ಪಿಎಸ್‌ಐ ಹುದ್ದೆಗೆ .15 ಲಕ್ಷ ಲಂಚ?: ಬಿಜೆಪಿ ಶಾಸಕನ ವಿರುದ್ಧ ‘ಕೈ’ ವಿಡಿಯೋ ದಾಖಲೆ

Published : Sep 13, 2022, 04:15 AM IST
ಪಿಎಸ್‌ಐ ಹುದ್ದೆಗೆ .15 ಲಕ್ಷ ಲಂಚ?: ಬಿಜೆಪಿ ಶಾಸಕನ ವಿರುದ್ಧ ‘ಕೈ’ ವಿಡಿಯೋ ದಾಖಲೆ

ಸಾರಾಂಶ

ಪಿಎಸ್‌ಐ ಹುದ್ದೆ ಪಡೆಯಲು ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರಿಗೆ ಹಣ ನೀಡಿರುವುದನ್ನು ವಿವರಿಸುವ ನಿವೃತ್ತ ಪೇದೆ ಪರಸಪ್ಪ ಎಂಬುವರ ವಿಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ನಾಯಕರು ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸಲು ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ಎಚ್ಚರಿದ್ದಾರೆ. 

ಬೆಂಗಳೂರು (ಸೆ.13): ಪಿಎಸ್‌ಐ ಹುದ್ದೆ ಪಡೆಯಲು ಬಿಜೆಪಿ ಶಾಸಕ ಬಸವರಾಜ ದಡೇಸುಗೂರು ಅವರಿಗೆ ಹಣ ನೀಡಿರುವುದನ್ನು ವಿವರಿಸುವ ನಿವೃತ್ತ ಪೇದೆ ಪರಸಪ್ಪ ಎಂಬುವರ ವಿಡಿಯೋ ಬಿಡುಗಡೆ ಮಾಡಿರುವ ಕಾಂಗ್ರೆಸ್‌ ನಾಯಕರು ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸಲು ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುವುದಾಗಿ ಎಚ್ಚರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಎರಡು ವಿಡಿಯೋ ಬಿಡುಗಡೆ ಮಾಡಲಾಯಿತು. ಶಾಸಕರಿಗೆ ಹಣ ನೀಡಿರುವುದನ್ನು ಪರಸಪ್ಪ ಒಪ್ಪಿಕೊಂಡಿರುವುದು, ಬಳಿಕ ಹಣ ನೀಡಿಲ್ಲ ಎಂದು ನಿರಾಕರಿಸುವ ವಿಡಿಯೋ ಪ್ರದರ್ಶಿಸಲಾಯಿತು. 

ಇದಲ್ಲದೆ, ಬ್ಯಾಗ್‌ ಹಿಡಿದುಕೊಂಡಿರುವ ವ್ಯಕ್ತಿಯೊಬ್ಬರ ಪಕ್ಕ ನರಸಪ್ಪ ನಿಂತಿರುವ ಫೋಟೋವನ್ನು ಸಹ ಬಿಡುಗಡೆಗೊಳಿಸಿದ್ದು, ಬ್ಯಾಗ್‌ನಲ್ಲಿ ಹಣ ಇರಬಹುದು ಎಂದು ಆರೋಪಿಸಲಾಗಿದೆ. ಬಿಡುಗಡೆಯಾಗಿರುವ ವಿಡಿಯೋದಲ್ಲಿ ಪರಸಪ್ಪ ಅವರು ತಮ್ಮ ಪುತ್ರನನ್ನು ಪಿಎಸ್‌ಐ ಮಾಡಲು ಹೇಗೆ 30 ಲಕ್ಷ ರು.ಗೆ ವ್ಯವಹಾರ ಕುದುರಿಸಿ, 15 ಲಕ್ಷ ರು.ಗಳನ್ನು ಹೇಗೆ ಬಸವರಾಜ ದಡೇಸುಗೂರು ತಮ್ಮಿಂದ ಪಡೆದುಕೊಂಡರು ಎಂಬುದನ್ನು ವಿವರಿಸಿದ್ದಾರೆ. ಕೆಲಸವಾಗದ ಹಿನ್ನೆಲೆಯಲ್ಲಿ ಹಣ ಹಿಂತಿರುಗಿಸುವಂತೆ ಕೇಳಿದಾಗ ಈ ಮೊತ್ತ ಸರ್ಕಾರಕ್ಕೆ ನೀಡಿರುವುದಾಗಿ ಸಬೂಬು ಹೇಳುವ ದಡೇಸುಗೂರು ತಮಗೆ ಅವಾಚ್ಯವಾಗಿ ನಿಂದಿಸಿದ ರೀತಿಯನ್ನು ವಿವರಿಸುತ್ತಾರೆ.

