ಬೃಹತ್‌ ಗುಡ್ಡ ಕುಸಿತ: ಬೇಗ ಮನೆಗೆ ಬಾ ಮಗ ಎಂದ ತಾಯಿ, ಮನೆಗೆ ಬಂದ ಮಗನಿಗೆ ಸಿಕ್ಕಿದ್ದು ತಾಯಿಯ ಸೀರೆ ಮಾತ್ರ!

By Kannadaprabha News  |  First Published Jul 18, 2024, 1:13 PM IST

ಹೊರಗ ಮಳೆ ಇದೆ ಬೇಗ ಮನೆಗೆ ಬಾ ಅಂದ ತಾಯಿ, ಬಂದಾಗ ಮಗನಿಗೆ ಸಿಕ್ಕಿದ್ದು ತಾಯಿ ಸೀರೆ ಮಾತ್ರ!  ಶಿರೂರಿನ ಗುಡ್ಡ ಕುಸಿತದಿಂದ ತಾಲೂಕಿನ ಉಳುವರೆಯಲ್ಲಿ ನಡೆದ ದುರಂತದಲ್ಲಿ ತಾಯಿ ಹಾಗೂ ಮನೆಯನ್ನು ಕಳೆದುಕೊಂಡ ಮಗನ ವ್ಯಥೆಯ ಕಥೆ.


- ರಾಘು ಕಾಕರಮಠ

ಅಂಕೋಲಾ (ಜು.18): ಹೊರಗಡೆ ಸಿಕ್ಕಾಪಟ್ಟೆ ಮಳೆ ಇದೆ. ಮಗನೆ ಬೇಗಾ ಮನೆಗೆ ಬಾ. ಗಂಜಿ ಮಾಡಿ ಇಡ್ತೇನೆ ಎಂದು ತಾಯಿಯ ವಾತ್ಸಲ್ಯದ ಮಾತು ಕೇಳಿ ಮಗ ಮನೆಯಿಂದ ಅನತಿ ದೂರಕ್ಕೆ ಸಾಗಿದ್ದ. ಆದರೆ ಮಗ ಮನೆಯಿಂದ ಹೊರಟ 10 ನಿಮಿಷಕ್ಕೆ ಬೃಹತ್‌ ಗುಡ್ಡ ಕುಸಿದು ಅಲ್ಲಿಯ ಚಿತ್ರಣವನ್ನೆ ಬದಲಿಸಿತ್ತು. ಮಗ ಏನಾಯಿತೆಂದು ಮನೆಯ ಬಳಿ ಬಂದು ನೋಡಿದರೆ ಮನೆ ಸಂಪೂರ್ಣ ನೆಲಸಮವಾಗಿತ್ತು. ಇನ್ನೊಂದೆಡೆ ಅಂದು ತಾಯಿ ಉಟ್ಟಿದ್ದ ಸೀರೆ ಮಾತ್ರ ಅಲ್ಲಿ ಉಳಿದಿತ್ತು.

Latest Videos

undefined

- ಇದು ಶಿರೂರಿನ ಗುಡ್ಡ ಕುಸಿತದಿಂದ ತಾಲೂಕಿನ ಉಳುವರೆಯಲ್ಲಿ ನಡೆದ ದುರಂತದಲ್ಲಿ ತಾಯಿ ಹಾಗೂ ಮನೆಯನ್ನು ಕಳೆದುಕೊಂಡ ಮಗನ ವ್ಯಥೆಯ ಕಥೆ.

ಮನೆಯಲ್ಲಿ ತಾಯಿ ಸಣ್ಣು ಹನುಮಂತ ಗೌಡ (57) ಹಾಗೂ ಮಗ ಮಂಜುನಾಥ ಹನುಮಂತ ಗೌಡ (30) ಇಬ್ಬರೆ ಇದ್ದರು. ಇದ್ದುದರಲ್ಲೆ ತೃಪ್ತಿಯ ಜೀವನವನ್ನು ಸಾಗಿಸುತ್ತಿದ್ದರು. ಮಗನ ಮದುವೆ ಮಾಡಬೇಕು, ಮೊಮ್ಮಗನನ್ನು ನೋಡಬೇಕು ಎಂಬ ಮಹಾದಾಸೆಯನ್ನು ಸಣ್ಣು ಗೌಡ ಕಟ್ಟಿಕೊಂಡಿದ್ದರು. ಆದರೆ ವಿಧಿಯಾಟವೆ ಬೇರೆ ಇತ್ತು.

ಶಿರೂರು ಗುಡ್ಡಕುಸಿತ ದುರಂತ: ಮತ್ತೊಂದು ಮೃತದೇಹ ಪತ್ತೆ!

