ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಶಾಮಿಲಾಗಿರುವವರ ಬೇಟೆ ಮುಂದುವರೆದಿದೆ. ಈ ಪ್ರಕರಣದ ಪ್ರಮುಖ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ನ ಮತ್ತಿಬ್ಬರು ಆಪ್ತರನ್ನು ಸಿಐಡಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ.
ವರದಿ: ಶರಣಯ್ಯ ಹಿರೇಮಠ, ಏಷ್ಯಾನೆಟ್ ಸುವರ್ಣ ನ್ಯೂಸ್, ಕಲಬುರಗಿ
ಕಲಬುರಗಿ (ಜೂ.01): ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಶಾಮಿಲಾಗಿರುವವರ ಬೇಟೆ ಮುಂದುವರೆದಿದೆ. ಈ ಪ್ರಕರಣದ ಪ್ರಮುಖ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ನ ಮತ್ತಿಬ್ಬರು ಆಪ್ತರನ್ನು ಸಿಐಡಿ ಅಧಿಕಾರಿಗಳು ಇಂದು ಬಂಧಿಸಿದ್ದಾರೆ. ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿರುವ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರೆದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಬಗೆದಷ್ಟು ಹೊಸ ಹೊಸ ವಿಚಾರಗಳು ಬಯಲಾಗುತ್ತಿವೆ. ಹೊಸ ಹೊಸ ಆರೋಪಿಗಳು ಸಿಗುತ್ತಲೇ ಇದ್ದಾರೆ. ಇಂದು ಮತ್ತಿಬ್ಬರನ್ನು ಸಿಐಡಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ಅಸ್ಲಂ ಹಾಗೂ ಅದೇ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಮುನಾಫ್ ಜಮಾದಾರ್ ಎನ್ನುವವರೇ ಇಂದು ಬಂಧಿತರಾಗಿರುವವರು.
PSI Recruitment Scam: ಪಿಎಸ್ಐ ಆಗಲು ಅಕ್ರಮದ ಹಾದಿ ತುಳಿದ ದಂಪತಿಗಳ ಬಂಧನ!
ಇವರ ಪಾತ್ರ ಏನು?: ಸಿಐಡಿ ಇಂದು ಬಂಧಿಸಿರುವ ಅಸ್ಲಾಂ ಹಾಗೂ ಮುನಾಫ್ ಜಮಾದಾರ್ ಇಬ್ಬರೂ ಆರ್ ಡಿ ಪಾಟೀಲ್ ಆಪ್ತರು. ಆರ್ ಡಿ ಪಾಟೀಲ್ ಗೆ ಗಿರಾಕಿಗಳನ್ನು ಹುಡುಕಿಕೊಡುವ ಕೆಲಸ ಈ ಇಬ್ಬರೂ ಮಾಡುತ್ತಿದ್ದರು ಎನ್ನಲಾಗಿದೆ. ಪಿಎಸ್ಐ ಪರೀಕ್ಷೆ ಬರೆಯುವ ಕ್ಯಾಂಡಿಡೇಟಗಳನ್ನು ಹುಡುಕುವುದು ಅವರ ಮತ್ತು ಆರ್.ಡಿ ಪಾಟೀಲ್ ನಡುವೆ ಡೀಲ್ ಕುದುರಿಸುವುದು , ಆ ಮೂಲಕ ಅದರಲ್ಲಿ ಕಮಿಷನ್ ಪಡೆಯುವುದು ಬಂಧಿತ ಆರೋಪಿಗಳಿಬ್ಬರ ಪ್ರಮುಖ ದಂಧೆಯಾಗಿತ್ತು. ಅಷ್ಟೇ ಅಲ್ಲ ಆರ್.ಡಿ ಪಾಟೀಲ್ ಕಡೆಯಿಂದ ಬ್ಲೂಟೂತ್ ಗಳನ್ನು ಪಡೆದುಕೊಂಡು, ಅದನ್ನು ಈ ಕ್ಯಾಂಡಿಡೇಟ್ ಗಳಿಗೆ ಕೊಡುವ ಕೆಲಸವೂ ಇವರು ಮಾಡುತ್ತಿದ್ದರು.