PSI Recruitment Scam: ಕನಕಗಿರಿ ಶಾಸಕರ ಮತ್ತೊಂದು ಆಡಿಯೋ ವೈರಲ್‌!

ಈ ವಿಡಿಯೋ ಬಿಡುಗಡೆ ಮಾಡಿ ಮಾತನಾಡಿದ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ, ಹಣ ನೀಡಿದ ಪರಸಪ್ಪ ಮತ್ತು ಪಡೆದ ಶಾಸಕರನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವುದು ಮತ್ತು ವಿಧಾನಮಂಡಲ ಅಧಿವೇಶನದಲ್ಲಿ ಹೋರಾಟ ನಡೆಸುವುದು ಸೇರಿದಂತೆ ಎಲ್ಲ ಆಯ್ಕೆಗಳನ್ನು ಮುಕ್ತವಾಗಿ ಇಟ್ಟುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ಪರಸಪ್ಪ ಅವರು ಪುತ್ರನನ್ನು ಪಿಎಸ್‌ಐ ಮಾಡಲು ಶಾಸಕರ ಜೊತೆ ಶಾಸಕರ ಭವನದಲ್ಲೇ ಆಗಸ್ಟ್‌ 2020ರಲ್ಲಿ ಡೀಲ್‌ ಕುದುರಿಸಿದ್ದಾರೆ. 30 ಲಕ್ಷಕ್ಕೆ ವ್ಯವಹಾರವಾಗಿದ್ದು 15 ಲಕ್ಷ ರು. ಪಾವತಿಸಿದ್ದಾರೆ. ಆದರೆ ಕೆಲಸ ಆಗದಿದ್ದಾಗ ಹಣ ವಾಪಸ್‌ ಕೇಳಿದಾಗ ಶಾಸಕರು ಧಮಕಿ ಹಾಕಿದ್ದಾರೆ. ಈ ಆಡಿಯೋ ವೈರಲ್‌ ಆದಾಗ ಇದರಲ್ಲಿನ ಧ್ವನಿ ನನ್ನದೇ ಎಂದು ಶಾಸಕರು ಒಪ್ಪಿಕೊಂಡಿದ್ದರು. ಆದರೆ ಈಗ ಉಲ್ಟಾಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.

ಮಂಪರು ಪರೀಕ್ಷೆ ನಡೆಸಲಿ: ಹಣ ನೀಡಿದ್ದ ಪರಸಪ್ಪ ಅವರು ಆಡಿಯೋದಲ್ಲಿನ ಧ್ವನಿ ನನ್ನದೇ ಎಂದು ಮೊದಲು ಹೇಳಿದ್ದವರು ಈಗ ನನ್ನದಲ್ಲ ಎನ್ನುತ್ತಿದ್ದಾರೆ. ಆದ್ದರಿಂದ ಹಣ ನೀಡಿರುವುದನ್ನು ಒಪ್ಪಿಕೊಂಡಿರುವ ಮತ್ತು ನಿರಾಕರಿಸುವ ಎರಡೂ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದೇವೆ. ಆದ್ದರಿಂದ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸಬೇಕು. ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಹಣ ಪಡೆದಿರುವ ಬಗ್ಗೆ ಸಾಕ್ಷಿ ಇದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಕೆ ಶಾಸಕರನ್ನು ಕರೆದು ಪ್ರಶ್ನಿಸಿಲ್ಲ. 

