Raita Ratna Award 2022: ಬ್ಲಾನಿ ಡಿಸೋಜರ ಟೆರೇಸ್‌ನಲ್ಲಿದೆ ಕೃಷಿಯ ಅದ್ಭುತ ಲೋಕ!

By Kannadaprabha News  |  First Published Apr 18, 2022, 4:39 PM IST

ಬ್ಲಾನಿ ಡಿಸೋಜಾ ಅವರು ಹೊಟೇಲ್‌ ಮೆನೇಜ್‌ಮೆಂಟ್‌ ಶಿಕ್ಷಣ ಪಡೆದವರು. ವಿದೇಶದಲ್ಲಿ ಕೆಲವು ವರ್ಷ ಉದ್ಯೋಗದಲ್ಲಿದ್ದರು. ಬಳಿಕ ಕೆಲಸಕ್ಕೆ ತಿಲಾಂಜಲಿ ನೀಡಿ ತವರಿಗೆ ಆಗಮಿಸಿದರು. 


ಆತ್ಮಭೂಷಣ್‌, ಮಂಗಳೂರು

ಬ್ಲಾನಿ ಡಿಸೋಜಾ ಅವರು ಹೊಟೇಲ್‌ ಮೆನೇಜ್‌ಮೆಂಟ್‌ ಶಿಕ್ಷಣ ಪಡೆದವರು. ವಿದೇಶದಲ್ಲಿ ಕೆಲವು ವರ್ಷ ಉದ್ಯೋಗದಲ್ಲಿದ್ದರು. ಬಳಿಕ ಕೆಲಸಕ್ಕೆ ತಿಲಾಂಜಲಿ ನೀಡಿ ತವರಿಗೆ ಆಗಮಿಸಿದರು. ಇವರಿಗೆ ಕೃಷಿಯಲ್ಲಿ ತುಡಿತ. ಆದರೆ ಇವರ ಮನೆ ಇರುವುದು ಮಂಗಳೂರು ನಗರದ ಮಂಕಿಸ್ಟ್ಯಾಂಡ್‌ ಬಳಿಕ ಮಾರ್ನಮಿಕಟ್ಟದಲ್ಲಿ. ಪೇಟೆಯಲ್ಲಿ ಒಂದಂಗುಲ ಜಾಗವೂ ಪ್ರಾಮುಖ್ಯ. ಹಾಗಿರುವಾಗ ಕೃಷಿ ಮಾಡಲು ಜಾಗದ ಕೊರತೆ ಎದುರಾಯಿತು. ಆದರೂ ಧೃತಿಗೆಡದ ಇವರು ಮನೆಯ ಟೆರೇಸ್‌ನಲ್ಲಿ ಲಭ್ಯ ಇರುವ ಸ್ಥಳಾವಕಾಶದಲ್ಲಿ ಏನೆಲ್ಲ ಸಾಧ್ಯವೋ ಅಷ್ಟುಕೃಷಿ ಮಾಡಿ ಸಾಧಿಸಿ ತೋರಿಸಿದ್ದಾರೆ.

Tap to resize

Latest Videos

undefined

ಟೆರೇಸ್‌ನಲ್ಲಿ ಕೃಷಿ ವೈವಿಧ್ಯ:

ಟೆರೇಸ್‌ನಲ್ಲಿ ತರಕಾರಿ ಕೃಷಿ ಸಾಮಾನ್ಯ, ಆದರೆ ಬ್ಲಾನಿ ಡಿಸೋಜಾ ಅವರು ಅದಕ್ಕಿಂತಲೂ ಹೆಜ್ಜೆ ಮುಂದೆ ಹೋಗಿ ಕೃಷಿ ವೈವಿಧ್ಯಗಳನ್ನು ಮಾಡಿ ತೋರಿಸಿದ್ದಾರೆ. ಕಾಬೂಲ್‌ ದ್ರಾಕ್ಷಿ, ವಿಧ ವಿಧ ಪೇರಳೆಯೂ ಇಲ್ಲಿ ನವಿರಾದ ಫಸಲು ನೀಡಿದೆ. ದ್ರಾಕ್ಷಿ ಸಾಮಾನ್ಯವಾಗಿ ಉತ್ತರದ ಬೆಳೆ, ದಕ್ಷಿಣದಲ್ಲಿ ಇವು ಒಗ್ಗಿಕೊಳ್ಳುವುದಿಲ್ಲ ಎಂಬ ಮಾತನ್ನು ಇವರು ಹುಸಿ ಮಾಡಿದ್ದಾರೆ. ಇವರ ಟೆರೇಸ್‌ನಲ್ಲಿ ದ್ರಾಕ್ಷಿ ಮೈತಳೆದಿವೆ. ಇವರ 22 ಸೆಂಟ್ಸ್‌ ಜಾಗದಲ್ಲಿ 1,200 ಚದರ ಅಡಿ ವಿಸ್ತೀರ್ಣದ ಟೆರೇಸ್‌ನಲ್ಲಿ ಹಚ್ಚಹಸುರಿನ ತೋಟ ತಲೆ ಎತ್ತಿದೆ. ತಾರಸಿಯಲ್ಲಿ ತೊಂಡೆ, ಬೆಂಡೆ ಸೇರಿದಂತೆ ತರಹೇವಾರಿ ತರಕಾರಿ ಕೃಷಿ ಮಾಡಿದ್ದಾರೆ. ಕಸಿಕಟ್ಟಿದ ವಿವಿಧ ಮಾವು ಬೆಳೆಸಿದ್ದಾರೆ. ಸುಮಾರು 30ಕ್ಕೂ ಅಧಿಕ ವಿಧದ ಹಣ್ಣುಹಂಪಲು ಇದೆ. ಈ ಮೂಲಕ ಗ್ರೀನ್‌ ಈವೆಂಟ್‌ ಮ್ಯಾನೇಜ್‌ಮೆಂಟ್‌ ಎಂಬ ಹೊಸ ಪರಿಕಲ್ಪನೆಯನ್ನು ಹುಟ್ಟುಹಾಕಿದ್ದಾರೆ. ನಗರದಲ್ಲಿ ತಾರಸಿ ತರಕಾರಿ ತೋಟವನ್ನು ಹಸಿರನ್ನೇ ಉಸಿರಾಗಿ ಮಾರ್ಪಡಿಸಿದ್ದಾರೆ. ಪ್ರಸ್ತುತ ಇವರ ಟೆರೇಸ್‌ ಗಾರ್ಡನ್‌ನಲ್ಲಿ 200ಕ್ಕಿಂತಲೂ ಅಧಿಕ ವಿಧದ ಕೃಷಿ ವೈವಿಧ್ಯಗಳಿವೆ. ಟೆರೇಸ್‌ನಲ್ಲಿ ಟ್ರೇಯಲ್ಲಿ ಹಲಸು, ಖರ್ಜೂರ ಬೆಳೆಸಲು ಸಾಧ್ಯ ಎಂದು ತೋರಿಸಿದ್ದಾರೆ.

ಕನ್ನಡಪ್ರಭ-ಸುವರ್ಣ ನ್ಯೂಸ್‌ನಿಂದ ರೈತರತ್ನ ಪ್ರಶಸ್ತಿ ನೀಡಿರುವುದು ತುಂಬ ಖುಷಿ ಆಗಿದೆ. ಟೆರೇಸ್‌ ಗಾರ್ಡನ್‌ ಕೃಷಿಯಲ್ಲಿ ಇನ್ನಷ್ಟುಸಾಧನೆಗೆ ನನ್ನನ್ನು ಪ್ರೇರೇಪಿಸಿದಂತಾಗಿದೆ. ಟೆರೇಸ್‌ ಕೃಷಿಯನ್ನು ಮಕ್ಕಳ ಸಹಿತ ಎಲ್ಲರಿಗೆ ತಲುಪಿಸುವ ಇರಾದೆ ಹೊಂದಿದ್ದೇನೆ. -ಬ್ಲಾನಿ ಡಿಸೋಜಾ, ರೈತರತ್ನ ಪ್ರಶಸ್ತಿ ಪುರಸ್ಕೃತರು
 

ಇವರ ಟೆರೇಸ್‌ ಕೃಷಿ ನೋಡಿ ಇತರರೂ ಅನುಸರಿಸುತ್ತಿದ್ದಾರೆ. ಹಲವಾರು ಮಂದಿ ಇವರ ಟೆರೇಸ್‌ ಕೃಷಿ ತೋಟಕ್ಕೆ ಭೇಟಿ ನೀಡುತ್ತಿದ್ದಾರೆ. ಸುಮಾರು 300ಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳು ಇವರ ಟೆರೇಸ್‌ ಕೃಷಿಯನ್ನು ವೀಕ್ಷಿಸಿದ್ದಾರೆ. ನಿತ್ಯವೂ ಟೆರೇಸ್‌ ಕೃಷಿ ವೀಕ್ಷಣೆಗೆ ಭೇಟಿ ಕೊಡುವವರೇ ಜಾಸ್ತಿ. ಪ್ರಸಕ್ತ 350ಕ್ಕೂ ಅಧಿಕ ಶಾಲಾ ಕಾಲೇಜುಗಳಲ್ಲಿ ಸೀಮಿತ ಜಾಗದಲ್ಲಿ ಟೆರೇಸ್‌ ಕೃಷಿ ಹೇಗೆ ಮಾಡಬಹುದು ಎಂಬ ಬಗ್ಗೆ ಪ್ರಚುರಪಡಿಸುತ್ತಿದ್ದಾರೆ.

