Raita Ratna Award 2022: ಸಾವಯವ ಕೃಷಿ ಸಾಧಕಿ ಟ್ರ್ಯಾಕ್ಟರ್‌ ಮಹದೇವಕ್ಕ

By Kannadaprabha News  |  First Published Apr 21, 2022, 10:38 AM IST

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ಸ್ವತಃ ಟ್ರ್ಯಾಕ್ಟರ್‌ ಚಲಾಯಿಸಿ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಬ್ಯಾಡಗಿಯ ಕೆರವಡಿ ಗ್ರಾಮದ ಮಹದೇವಕ್ಕ ಲಿಂಗದಹಳ್ಳಿ ಅವರಿಗೆ ಸಂದಿದೆ. ಸಾಧಕ ರೈತ ಮಹಿಳೆಗೆ ಗೌರವ ಸಮರ್ಪಣೆ.


ನಾರಾಯಣ ಹೆಗಡೆ ಹಾವೇರಿ

ಐದೂವರೆ ಎಕರೆ ಜಮೀನಿನಲ್ಲಿ ಒಂಟಿಯಾಗಿ ಕೃಷಿ ಮಾಡಿ ಬಂಗಾರದ ಬೆಳೆ ತೆಗೆದವರು ಮಹದೇವಕ್ಕ ಲಿಂಗದಹಳ್ಳಿ. ಇವರು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕೆರವಡಿ ಗ್ರಾಮದ ಕೃಷಿ ಸಾಧಕಿ. ಹೆಣ್ಣು ಮಕ್ಕಳು ಹೊಲದಲ್ಲಿ ಕಳೆ ಕೀಳಲು, ಗೊಬ್ಬರ ಹಾಕಲು ಸೀಮಿತ ಎಂಬ ಕಾಲದಲ್ಲಿ ಸ್ವತಃ ತಾನೇ ಟ್ರ್ಯಾಕ್ಟರ್‌ ಚಲಾಯಿಸಿ ಕೃಷಿಯಲ್ಲಿ ಸಾಧನೆ ಮಾಡಿದ ದಿಟ್ಟ ಮಹಿಳೆ ಇವರು. ಟ್ರ್ಯಾಕ್ಟರ್‌ ಮಹದೇವಕ್ಕ ಎಂದೇ ಇವರು ಫೇಮಸ್‌ ಆಗಿದ್ದಾರೆ.

Tap to resize

Latest Videos

undefined

ತೀರಾ ಬಡತನದ ಕುಟುಂಬದಲ್ಲಿ ಜನಿಸಿರುವ ಮಹದೇವಕ್ಕ ಅವರ ತಂದೆಗೆ ಐವರು ಹೆಣ್ಣು ಮಕ್ಕಳು. ತಂದೆ ಬಸಪ್ಪ ಹುಟ್ಟಿನಿಂದಲೇ ಶ್ರವಣದೋಷ ಉಳ್ಳವರಾಗಿದ್ದರೆ, ತಾಯಿ ಕೂಡ ಅಂಗವಿಕಲತೆ ಹೊಂದಿದ್ದಾರೆ. ತನ್ನ 12ನೇ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಇವರ ಹೆಗಲ ಮೇಲೆ ಬಿದ್ದಿತು. 5 ಎಕರೆ 23 ಗುಂಟೆ ಜಮೀನಿನಲ್ಲಿ ಅಲ್ಲಿಂದ ಇಲ್ಲಿಯವರೆಗೆ ಸುಮಾರು 35 ವರ್ಷಗಳ ಕಾಲ ದುಡಿದು ಕೃಷಿಯನ್ನೇ ಉಸಿರಾಗಿಸಿಕೊಂಡಿದ್ದಾರೆ. ವಿವಾಹವಾಗದೇ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಅದರಲ್ಲೂ ಸೈ ಎನಿಸಿಕೊಂಡಿದ್ದಾರೆ.

ಕನ್ನಡಪ್ರಭ -ಸುವರ್ಣ ನ್ಯೂಸ್‌ನಿಂದ ತೆರೆಮರೆಯಲ್ಲಿ ಕೃಷಿ ಸಾಧನೆ ಮಾಡುತ್ತಿರುವ ಅನೇಕರನ್ನು ಗುರುತಿಸಿ ರೈತ ರತ್ನ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕಾರ್ಯ. ಇದರಿಂದ ನಮ್ಮಂಥ ಬಡ ಮಹಿಳೆಯರ ಕಾರ್ಯಗಳು ಬೆಳಕಿಗೆ ಬರುವಂತಾಗಿದೆ. ನನಗೆ ಪ್ರಶಸ್ತಿ ನೀಡಿರುವುದರಿಂದ ಕೃಷಿಯಲ್ಲಿ ಇನ್ನಷ್ಟುಸಾಧನೆ ಮಾಡಲು ಪ್ರೇರಣೆ ಸಿಕ್ಕಂತಾಗಿದೆ. -ಮಹದೇವಕ್ಕ ಲಿಂಗದಹಳ್ಳಿ, ರೈತರತ್ನ ಪ್ರಶಸ್ತಿ ಪುರಸ್ಕೃತೆ

ಎರಡನೆಯ ತಂಗಿ ರತ್ನವ್ವ ಮತ್ತು ಮಹದೇವಕ್ಕನವರು ಮದುವೆಯಾಗದೆ ಇಂದಿಗೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಕಡೆಯ ಇಬ್ಬರು ಸಹೋದರಿಯರನ್ನು ಮಹದೇವಕ್ಕ ಅವರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ. ಅವರ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಶಿಕ್ಷಣ ಕೊಡಿಸುತ್ತಿದ್ದಾರೆ.

