Karnataka Caste Survey: ಜಾತಿ ಕೇಳುವಂತಿಲ್ಲ.. ಸಮೀಕ್ಷೆಗೆ ಬಂದವರನ್ನ ವಾಪಸ್ ಕಳಿಸಿದ ವ್ಯಕ್ತಿ!

Kannadaprabha News, Ravi Janekal |   | Kannada Prabha
Published : Sep 26, 2025, 06:27 AM IST
koppal caste survey 2025

ಸಾರಾಂಶ

ಕೊಪ್ಪಳದ ರಾಮಣ್ಣ ಮಂಗಳೂರು ಎಂಬುವವರು ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾನವ ಹಕ್ಕುಗಳು, ಸುಪ್ರೀಂ ನೀಡಿರುವ ವ್ಯಕ್ತಿ ಸ್ವಾತಂತ್ರ್ಯ ಉಲ್ಲಂಘಿಸುತ್ತದೆ ಎಂದು ವಾದಿಸಿ, ಸಮೀಕ್ಷೆಗೆ ಬಂದವರಿಗೆ ಲಿಖಿತ ಪತ್ರ ನೀಡಿ ವಾಪಸ್ಸು ಕಳುಹಿಸಿದ್ದಾರೆ. 

ಕೊಪ್ಪಳ (ಸೆ.26): ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕೊಪ್ಪಳ ನಗರದ 28ನೇ ವಾರ್ಡ್‌ನ ರಾಮಣ್ಣ ಮಂಗಳೂರು ಎಂಬುವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆಕ್ಷೇಪಣೆಯ ಕುರಿತು ಲಿಖಿತ ಪತ್ರ ನೀಡಿ, ಸಮೀಕ್ಷೆಗೆ ಬಂದವರನ್ನು ವಾಪಸ್ಸು ಕಳುಹಿಸಿದ್ದಾರೆ.

ಸಮೀಕ್ಷೆಯಲ್ಲಿ ಮಾನವಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಸುಪ್ರೀಂಕೋರ್ಟ್ ನೀಡಿರುವ ವ್ಯಕ್ತಿ ಸ್ವಾತಂತ್ರ್ಯಕ್ಕೂ ಪೆಟ್ಟು ಬಿದ್ದಿದೆ. ಹೀಗಾಗಿ, ಈ ಸಮೀಕ್ಷೆ ಸರಿಯಲ್ಲ ಎಂದಿದ್ದಾರೆ. ಈ ಕುರಿತು ತಮ್ಮದೇ ಆದ ವಿವರಣೆಗಳೊಂದಿಗೆ 8 ಅಂಶಗಳ ಪಟ್ಟಿ ಮಾಡಿದ್ದಾರೆ

ಏನೇನು ಆಕ್ಷೇಪ?:

ಸುಪ್ರೀಂಕೋರ್ಟ್ ಆದೇಶದಂತೆ ಜಾತಿ ಸಮೀಕ್ಷೆ ಮಾಡುವಂತೆ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜಾತಿ ಪದ ಬಳಕೆ ಮಾಡುವಂತೆ ಇಲ್ಲ ( ಜಾತಿ ಕೇಳುವಂತಿಲ್ಲ). ಕಾಲಂ ನಂಬರ್ 12ರಲ್ಲಿ ಜಾತಿ ಮತ್ತು ಉಪ ಜಾತಿ ನಮೂದಿಸುವಂತೆ ಕೇಳಿದ್ದು, ಇದರ ಅವಶ್ಯಕತೆ ಇಲ್ಲ. 21,22,23ನೇ ಪ್ರಶ್ನೆಗಳು ಸಂಪೂರ್ಣ ವ್ಯಕ್ತಿಯ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದಾಗಿರುವುದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. 36,37,38 ಮತ್ತು 39 ಕಾಲಂನಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಆದಾಯ ಅವನ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದು. ಮನೆಯಲ್ಲಿ ಎಷ್ಟು ಕೊಠಡಿಗಳು ಇವೆ ಎನ್ನುವ ಪ್ರಶ್ನೆ ಅಸಂಬದ್ಧವಾಗಿದೆ. ಮನೆಯಲ್ಲಿ ಯಾರಾದರೂ ವಿಧವೆಯರು ಇದ್ದಾರೆಯೇ ಎನ್ನುವುದು ಅವರ ವೈಯಕ್ತಿಕ ವಿಷಯವಾಗಿದೆ. 59,60ನೇ ಪ್ರಶ್ನೆಯೂ ಮಾನವಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಎಲ್ಲ ಪ್ರಶ್ನೆಗಳು ಸಾರ್ವಜನಿಕರಲ್ಲಿ ಭಯ ಮತ್ತು ಆತಂಕವನ್ನುಂಟು ಮಾಡುವುದರಿಂದ ಜಾತಿ ಸಮೀಕ್ಷೆ ಮಾಡುವುದು ಉರ್ಜಿತವಲ್ಲ ಎನ್ನುವ ಒಕ್ಕಣಿಕೆಯಿರುವ ಪತ್ರ ನೀಡಿ ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಸೋರಿಕೆಯಾಗುವ ಅತಂಕ:

ಪಡೆಯುವ ಮಾಹಿತಿ ಸೋರಿಕೆಯಾಗುವ ಆತಂಕವಿದೆ. ಇದೆಲ್ಲವನ್ನು ದಾಖಲಿಸಿಕೊಂಡವರು ಅದನ್ನು ಸೋರಿಕೆ ಮಾಡಬಹುದು. ಅಷ್ಟೆ, ಅಲ್ಲ ಅವರ ಎದುರಿಗೆ ಮನೆಯ ಎಲ್ಲ ಮಾಹಿತಿ ಹೇಳಲು ಹೇಗೆ ಸಾಧ್ಯ?. ವೆಬ್ ಸೈಟ್ ಹ್ಯಾಕ್ ಆದಾಗಲೂ ಪ್ರತಿಯೊಬ್ಬರ ಮಾಹಿತಿ ಸೋರಿಕೆಯಾಗುವ ಆತಂಕವಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪಿಐಎಲ್ ಹಾಕಲು ಚಿಂತನೆ ನಡೆಸಿದ್ದಾಗಿ ತಿಳಿಸಿದ್ದಾರೆ.

ಈ ರೀತಿ ಜಾತಿ ಸಮೀಕ್ಷೆ ಮತ್ತು ವೈಯಕ್ತಿಕ ಪ್ರಶ್ನೆ ಕೇಳುವುದು ವೈಯಕ್ತಿಕ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಈ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದೇನೆ.

- ರಾಮಣ್ಣ ಮಂಗಳೂರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