
ರಾಯಚೂರು (ಜೂ.8): ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಸುಂಕೇಶ್ವರ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಗ್ರಾಮ ಪಂಚಾಯತಿಗೆ ಬೇಲಿ ಹಾಕಿ ತೀವ್ರ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಪಂಚಾಯತಿ ಸಿಬ್ಬಂದಿ ಬೇಜವಾಬ್ದಾರಿತ, ನಿರ್ಲಕ್ಷ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ಗ್ರಾಮಸ್ಥರು ಸಿಡಿದೆದ್ದಿದ್ದಾರೆ.
ಪಂಚಾಯ್ತಿ ಇದ್ದೂ ಇಲ್ಲದಂತೆ:
ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಈ ಬಗ್ಗೆ ಗ್ರಾಮಸ್ಥರು ಹಲವಾರು ಬಾರಿ ಸಮಸ್ಯೆ ಹೇಳಿದರೂ ಪಂಚಾಯತಿ ಅಧಿಕಾರಿಗಳು ಮತ್ತು ಪಿಡಿಒ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಲಾಗಿದೆ. 'ಗ್ರಾಮ ಪಂಚಾಯತಿಯ ಸಿಬ್ಬಂದಿಯೇ ಗ್ರಾಮಕ್ಕೆ ಬರುವುದಿಲ್ಲ, ಮಾನ್ವಿ ಪಟ್ಟಣದಿಂದಲೇ ಎಲ್ಲ ವ್ಯವಹಾರ ನಡೆಸುತ್ತಾರೆ. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದ ಪಿಡಿಒ ಯಾಕೆ ಬೇಕು? ಪಂಚಾಯತಿಯೇ ಇದ್ದೂ ಇಲ್ಲದಂತಾಗಿದೆ' ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ্তಪಡಿಸಿದ್ದಾರೆ.
ಉದ್ಯೋಗ ಖಾತ್ರಿ ಅವ್ಯವಹಾರ:
ನರೇಗಾ ಯೋಜನೆಯಡಿ ನಡೆದ ಕಾಮಗಾರಿಗಳಲ್ಲಿ ಗಂಭೀರ ಅವ್ಯವಹಾರಗಳು ನಡೆದಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನಕಲಿ ಜಾಬ್ ಕಾರ್ಡ್‌ಗಳು, ತಪ್ಪು ಹಾಜರಾತಿ ಸೃಷ್ಟಿಸಿ ಕೋಟ್ಯಂತರ ರೂಪಾಯಿ ಹಣವನ್ನು ಲೂಟಿ ಮಾಡಲಾಗಿದೆ. ಗ್ರಾಮದಲ್ಲಿ ಕಾಮಗಾರಿಗಳೇ ನಡೆದಿಲ್ಲ, ಆದರೆ ದಾಖಲೆಗಳಲ್ಲಿ ಎಲ್ಲವೂ ಪೂರ್ಣಗೊಂಡಂತೆ ತೋರಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪಂಚಾಯತಿ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡದೇ, ನಗರದಿಂದಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಯಾವುದೇ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ.
ಪಂಚಾಯ್ತಿಗೆ ಬೇಲಿ ಹಾಕಿದ ಗ್ರಾಮಸ್ಥರು:
ಅಧಿಕಾರಿ ಸಿಬ್ಬಂದಿ ವರ್ಗದ ನಿರ್ಲಕ್ಶ್ಯ, ಅವ್ಯವಹಾರಗಳಿಂದ ಬೇಸತ್ತ ಗ್ರಾಮಸ್ಥರು ಪಂಚಾಯ್ತಿಗೆ ಬೇಲಿ ಹಾಕಿ ಪ್ರತಿಭಟಿಸಿದ್ದಾರೆ. ಈ ಭ್ರಷ್ಟಾಚಾರ ಮತ್ತು ನಿರ್ಲಕ್ಷ್ಯಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬಹುತೇಕ ಗ್ರಾಮಗಳಲ್ಲಿ ಇದೇ ಪರಿಸ್ಥಿತಿ:
ರಾಯಚೂರು ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಇದೇ ರೀತಿಯ ಪರಿಸ್ಥಿತಿ ಇದ್ದು, ಸರಕಾರಿ ಯೋಜನೆಗಳ ದುರ್ಬಳಕೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗ್ರಾಮಸ್ಥರು ತಮ್ಮ ಬೇಡಿಕೆಗಳಿಗೆ ಶೀಘ್ರ ಸ್ಪಂದನೆ ಸಿಗದಿದ್ದರೆ ಹೆಚ್ಚಿನ ಪ್ರತಿಭಟನೆಗೆ ಮುಂದಾಗುವ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