* ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ, ಮುಂದುವರೆದ ತನಿಖೆ
* ತನಿಖೆ ಬೆನ್ನಲ್ಲೇ ಹೋರಾಟಕ್ಕಿಳಿದ ಪ್ರಾಣಿಕ ಅಭ್ಯರ್ಥಿಗಳು
* ನಮಗೆ ನ್ಯಾಯ ಕೊಡಿಸಿ ಎಂದು ಮೋದಿಗೆ ಪತ್ರ ಬರೆದ ಎಂಟು ಅಭ್ಯರ್ಥಿಗಳು
ಬೆಂಗಳೂರು(ಮೇ.16): ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ ಪಿಎಸ್‌ಐ ಪರೀಕ್ಷಾ ಹರಗಣ ಸಂಬಂಧ ದಿನನಿತ್ಯ ಒಂದಿಲ್ಲೊಂದು ಬೆಳವಣಿಗೆಗಳಾಗುತ್ತಿವೆ. ಅಕ್ರಮದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆಂದು ತನಿಖೆ ನಡೆಯುತ್ತಿದ್ದು, ಈ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ಅಲ್ಲದೇ ಮರು ಪರೀಕ್ಷೆ ನಡೆಸುವುದಾಗಿ ಸರ್ಕಾರ ಹೇಳಿದೆ. ಈ ಎಲ್ಲಾ ವಿಚಾರಗಳ ಮಧ್ಯೆ ಪರಿಧಶ್ರಮಪಟ್ಟು ಓದಿ, ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿರುವವರಿಗೆ ಅನ್ಯಾಯ ಮಾಡಬೇಡಿ ಎಂದು ಅನೇಕ ಅಭ್ಯರ್ಥಿಗಳು ಧ್ವನಿ ಎತ್ತಿದ್ದಾರೆ. ಈ ನಿಟ್ಟಿನಲ್ಲಿ ಹೋರಾಟವನ್ನೂ ಮಾಡಿದ್ದಾರೆ. ಆದರೆ ಸರ್ಕಾರ ಈ ಮಾತುಗಳನ್ನು ಕಿವಿಗೆ ಹಾಕಿಕೊಂಡಿಲ್ಲ. ಈ ನಡೆಯಿಂದ ಬೇಸತ್ತ ಅಭ್ಯರ್ಥಿಗಳೀಗ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ಜೊತೆಗೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
ಹೌದು ಪಿಎಸ್ಐ ಅಕ್ರಮ ಪರೀಕ್ಷಾ ಹಗರಣದಲ್ಲಿ ನೊಂದ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದಿದ್ದಾರೆ. ರಕ್ತದಲ್ಲಿ ಬರೆದ ಈ ಪತ್ರ ಸುಮಾರು 2 ಪುಟಗಳಷ್ಟಿದೆ. ಈ ಮೂಲಕ ಅಭ್ಯರ್ಥಿಗಳು ತಮಗೆ ನ್ಯಾಯ ಒದಗಿಸಿಕೊಡುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ. ಈ ಪತ್ರವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಕ್ತದಿಂದ ಬರೆದ ಪತ್ರದಲ್ಲಿ ಏನಿದೆ?: ಪಿಎಸ್ಐ ಪರೀಕ್ಷೆಯ ಆಯ್ಕೆಯಲ್ಲಿ ಮೋಸ ಹೊದವರಿಗೆ ನ್ಯಾಯ ಸಿಗಬೇಕು, ಅನ್ಯಾಯ ಮಾಡಿದವರನ್ನ ಜೈಲಿಗೆ ಹಾಕಬೇಕು. ಆದರೆ ನಿಯತ್ತಿನಿಂದ, ಪ್ರಾಮಾಣಿಕವಾಗಿ ಬರೆದು ಪಾಸಾದವರಿಗೆ ಮೋಸವಾಗಬಾರದು. 