ಆಗ ಬಸವರಾಜ ಬೊಮ್ಮಾಯಿ ಅವರೇ ಗೃಹ ಸಚಿವರಾಗಿದ್ದು, ಸರ್ಕಾರಕ್ಕೆ ಹಣ ಸಂದಾಯವಾಗಿದ್ದರೆ ಯಾರಿಗೆ ನೀಡಲಾಗಿದೆ ಎಂದು ತನಿಖೆಯಾಗಲಿ. ಸ್ವಯಂ ಪ್ರೇರಿತವಾಗಿ ಏಕೆ ಪ್ರಕರಣ ದಾಖಲಾಗುತ್ತಿಲ್ಲ ಎಂದು ಉತ್ತರಿಸಲಿ. ಧೈರ್ಯ, ತಾಕತ್ತು, ಧಮ್ಮಿನ ಬಗ್ಗೆ ದೊಡ್ಡಬಳ್ಳಾಪುರ ಸಮಾವೇಶದಲ್ಲಿ ಮಾತನಾಡಿರುವ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಉತ್ತರಿಸಲಿ ಎಂದು ಒತ್ತಾಯಿಸಿದರು. ಬಿಜೆಪಿ ಶಾಸಕರು ಸಚಿವರಿಗೆ ಹಣ ತಲುಪಿಸುವ ಬ್ರೋಕರ್‌ಗಳಾಗಿದ್ದಾರೆ. ಭಾರತೀಯ ಜನತಾ ಪಕ್ಷವು ಭ್ರಷ್ಟಜನತಾ ಪಕ್ಷವಾಗಿದೆ. ಹಣ ನೀಡಿದ ಪ್ರಕರಣದ ಬಗ್ಗೆ ಅಧಿವೇಶನದಲ್ಲೂ ಹೋರಾಟ ನಡೆಸಲಾಗುವುದು. 

ಸಾರ್ವಜನಿಕರೊಬ್ಬರು ಈಗಾಗಲೇ ಲೋಕಾಯುಕ್ತಕ್ಕೂ ದೂರು ನೀಡಿದ್ದಾರೆ. ಆದ್ದರಿಂದ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸುವ ಬಗ್ಗೆ ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಅನಂತರ ಮಾತನಾಡಿದ ಮಾಜಿ ಸಚಿವ ಶಿವರಾಜ ತಂಗಡಗಿ, ಕನಕಗಿರಿ ವಿಧಾನಸಭಾ ಕ್ಷೇತ್ರವೊಂದರಲ್ಲೇ 15 ಯುವಕರು ಪಿಎಸ್‌ಐ ನೇಮಕಾತಿಗಾಗಿ ಹಣ ನೀಡಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಹಣ ಕೊಟ್ಟವರದ್ದೂ ಅಪರಾಧ ಆಗುವುದರಿಂದ ಮಾಧ್ಯಮಗಳ ಮುಂದೆ ಬರಲು ಹೆದರುತ್ತಿದ್ದಾರೆ. ಬಿಜೆಪಿಯವರು ಶೇ.40 ರಷ್ಟು ಕಮಿಷನ್‌ ಇಟ್ಟುಕೊಂಡು ಉಳಿದ ಹಣವನ್ನಾದರೂ ನೀಡಲಿ ಎಂದು ಆಗ್ರಹಿಸಿದರು.

ಪಿಎಸ್​ಐ ನೇಮಕಾತಿ ಹಗರಣ: ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಒಪ್ಪಿಕೊಂಡ ಬಿಜೆಪಿ ಶಾಸಕ

ಶಾಸಕ ಬಸವರಾಜ ದಡೇಸುಗೂರು ಅವರಿಗೆ ಹಣ ನೀಡಿರುವ ದಿನಾಂಕವನ್ನು ಪರಸಪ್ಪ ತಿಳಿಸಿದ್ದು, ಆ ದಿನದ ಶಾಸಕರ ಭವನದ ಸಿಸಿಟಿವಿ ಪರಿಶೀಲಿಸಬೇಕು. ಇದು ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾದ ಹಗರಣವಲ್ಲ. ರಾಜ್ಯಾದ್ಯಂತ ನೂರಾರು ಯುವಕರು ಹಣ ನೀಡಿದ್ದು ಹೇಳಿಕೊಳ್ಳಲಾಗದೇ ಒದ್ದಾಡುತ್ತಿದ್ದಾರೆ. ಶಾಸಕರಿಗೆ ಅನುದಾನದ ರೀತಿಯಲ್ಲಿ ಇಂತಿಷ್ಟು ಹುದ್ದೆ ಎಂದು ಹಂಚಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್