ಜಾರಕಿಹೊಳಿ ಪ್ರಕರಣ: ಸಂತ್ರಸ್ತೆ ಅರ್ಜಿ ವಿಶೇಷ ಕೋರ್ಟ್‌ಗೆ ವರ್ಗ ಕೋರಿಕೆ

By Kannadaprabha NewsFirst Published Mar 29, 2022, 3:00 AM IST
Highlights

ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸ್ಥಾಪನೆಯಾಗಿರುವ ವಿಶೇಷ ನ್ಯಾಯಪೀಠಕ್ಕೆ ವರ್ಗಾಯಿಸಲು ನ್ಯಾ.ನಾಗಪ್ರಸನ್ನ ಅವರ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಿದೆ.

ಬೆಂಗಳೂರು (ಮಾ.29): ಮಾಜಿ ಸಚಿವ ರಮೇಶ್‌ ಜಾರಕಿಹೊಳಿ (Ramesh Jarkiholi)  ಸಿ.ಡಿ. ಪ್ರಕರಣಕ್ಕೆ (CD Case) ಸಂಬಂಧಿಸಿದಂತೆ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್‌ನಲ್ಲಿ (High Court) ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸ್ಥಾಪನೆಯಾಗಿರುವ ವಿಶೇಷ ನ್ಯಾಯಪೀಠಕ್ಕೆ ವರ್ಗಾಯಿಸಲು ನ್ಯಾ.ನಾಗಪ್ರಸನ್ನ ಅವರ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿಗಳನ್ನು ಕೋರಿದೆ. ಸಿ.ಡಿ. ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಆದೇಶ ಪ್ರಶ್ನಿಸಿ ಮತ್ತು ರಮೇಶ್‌ ಜಾರಕಿಹೊಳಿ ಕಬ್ಬನ್‌ ಪಾರ್ಕ್ ಠಾಣೆಗೆ ನೀಡಿದ್ದ ಬ್ಲಾಕ್‌ಮೇಲ್‌ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ (FIR) ರದ್ದು ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಎರಡು ಅರ್ಜಿಗಳು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸಿ.ಡಿ. ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಹಾಲಿ ಶಾಸಕರಾಗಿದ್ದಾರೆ. ಹೈಕೋರ್ಟ್‌ನಲ್ಲಿ ಮಾಜಿ-ಹಾಲಿ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಪೀಠವಿದೆ. ಹೀಗಾಗಿ, ಆ ನ್ಯಾಯಪೀಠದ ಮುಂದೆ ಈ ಅರ್ಜಿಗಳನ್ನು ವಿಚಾರಣೆಗೆ ನಿಗದಿಪಡಿಸಿ ಆದೇಶಿಸಲು ಕಡತವನ್ನು ಮುಖ್ಯ ನ್ಯಾಯಮೂರ್ತಿ ಅವರ ಮುಂದೆ ಮಂಡಿಸಿ ಒಪ್ಪಿಗೆ ಪಡೆಯುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಸೂಚಿಸಿದರು.

ಸಿಡಿ ಕೇಸ್ ಕ್ಲಿಯರ್ ಆಗಿದೆ, ರಮೇಶ್​​ಗೆ ಮತ್ತೆ ಸಚಿವ ಸ್ಥಾನ ಸಿಗಲಿ: ಬಾಲಚಂದ್ರ ಜಾರಕಿಹೊಳಿ

ಇದಕ್ಕೂ ಮುನ್ನ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ಎಸ್‌ಐಟಿ ರಚನೆ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯಲ್ಲಿ ಪ್ರಮುಖ ಕೋರಿಕೆಗಳಿವೆ. ಆ ಕುರಿತು ನಿಮ್ಮ ನ್ಯಾಯಪೀಠವೇ ವಾದ ಆಲಿಸಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಎಂ. ನಾಗಪ್ರಸನ್ನ ಅವರು, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣ ಆಲಿಸಲು ವಿಶೇಷ ಪೀಠ ರಚಿಸಿ ಈ ಹಿಂದೆಯೇ ಮುಖ್ಯ ನ್ಯಾಯಮೂರ್ತಿಗಳ ಆದೇಶ ಮಾಡಿದ್ದಾರೆ. ಹೀಗಾಗಿ, ನಾವು ಆ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು ಉತ್ತರಿಸಿ, ‘ನ್ಯಾ. ಸುನಿಲ್‌ದತ್‌ ಯಾದವ್‌ ಅವರು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದರು.