Raita Ratna Award 2022: ತಿರುಮಲೇಶ್ವರ ಭಟ್ಟರ ಪ್ರಯೋಗಶೀಲ ಕೃಷಿ

ಸಾವಯವ ಗೊಬ್ಬರವನ್ನು ಅವರೇ ತಯಾರಿಸುತ್ತಿದ್ದು ಮಣ್ಣು ಸಂರಕ್ಷಣೆಯಲ್ಲಿ ವಿಶೇಷ ಕಾಳಜಿ ಹೊಂದಿದ್ದಾರೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 100 ತೆಂಗಿನ ಸಸಿಗಳನ್ನು 1200 ಅಡಿಕೆಯ ಸಸಿಗಳು ಹಾಗೂ 1000 ಬಾಳೆಯ ಸಸಿಗಳನ್ನು ನೆಟ್ಟು ತೋಟ ಮಾಡಿಕೊಂಡಿದ್ದಾರೆ. ಅದರ ನಡುವೆ ಚೆಂಡು ಹೂ, ಅಲಸಂಡೆ, ಟೊಮ್ಯಾಟೋ, ಚೌಳಿ ಮಿಶ್ರಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಆರಂಭದಲ್ಲಿ ಎತ್ತುಗಳಿಂದ ಉಳುಮೆ ಮಾಡುವುದು ಕಷ್ಟವಾಗಿತ್ತು. ತಂದೆ ಇದ್ದಾಗ ಅವರೊಂದಿಗೆ ಎತ್ತುಗಳ ಸಹಾಯದಿಂದ ಕೃಷಿ ಕಾರ್ಯ ಮಾಡುತ್ತಿದ್ದರು. ತಂದೆಯ ನಿಧನದ ಬಳಿಕ ತಾವೇ ಟ್ರ್ಯಾಕ್ಟರ್‌ ಚಾಲನೆ ಕಲಿತರು. ಸಾಲ ಮಾಡಿ ಟ್ರ್ಯಾಕ್ಟರ್‌ ಖರೀದಿಸಿದರು. ಬಿಸಿಲು ಮಳೆಯೆನ್ನದೇ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡಲು ಶುರು ಮಾಡಿದರು. ಬೆಳೆಗಳ ಸಾಗಾಟ, ಒಕ್ಕಲು ಮಾಡುವುದು, ಹೊಲ ಉಳುಮೆಯಲ್ಲಿ ತೊಡಗಿಕೊಂಡರು. ಇತ್ತೀಚೆಗೆ ಆರ್ಥಿಕ ತೊಂದರೆಯಾದಾಗ ಟ್ರ್ಯಾಕ್ಟರ್‌ ಮಾರಿದ್ದರು. ಆದರೂ ಛಲ ಬಿಡದೇ ವ್ಯವಸಾಯ ಮಾಡಿ ಮನೆ ಕಟ್ಟಿಸಿದ್ದಾರೆ. ಪುರುಷ ಪ್ರಧಾನ ಕೃಷಿ ಕ್ಷೇತ್ರದಲ್ಲಿ ತಮ್ಮದೇ ಸಾಧನೆ ಮೂಲಕ ವಿಭಿನ್ನರಾಗಿ ನಿಲ್ಲುತ್ತಾರೆ ಮಹದೇವಕ್ಕ.

Raita Ratna 2022: ಯುವಕರಿಗೆ ಕೃಷಿಯ ದಾರಿ ತೋರಿದ ಗಣೇಶ್‌ ಖಾರ್ವಿ

ರೈತರತ್ನ ಕಾರ್ಯಕ್ರಮದಿಂದ ಸಿಕ್ತು ಹೊಸ ಟ್ರ್ಯಾಕ್ಟರ್‌

ರೈತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಹದೇವಕ್ಕ, ಟ್ರ್ಯಾಕ್ಟರ್‌ ಇದ್ದಿದ್ದರೆ ಇನ್ನೂ ಹೆಚ್ಚಿನ ಸಾಧನೆಗೆ ಅನುಕೂಲವಾಗುತ್ತಿತ್ತು ಎಂದು ಹೇಳಿಕೊಂಡಿದ್ದರು. ವೇದಿಕೆಯಲ್ಲಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ ಟ್ರ್ಯಾಕ್ಟರ್‌ ಕೊಡಿಸುವ ಭರವಸೆ ನೀಡಿದ್ದರು. ಅದರಂತೆ ಕೆಲವೇ ದಿನಗಳಲ್ಲಿ ಸಚಿವರು ಸುಮಾರು 10 ಲಕ್ಷ ರು. ಮೌಲ್ಯದ ಟ್ರ್ಯಾಕ್ಟರ್‌ ಕೊಡಿಸಿದ್ದಾರೆ. ಇದರಿಂದ ಮಹದೇವಕ್ಕ ಅವರ ಕೃಷಿ ಕಾರ್ಯಕ್ಕೆ ಅನುಕೂಲವಾಗಿದೆ.

"

click me!