
ಬೆಂಗಳೂರು(ಅ.25): ರಾಜ್ಯದ ಚಿಕ್ಕಮಗಳೂರು, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗುರುವಾರ ಹಿಂಗಾರು ಮಳೆ ಸುರಿದಿದ್ದು, ಮನೆಗಳು ಕುಸಿದು ಹಾನಿಯಾಗಿದೆ. ಕೆಲವೆಡೆ ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಜಮೀನಿನಲ್ಲಿದ್ದ ಬೆಳೆಗಳು ನಾಶವಾಗಿವೆ. ಬೆಂಗಳೂರಲ್ಲಿ ಕಳೆದ ಮೂರ್ನಾಲ್ಕು ದಿನ ಗಳಿಂದ ಬಿಟ್ಟು ಬಿಡದೆ ಬರುತ್ತಿದ್ದ ತುಂತುರು ಮಳೆ ಗುರುವಾರ ಸ್ವಲ್ಪ ಬಿಡುವು ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾತೋಳಿಯ ಹಳ್ಳದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ 2 ಹಸುಗಳು ಕೊಚ್ಚಿಹೋಗಿದ್ದು, ಹಲವೆಡೆ ಅಡಕೆ ತೋಟಕ್ಕೆ ಹಳ್ಳದ ನೀರು ನುಗ್ಗಿ ಬೆಳೆ ಹಾಳಾಗಿದೆ. ಅಲ್ಲದೆ ಗದ್ದೆಗಳಲ್ಲಿದ್ದ ಬತ್ತದ ಪೈರು ಹಾಳಾಗಿವೆ. ಇನ್ನು, ತುಮಕೂರು ಜಿಲ್ಲೆಯಲ್ಲಿ ಗುರುವಾರವೂ ಮಳೆ ಆರ್ಭಟ ಮುಂದುವರೆದಿದ್ದು, ತುರುವೇಕೆರೆ ತಾಲೂಕಿನ ಹಲವಾರು ಕೆರೆಗಳು ಕೋಡಿ ಬಿದ್ದು ನೀರು ರಸ್ತೆ ಮೇಲೆ ಹರಿದ ಪರಿಣಾಮ ಸಂಚಾರಕ್ಕೆ ಅಡಚಣೆಯಾಯಿತು.
ಬೆಂಗಳೂರು ಮಳೆ: ರಾಜಕಾಲುವೆಗಳ ಅಕ್ಕಪಕ್ಕ 50 ಅಡಿವರೆಗೂ ಕಟ್ಟಡ ನಿರ್ಮಿಸುವಂತಿಲ್ಲ!
ಡಿ.ಹೊಸಹಳ್ಳಿ ಗ್ರಾಮದ ಪಾರ್ವತಮ್ಮ ಎನ್ನುವವರ ಮನೆಯ ಗೋಡೆ ಬುಧವಾರ ರಾತ್ರಿ ಕುಸಿದಿದ್ದು, ಮನೆಯಲ್ಲಿ ದ್ದವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿ ಸಂಗ್ರಹಿಸಿದ ಧವಸ, ಧಾನ್ಯ ಹಾಳಾಗಿವೆ. ಕೊಂಡಜ್ಜಿ ಕ್ರಾಸ್, ಸೊಪ್ಪನಹಳ್ಳಿ ಮಧ್ಯೆ ಕೊಂಡಜ್ಜಿ ಹಳ್ಳ ರಭಸವಾಗಿ ರಸ್ತೆ ಮೇಲೆ ಹರಿಯುತ್ತಿದ್ದು, ರಸ್ತೆ ಬಂದ್ ಮಾಡಲಾಗಿದೆ.
ತುರುವೇಕೆರೆ ಪಟ್ಟಣದ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ ಮುನಿಯೂರು ಗದ್ದೆ ಬಯಲಿನವರೆವಿಗೂ ನೀರು ಆವರಿಸಿ ಕೊಂಡು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಶಿಂಷಾ ನದಿ ರಸ್ತೆ ಸೇತುವೆ ಎರಡೂ ಕಡೆ ಯಾವುದೇ ತಡೆಗೋಡೆ ನಿರ್ಮಿಸದೇ ಇರುವ ಕಾರಣ ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