ಗೃಹಜ್ಯೋತಿ ಇದ್ರೂ ಸರ್ಕಾರಿ ಆಸ್ಪತ್ರೆಗೆ ಕರೆಂಟ್‌ ಇಲ್ಲ, ಮೊಬೈಲ್ ಬೆಳಕಲ್ಲಿ ಮಹಿಳೆಗೆ 4 ನೇ ಹೆರಿಗೆ!

Published : Sep 12, 2025, 05:02 PM IST
Pregnant woman delivery mobile light

ಸಾರಾಂಶ

Raichur Pregnant delivery mobile light ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಕೊರತೆಯಿಂದಾಗಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಲಾಗಿದೆ. ಈ ಘಟನೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯನ್ನು ಬಯಲು ಮಾಡಿದೆ. 

ರಾಯಚೂರು: ಇದು ರಾಜ್ಯದ ಆರೋಗ್ಯ ಸಚಿವರು ನೋಡಲೇಬೇಕಾಗಿರುವ ಸುದ್ದಿ, ಇದು ಇಡೀ ರಾಜ್ಯವೇ ತಲೆ ತಗ್ಗಿಸಬೇಕಾದಂತಹ ಸುದ್ದಿ. ಏನಾಗಿದೆ‌ ಆರೋಗ್ಯ ನಿಮ್ಮ ಇಲಾಖೆಗೆ? ಆಸ್ಪತ್ರೆಗಳಲ್ಲಿ ವಿದ್ಯುತ್ ಕೊಡೋದಕ್ಕೂ ನಿಮ್ಮ ಬಳಿ ಹಣವಿಲ್ಲವೇ? 21ನೇ ಶತಮಾನದಲ್ಲಿಯೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡುತ್ತಿರುವುದು ಇಡೀ ಆರೋಗ್ಯ ಇಲಾಖೆಯ ಅವ್ಯವಸ್ಥೆಯನ್ನು ಪ್ರಶ್ನಿಸುವಂತಿದೆ. ರಾಜ್ಯದ ಆರೋಗ್ಯ ವ್ಯವಸ್ಥೆಯ ದುಸ್ಥಿತಿಯನ್ನು ಬಯಲು ಮಾಡುವಂತಹ ವಿಲಕ್ಷಣ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ನಡೆದಿದೆ. ಹಟ್ಟಿ ಚಿನ್ನದ ಗಣಿ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ನೆರವಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

ವಿದ್ಯುತ್ ಇಲ್ಲದೇ ಕತ್ತಲಲ್ಲಿ ಚಿಕಿತ್ಸೆ!

ಆಸ್ಪತ್ರೆಗೆ ಸೌರ ಘಟಕದ ಮೂಲಕ ವಿದ್ಯುತ್ ಸೌಲಭ್ಯ ಒದಗಿಸಲಾಗಿದ್ದರೂ ಅದು ತಿಂಗಳುಗಳಿಂದ ಕೆಟ್ಟು ಹೋಗಿದೆ. ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಇಟರ್ನೆಟ್ ಹಾಗೂ ಜನರೇಟರ್ ಸಹ ವರ್ಷಗಳಿಂದ ನಿರುಪಯುಕ್ತವಾಗಿದ್ದು, ನಿರ್ಲಕ್ಷ್ಯದಿಂದ ದುರಸ್ತಿ ಮಾಡಿಸದೇ ಬಿಟ್ಟುಬಿಡಲಾಗಿದೆ. ಆಸ್ಪತ್ರೆಯ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ, ರಾತ್ರಿಯ ವೇಳೆಯಲ್ಲಿ ವೈದ್ಯರು ಹಾಗೂ ನರ್ಸ್‌ಗಳು ಕತ್ತಲಲ್ಲೇ ಮೊಂಬತ್ತಿ ಅಥವಾ ಮೊಬೈಲ್ ಟಾರ್ಚ್‌ ಬೆಳಕಿನ ಆಧಾರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಇತ್ತೀಚೆಗೆ ಗರ್ಭಿಣಿ ಮಹಿಳೆಯೊಬ್ಬರಿಗೆ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಹೆರಿಗೆ ಮಾಡಿಸಿದ ಘಟನೆ ಜನರ ಕೋಪಕ್ಕೆ ಕಾರಣವಾಗಿದೆ.

50 ಸಾವಿರ ಜನರಿಗೆ ಆಧಾರವಾಗಿರುವ ಆಸ್ಪತ್ರೆ

ಹಟ್ಟಿ ಪಟ್ಟಣ ಹಾಗೂ ಸುತ್ತಮುತ್ತಲಿನ 15 ರಿಂದ 20 ಹಳ್ಳಿಗಳ ಜನತೆ ಈ ಆಸ್ಪತ್ರೆಯನ್ನು ಅವಲಂಬಿತರಾಗಿದ್ದಾರೆ. ಸುಮಾರು 50 ಸಾವಿರ ಜನಸಂಖ್ಯೆಗೆ ಆರೋಗ್ಯ ಸೇವೆ ಒದಗಿಸಬೇಕಿರುವ ಆಸ್ಪತ್ರೆಯಲ್ಲಿ ಶಾಶ್ವತ ಸಿಬ್ಬಂದಿಗಳ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ನಿರ್ಲಕ್ಷ್ಯವು ಜನರ ಹಿಡಿಶಾಪಕ್ಕೆ ಕಾರಣವಾಗಿದೆ.

