
ಆನಂದ್ ಎಂ. ಸೌದಿ
ಯಾದಗಿರಿ (ಮೇ.09): ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶಕ್ಕೆಂದು ರೈತರಿಂದ ಜಮೀನು ಪಡೆಯುವ ಸಂದರ್ಭದಲ್ಲಿ ಕೋಕಾ ಕೋಲಾ, ಜವಳಿ ಪಾರ್ಕ್, ಥರ್ಮಲ್ ಪವರ್ ಮತ್ತು ರೈಲು ಬೋಗಿಯಂತಹ ಬೃಹತ್ ಕೈಗಾರಿಕೆಗಳ ಸ್ಥಾಪನೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಅದರಂತೆ, ಈ ಕೈಗಾರಿಕಾ ಪ್ರದೇಶದ ಸುಮಾರು 150 ಎಕರೆ ಪ್ರದೇಶದಲ್ಲಿ ರೈಲು ಬೋಗಿ ಕಾರ್ಖಾನೆ ಮಂಜೂರಾತಿ ಮಾಡಿದ್ದ ಅಂದಿನ ಕೇಂದ್ರ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಅವರು 16 ಫೆ. 2014 ರಂದು ಅಡಿಗಲ್ಲು ಸಮಾರಂಭ ನೆರವೇರಿಸಿದ್ದರು. ಕಾಮಗಾರಿ ಪೂರ್ಣಗೊಂಡ ನಂತರ 18 ಆಗಸ್ಟ್ 2017 ರಂದು ವರ್ಚ್ಯುವಲ್ ಸಭೆ ಮುಖಾಂತರ ಅಂದಿನ ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಅದನ್ನು ಉದ್ಘಾಟಿಸಿದ್ದರು.
ಆದರೆ, ಈ ರೈಲು ಬೋಗಿ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಯಾವುದೇ ತರಹದ ಉದ್ಯೋಗ ಸೌಲಭ್ಯವನ್ನು ಕಲ್ಪಿಸಿಲ್ಲ, ಈ ಬಗ್ಗೆ ವಿಚಾರಣೆ ಮಾಡಿದರೆ ಜಮೀನು ನೀಡಿದ ರೈತರಿಗೆ ಉದ್ಯೋಗ ಕೊಡಬೇಕು ಎಂಬ ಯಾವುದೇ ಅಧಿಕೃತ ಆದೇಶ ತಮಗೆ ಬಂದಿಲ್ಲ ಎಂದು ಅಧಿಕಾರಿಗಳು ಉತ್ತರಿಸುತ್ತಿದ್ದಾರೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ. ಕಡೇಚೂರು ಬಾಡಿಯಾಳ ಗ್ರಾಮಗಳಲ್ಲಿನ 3232 ಎಕರೆ 22 ಗುಂಟೆ ಜಮೀನನ್ನು ಸುವರ್ಣ ಕರ್ನಾಟಕ ಕಾರಿಡಾರ್ ಯೋಜನೆಗಾಗಿ/ಲ್ಯಾಂಡ್ ಬ್ಯಾಂಕ್ ಯೋಜನೆಗಾಗಿ ಡಿಸೆಂಬರ್ 30, 2011 ರಂದು ರಾಜ್ಯಪತ್ರ ಹೊರಡಿಸಿದ್ದ ಸರ್ಕಾರ, ಅಂದಿನ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ, ಫೆ.13, 2012ರಂದು ಭೂಬೆಲೆ ನಿರ್ಧರಣಾ ಸಲಹಾ ಸಮಿತಿ ಸಭೆ ನಡೆದಿತ್ತು.
ರೈತರಿಗೆ ಬೆಣ್ಣೆ ತೋರಿಸಿ, ಸುಣ್ಣ ತಿನ್ನಿಸಿದ ಸರ್ಕಾರ: ಭೂಸ್ವಾಧೀನ ಸಭೆಯಲ್ಲಿ ಆಗಿದ್ದೇನು?
