ಮುದಾಸೀರ್, ಸೊಹೇಲ್ ಪರಾರಿ| ಇನ್ನಷ್ಟು ಜನರು ಠಾಣೆಗೆ ಬನ್ನಿ ಎಂದು ಕರೆ ನೀಡಿದ್ದರು| ಇವರಿಗಾಗಿ ಈಗ ಪೊಲೀಸರ ಹುಡುಕಾಟ| ವಿಡಿಯೋಗಳು ಲಭ್ಯ| ಲೈವ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್|
ಬೆಂಗಳೂರು(ಆ.16):ಡಿ.ಜೆ.ಹಳ್ಳಿ- ಕೆ.ಜಿ.ಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಮಾಡಿ ಜನರಿಗೆ ಪ್ರಚೋದನೆ ನೀಡಿದ್ದ ಇಬ್ಬರು ದುಷ್ಕರ್ಮಿಗಳಿಗೆ ಸಿಸಿಬಿ ಹಾಗೂ ಪೂರ್ವ ವಿಭಾಗದ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಡಿ.ಜೆ.ಹಳ್ಳಿ ಮುದಾಸೀರ್ ಅಹಮ್ಮದ್ ಹಾಗೂ ಸೊಹೇಲ್ ಅಹಮ್ಮದ್ ಎಂಬುವರೇ ಪರಾರಿಯಾಗಿದ್ದು, ತಮ್ಮ ಸ್ನೇಹ ಬಳಗ ಪೊಲೀಸರ ಬಲೆಗೆ ಬಿದ್ದ ಕೂಡಲೇ ಬಂಧನ ಭೀತಿಯಿಂದ ಆ ಇಬ್ಬರು ಅಜ್ಞಾತರಾಗಿದ್ದಾರೆ. ನಾಲ್ಕು ದಿನಗಳಿಂದ ಇಬ್ಬರ ಮೊಬೈಲ್‌ಗಳು ಸ್ವಿಚ್ಡ್ ಆಫ್ ಆಗಿವೆ. ಈ ಸಂಬಂಧ ಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
undefined
ಬೆಂಗಳೂರು ಗಲಭೆ ಗಾಯಾಳು ಸಾವು: ಮೃತರ ಸಂಖ್ಯೆ 4ಕ್ಕೆ ಏರಿಕೆ
ಫೇಸ್‌ಬುಕ್‌ನಲ್ಲಿ ಮುದಾಸೀರ್, ಇನ್‌ಸ್ಟಾಗ್ರಾಂ:
ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಪೋಸ್ಟ್ ಅನ್ನು ಪುಲಿಕೇಶಿ ನಗರದ ಕ್ಷೇತ್ರದ ಕಾಂಗ್ರೆಸ್ ಶಾಸಕ ಸೋದರ ಸಂಬಂಧಿ ನವೀನ್ ಮಂಗಳವಾರ ಸಂಜೆ ಹಾಕಿದ್ದ. ಈ ಪೋಸ್ಟ್ ವಿರೋಧಿಸಿ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಎಸ್‌ಡಿಪಿಐ ಮುಖಂಡರು ಹಾಗೂ ಕಾರ್ಯಕರ್ತರು ಗಲಾಟೆ ಶುರು ಮಾಡಿದ್ದರು. ಕಾವಲ್‌ಭೈರಸಂದ್ರದಲ್ಲಿರುವ ಶಾಸಕ ಹಾಗೂ ಆರೋಪಿ ನವೀನ್ ಮನೆಗಳಿಗೆ ನುಗ್ಗಿ ಗಲಭೆಕೋರರು ದಾಂಧಲೆ ನಡೆಸಿದ್ದರು.
ಅಂದು ರಾತ್ರಿ 8 ಗಂಟೆ ಸುಮಾರಿಗೆ ಗಲಭೆಯನ್ನು ಫೇಸ್‌ಬುಕ್‌ನಲ್ಲಿ ಮುದಾಸೀರ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಸೊಹೇಲ್ ಲೈವ್ ಮಾಡಿದ್ದರು. ‘ನಮ್ಮ ಪ್ರವಾದಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪ್ರಕಟಿಸಿರುವ ಆರೋಪಿ ವಿರುದ್ಧ ಪ್ರತಿಭಟನೆ ನಡೆದಿದೆ. ಎಲ್ಲರೂ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆಗಳ ಬಳಿಗೆ ಬನ್ನಿ’ ಎಂದು ಸಂದೇಶ ಹಾಕಿದ್ದರು. ಈ ಲೈವ್ ವೀಕ್ಷಿಸಿದ ನೂರಾರು ಮಂದಿ ಪ್ರಚೋದನೆಗೊಂಡು ಘಟನಾ ಸ್ಥಳಕ್ಕೆ ಧಾವಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
‘ಈ ಲೈವ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧಾರ್ಮಿಕ ಭಾವನೆಗಳನ್ನು ಕೆರಳಿ ಜನರನ್ನು ಗಲಭೆಗೆ ಆ ಇಬ್ಬರು ಪ್ರಚೋದಿಸಿದ್ದಾರೆ. ಗಲಭೆ ಬಳಿಕ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಬದಲಿಸಿದ ಸೊಹೇಲ್:
‘ಮೊದಲು ಇನ್‌ಸ್ಟಾಗ್ರಾಂನಲ್ಲಿ ಗಲಭೆ ಲೈವ್ ಮಾಡಿದ್ದ ಜನರಿಗೆ ಪ್ರತಿಭಟನೆಗೆ ಬರುವಂತೆ ಕರೆ ನೀಡಿದ್ದ ಸೊಹೇಲ್, ಬಳಿಕ ಪೊಲೀಸರ ಬಂಧನ ಭೀತಿಯಿಂದ ನಿಲುವು ಬದಲಿಸಿದ್ದಾನೆ. ಗಲಾಟೆ ವಿಕೋಪಕ್ಕೆ ತಿರುಗಿದ ಬಳಿಕ ಸೊಹೇಲ್, ಗಲಾಟೆ ನಡೆದಿದೆ. ಯಾರೂ ಬರಬೇಡಿ ಎಂದು ಮತ್ತೆ ಲೈವ್‌ನಲ್ಲಿ ಹೇಳಿದ್ದ. ಈ ಎರಡು ವಿಡಿಯೋಗಳು ಲಭ್ಯವಾಗಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.