ಯಾಟ್‌ಫಾರಂನ ಶೆಲ್ಟರ್ ರಚನೆ ಸೇರಿದಂತೆ ವಿವಿಧ ಕಾಮಗಾರಿಯ ಪರಿಶೀಲನೆ ನಡೆಸಿದರು. ಬಳಿಕ ಅಲ್ಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಇಲ್ಲಿ ಸುಮಾರು 30 ಕೋಟಿ ರು.ಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ಈಗಾಗಲೇ ಮೂರು ಫ್ಲ್ಯಾಟ್‌ಫಾರಂ ಇದ್ದು, ಇನ್ನೂ ಎರಡು ಫ್ಲ್ಯಾಟ್‌ಫಾರಂ ರಚನೆಗೆ ಅನುದಾನದ ಭರವಸೆ ನೀಡಿದರು. ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳೀಯ ಜಯನಗರ ಹಾಗೂ ಧೂಮ್ರ ಉಚ್ಚಿಲ ಪ್ರದೇಶದ ಸುಮಾರು 150 ಮನೆಗಳ ಸಂಪರ್ಕ ರಸ್ತೆಯನ್ನು ರೈಲ್ವೆ ಬಂದ್ ಮಾಡಿರುವ ಬಗ್ಗೆ ಸ್ಥಳೀಯರು ಅವಹಾಲು ಸಲ್ಲಿಸಿದರು. ಇದನ್ನು ಕೂಡಲೇ ಸರಿಪಡಿಸಿಕೊಡುವಂತೆ ಸಚಿವ ಸೋಮಣ್ಣ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪತಿ-ಪತ್ನಿ ನಡುವಿನ ಜಗಳ ಕ್ರೌರ್ಯವಾಗುವುದಿಲ್ಲ: ಹೈಕೋರ್ಟ್
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಖ್ಯಸಚೇತಕ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯರಾದ ದಿವಾಕರ ಪಾಂಡೇಶ್ವರ, ಚಂದ್ರಾವತಿ, ವೀಣಾಮಂಗಲ, ಪ್ರಮುಖರಾದ ಕಿಶೋರ್ ಕುಮಾರ್, ನಿತಿನ್ ಕುಮಾರ್, ರವಿಶಂಕರ ಮಿಜಾರ್, ಮೂರು ವಿಭಾಗಗಳ ಹಿರಿಯ ಅಧಿಕಾರಿಗಳು ಇದ್ದರು.