ಕೈಗಾರಿಕಾ ನೀತಿಯ ಪ್ರಕಾರ ಕಂಪನಿಗಳಲ್ಲಿ ಉದ್ಯೋಗ ನೀಡುವ ಬಗ್ಗೆ, ಕೈಗಾರಿಕಾ ನಿವೇಶನಗಳನ್ನು ಕೈಗಾರಿಕಾ ಉದ್ದಿಮೆಗಳಿಗೆ ಹಂಚಿಕೆ ಮಾಡುವಾಗ ಜಮೀನು ಕಳೆದುಕೊಂಡ ಭೂಮಾಲೀಕರ ಕುಟುಂಬಕ್ಕೆ ಒಬ್ಬರಿಗೆ ವಿದ್ಯಾರ್ಹತೆ ಅನುಗುಣವಾಗಿ ನೌಕರಿಯನ್ನು ನೀಡಲು ಮುಚ್ಚಳಿಕೆ ಪತ್ರ ಪಡೆಯಲಾಗುವುದು ಎಂದು ಆಗ ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಯಾಗಿದ್ದ ವಿ. ಜಗನ್ನಾಥ್ ಈ ಸಭೆಯಲ್ಲಿ ತಿಳಿಸಿದ್ದರು. ಈ ಎಲ್ಲವನ್ನೂ ನಂಬಿದ ರೈತರು ಭೂಮಿ ನೀಡಿದ್ದರು. ರೈಲು ಗಾಲಿಗಳ ಅಚ್ಚು ಬೋಗಿ ಕಾರ್ಖಾನೆಯೂ ಸ್ಥಾಪಿತಗೊಂಡಿತು. ದುರಂತವೆಂದರೆ, ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡುವುದಿರಲಿ, ಅಲ್ಲಿ ಗೇಟು ಕಾಯುವ ಕೆಲಸಕ್ಕೂ ನೇಮಿಸಿಕೊಳ್ಳಲು ರೈಲು ಇಲಾಖೆ ಹಿಂದೇಟು ಹಾಕಿದೆ. ರೈಲು ಕೋಚ್ ಫ್ಯಾಕ್ಟರಿಯಲ್ಲಿ ಭೂಮಿ ಕಳೆದುಕೊಂಡ ಬಾಡಿಯಾಳ, ಕಡೇಚೂರು ಗ್ರಾಮದ ದಶರಥ ಪಟ್ಟಿ ಹಾಗೂ ತರಬೇತಿಗಾಗಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿ ನೀಡಿದರೂ, ರೈಲು ಇಲಾಖೆ ಇದಕ್ಕೆ ಹಸಿರು ನಿಶಾನೆ ತೋರಿಸಿಲ್ಲ.