ಜೀವ ಬೆದರಿಕೆ ಹಾಕಿದ್ದ ಅಸ್ಲಂ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋರಾಟಗಳನ್ನು ನಡೆಸಿರುವ ಧಾರವಾಡ ಮೂಲದ ಆರ್ ಎಸ್ ಪಾಟೀಲ್ ಎನ್ನುವವರಿಗೆ , ಇದೇ ಅಸ್ಲಂ, ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಆ ಪ್ರಕರಣದ ದೂರು ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಇತ್ತ ಆರ್ ಡಿ ಪಾಟೀಲ್ ಆಪ್ತನಾಗಿ, ಈ ಅಕ್ರಮದಲ್ಲಿ ಶಾಮೀಲಾಗಿರುವ ಮಹತ್ವದ ಸಾಕ್ಷಿಗಳು ದೊರೆತ ಹಿನ್ನೆಲೆಯಲ್ಲಿ, ಅಸ್ಲಂನನ್ನು ಬಂಧಿಸಲು ಸಿಐಡಿ ಜಾಲ ಬೀಸಿತ್ತು. ಕಳೆದ ಕೆಲದಿನಗಳಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದ ಅಸ್ಲಂನನ್ನು ಹೆಡೆಮುರಿಕಟ್ಟಿ ತರುವಲ್ಲಿ ಕಡೆಗೂ ಸಿಐಡಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಆತನ ಸ್ನೇಹಿತ ಹಾಗೂ ಈ ಪ್ರಕರಣದಲ್ಲಿ ಪಾಲುದಾರರಾಗಿರುವ ಕರಜಗಿ ಗ್ರಾಮದ ಮುನಾಫ್ ಜಹಗೀರದಾರ ನನ್ನು ಸಹ ಸಿಐಡಿ ಹೆಡೆಮುರಿಕಟ್ಟಿ ತಂದಿದೆ.
PSI Recruitment Scam ಕಿಂಗ್‌ಪಿನ್ ಆರ್.ಡಿ ಪಾಟೀಲ್ ಮನೆ ಕೆಲಸದಾಳು ಅರೆಸ್ಟ್!
ಇನ್ನಷ್ಟು ಜನರಿಗೆ ನಡುಕ ಶುರು: ಪಿಎಸ್ಐ ನೇಮಕಾತಿ ಅಕ್ರಮ ಪಟ್ಟಣದಲ್ಲಿ ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ಅಸ್ಲಾಂ, ಮತ್ತು ಕರಜಗಿ ಗ್ರಾಮದ ಮುನಾಫ್ ಜಮಾದಾರ್ ಬಂಧನ, ಇವರ ಮೂಲಕ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ನಡುಕ ಸೃಷ್ಟಿಸಿದೆ. ಅಫಜಲಪುರ ತಾಲ್ಲೂಕಿನಲ್ಲಿಯೇ ಇವರ ಮೂಲಕ ಡೀಲ್ ಮಾಡಿಕೊಂಡು, ಪಿಎಸ್ಐ ಪರೀಕ್ಷೆ ಪಾಸಾದ ಹಲವು ಅಭ್ಯರ್ಥಿಗಳಿದ್ದು ಅವರಿಗೂ ಬಂಧನದ ಭೀತಿ ಶುರುವಾಗಿದೆ.
ಬಂಧಿತರ ಸಂಖ್ಯೆ 37ಕ್ಕೆ: ಅಸ್ಲಾಂ ಮತ್ತು ಮುನಾಫ್ ಜಮಾದಾರ ಇವರಿಬ್ಬರನ್ನ ಬಂಧಿಸುವುದರೊಂದಿಗೆ ಇದುವರೆಗೆ ಬಂಧಿತರ ಸಂಖ್ಯೆ 37ಕ್ಕೆ ಏರಿಕೆಯಾದಂತಾಗಿದೆ.