ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ವಿಚಿತ್ರ ಶಬ್ದ ಮಾಡುವ ಯಂತ್ರ: ಪ್ರಯೋಗ ಯಶಸ್ವಿ

Published : Aug 19, 2025, 11:10 AM IST
Ramanagara elephant conflict

ಸಾರಾಂಶ

ಆನೆ ಕಂದಕ, ರೈಲ್ವೆ ಕಂಬಿಗಳ ಬ್ಯಾರಿಕೇಟ್ ನಿರ್ಮಾಣ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಕೆಲ ವರ್ಷಗಳಿಂದ ಜಿಲ್ಲೆಯ ಹಲವೆಡೆ ಆನೆ ಹಾವಳಿಗೆ ರೈತರು ಹೈರಾಣಾಗಿದ್ದಾರೆ.

ರಾಮನಗರ (ಆ.19): ಕಾಡಾನೆಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜಿಲ್ಲೆಯಲ್ಲಿ ಆನೆ - ಮಾನವ ಸಂಘರ್ಷ ಇರುವ ಅರಣ್ಯ ಗಡಿಯಲ್ಲಿ ‘ಫಾರ್ಮಾ ಗಾರ್ಡ್ ಡಿವೈಸ್‘ ಬಳಕೆಗೆ ಮುಂದಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯು ರಾಮನಗರ ಪ್ರಾದೇಶಿಕ ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಹಾಗೂ ಕಾವೇರಿ ವನ್ಯಜೀವಿ ಧಾಮ ವಿಭಾಗದೊಂದಿಗೆ ಅರಣ್ಯ ಗಡಿ ಹಂಚಿಕೊಂಡಿದೆ.

ಈ ಭಾಗದಲ್ಲಿ ಕೆಲವೆಡೆ ಆನೆ ಕಂದಕ, ರೈಲ್ವೆ ಕಂಬಿಗಳ ಬ್ಯಾರಿಕೇಟ್ ನಿರ್ಮಾಣ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಕೆಲ ವರ್ಷಗಳಿಂದ ಜಿಲ್ಲೆಯ ಹಲವೆಡೆ ಆನೆ ಹಾವಳಿಗೆ ರೈತರು ಹೈರಾಣಾಗಿದ್ದಾರೆ. ಜೊತೆಗೆ ಅರಣ್ಯ ಅಧಿಕಾರಿಗಳು ಕೂಡ ಹಗಲಿರುಳು ನಿದ್ದೆಗೆಟ್ಟು ಕಂಗಾಲಾಗಿದ್ದಾರೆ. ಆದರೆ ಇದೀಗ ಕಚೇರಿಯಲ್ಲಿಯೇ ಕುಳಿತುಕೊಂಡು 20 ಆನೆಗಳಿದ್ದರೂ ಸಲೀಸಾಗಿ ದಾರಿ ತಪ್ಪಿಸಿ, ಪಾಠ ಕಲಿಸಲು ಮುಂದಾಗಿದ್ದಾರೆ.

ಡಿವೈಸ್ ನ ಶಬ್ದ - ಬೆಳಕಿಗೆ ಹೆದರಿಲಿವೆ ಆನೆಗಳು: ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಉಪಟಳ ನಿಯಂತ್ರಿಸಲು ಅರಣ್ಯ ಇಲಾಖೆ ಪ್ರಾಯೋಗಿಕವಾಗಿ ಕನಕಪುರ ಮತ್ತು ಚನ್ನಪಟ್ಟಣ ಭಾಗದ ಕಾಡಂಚಿನಲ್ಲಿ ‘ಫಾರ್ಮಾ ಗಾರ್ಡ್ ಡಿವೈಸ್‘ ಅನ್ನು ಅಳವಡಿಸಿದೆ. ಈ ಡಿವೈಸ್ ಬಳಿ ಕಾಡಾನೆಗಳು ಬಂದಾಗ ಸದರಿ ಡಿವೈಸ್ ಶಬ್ದ ಮಾಡುವುದರಿಂದ ಕಾಡಾನೆಗಳು ಹಿಮ್ಮುಖವಾಗಿ ಕಾಡಿನಡೆಗೆ ಚಲಿಸುತ್ತವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂದೇಶ ರವಾನೆಯಾಗುತ್ತದೆ.