ಇದನ್ನು ಪ್ರಶ್ನಿಸಿ, ಬಾಳಛೇಡದ ಮಹಾದೇವಪ್ಪ, ಬಾಡಿಯಾಳದ ಭೀಮಶಪ್ಪ ಗುಡ್ಲಾ, ಯೆಂಕಪ್ಪ ಮಂತ್ರಿ, ಶೆಟ್ಟಿಹಳ್ಳಿಯ ಮರೆಪ್ಪ, ಬಾಳಛೇಡದ ಮಹಾದೇವ, ಶಂಕರಮ್ಮ ಸೇರಿದಂತೆ ಎಂಟು ಜನರು ಕಲಬುರಗಿ ಹೈಕೋರ್ಟ್ ಪೀಠಕ್ಕೆ ಜಿಲ್ಲಾಡಳಿತ, ರೈಲ್ವೆ ಇಲಾಖೆ, ಕೆಐಎಡಿಬಿ ವಿರುದ್ಧ 2018 ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. 2022 ಜುಲೈನಲ್ಲಿ ತೀರ್ಪು ನೀಡಿದ್ದು, ಹೊಸದಾಗಿ ಅರ್ಜಿ ಪಡೆದು ರೈಲ್ವೆ ಇಲಾಖೆಯೊಳಗೆ ಉದ್ಯೋಗಕ್ಕೆ ಅವಕಾಶ ನೀಡುವಂತೆ ತಿಳಿಸಲಾಗಿತ್ತು. ಆದರೆ, ವಿಚಾರಣೆ ವೇಳೆ, ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಯಾಗಿದ್ದ ಜಗನ್ನಾಥ್ ನೀಡಿದ್ದ ಭರವಸೆ ಸಂಬಂಧವೇ ಇಲ್ಲವೆಂದು ರೈಲ್ವೆ ಇಲಾಖೆ ಕೋರ್ಟ್‌ಗೆ ತಿಳಿಸಿತ್ತು ಎಂದು ಶೆಟ್ಟಿಹಳ್ಳಿ ಗ್ರಾಮದ ದಶರಥ ಅಳಲು ತೋಡಿಕೊಂಡರು. ದಶರಥ ಅವರ ತಾಯಿ ಶಂಕ್ರಮ್ಮ ಹೆಸರಿನಲ್ಲಿದ್ದ 7 ಎಕರೆ 10 ಗುಂಟೆ ಜಮೀನನ್ನು ರೈಲ್ವೆ ಕೋಚ್ ಫ್ಯಾಕ್ಟರಿಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಸರ್ಕಾರ ನಮಗೆ ಮೋಸ ಮಾಡಿದೆ, ಭೂಸಂತ್ರಸ್ತಲ್ಲದವರಿಗೆ ಉದ್ಯೋಗಕ್ಕೆ ಅರ್ಜಿ ಕರೆದಿದೆ ಎಂದು ದಶರಥ್ ದೂರಿದರು.
ಕೆಮಿಕಲ್ ತ್ಯಾಜ್ಯ ದುರ್ನಾತ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೂ ದೂರು!
ಸಚಿವ ಖರ್ಗೆ ಸೂಚನೆಗೂ ರೈಲ್ವೆ ಕಿಮ್ಮತ್ತಿಲ್ಲ: ಯಾದಗಿರಿ ಕೈಗಾರಿಕಾ ಇಲಾಖೆ ಕಚೇರಿಯಿಂದ ರೈಲ್ವೆ ಇಲಾಖೆಗೆ 3 ಆಗಸ್ಟ್ 2017 ರಂದು ಪತ್ರ ಬರೆಯಲಾಗಿತ್ತು. ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡುವಂತೆ ಅಂದು ಯಾದಗರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ಅವರು 28 ಜೂನ್ 2016 ರಂದು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಸೂಚಿಸಿದ್ದು, ಡಾ. ಸರೋಜಿನಿ ಮಹಿಷಿ ವರದಿಯಂತೆ, ಕೈಗಾರಿಕೆಗಳಲ್ಲಿ ಉದ್ಯೋಗಕ್ಕೆ ತಿಳಿಸಿದ್ದರು. ಅಚ್ಚರಿಯೆಂದರೆ, ಖರ್ಗೆ ಅವರ ಈ ಸೂಚನೆಗೂ ರೈಲ್ವೆ ಇಲಾಖೆ ಕಿಮ್ಮತ್ತು ನೀಡಿಲ್ಲ. ಉದ್ಯೋಗಕ್ಕಾಗಿ ಕೋರ್ಟ್-ಕಚೇರಿ ಅಲೆದಾಡುತ್ತಿರುವ ಭೂಸಂತ್ರಸ್ತ ಕುಟುಂಬಸ್ಥರು, ಭೂಮಿಯೂ ಹೋಯ್ತು, ಉದಯೋಗವೂ ಹೋಯ್ತು ಎಂದು ಕಣ್ಣೀರಿಡುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