ಗ್ರೀನ್‌ ಸಿಟಿ ಯೋಚನೆ

ಸ್ಮಾರ್ಚ್‌ ಸಿಟಿ ರೂಪುರೇಷೆ ಮೈತಳೆಯುತ್ತಿರುವಂತೆಯೇ ಮಂಗಳೂರನ್ನು ಗ್ರೀನ್‌ ಸಿಟಿ ಮಾಡುವ ಯೋಚನೆ ಇವರಲ್ಲಿದೆ. ಇವರ ಟೆರೇಸ್‌ ಕೃಷಿಯನ್ನು ಮಕ್ಕಳಿಗೆ ಅರ್ಪಿಸಿದ್ದಾರೆ. ಬೆಂಗಳೂರು ಬಳಿಯ ಹೊಸೂರಲ್ಲಿ 100 ಎಕರೆಯಲ್ಲಿ ವಿವಿಧ ಹಣ್ಣುಹಂಪಲು ತೋಟ ಮಾಡುತ್ತಿದ್ದಾರೆ. ಕಸಿ ಕಟ್ಟಿದ ಗಿಡಗಳನ್ನು ಕಡಿಮೆ ದರಲ್ಲಿ ನೀಡುತ್ತಾರೆ. ಒಂದು ಮಾವಿನ ಗಿಡದಲ್ಲಿ ಆರು ವಿಧದ ಮಾವಿನ ಹಣ್ಣನ್ನು ಕಸಿ ಕಟ್ಟಿದ್ದಾರೆ. ಮುಂದೆ ಒಂದೇ ಗಿಡದಲ್ಲಿ 12 ಮಾವಿನ ಹಣ್ಣು ಸಿಗುವಂತೆ ಕಸಿ ಕಟ್ಟುವ ಉದ್ದೇಶ ಹೊಂದಿದ್ದಾರೆ. ತಾರಸಿ ತೋಟ ಮಾತ್ರವಲ್ಲ, ಕೈತೋಟ ನಿರ್ಮಿಸಿ ಅದರಲ್ಲೂ ಯಶಸ್ವಿಯಾಗಿದ್ದಾರೆ.

ಉಳ್ಳಾಲದ ಕೃಷಿ-ತೋಟಗಾರಿಕಾ ಸಂಶೋಧನಾ ಕೇಂದ್ರದ 2021ರ ಗೇರು ಮೇಳದಲ್ಲಿ ಕೃಷಿ ಸಾಧಕ ಪುರಸ್ಕಾರ ಲಭಿಸಿದೆ. 2016ರ ಕದ್ರಿ ಫಲಪುಷ್ಪ ಪ್ರದರ್ಶನದಲ್ಲಿ ರೈತ ಸನ್ಮಾನ, ಬೆಳಗಾವಿಯಲ್ಲಿ ರೈತ ಸಂಪದ ಸನ್ಮಾನ, ಎಗ್ರಿ ಎಕ್ಸ್‌ಪೋದಲ್ಲಿ ಟೆರೇಸ್‌ ಕೃಷಿ ಬಗ್ಗೆ ಉಪನ್ಯಾಸ ನೀಡಿದ್ದಾರೆ. ಪ್ರತಿಷ್ಠಿತ ವಲ್ಡ್‌ರ್‍ ರೆಕಾರ್ಡ್‌ ಸನ್ಮಾನ, ಸೂಪರ್‌ ರೈತ ಪ್ರಶಸ್ತಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಬಿಗ್‌ 3 ಹೀರೋ ಹೀಗೆ ಪ್ರಶಸ್ತಿ, ಪುರಸ್ಕಾರಗಳು ಇವರನ್ನು ಅರಸುತ್ತಲೇ ಇದೆ. ತನ್ನ ಟೆರೇಸ್‌ ಗಾರ್ಡನ್‌ ಕೃಷಿ ಸಾಧನೆಯನ್ನು ಬ್ಲಾನಿ ಡಿಸೋಜಾ ಹೆಸರಿನ ತನ್ನದೇ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಬ್ಲಾನಿ ಅವರ ಸಂಪರ್ಕ ಸಂಖ್ಯೆ : 99727 16340

"

click me!