ಜನರ ಆಕ್ರೋಶ

“21ನೇ ಶತಮಾನದಲ್ಲೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಹೆರಿಗೆ ಮಾಡಿಸಬೇಕಾದ ಪರಿಸ್ಥಿತಿ ಎದುರಾಗುವುದು ನಾಚಿಕೆಗೇಡಿತನ. ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಟ್ಟಿ ಜನರು ನರಳುತ್ತಿದ್ದಾರೆ” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಎಚ್‌ಒ ಸ್ಪಷ್ಟನೆ

ಈ ಕುರಿತು ರಾಯಚೂರು ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ. ಸುರೇಂದ್ರ ಬಾಬು ಸ್ಪಷ್ಟನೆ ನೀಡಿದ್ದು, “ವೈರಲ್ ಆಗುತ್ತಿರುವ ವಿಡಿಯೋ ಆಗಸ್ಟ್ 31ರದ್ದು. ಆ ದಿನ ಭಾರೀ ಮಳೆಯಿಂದಾಗಿ ಹಟ್ಟಿ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ಆಸ್ಪತ್ರೆಯ ಸೌರ ಘಟಕದಲ್ಲಿಯೂ ತಾಂತ್ರಿಕ ಸಮಸ್ಯೆ ಎದುರಾಯಿತು. ಗರ್ಭಿಣಿ ಮಹಿಳೆ ನಾಲ್ಕನೇ ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದರು. ನಮ್ಮ ಸಿಬ್ಬಂದಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ತಪಾಸಣೆ ನಡೆಸಿದರೂ, ಹೆರಿಗೆ ಅಲ್ಲೇ ನಡೆದಿಲ್ಲ. ತಕ್ಷಣವೇ ಮಹಿಳೆಯನ್ನು 108 ಆಂಬುಲೆನ್ಸ್ ಮೂಲಕ ಲಿಂಗಸೂಗೂರಿಗೆ ಕಳುಹಿಸಲಾಯಿತು ಎಂದು ತಿಳಿಸಿದ್ದಾರೆ.

ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ

ಮುಂದುವರೆದು ಮಾತನಾಡಿ, ರಾಯಚೂರು ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಸೌರ ವ್ಯವಸ್ಥೆ ಅಳವಡಿಸಲಾಗಿದೆ. ಜೊತೆಗೆ ಕರೆಂಟ್ ಮತ್ತು ಯುಪಿಎಸ್ ವ್ಯವಸ್ಥೆಯೂ ಇದೆ. ಆದರೆ ಆ ದಿನ ತಾಂತ್ರಿಕ ಕಾರಣಗಳಿಂದ ಸಮಸ್ಯೆ ಉಂಟಾಯಿತು. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಹಳೆಯ ವಿಡಿಯೋಗಳನ್ನು ವೈರಲ್ ಮಾಡುವುದರಿಂದ ವೈದ್ಯರ ನೈತಿಕ ಧೈರ್ಯ ಕುಗ್ಗುತ್ತದೆ. ವಿಡಿಯೋ ಮಾಡಿದವರ ಬಗ್ಗೆ ತನಿಖೆ ನಡೆಸುತ್ತೇವೆ. ಇಲಾಖೆಯ ಸಿಬ್ಬಂದಿ ತಪ್ಪಿತಸ್ಥರಾಗಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಎಚ್‌ಒ ಸ್ಪಷ್ಟಪಡಿಸಿದ್ದಾರೆ. ಹಟ್ಟಿ ಆಸ್ಪತ್ರೆಯ ಈ ಘಟನೆ ಮತ್ತೊಮ್ಮೆ ರಾಜ್ಯದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸ್ಥಿತಿಗತಿಗಳನ್ನೇ ಪ್ರಶ್ನಿಸುವಂತಾಗಿದೆ. ಮೂಲಭೂತ ಸೌಕರ್ಯಗಳ ಕೊರತೆ, ನಿರ್ಲಕ್ಷ್ಯ ಮತ್ತು ನಿರ್ವಹಣಾ ವೈಫಲ್ಯದಿಂದಾಗಿ, ಸಾಮಾನ್ಯ ಜನರ ಜೀವವನ್ನೇ ಅಪಾಯಕ್ಕೆ ಸಿಲುಕಿಸುವಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Farmer wins battle: ರೈತನಿಗೆ ಪರಿಹಾರ ನೀಡದ ಶಿವಮೊಗ್ಗ ಡಿಸಿ ಕಚೇರಿ, ಕಾರು ಜಪ್ತಿಗೆ ಕೋರ್ಟ್ ಆದೇಶ!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!