
ಬೆಂಗಳೂರು (ಏ.26): ಸಹಕಾರ ಬ್ಯಾಂಕ್‌ಗಳಿಗೆ 439.12 ಕೋಟಿ ರು. ವಂಚನೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ನ್ಯಾಯಾಲಯಕ್ಕೆ ಸಿಐಡಿ ಆರೋಪಪಟ್ಟಿ ಸಲ್ಲಿಕೆ ಬೆನ್ನಲ್ಲೇ ದಿಢೀರ್ ಬೆಳವಣಿಗೆಯೊಂದರಲ್ಲಿ ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿ ಅವರು ಬ್ಯಾಂಕಿಗೆ 120 ಕೋಟಿ ರು. ಸಾಲ ಮರುಪಾವತಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಚಾಮರಾಜಪೇಟೆಯಲ್ಲಿರುವ ರಾಜ್ಯ ಅಪೆಕ್ಸ್ ಬ್ಯಾಂಕ್‌ಗೆ ಮಾಜಿ ಸಚಿವ ಹಾಗೂ ಬೆಳಗಾವಿ ಜಿಲ್ಲೆ ಗೋಕಾಕ್ ಕ್ಷೇತ್ರದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಾಲ ಕಟ್ಟಿದ್ದಾರೆ. ಈ ಸಾಲ ಪಾವತಿ ಬಳಿಕವೂ ಅವರಿಗೆ ಸಂಕಷ್ಟ ತಪ್ಪಿಲ್ಲ.
ಈಗಾಗಲೇ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವರ ವಿರುದ್ಧ ನ್ಯಾಯಾಲಯಕ್ಕೆ ಸಿಐಡಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇನ್ನು ಮಾಜಿ ಸಚಿವರು ಸಾಲ ಮರಳಿಸಿರುವುದನ್ನು ‘ಕನ್ನಡಪ್ರಭ’ಕ್ಕೆ ಸಿಐಡಿ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ‘ತಾವು ಪಡೆದ ಸಾಲದಲ್ಲಿ 120 ಕೋಟಿ ರು. ಅನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಾವತಿಸಿರುವ ಮಾಹಿತಿ ಗೊತ್ತಾಗಿದೆ. ಆದರೆ ವಂಚನೆ ಪ್ರಕರಣ ಸಂಬಂಧ ಸಾಲ ಪಾವತಿಸಿದರೂ ಆರೋಪಪಟ್ಟಿ ಆಧಾರದ ಮೇಲೆ ನ್ಯಾಯಾಲಯದ ವಿಚಾರಣೆ ನಡೆಯಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಂಚನೆ ಪ್ರಕರಣ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ
ಸಿಐಡಿ ತನಿಖೆ ವೇಳೆ ನಾನು ತಪ್ಪು ಮಾಡಿಲ್ಲ. ನನಗೆ ಸಾಲದ ವಿಚಾರ ಗೊತ್ತಿಲ್ಲ ಎಂದು ಹೇಳುತ್ತಿದ್ದ ರಮೇಶ್ ಜಾರಕಿಹೊಳಿ ಅವರು, ಇದೀಗ ದಿಢೀರ್ ಆಗಿ ಬ್ಯಾಂಕ್‌ಗೆ ಸ್ಪಲ್ಪ ಪ್ರಮಾಣದ ಸಾಲ ಮರಳಿಸಿರುವುದು ಕುತೂಹಲ ಮೂಡಿಸಿದೆ. ಈ ಸಾಲ ಪಾವತಿ ಹಿನ್ನೆಲೆಯಲ್ಲಿ ಮಾಜಿ ಸಚಿವರ ನಡೆ ಕುರಿತು ವಿಶ್ಲೇಷಣೆ ನಡೆದಿದೆ. ವಂಚನೆ ಕೃತ್ಯದಲ್ಲಿ ತಾವು ದೋಷ ಮುಕ್ತರಾಗುವ ವಿಶ್ವಾಸದಲ್ಲಿದ್ದ ಅವರಿಗೆ ಸಿಐಡಿ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಕೆಗೆ ಮುಂದಾಗಿದ್ದು ಮುಂದಿನ ಕಾನೂನು ಕ್ರಮದ ಭೀತಿ ಹುಟ್ಟಿಸಿದೆ. ಅದರಿಂದ ತಪ್ಪಿಸಿಕೊಳ್ಳುವ ದೂರದೃಷ್ಟಿ ಇಟ್ಟುಕೊಂಡು ಮಾಜಿ ಸಚಿವರು ಹಣ ಪಾವತಿಸಿರಬಹುದು ಎಂದು ಮೂಲಗಳು ಹೇಳಿವೆ.
ಕಂಪನಿ ಹೆಸರಿನಲ್ಲೇ ಸಾಲ ಮರು ಪಾವತಿ: ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿ ‘ಸೌಭಾಗ್ಯ ಶುಗರ್ಸ್’ ಹೆಸರಿನಲ್ಲಿ ಸಕ್ಕರೆ ಕಂಪನಿ ಆರಂಭ ಹಾಗೂ ವಿಸ್ತರಣೆಗೆ ರಾಜ್ಯ ಅಪೆಕ್ಸ್ ಹಾಗೂ ಅದರ ಸಮೂಹದ ನಾಲ್ಕು ಡಿಸಿಸಿ ಬ್ಯಾಂಕ್‌ಗಳಿಂದ ಹಂತ ಹಂತವಾಗಿ 232.88 ಕೋಟಿ ರು. ಸಾಲವನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಡೆದಿದ್ದರು. ಆದರೆ ಪೂರ್ವ ಷರತ್ತಿನನ್ವಯ ಅಸಲು ಮತ್ತು ಬಡ್ಡಿಯನ್ನು ಮರು ಪಾವತಿಸದ ಕಾರಣ ಒಟ್ಟು 439.7 ಕೋಟಿ ವಂಚನೆಯಾಗಿದೆ ಎಂದು ಬೆಂಗಳೂರಿನ ವಿವಿ ಪುರ ಪೊಲೀಸ್ ಠಾಣೆಗೆ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕರು ದೂರಿದ್ದರು.
ತಂದೆ, ಮಗನನನ್ನು ಬೈಯ್ಬೇಡಿ ಎಂದು ಶಾಸಕ ಯತ್ನಾಳ್‌ಗೆ ಹೇಳಿದ್ದೀನಿ: ರಮೇಶ್ ಜಾರಕಿಹೊಳಿ
ಈ ವಂಚನೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, ಏ.22 ರಂದು ಆ ಕಂಪನಿಯ ಆಡಳಿತ ಮಂಡಳಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್ ಜಾರಕಿಹೊಳಿ ಹಾಗೂ ನಿರ್ದೇಶಕರಾಗಿದ್ದ ವಸಂತ್.ವಿ.ಪಾಟೀಲ ಹಾಗೂ ಶಂಕರ್.ವಿ.ಪಾವಡೆ ವಿರುದ್ಧ ನ್ಯಾಯಾಲಯಕ್ಕೆ 4,888 ಪುಟಗಳ ದೋಷಾರೋಷ ಪಟ್ಟಿಯಲ್ಲಿ ಸಲ್ಲಿಸಿತ್ತು. ಅದೇ ದಿನ ಬ್ಯಾಂಕ್‌ಗೆ ಮಾಜಿ ಸಚಿವರು ಸಾಲ ಕಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