ಸುಪ್ರೀಂನಲ್ಲಿ ರಮೇಶ್‌ ಜಾರಕಿಹೊಳಿಗೆ ಹಿನ್ನಡೆ: ಮಾಜಿ ಸಚಿವ ರಮೇಶ್‌ ಜಾರಕಿಹೊಳಿಗೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (SIT) ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನಿಖಾ ವರದಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ತಡೆ ನೀಡಿದೆ. ಸಂತ್ರಸ್ತ ಯುವತಿಯು (Victim) ಎಸ್‌ಐಟಿ ರಚನೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾ.ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ.ಮಾಹೇಶ್ವರಿ ಅವರಿದ್ದ ಪೀಠ, ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಅಮಾನತಿನಲ್ಲಿ ಇರಿಸಿತು. ಸಿಡಿ ಪ್ರಕರಣದಲ್ಲಿ ಎಸ್‌ಐಟಿಯಿಂದ ಕ್ಲೀನ್‌ ಚಿಟ್‌ ಪಡೆದಿದ್ದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಇದರಿಂದಾಗಿ ಮತ್ತೆ ಸಂಕಷ್ಟ ಎದುರಾದಂತಾಗಿದೆ.

CD Scandal: ಜಾರಕಿಹೊಳಿ ಸಿಡಿ ಕೇಸ್‌ ತನಿಖಾ ವರದಿ ಸಲ್ಲಿಕೆಗೆ ಅಸ್ತು

ಅರೆನಗ್ನ ವ್ಯಕ್ತಿಗೆ ಕೋರ್ಟ್‌ ಕ್ಷಮೆ: ರಮೇಶ್‌ ಜಾರಕಿಹೊಳಿ ಸಿ.ಡಿ. ಪ್ರಕರಣದ ವಿಚಾರಣೆಯ ವರ್ಚುವಲ್‌ ಕಲಾಪದಲ್ಲಿ ಅರೆನಗ್ನವಾಗಿ ಕಾಣಿಸಿಕೊಂಡಿದ್ದ ಶ್ರೀಧರ್‌ ಎನ್‌. ಭಟ್‌ ಎಂಬುವರು ಹೈಕೋರ್ಟ್‌ಗೆ ಬೇಷರತ್‌ ಕ್ಷಮೆಯಾಚಿಸಿದ್ದಾರೆ. ‘ನಾನು ಉದ್ದೇಶಪೂರ್ವಕವಾಗಿ ನಡೆದುಕೊಂಡಿರಲಿಲ್ಲ. ತಪ್ಪಿನ ಅರಿವಾಗಿದ್ದು, ಇಂತಹ ತಪ್ಪು ಮಾಡುವುದಿಲ್ಲ. ಅಂದು ವಿಚಾರಣೆಯಲ್ಲಿ ಭಾಗಿಯಾಗಿದ್ದ ಎಲ್ಲರಲ್ಲೂ ವಿನಯಪೂರ್ವಕವಾಗಿ ಬೇಷರತ್‌ ಕ್ಷಮೆ ಕೋರುತ್ತೇನೆ’ ಎಂದು ಹೇಳಿದ್ದಾರೆ. ಅದನ್ನು ಪರಿಗಣಿಸಿದ ಹೈಕೋರ್ಟ್‌, ಮುಂದೆ ಎಚ್ಚರಿಕೆಯಿಂದ ಇರಬೇಕು ಎಂದು ಶ್ರೀಧರ್‌ ಭಟ್‌ಗೆ ಸೂಚಿಸಿ ಪ್ರಕರಣವನ್ನು ಇತ್ಯರ್ಥಪಡಿಸಿದೆ.

click me!