Toxic Air: ರೈತರಿಗೆ ಸುಳ್ಳು ಹೇಳಿ ಭೂಮಿ ಪಡೆದ ಸರ್ಕಾರ: ವಿಳಂಬ ಏಕೆ?

Published : Apr 26, 2025, 09:25 AM ISTUpdated : Apr 26, 2025, 09:37 AM IST
Toxic Air: ರೈತರಿಗೆ ಸುಳ್ಳು ಹೇಳಿ ಭೂಮಿ ಪಡೆದ ಸರ್ಕಾರ: ವಿಳಂಬ ಏಕೆ?

ಸಾರಾಂಶ

ಪರಿಸರ ಹಾಗೂ ಜನ ಜೀವನಕ್ಕೆ ಹಾನಿ ಬೀರುವಂತಹ ಕೆಮಿಕಲ್‌ ಕಂಪನಿಗಳನ್ನುಇಲ್ಲಿ ನಿರ್ಮಾಣ ಮಾಡುವುದಿಲ್ಲ ಎಂದು ಜನರ ಮನವೊಲೈಸಿದ್ದ ಸರ್ಕಾರ.

ಆನಂದ್‌ ಎಂ. ಸೌದಿ

ಯಾದಗಿರಿ (ಏ.26): ಪರಿಸರ ಹಾಗೂ ಜನ ಜೀವನಕ್ಕೆ ಹಾನಿ ಬೀರುವಂತಹ ಕೆಮಿಕಲ್‌ ಕಂಪನಿಗಳನ್ನುಇಲ್ಲಿ ನಿರ್ಮಾಣ ಮಾಡುವುದಿಲ್ಲ ಎಂದು ಜನರ ಮನವೊಲೈಸಿದ್ದ ಸರ್ಕಾರ, ಕೊನೆಗೆ ನೀಡಿದ್ದು ಉಸಿರಾಡಲೂ ಪರದಾಡುವಂತಹ ವಾತಾವರಣ ಹೊರಸೂಸುವ ಬಲ್ಕ್‌ ಡ್ರಗ್‌ ಫಾರ್ಮಾಗಳನ್ನು ಅಂದರೆ, ಅಪಾಯಕಾರಿ ಅನ್ನಿಸುವಂತಹ ‘ರೆಡ್‌ ಝೋನ್‌’ ಕೈಗಾರಿಕೆಗಳ ಸ್ಥಾಪಿಸಿದ್ದು. ನಮ್ಮ ಜನರ-ರೈತರ ಮುಗ್ಧತೆಗೆ ಮೋಸ ಆದಂತಿದೆ, ನಮ್ಮನ್ನೆಲ್ಲ ಯಾಮಾರಿಸಿ-ಸುಳ್ಳು ಹೇಳಿದ ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿದೆ. ಈಗ ನೋಡಿದರೆ ಇಲ್ಲಿ ಸ್ವಚ್ಛ ಉಸಿರಾಡಲೂ ಪರದಾಡುವಂತಾಗಿದೆ, ಬದುಕು ಅನಿಶ್ಚತತೆಯಲ್ಲಿದೆ ಎಂಬ ವಾತಾವರಣ ನಿರ್ಮಾಣವಾಗಿದೆ ಎಂದು ಕಡೇಚೂರು ಗ್ರಾಮದ ಹಿರಿಯರಾದ ಸಿದ್ದಣ್ಣಗೌಡರು ‘ಕನ್ನಡಪ್ರಭ’ದೆದುರು ನೋವು ತೋಡಿಕೊಂಡರು.