 

ಬೃಹತ್‌ ಗುಡ್ಡ ಕುಸಿತದಿಂದ ಸುಮಾರು 15 ಸಾವಿರ ಲೋಡ್‌ನಷ್ಟು ಮಣ್ಣು ಗಂಗಾವಳಿ ನದಿಗೆ ಬಿದ್ದ ಪರಿಣಾಮ ನೀರು ಸುನಾಮಿಯಂತೆ ಉಕ್ಕಿ ಸಣ್ಣು ಗೌಡರನ್ನು ಕೊಚ್ಚಿಕೊಂಡು ಹೋಗಿತ್ತು. ಅಲ್ಲಿ ತಾಯಿ ಉಟ್ಟಿದ್ದ ಸೀರೆ ಮಾತ್ರ ಇತ್ತೆ ವಿನಾ ಮನೆಯ ಯಾವ ಅವಶೇಷಗಳು ಅಲ್ಲಿರಲಿಲ್ಲ. ಮನೆಯಿದ್ದ 30 ಮೀ. ಅಂತರದಲ್ಲಿ ಮನೆಯ ಚಾವಣಿ, ಗೋಡೆ ಕಂಡುಬಂದಿದೆ.

ಘಟನೆ ನಡೆದು 2 ದಿನ ಕಳೆದಿದೆ. ಆದರೆ ತಾಯಿ ಮಾತ್ರ ಪತ್ತೆಯಾಗಿಲ್ಲ. ಆಕೆಯ ಉಟ್ಟಿದ್ದ ಸೀರೆಯನ್ನು ಹಿಡಿದು ಮಗನ ರೋದನೆ, ಕಣ್ಣೀರು ಮನ ಕಲುಕಿಸುವಂತಿತ್ತು. 

8 ಮನೆ ಸಂಪೂರ್ಣ ನೆಲಸಮ: ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದ ದುರಂತಕ್ಕೆ 300 ಮೀ. ಅಂತರದಲ್ಲಿರುವ ಉಳುವರೆಯ ಮೂಡುಕೋಣೆಯ ಗೌಡರ ಕೊಪ್ಪ ಹಾಗೂ ಅಂಬಿಗರ ಕೊಪ್ಪದ ಜನರ ಬದುಕನ್ನೆ ಬರಡಾಗಿಸಿದೆ. ಅಲ್ಲಿದ್ದ 8 ಮನೆಗಳು ಸಂಪೂರ್ಣ ನೆಲಸಮವಾಗಿದೆ. 30 ಮನೆಗಳು ಭಾಗಶಃ ಹಾನಿಗೊಳಗಾಗಿದೆ. 4 ಸಾವಿರಕ್ಕೂ ಹೆಚ್ಚು ಅಡಕೆ, ತೆಂಗಿನ ಮರಗಳು, ಭತ್ತದ ಸಸಿಗಳು ಮಣ್ಣಿನಲ್ಲಿ ಹೂತು ಹೋಗಿವೆ. 60ಕ್ಕೂ ಹೆಚ್ಚು ದೋಣಿಗಳು, ಲಕ್ಷಾಂತರ ರುಪಾಯಿಯ ಮೌಲ್ಯದ ಬಲೆ, ಮನೆಯಲ್ಲಿದ್ದ ಸಾಮಾನುಗಳು ನದಿಯ ಪಾಲಾಗಿವೆ. ಅಂಗನವಾಡಿ ಕೇಂದ್ರವು ಕೂಡ ಭಾಗಶಃ ಹಾನಿಗೊಳಗಾಗಿದೆ.

ಉಪವಾಸವಿರುವ ಸಾಕುಪ್ರಾಣಿಗಳು: ಉಳುವರೆಯಲ್ಲಿ ಗುಡ್ಡ ಕುಸಿತ ಮಹಾ ದುರಂತದಿಂದ ಜನರು ಅತಂತ್ರರಾಗಿದ್ದಾರೆ. ಸುಮಾರು 150 ಜನರು ಕಾಳಜಿ ಕೇಂದ್ರದಲ್ಲಿ ಊಟಕ್ಕೆ ಮೊರೆ ಹೋಗಿದ್ದಾರೆ. ಆದರೆ ಇಲ್ಲಿರುವ 39 ಮನೆಗಳಲ್ಲಿರುವ ನಾಯಿ, ಬೆಕ್ಕುಗಳು ಆಹಾರವಿಲ್ಲದೆ ಚಡಪಡಿಸುತ್ತಿವೆ.