ಡ್ರೋನ್ ಕ್ಯಾಮರಾದಲ್ಲಿ ಆನೆಗಳ ಚಲನ-ವಲನ ಗಮನಿಸುವ ಅಧಿಕಾರಿಗಳು, ಆನೆಗಳು ಊರು-ತೋಟಗಳಿಗೆ ಬರುವ ಮಾರ್ಗದಲ್ಲಿ ಮರದ ಮೇಲೆ 6-8 ಅಡಿ ಎತ್ತರದಲ್ಲಿ ಈ ಡಿವೈಸ್ ಕಟ್ಟಿರುತ್ತಾರೆ. ಆನೆಗಳು 15-20 ಮೀ. ದೂರದಲ್ಲಿ ಇರುವಾಗಲೇ ಡಿವೈಸ್ ನಿರಂತರವಾಗಿ ಚಿತ್ರ-ವಿಚಿತ್ರ ಶಬ್ಧ ಮಾಡುತ್ತದೆ. ಆ ಶಬ್ದಕ್ಕೆ ಹೆದರಿ ಆನೆಗಳ ಹಿಂಡು ಬಂದ ದಾರಿಯಲ್ಲಿ ವಾಪಸ್ ಹೋಗುತ್ತವೆ. ಸದ್ಯಕ್ಕೆ ಅರಣ್ಯ ಅಧಿಕಾರಿಗಳು ಈ ಡಿವೈಸ್‌ನಿಂದ ಕಾಡಾನೆಗಳು ನಾಡಿನತ್ತ ಬರದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಪೂರ್ಣ ಪ್ರಮಾಣದಲ್ಲಿ ಸಕ್ಸಸ್ ಆದರೆ, ಕೃಷಿಕರು ಕಾಡಾನೆಗಳಿಂದ ಬೆಳೆ ಉಳಿಸಿಕೊಳ್ಳಬಹುದು ಹಾಗೂ ಅರಣ್ಯ ಅಧಿಕಾರಿಗಳು ಸ್ವಲ್ಪ ನೆಮ್ಮದಿಯಿಂದ ಇರಬಹುದು.

ಈ ಸೋಲಾರ್ ಡಿವೈಸ್ ಸೆನ್ಸಾರ್ ಮೂಲಕವೇ ಕೆಲಸ ಮಾಡುತ್ತದೆ. ಇದರಿಂದ ಆನೆಗಳು ರೈತರ ತೋಟಗಳು ಹಾಗೂ ಗ್ರಾಮಗಳತ್ತ ನುಗ್ಗುವುದನ್ನು ಸುಲಭವಾಗಿ ದಾರಿ ತಪ್ಪಿಸಿ ಪುನಃ ಕಾಡಿನ ಕಡೆಗೆ ಅಟ್ಟಬಹುದಾಗಿದೆ. ಆನೆಗಳು ಈ ಡಿವೈಸ್ ಬಳಿ ಬರ್ತಿದ್ದಂತೆ ಶಬ್ಧ ಮಾಡಲು ಶುರುಮಾಡುತ್ತದೆ. ರಾತ್ರಿಯಾದರೂ ಕೂಡ ಇದರ ಲೈಟ್ ಬೆಳಕು ಪಟಾಕಿಯಲ್ಲಿ ಬರುವ ಬೆಳಕಿನಂತೆ ಕಾಣುವುದರಿಂದ ಆನೆಗಳು ಹಿಂದೆ ಹೋಗುತ್ತವೆ. ಮುಂದಿನ ದಿನಗಳಲ್ಲಿ ರೈತರಿಗೂ ಈ ಡಿವೈಸ್ ಅನ್ನು ಸಬ್ಸಿಡಿಯಲ್ಲಿ ಕೊಡಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ.