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆಂದು 2011 ಡಿಸೆಂಬರಿನಲ್ಲಿ ಭೂಸ್ವಾಧೀನಕ್ಕೆ ರಾಜ್ಯಪತ್ರ ಅಧಿಸೂಚನೆ ಹೊರಡಿಸಿದ್ದ ಸರ್ಕಾರ, ಕಡೇಚೂರು ಗ್ರಾಮದ ರೈತರಿಂದ 2735.25 ಎಕರೆ, ಬಾಡಿಯಾಳ ಗ್ರಾಮದ ರೈತರಿಂದ 496.34 ಎಕರೆ ಹಾಗೂ ಇತರ ಭಾಗದಿಂದ 84.24 ಎಕರೆ ಸೇರಿದಂತೆ ಒಟ್ಟು 3,232.22 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿತ್ತು. ರಾಷ್ಟ್ರೀಯ ಹೆದ್ದಾರಿ-150ಕ್ಕೆ ಅಂಟಿಕೊಂಡಂತೆ ಇರುವ ಜಮೀನುಗಳಿಗೆ ಪ್ರತಿ ಎಕರೆಗೆ 7.5 ಲಕ್ಷ ರು. ಹಾಗೂ ಹಿಂಬದಿಯ ಜಮೀನುಗಳಿಗೆ 6 ಲಕ್ಷ ರು. ದಂತೆ ಪರಿಹಾರ ನೀಡಿತ್ತು.

ಇದನ್ನೂ ಓದಿ: ವಿಷಕಾರಿ ತ್ಯಾಜ್ಯ ಹಳ್ಳಕ್ಕೆ, ಅಲ್ಲಿಂದ ಭೀಮೆಯೊಡಲಿಗೆ: ಜನ-ಜಲ-ಜೀವನದ ಮೇಲೆ ದುಷ್ಪರಿಣಾಮ

ಆದರೆ, ಇಲ್ಲಾಗಿದ್ದೇ ಬೇರೆ ಸರ್ಕಾರ ಹೇಳಿದ್ದೊಂದು, ಮಾಡಿದ್ದೊಂದು. ಬಲ್ಕ್‌ ಡ್ರಗ್‌, ಕೆಮಿಕಲ್‌ ತ್ಯಾಜ್ಯಕ್ಕೆ ಅನುಮತಿ ಸಿಕ್ಕು ವಿಷಕಾರಿ ಗಾಳಿಯ ಆತಂಕ ಎದುರಾಗಿದೆ. ಈ ಹಿಂದೆ ನಡೆದ ಅನೇಕ ಸಭೆಗಳಲ್ಲಿ ನಮಗೆಲ್ಲ ಒಳ್ಳೆಯ ಕೈಗಾರಿಕೆಗಳನ್ನೇ ತರುವ, ಇಲ್ಲಿನ ಜನರಿಗೆ ಉದ್ಯೋಗ, ಬದುಕು ಕಟ್ಟಿಕೊಳ್ಳುವ ಕಾರ್ಖಾನೆಗಳು ಬರುತ್ತವೆ ಎಂದು ಹೇಳಿದ್ದ ಸರ್ಕಾರ/ಅಧಿಕಾರಿಗಳು ನಮಗೆಲ್ಲ ಮೋಸ ಮಾಡ್ಬಿಟ್ರು..! ಏನೇನೋ ಕನಸುಗಳನ್ನು ಕಂಡಿದ್ದ ನಮ್ಮ ಜನರೆಲ್ಲ ಭರವಸೆಗಳಿಗೆ ಹಿಗ್ಗಿ ಜಮೀನು ನೀಡಿದ್ದರು ಎಂದು ಸಿದ್ದನಗೌಡ ಅಂದಿನ ಸಂದರ್ಭಗಳನ್ನು ಮೆಲುಕು ಹಾಕಿದರು.

