
ಬೆಂಗಳೂರು (ಆ.19): ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಾಳೆಯವರೆಗೂ ರೆಡ್ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೊಂದೆಡೆ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ವಿಚಾರ ಮಂಗಳವಾರದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಈ ವೇಳೆ ನ್ಯಾ. ದಾಸ್ ಆಯೋಗದ ವರದಿ ಕುರಿತು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಬಗ್ಗೆ ಕುತೂಹಲ ಉಂಟಾಗಿದೆ. ಉಳಿದಂತೆ ದಿನದ ಐದು ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.
1. ಇಸ್ರೋ ನಿವೃತ್ತ ವಿಜ್ಞಾನಿ ಸೇರಿ ಮೂವರು ವಿಪಕ್ಷಗಳ ಉಪ ರಾಷ್ಟ್ರಪತಿ ಅಭ್ಯರ್ಥಿ ರೇಸಲ್ಲಿ
ಎನ್‌ಡಿಎ ಮೈತ್ರಿಕೂಟವ ಮಹಾರಾಷ್ಟ್ರದ ರಾಜ್ಯಪಾಲ ರಾಧಾಕೃಷ್ಣನ್ ಅವರನ್ನು ತನ್ನ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ವಿಪಕ್ಷಗಳು ಕೂಡಾ ಜಂಟಿಯಾಗಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲು ಮುಂದಾಗಿವೆ. ನೂತನ ಉಪರಾಷ್ಟ್ರಪತಿಯನ್ನು ಅವಿರೋಧವಾಗಿ ಆಯ್ಕೆ ಮಾಡುವ ಸಲುವಾಗಿ ಎನ್‌ಡಿಎ ಅಭ್ಯರ್ಥಿಗಳ ಬೆಂಬಲಿಸುವಂತೆ ಕೇಂದ್ರ ಸರ್ಕಾರ ವಿವಿಧ ವಿಪಕ್ಷಗಳಿಗೆ ಮನವಿ ಮಾಡಿದ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ.
2.ಇನ್ಮುಂದೆ ಟೀವಿ, ಕಾರಿಂದಲೂ ಯುಪಿಐ ಹಣ ಪಾವತಿಸಿ!
ಮೊಬೈಲ್ ಮೂಲಕ ಟೀವಿ ಚಂದಾಚಾರಿಕೆ ಶುಲ್ಕ, ಕಾರಿನ ಪಾರ್ಕಿಂಗ್ ಶುಲ್ಕ ಪಾವತಿಸುವುದು ಸಾಮಾನ್ಯ. ಆದರೆ ಇನ್ನು ಮುಂದೆ ಇದಕ್ಕೆಲ್ಲಾ ಮೊಬೈಲ್ ಗೊಡವೆ ಬೇಕಿಲ್ಲ. ತಮ್ಮ ಶುಲ್ಕವನ್ನು ಟೀವಿ, ಫ್ರಿಜ್, ಕಾರುಗಳೇ ಸ್ವತಃ ಪಾವತಿಸಲಿವೆ. ದೇಶದಲ್ಲಿ ಡಿಜಿಟಲ್ ಪಾವತಿಯಲ್ಲಿ ಹೊಸ ಕ್ರಾಂತಿ ಮಾಡಿರುವ ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಇನ್ನೊಂದು ಹೆಜ್ಜೆ ಮುಂದಿಡಲು ಸಜ್ಜಾಗಿರುವ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಹೊಸ ತಲೆಮಾರಿನ ಯುಪಿಐ 3.0 ಅಭಿವೃದ್ಧಿಪಡಿಸಿದೆ.
3. ರಾಜ್ಯದಲ್ಲಿ ಇಂದು, ನಾಳೆ ವ್ಯಾಪಕ ಮಳೆಯ ನಿರೀಕ್ಷೆ
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯಾದ್ಯಂತ ಮಂಗಳವಾರ ಮತ್ತು ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆ.19 ಮತ್ತು 20 ರಂದು ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗಲಿದೆ. ಆ.21ರಂದು ಮಳೆ ಪ್ರಮಾಣ ಕಡಿಮೆಯಾಗಲಿದ್ದು, ಮೋಡ ಕವಿದ ವಾತಾವರಣವಿರಲಿದೆ. ತಿಂಗಳ ಕೊನೆಯ ವಾರದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿ ಬಿಸಿಲಿನ ವಾತಾವರಣ ನಿರ್ಮಾಣವಾಗಲಿದೆ.
4. ಒಳಮೀಸಲಾತಿ ಜಾರಿ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ: ಕುತೂಹಲ ಹೆಚ್ಚಿಸಿದ ನಿರ್ಣಯ
ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿ ವಿಚಾರ ಮಂಗಳವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದ್ದು, ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯಲ್ಲಿನ ಮೀಸಲಾತಿ ವರ್ಗೀಕರಣದ ಕುರಿತು ಅಪಸ್ವರ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಬಗ್ಗೆ ಕುತೂಹಲ ಉಂಟಾಗಿದೆ. ನಿವೃತ್ತ ನ್ಯಾ.ನಾಗಮೋಹನ್‌ದಾಸ್ ಅವರ ಆಯೋಗವು ತನ್ನ ವರದಿಯಲ್ಲಿ 101 ಪರಿಶಿಷ್ಟ ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಣ ಮಾಡಿ ಶೇ.17 ರಷ್ಟು ಮೀಸಲಾತಿ ಹಂಚಿಕೆ ಮಾಡಿದೆ.
5. ಚು.ಆಯುಕ್ತರ ವಾಗ್ದಂಡನೆಗೆ ಇಂಡಿಯಾ ಕೂಟ ಚಿಂತನೆ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಖಚಿತಪಡಿಸುವ ತಮ್ಮ ಸಾಂವಿಧಾನಿಕ ಹೊಣೆ ನಿರ್ವಹಿಸುವಲ್ಲಿ ವಿಫಲವಾಗಿದ್ದಾರೆ ಎಂದು ಆರೋಪಿಸಿರುವ ವಿಪಕ್ಷಗಳು, ಅವರ ವಿರುದ್ಧ ವಾಗ್ದಂಡನೆಗೆ ಚಿಂತನೆ ನಡೆಸಿವೆ. ಬಿಹಾರದ ವಿಶೇಷ ಮತಪಟ್ಟಿ ಪರಿಷ್ಕರಣೆ, ಕರ್ನಾಟಕದ ಮಹದೇವಪುರ ಚುನಾವಣಾ ಅಕ್ರಮ ಸಾಬೀತುಪಡಿಸಿ ಇಲ್ಲವೇ ದೇಶದ ಕ್ಷಮೆ ಕೇಳಿ ಎಂದು ರಾಹುಲ್ ಗಾಂಧಿಗೆ ಸವಾಲು ಹಾಕಿದ ಮಾರನೇ ದಿನವೇ ವಿಪಕ್ಷಗಳು ಇಂಥದ್ದೊಂದು ವಿಷಯದ ಬಗ್ಗೆ ಚರ್ಚೆ ನಡೆಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