ವೃದ್ಧೆ ಲಕ್ಷ್ಮಿ ಚಂದ್ರ ಗೌಡ ಅವರು ಹೇಳುವಂತೆ, ಮನೆಯಲ್ಲಿ ಸಾಕಿದ ಬೆಕ್ಕುಗಳಿಗೆ ಊಟವಿಲ್ಲದೆ ಪರದಾಡುತ್ತಿವೆ. ಈ ರೋದನೆ ನೋಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ನಾನು ಕೂಡ ಕಾಳಜಿ ಕೇಂದ್ರಕ್ಕೆ ಹೋಗಿಲ್ಲ. ಅವು ಉಪವಾಸ ಇವೆ ಎಂದು ನಾನು ಕೂಡ ಉಪವಾಸ ಇದ್ದೇನೆ ಎಂದು ನೊಂದು ನುಡಿದರು.

50 ಮೀಟರ್‌ ಅಂತರದಲ್ಲಿ ಅವಶೇಷ ಪತ್ತೆ: ಉಳುವರೆಯ ಸಣ್ಣು ಹನುಮಂತ ಗೌಡ, ನೀಲಾ ಮುದ್ದು ಗೌಡ, ದಾದಾ ತುಳಸಪ್ಪ ಗೌಡ, ನಾಗಿ ಬೊಮ್ಮ ಗೌಡ, ಗಣಪತಿ ಗೌಡ, ಗೋವಿಂದ ಕೃಷ್ಣ ಗೌಡ, ಮೋಹನ ಅಂಬಿಗ ಅವರ ಮನೆಗಳು ಸಂಪೂರ್ಣ ನೆಲಸಮವಾಗಿದೆ. ವಿಶೇಷವೆಂದರೆ 5 ಮನೆಗಳ ನೆಲಗಟ್ಟು ಮಾತ್ರ ಕಂಡುಬರುತ್ತಿದೆ. ಅದರೆ ಸುನಾಮಿಯಂಥ ನೀರಿನ ರಭಸಕ್ಕೆ ಗೋಡೆ, ಚಾವಣಿಗಳು 50 ಮೀಟರ್ ಅಂತರದಲ್ಲಿ ಅವಶೇಷಗಳಂತೆ ಪತ್ತೆಯಾಗಿದೆ. ತಾಲೂಕಿನ ಉಳವರೆ, ಸಗಡಗೇರಿ, ಜೂಗ, ಶಿರೂರು ಒಟ್ಟು ನಾಲ್ಕು ಭಾಗಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ. 850 ಜನರು ಇದರಲ್ಲಿ ವಾಸವಾಗಿದ್ದಾರೆ ಎಂದು ತಾಲೂಕಾಡಳಿತ ಸ್ಪಷ್ಟಪಡಿಸಿದೆ.

 

ಉತ್ತರಕ‌ನ್ನಡದಲ್ಲಿ ಭೀಕರ ಮಳೆಗೆ ಮತ್ತೊಂದು ಬಲಿ: ಗೋವುಗಳ ರಕ್ಷಣೆಗಿಳಿದಿದ್ದ ವ್ಯಕ್ತಿ ಸಾವು

ಮುಂದುವರಿದ ತೆರವು ಕಾರ್ಯಾಚರಣೆ: ಶಿರೂರಿನಲ್ಲಿ ಬುಧವಾರ ಬೆಳಗಿನ ಜಾವದಿಂದ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ತೆಗೆಯುವ ಮತ್ತು ಶವದ ಹುಡುಕಾಟಕ್ಕಾಗಿ ನಿರಂತರವಾಗಿ ಜಿಲ್ಲಾಡಳಿತ ಮತ್ತು ಎನ್‌ಡಿಆರ್‌ಎಫ್ ತಂಡ ಕಾರ್ಯಾಚರಣೆ ಮೂಂದುವರಿಸಿದೆ. ಗುರುವಾರ ಹೆದ್ದಾರಿಯಲ್ಲಿ ಬಿದ್ದ ಮಣ್ಣನ್ನು ಸಂಪೂರ್ಣ ತೆರವಾಗಬಹುದು ಎಂದು ಜಿಲ್ಲಾಡಳಿತ ಅಂದಾಜಿಸಿದೆ.

ಒಂದು ವೇಳೆ ಬಿದ್ದ ಮಣ್ಣು ತೆರವುಗೊಂಡರೂ ಮತ್ತೆ ಮಣ್ಣು ಕುಸಿಯುವ ಆತಂಕ ಇರುವುದರಿಂದ ಬೆಳಗಾವಿಯಿಂದ ವಿಶೇಷ ಅಧ್ಯಯನ ತಂಡ ಬಂದು ಪರಿಶೀಲನೆ ನಡೆಸಿದ ಮೇಲೆಯೆ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ತಾಲೂಕಾಡಳಿತದ ಮೂಲಗಳು ತಿಳಿಸಿದೆ.

click me!