
ಬೆಂಗಳೂರು(ಅ.25): 'ವಾಣಿಜ್ಯ, ವ್ಯವಹಾರ ನಡೆಸುವ ಅಂಗಡಿಗಳ ಮುಂದಿನ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಬಿಬಿಎಂಪಿ ಸುತ್ತೋಲೆ ಪ್ರಶ್ನಿಸಿ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳು ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿಪಡಿಸಲು ನಿರಾಕರಿಸಿರುವ ಹೈಕೋರ್ಟ್, 'ನೀವು ಕರ್ನಾಟಕದಲ್ಲಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿ ಪ್ರದರ್ಶಿಸಲೇಬೇಕು' ಎಂದು ಅರ್ಜಿದಾರ ಸಂಸ್ಥೆಗಳ ಪರ ವಕೀಲರಿಗೆ ಮೌಖಿಕವಾಗಿ ಹೇಳಿದೆ.
ಈ ಸಂಬಂಧ ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರೀಟೇಲ್ ಲಿಮಿಟೆಡ್, ಟೈಟಾನ್ ಕಂಪನಿ ಲಿಮಿಟೆಡ್, ಅಡಿಡಾಸ್ ಇಂಡಿಯಾ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 24 ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ.
ಪತಿಗೆ ಹಿಜಡಾ ಎಂಬ ಬೈಗುಳ ಕ್ರೌರ್ಯ, ಅದು ಡೈವೋರ್ಸ್‌ಗೆ ಕಾರಣವಾಗಬಲ್ಲದು: ಹೈಕೋರ್ಟ್
ಅರ್ಜಿದಾರ ಸಂಸ್ಥೆಗಳ ಪರವಕೀಲರು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಪೀಠದ ಮುಂದೆ ಹಾಜರಾಗಿ, ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಕೋರಿದರು. ಆ ಮನವಿ ತಳ್ಳಿಹಾಕಿದ ನ್ಯಾಯಮೂರ್ತಿಗಳು, 'ನೀವು (ವಾಣಿಜ್ಯ ಸಂಸ್ಥೆಗಳು) ಕರ್ನಾಟಕದಲ್ಲಿ ವಹಿವಾಟು ನಡೆಸುತ್ತಿದ್ದೀರಿ ಎಂದಾದ ಮೇಲೆ ನಿಮ್ಮ ಸೂಚನಾ ಫಲಕಗಳನ್ನು ಕನ್ನಡದಲ್ಲೇ ಪ್ರದರ್ಶಿಸಬೇಕು. ಅದಕ್ಕೆ ಯಾವುದೇ ವಿನಾಯಿತಿ ನೀಡಲಾಗದು' ಎಂದು ಮೌಖಿಕವಾಗಿ ಹೇಳಿದರು. ಜೊತೆಗೆ, ಅಲ್ಲದೆ, ಕನ್ನಡ ಭಾಷಾ ರಕ್ಷಣೆಗೆ ಸಂಬಂಧಿಸಿದಂತೆ ಶ್ರಮಿಸುತ್ತಿರುವ ಕನ್ನಡ ರಕ್ಷಣಾ ವೇದಿಕೆಗಳ ಹೋರಾಟವನ್ನು ಪ್ರಸ್ತಾಪಿಸಿದರು. ನಂತರ ಅರ್ಜಿದಾರರ ವಿರುದ್ಧದ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರು ವಿಚಾರಣೆಯನ್ನು ಮುಂದೂಡಿದರು.
ಕರ್ನಾಟಕದಲ್ಲಿ ವಹಿವಾಟು ನಡೆಸುತ್ತೀದ್ದೀರಿ ಎಂದಾದ ಮೇಲೆ ನಿಮ್ಮ ಸೂಚನಾ ಫಲಕಗಳನ್ನು ಕನ್ನಡದಲ್ಲೇ ಪ್ರದರ್ಶಿಸಬೇಕು. ಅದಕ್ಕೆ ಯಾವುದೇ ವಿನಾಯಿತಿ ನೀಡಲಾಗದು ಎಂದು ನ್ಯಾ.ಚಂದನಗೌಡರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