ಸಚಿವ ಸಂಪುಟದಲ್ಲಿ ಬೇಗ ನಿರ್ಧಾರವಾಗಲಿ: 2011ರಲ್ಲಿ 3232.22 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದ ಸರ್ಕಾರ, 2021ರಲ್ಲಿ ಹೈದ್ರಾಬಾದ-ಬೆಂಗಳೂರು ಕೈಗಾರಿಕಾಭಿವೃದ್ಧಿ ಕಾರಿಡಾರ್‌ ಯೋಜನೆಗಾಗಿ ಮತ್ತೇ ಹೆಚ್ಚುವರಿ 3269.29 ಎಕರೆ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಸೈದಾಪುರ ಹೋಬಳಿಯ ಕಡೇಚೂರು, ದದ್ದಲ್‌, ಶೆಟ್ಟಿಹಳ್ಳಿ ಹಾಗೂ ರಾಚನಳ್ಳಿ ಗ್ರಾಮಗಳ ಜಮೀನುಗಳನ್ನು ಇದಕ್ಕೆಂದು ಗುರುತಿಸಿತ್ತು. ಸದರಿ ಜಮೀನುಗಳನ್ನು ಒಪ್ಪಂದ, ಆಧಾರ, ಭೋಗ್ಯ,ಗುತ್ತಿಗೆ, ಅದಲು-ಬದಲು ಅಥವಾ ಮತ್ಯಾವುದೇ ರೀತಿಯಲ್ಲಿ ವಿಲೇವಾರಿ ಮಾಡುವಂತಿಲ್ಲ, ಕಟ್ಟಡಗಳ ನಿರ್ಮಾಣ ಮಾಡಿವಂತಿಲ್ಲ ಅಥವಾ ಯಾವುದೇ ರೀತಿಯ ಅಭಿವೃದ್ಧಿ ಕೆಲಸವನ್ನೂ ಮಾಡದಂತೆ ಸೂಚಿಸಿದ್ದರಿಂದ, ಪಹಣಿಗಳಲ್ಲಿ ಈಗ ರೈತರ ಹೆಸರುಗಳು ಇವೆಯಾದರೂ, ಯಾವುದೇ ರೀತಿಯ ವ್ಯವಹಾರಗಳಿಗೆ ಅನುಕೂಲವಾಗದೆ ಈ ವ್ಯಾಪ್ತಿಯ ಜನರು ಪರದಾಡುವಂತಾಗಿದೆ.

ಇದನ್ನೂ ಓದಿ: ವಿಷಗಾಳಿ ಆತಂಕ: ಮಕ್ಕಳ ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲು

ಹೆಚ್ಚುವರಿ ಭೂ ಅಧಿಸೂಚನೆ ರದ್ದುಗೊಳಿಸುವಂತೆ ಅಂದು ಶಾಸಕರಾಗಿದ್ದ ದಿ.ನಾಗನಗೌಡ ಕಂದಕೂರ ಸರ್ಕಾರಕ್ಕೆ ಆಗ್ರಹಿಸಿ, ಪ್ರತಿಭಟನೆಗಳು ನಡೆದಿದ್ದವು. ಬಲ್ಕ್‌ ಡ್ರಗ್‌ ಹೆಸರಲ್ಲಿ ರೈತರ ಫಲವತ್ತಾದ ಜಮೀನುಗಳನ್ನು ಬರಡು ಮಾಡುವ ಜೊತೆಗೆ ವಾತಾವರಣ ಕೆಡುತ್ತದೆ ಎಂಬ ಆತಂಕ ಮೂಡಿತ್ತು. ಸರ್ಕಾರ ಸಚಿವ ಸಂಪುಟದಲ್ಲಿ ಇದನ್ನು ನಿರ್ಧರಿಸಬೇಕಿದೆ. ಸಚಿವ ದರ್ಶನಾಪುರ ಅವರೂ ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಅದ್ಯಾಕೆ ನಿರ್ಧಾರ ಮುಂದೂಡಲಾಗುತ್ತಿದೆ ಗೊತ್ತಿಲ್ಲ. ವಾಪಸ್‌ ಆದೇಶ ಆದರೆ, ರೈತರ ಜಮೀನುಗಳು ಸ್ವತಂತ್ರವಾದಂತೆ, ಮೊದಲು ಮೋಸ ಹೋದ ನಾವೆಲ್ಲ ಈಗ 2ನೇ ಬಾರಿಯೂ ಮೋಸ ಆಗಲು ಬಿಡುವುದಿಲ್ಲ.
-ಸಿದ್ದನಗೌಡ ಕಡೇಚೂರು, ಹಿರಿಯ ಮುಖಂಡರು, ಕಡೇಚೂರು ಗ್ರಾಮ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಯಾಕೆ ಕೇಸ್ ಇಲ್ಲ? ಕೇಂದ್ರದ ವಿರುದ್ಧ ಪ್ರಿಯಾಂಕ್ ಪ್ರಶ್ನೆಗಳ ಸುರಿಮಳೆ!
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