ಆನೆ ಕಾರ್ಯಪಡೆ ಕಾರ್ಯಾಚರಣೆ: ಪ್ರತಿ ದಿನ ಬೆಳಿಗ್ಗೆ ಆನೆ ಕಾರ್ಯಪಡೆ ವತಿಯಿಂದ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರಿಗೆ ಧ್ವನಿವರ್ಧಕ ಮೂಲಕ ಮಾಹಿತಿ ನೀಡಲಾಗುತ್ತಿದೆ. ಆನೆ ಕಾರ್ಯಪಡೆ ಕಂಟ್ರೋಲ್ ರೂಮ್ ಮೂಲಕ ಕಾಡಂಚಿನ ಗ್ರಾಮಗಳಲ್ಲಿ ಗ್ರಾಮಸ್ಥರ ಮೊಬೈಲ್ ದೂರವಾಣಿ ಸಂಖ್ಯೆಯನ್ನು ನೋಂದಣಿ ಮಾಡಿ ಎಸ್.ಎಂ.ಎಸ್ ಮೂಲಕ ಕಾಡಾನೆಗಳ ಚಲನವಲನಗಳ ಮಾಹಿತಿಯನ್ನು ನೀಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಾರ್ವಜನಿಕರಿಂದ ಆನೆಗಳ ಇರುವಿಕೆ ಬಗ್ಗೆ ಆನೆ ಕಾರ್ಯಪಡೆ ಕಂಟ್ರೋಲ್ ರೂಮ್ ಗೆ ಸ್ವೀಕೃತವಾಗುವ ದೂರುಗಳಿಗೆ ಸಂಬಂದಿಸಿದಂತೆ ಸಿಬ್ಬಂದಿಗಳು ತೆರಳಿ ಆನೆಗಳನ್ನು ಹಿಮ್ಮೆಟ್ಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

2 ಕಾಡಾನೆ ಆನೆ ಶಿಬಿರಕ್ಕೆ ಸ್ಥಳಾಂತರ: 2024-25 ನೇ ಸಾಲಿನಲ್ಲಿ 8-ಕುಮ್ಕಿ ಆನೆಗಳ ಸಹಾಯದಿಂದ 12-ಕಾಡಾನೆಗಳನ್ನು ಕಾವೇರಿ ವನ್ಯಜೀವಿ ವಿಭಾಗಕ್ಕೆ ಹಿಮ್ಮೆಟ್ಟಿಸಲಾಗಿದೆ ಹಾಗೂ ಚನ್ನಪಟ್ಟಣ ವಲಯದಲ್ಲಿ ಉಪಟಳ ನೀಡುತ್ತಿದ್ದ 02 ಕಾಡಾನೆಗಳನ್ನು ಸೆರೆಹಿಡಿದು ದುಬಾರೆ ಆನೆ ಶಿಬಿರ ಮತ್ತು ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ, ಡ್ರೋನ್ ಮೂಲಕ ಆನೆಗಳ ಇರುವಿಕೆಯನ್ನು ಪತ್ತೆಹಚ್ಚಿ ಆನೆಗಳನ್ನು ಹಿಮ್ಮೆಟ್ಟಿಸಲಾಗುತ್ತಿದೆ.

ಆನೆಗಳು ಸಾಮಾನ್ಯವಾಗಿ ಬರುವ ಕಾಡಿನ ದಾರಿಯಲ್ಲಿಯೇ ಫಾರ್ಮಾ ಗಾರ್ಡ್ ಡಿವೈಸ್ ಅನ್ನು ಅಳವಡಿಸಲಾಗುತ್ತದೆ. ಸೆನ್ಸಾರ್ ನಿಂದ ಡಿವೈಸ್ ಕಾಡಾನೆಗಳು 15-20 ಮೀ. ದೂರದಲ್ಲಿ ಇರುವಾಗಲೇ ಚಿತ್ರ-ವಿಚಿತ್ರ ಶಬ್ಧ ಮಾಡುತ್ತದೆ. ಆ ಶಬ್ದಕ್ಕೆ ಹೆದರಿ ಆನೆಗಳ ಹಿಂಡು ಬಂದ ದಾರಿಯಲ್ಲಿ ವಾಪಸ್ ಹೋಗುತ್ತವೆ.
- ಮನ್ಸೂರ್, ವಲಯ ಅರಣ್ಯಾಧಿಕಾರಿಗಳು, ರಾಮನಗರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ವಿಡಿಯೋ ವೈರಲ್: ರೇಪಿಸ್ಟ್ ಉಮೇಶ್ ರೆಡ್ಡಿ ಬಳ್ಳಾರಿಗೆ ಶಿಫ್ಟ್ ರಿಕ್ವೆಸ್ಟ್!
ಹಾವೇರಿ: ಮತ್ತೆ ಮುನ್ನಲೆಗೆ ಬಂದ ಹಿಜಾಬ್ VS ಕೇಸರಿ ವಿವಾದ: ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪರಸ್ಪರ ಸವಾಲು!