ಪ್ರಭು ಚವ್ಹಾಣ್‌ ಪುತ್ರ ಪ್ರತೀಕ್‌ ನಿರಾಳ: ಹೈಕೋರ್ಟ್‌ ಮಧ್ಯಂತರ ಬೇಲ್‌

Published : Aug 20, 2025, 07:35 AM IST
prabhu chauhan

ಸಾರಾಂಶ

ಪ್ರಕರಣ ಸಂಬಂಧ ಜಾಮೀನು ಕೋರಿ ಪ್ರತೀಕ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಈ ಅರ್ಜಿ ಇತ್ಯರ್ಥಪಡಿಸುವವರೆಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಬೆಂಗಳೂರು (ಆ.20): ವಿವಾಹವಾಗುವುದಾಗಿ ನಂಬಿಸಿ ಯುವತಿ ಮೇಲೆ ಮೇಲೆ ಪದೇ ಪದೇ ಅತ್ಯಾ*ರ ಎಸಗಿದ ಆರೋಪ ಸಂಬಂಧ ಬಂಧನ ಭೀತಿಯಲ್ಲಿದ್ದ ಮಾಜಿ ಸಚಿವ ಪ್ರಭು ಚವ್ಹಾಣ್‌ ಅವರ ಪುತ್ರ ಪ್ರತೀಕ್‌ಗೆ ಹೈಕೋರ್ಟ್‌ ಮಧ್ಯಂತರ ಜಾಮೀನು ನೀಡಿದೆ. ಪ್ರಕರಣ ಸಂಬಂಧ ಜಾಮೀನು ಕೋರಿ ಪ್ರತೀಕ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಜೊತೆಗೆ, ಈ ಅರ್ಜಿ ಇತ್ಯರ್ಥಪಡಿಸುವವರೆಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಈ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಪೀಠ, ಪ್ರಕರಣದ ವಾಸ್ತವಾಂಶಗಳನ್ನು ಪರಿಗಣಿಸಿದರೆ ಜಾಮೀನು ಕೋರಿ ಸಲ್ಲಿಸಿರುವ ಮುಖ್ಯ ಅರ್ಜಿ ಇತ್ಯರ್ಥವಾಗುವವರೆಗೆ ಮಧ್ಯಂತರ ಜಾಮೀನು ನೀಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಬಹುದಾಗಿದೆ. ಅದರಂತೆ ಮುಖ್ಯ ಅರ್ಜಿಯ ವಿಲೇವಾರಿಗೆ ಬಾಕಿಯಿರುವ ಸಮಯದಲ್ಲಿ ಅರ್ಜಿದಾರರನ್ನು ಬಂಧಿಸಿದರೆ, ಎರಡು ಲಕ್ಷ ರು. ವೈಯಕ್ತಿಕ ಬಾಂಡ್‌ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಿ ಬಿಡುಗಡೆ ಮಾಡಬೇಕು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಉಪ್ಪಾರಪೇಟೆ ಠಾಣಾ ಪೊಲೀಸರಿಗೆ ನಿರ್ದೇಶಿಸಿದೆ.

ಅಲ್ಲದೆ, ತನಿಖೆಗೆ ಪ್ರತೀಕ್‌ ಸಹಕರಿಸಬೇಕು. ಪ್ರಾಸಿಕ್ಯೂಷನ್‌ ಸಾಕ್ಷ್ಯಾಧಾರಗಳನ್ನು ತಿರುಚಬಾರದು ಎಂದು ನ್ಯಾಯಪೀಠ ನಿರ್ದೇಶಿಸಿದೆ. ಮದುವೆಯಾಗುವುದಾಗಿ ನಂಬಿಸಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ತನ್ನ ಮೇಲೆ ಪ್ರತೀಕ್‌ ಪದೇ ಪದೇ ಅತ್ಯಾ*ರ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ಸಹ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯು ಬೀದರ್‌ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣದ ತನಿಖೆಯು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ವರ್ಗಾವಣೆಯಾಗಿತ್ತು. ಇದರಿಂದ ಜಾಮೀನು ಕೋರಿ ಪ್ರತೀಕ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಸಿ, ಪ್ರತೀಕ್‌ ಮತ್ತು ದೂರುದಾರೆಯ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಆ ಸಮಾರಂಭದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಅವರಿಬ್ಬರೂ ಹಲವು ಸಂದರ್ಭಗಳಲ್ಲಿ ಒಟ್ಟಿಗೆ ಪ್ರಯಾಣಿಸಿದ್ದಾರೆ. ಆದರೆ, ಕಾರಣಾಂತರಗಳಿಂದ ಮದುವೆ ನಡೆದಿಲ್ಲ ಎಂದು ತಿಳಿಸಿದರು. ಜೊತೆಗೆ, ಅರ್ಜಿದಾರ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ಪ್ರತೀಕ್‌ ಅವರನ್ನು ಬಂಧಿಸಲು ಪೊಲೀಸರು ತೀವ್ರವಾದ ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಪೊಲೀಸರು ಬಂಧಿಸಿದರೆ, ಅರ್ಜಿದಾರರಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಹಾಗಾಗಿ, ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ದೂರುದಾರೆಯ ಪರ ವಕೀಲರು, ಆರಂಭದಿಂದಲೂ ಅರ್ಜಿದಾರರಿಗೆ ದೂರುದಾರರನ್ನು ಮದುವೆಯಾಗುವ ಯಾವುದೇ ಉದ್ದೇಶವಿರಲಿಲ್ಲ. ಇದರಿಂದ ಅರ್ಜಿದಾರನ ವಿರುದ್ಧದ ಆರೋಪಗಳಲ್ಲಿ ಸತ್ಯಾಂಶವಿದೆ ಎಂಬುದಾಗಿ ತಿಳಿದು ಬರುತ್ತದೆ ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ದೂರನ್ನು ಓದಿದಾಗ ಅರ್ಜಿದಾರರು ಮತ್ತು ದೂರುದಾರೆಯು ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸಂದೇಶಗಳು ವಿನಿಮಯವಾಗಿದ್ದು, 2023ರ ಫೆ.25ರಂದು ವಿವಾಹ ನಿಶ್ಚಿತಾರ್ಥ ನಡೆದಿತ್ತು. ನಿಶ್ಚಿತಾರ್ಥ ಮುರಿದುಬಿದ್ದಿದ್ದು, ದೂರುದಾರೆಯು ಅರ್ಜಿದಾರನ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದ ವಾಸ್ತವಾಂಶ ಪರಿಗಣಿಸಿದರೆ ಅರ್ಜಿದಾರರಿಗೆ ಮಧ್ಯಂತರ ಜಾಮೀನು ನೀಡಬಹುದಾಗಿದೆ ಎಂದು ಪೀಠ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