2021ರಲ್ಲಿ ನಡೆದ ಎಫ್‌ಡಿಎ ಪರೀಕ್ಷೆಯಲ್ಲಿ ಕೂಡ ಅಕ್ರಮವಾಗಿದೆ. ಅದನ್ನು ಕೂಡ ತನಿಖೆ ಮಾಡಿನ್ಯಾಯ ಕೊಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌವರವಿದೆ, ಅವರು ಸೂಕ್ತ ತನಿಖೆಗೆ ಆದೇಶ ಮಾಡಿ, ನಮಗೆ ನ್ಯಾಯ ಕೊಡಿಸುತ್ತಾರೆಂಬ ನಂಬಿಕೆ ಇದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಅನ್ಯಾಯವಾದರೆ ಉಗ್ರ ಸಂಘಟನೆ ಸೇರುತ್ತೇವೆ: 2 ಪುಟಗಳ ಈ ಪತ್ರದಲ್ಲಿ ಎಚ್ಚರಿಕೆಯೊಂದನ್ನೂ ಅಭ್ಯರ್ಥಿಗಳು ನೀಡಿದ್ದು, ಒಂದು ವೇಳೆ ನ್ಯಾಯಕೊಡಿಸದೇ ಹೋದರೆ ನಾವು ಮುಂದೆ ಉಗ್ರರೊಂದಿಗೆ ಕೈಜೋಡಿಸುತ್ತೇವೆ ಹಾಗೂ ಉಗ್ರ ಸಂಘಟನೆ ಸೇರುತ್ತೇವೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣ ಇದ್ದವರಿಗೆ ಎನ್ನುವ ವ್ಯವಸ್ಯೆ ಬಂದಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತುಹೋಗಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಿ ಹುದ್ದೆ ಪರೀಕ್ಷೆಗಳನ್ನ ಬರೆಯುವುದಿಲ್ಲ. ಬದಲಾಗಿ ಟೆರೆರಿಸ್ಟ್ ಗಳ ಜೊತೆ ನಕ್ಸಲೈಟ್ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಬಳಿ ಹಣ ಪಡೆದ ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.
ಇಷ್ಟಿದ್ದರೂ ಈ ಪತ್ರವನ್ನು ಬರೆದ ಅಭ್ಯರ್ಥಿಗಳು ಯಾರೆಂಬ ಮಾಹಿತಿ ಇನ್ನೂ ಲಭಿಸಿಲ್ಲ. ಪತ್ರದಲ್ಲಿ ತಮ್ಮ ಸಂದೇಶ ರವಾನಿಸಿದ ಅಭ್ಯರ್ಥಿಗಳು ತಮ್ಮ ಹೆಸರನ್ನು ಮಾತ್ರ ನಮೂದಿಸಿಲ್ಲ. ಆದರೆ ಈ ಪತ್ರವನ್ನು ಎಷ್ಟು ಮಂದಿ ಸೇರಿ ಬರೆದಿದ್ದಾರೆಂಬ ಮಾಹಿತಿಯನ್ನು ಪತ್ರದಲ್ಲಿ ನೀಡಲಾಗಿದ್ದು, ಎಂಟು ಮಂದಿ ಇದ್ದೇವೆ, ನಾವೆಲ್ಲರು ಈ ನಿರ್ಧಾರ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಅನೇಕರು ಅರೆಸ್ಟ್: ಈಗಾಗಲೇ ಪಿಎಸ್ಐ ಪರೀಕ್ಷಾ ಹಗರಣದ ತನಿಖೆ ಮುಂದುವರೆದಿದೆ. ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ, ವೀರೇಶ್, ವೈಜನಾಥ್, ಮಂಜುನಾಥ್ ಮೇಳಕುಂದಿ, ಅರ್ಚನಾ, ಸುನೀತಾ, ಕಾಳಿದಾಸ್, ಸುನೀತಾ ಪಾಟೀಲ್, ಸುರೇಶ್ ಕಾಟೇಗಾವ್, ಸದ್ದಾಂ ಸೇರಿದಂತೆ 55ಕ್ಕೂ ಹೆಚ್ಚು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.