ನನ್ನನ್ನು ಸುಳ್ಳು ಆರೋಪ ಹೊರಿಸಿ ಸಿಲುಕಿಸಲು ಯತ್ನ : ನರೇಶ್‌ಗೌಡ

By Kannadaprabha NewsFirst Published Jun 15, 2021, 7:50 AM IST
Highlights
  • ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಲೈಂಗಿಕ ಹಗರಣ
  • ಖಾಸಗಿ ಸುದ್ದಿವಾಹಿನಿ ಪತ್ರಕರ್ತ ನರೇಶ್‌ ಗೌಡ ವಿಚಾರಣೆ
  •  ನಾಲ್ಕು ತಾಸುಗಳ ತೀವ್ರ ವಿಚಾರಣೆ ನಡೆಸಿದ ಎಸ್‌ಐಟಿ

ಬೆಂಗಳೂರು (ಜೂ.15):  ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಲೈಂಗಿಕ ಹಗರಣದ ಸಿಡಿ ಸ್ಫೋಟ ಪ್ರಕರಣ ಸಂಬಂಧ ಖಾಸಗಿ ಸುದ್ದಿವಾಹಿನಿ ಪತ್ರಕರ್ತ ನರೇಶ್‌ ಗೌಡನನ್ನು ಸೋಮವಾರ ಮತ್ತೆ ವಿಶೇಷ ತನಿಖಾ ದಳ (ಎಸ್‌ಐಟಿ) ಪೊಲೀಸರು ನಾಲ್ಕು ತಾಸುಗಳ ತೀವ್ರ ವಿಚಾರಣೆ ನಡೆಸಿದ್ದಾರೆ.

ಈ ಎರಡನೇ ಬಾರಿ ಎಸ್‌ಐಟಿ ವಿಚಾರಣೆಯಲ್ಲೂ ಕೂಡಾ ತನ್ನ ಮೇಲೆ ಆರೋಪಗಳನ್ನು ನರೇಶ್‌ ನಿರಾಕರಿಸಿದ್ದಾನೆ ಎಂದು ತಿಳಿದು ಬಂದಿದೆ. ತಾನು ಯಾವುದೇ ತಪ್ಪು ಮಾಡಿಲ್ಲ. ಯಾರಿಂದಲೂ ಹಣ ಪಡೆದಿಲ್ಲ ಹಾಗೂ ರಾಜಕೀಯ ಪಿತೂರಿಗೆ ನಾನು ಸಹಕರಿಸಿಲ್ಲ ಎಂದು ಆತ ಹೇಳಿದ್ದಾನೆ ಎನ್ನಲಾಗಿದೆ.

SIT ಮುಂದೆ ಸಿಡಿ ಗ್ಯಾಂಗ್ ಹಾಜರ್, ಕೇಸ್‌ಗೆ ಸಿಗುತ್ತಾ ಟ್ವಿಸ್ಟ್..? .

ವಿಚಾರಣೆಗೆ ನೋಟಿಸ್‌ ಹಿನ್ನೆಲೆಯಲ್ಲಿ ನಗರದ ಆಡುಗೋಡಿಯ ಸಿಸಿಬಿ ತಾಂತ್ರಿಕ ಕೇಂದ್ರದಲ್ಲಿ ತನಿಖಾಧಿಕಾರಿ, ಎಸಿಪಿ ಎಚ್‌.ಎನ್‌.ಧರ್ಮೇಂದ್ರ ಅವರ ಮುಂದೆ ಮಧ್ಯಾಹ್ನ ಸುಮಾರು 12 ಗಂಟೆಯಲ್ಲಿ ನರೇಶ್‌ ಹಾಜರಾಗಿದ್ದ. ಮತ್ತೆ ಅಗತ್ಯವಾದರೆ ತನಿಖೆಗೆ ಬರಬೇಕೆಂದು ತನಿಖಾಧಿಕಾರಿ ತಾಕೀತು ಮಾಡಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರಣೆ ವೇಳೆ ಲೈಂಗಿಕ ಹಗರಣದ ಬಳಿಕ 100 ದಿನಗಳ ಅಜ್ಞಾತವಾಸದ ಬಗ್ಗೆ ಕೂಡಾ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ನರೇಶ್‌ ಸಮರ್ಥನೆ ಮಾಡಿಕೊಂಡಿದ್ದಾನೆ. ತನ್ನನ್ನು ಸುಳ್ಳು ಆರೋಪ ಹೊರಿಸಿ ಸಿಲುಕಿಸುವ ಪ್ರಯತ್ನ ಮಾಜಿ ಸಚಿವರಿಂದ ನಡೆದಿತ್ತು. ಈ ವಿಚಾರ ತಿಳಿದೇ ನಾನು ನಗರ ತೊರೆದಿದ್ದೆ. ಅತ್ಯಾಚಾರ ಪ್ರಕರಣದ ದಾಖಲು ಹಾಗೂ ಸೀಡಿ ಸ್ಫೋಟದ ಪ್ರಸಂಗದಲ್ಲಿ ತನ್ನದೇನು ಪಾತ್ರವಿಲ್ಲವೆಂದು ಆತ ಹೇಳಿದ್ದಾನೆ ಎನ್ನಲಾಗಿದೆ.

ವಿಚಾರಣೆ ಶ್ರವಣ್‌ ಇಲ್ಲ

ಎರಡನೇ ಬಾರಿ ಕೇವಲ ನರೇಶ್‌ನನ್ನು ಮಾತ್ರ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವುದು ಕುತೂಹಲಕ್ಕೂ ಕಾರಣವಾಗಿದೆ. ಈ ಸೀಡಿ ಸ್ಫೋಟ ಪ್ರಕರಣದಲ್ಲಿ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರಾದ ನರೇಶ್‌ ಹಾಗೂ ಶ್ರವಣ್‌ ಕುಮಾರ್‌ ಸಿಲುಕಿದ್ದಾರೆ. ಮೊದಲ ದಿನ ಇಬ್ಬರನ್ನು ಪ್ರಶ್ನಿಸಿ ಹೇಳಿಕೆ ದಾಖಲಿಸಿಕೊಂಡಿದ್ದ ಎಸ್‌ಐಟಿ, ಎರಡನೇ ಬಾರಿ ವಿಚಾರಣೆಗೆ ನರೇಶ್‌ನಿಗೆ ಮಾತ್ರ ಬುಲಾವ್‌ ನೀಡಿತ್ತು. ಹೀಗಾಗಿ ನರೇಶ್‌ ಕೊಟ್ಟಹೇಳಿಕೆ ಆಧರಿಸಿ ಶ್ರವಣ್‌ ವಿಚಾರಣೆ ನಡೆಯುವ ಸಾಧ್ಯತೆಗಳಿದ್ದು, ಪ್ರತ್ಯೇಕ ವಿಚಾರಣೆಯಿಂದ ಪ್ರಕರಣದ ಬಗ್ಗೆ ಅವರು ಬಾಯ್ಬಿಡಬಹುದು ಎಂಬ ನಿರೀಕ್ಷೆ ಅಧಿಕಾರಗಳದ್ದಾಗಿದೆ ಎಂದು ತಿಳಿದು ಬಂದಿದೆ.

click me!